ಕಣ್ಣಿನ ರೋಗ ಪತ್ತೆಗೆ ‘ಕೈ’ ಸಾಧನ

7

ಕಣ್ಣಿನ ರೋಗ ಪತ್ತೆಗೆ ‘ಕೈ’ ಸಾಧನ

Published:
Updated:
ಕಣ್ಣಿನ ರೋಗ ಪತ್ತೆಗೆ ‘ಕೈ’ ಸಾಧನ

ವೈ ದ್ಯಕೀಯ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸುತ್ತಾ ಬಂದಿವೆ.

ಅತ್ಯಾಧುನಿಕ ಉಪಕರಣಗಳ ಆವಿಷ್ಕಾರ ವೈದ್ಯಕೀಯ ಕ್ಷೇತ್ರದ ವ್ಯಾಪ್ತಿ ವಿಸ್ತರಿಸಿದ್ದು, ಚಿಕಿತ್ಸಾ ವಿಧಾನಕ್ಕೆ ಹೊಸ ಆಯಾಮವನ್ನು ನೀಡುತ್ತಿದೆ.ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ (ಎಂಐಟಿ) ತಜ್ಞರ ತಂಡ ಅಭಿವೃದ್ಧಿಪಡಿಸಿರುವ, ಕಣ್ಣಿನ ರೋಗದ ಲಕ್ಷಣಗಳನ್ನು ಸ್ಪಷ್ಟವಾಗಿ ಹಾಗೂ ವೇಗವಾಗಿ ಗುರುತಿಸುವಂತಹ, ಕೈಯಲ್ಲಿಯೇ ಹಿಡಿದು ಬಳಸಬಹುದಾದ ವಿಶಿಷ್ಟ ಸ್ಕ್ಯಾನಿಂಗ್  ಸಾಧನವೇ ಇದಕ್ಕೆ ಉತ್ತಮ ಉದಾಹರಣೆ.

ಎರ್ಲ್‌ಗನ್ (erlangen) ವಿಶ್ವವಿದ್ಯಾಲಯ ಮತ್ತು ಪ್ರೀವಿಯಂ ರಿಸರ್ಚ್ ಸಂಸ್ಥೆಯ ಸಹಾಯದಿಂದ ಈ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ.ಕಣ್ಣಿನ ದೋಷ ಪತ್ತೆ ಮಾಡಲು  ಇನ್ನು ಮುಂದೆ ಆಸ್ಪತ್ರೆಗೇ  ಹೋಗಬೇಕಿಲ್ಲ. ಈ ಅತ್ಯಾಧುನಿಕ ಸಾಧನವನ್ನು ಕೈಯಲ್ಲಿ ಹಿಡಿದು ಎಲ್ಲಿ ಬೇಕಿದ್ದರೂ ಒಯ್ಯಬಹುದಾಗಿದೆ. ಹಾಗಾಗಿ, ಎಲ್ಲೇ ಆದರೂ ಸುಲಭವಾಗಿ ಹಾಗೂ ಬಹಳ ಸರಳವಾಗಿ ನೇತ್ರ ಪರೀಕ್ಷೆ ನಡೆಸಬಹುದು ಎನ್ನುತ್ತಾರೆ ‘ಎಂಐಟಿ’ ಅಧ್ಯಯನಕಾರ ಜೇಮ್ಸ್ ಫ್ಯೂಜಿಮೊಟೊ.ಬಯೋಮೆಡಿಕಲ್ ಆಪ್ಟಿಕ್ಸ್ ಎಕ್ಸ್‌ಪ್ರೆಸ್‌ ಜರ್ನಲ್‌ನಲ್ಲಿ ಈ ತಂತ್ರಾಂಶದ ಅಧ್ಯಯನದ ಕುರಿತು ಆಪ್ಟಿಕಲ್ ಸೊಸೈಟಿ ಲೇಖನ ಪ್ರಕಟಿಸಿದೆ.

‘ಈ ಸಾಧನದಿಂದ ಗ್ಲಾಕೋಮ (ಕಣ್ಣು ಗುಡ್ಡೆ ಯಲ್ಲಿ ಒತ್ತಡ ಹೆಚ್ಚಾಗಿ ಕ್ರಮೇಣ ದೃಷ್ಟಿ ಇಂಗಿ ಹೋಗುವುದು- glaucoma), ಅಕ್ಷಿಪಟಲ ಕ್ಷೀಣಿಸುವುದು ಮತ್ತು ಮಧುಮೇಹದಿಂದ ಅಕ್ಷಿಪಟಲಕ್ಕೆ ಹಾನಿಯಾಗುವಂತಹ ಸಮಸ್ಯೆಗಳನ್ನು ಪತ್ತೆಹಚ್ಚಬಹುದು. ಇದು ರೋಗಿಯ ಕಣ್ಣನ್ನು ಕ್ಷಣಾರ್ಧದಲ್ಲಿ ಸ್ಕ್ಯಾನ್ ಮಾಡುವ ಸಾಮರ್ಥ್ಯ ಹೊಂದಿದೆ’  ಎನ್ನುತ್ತಾರೆ ಜೇಮ್ಸ್.ಅತ್ಯಂತ ಹೆಚ್ಚು ವೇಗದಲ್ಲಿ 3ಡಿ ಚಿತ್ರಗಳನ್ನು ತೆಗೆಯಬಲ್ಲ  ಹಾಗೂ ರೋಗಿಯ ಕಣ್ಣಿನಲ್ಲಿನ ಅನಗತ್ಯ ಚಲನೆ ಸರಿಪಡಿಸಲು ಅತೀ ಸೂಕ್ಷ್ಮ ವಿದ್ಯುತ್ ಯಾಂತ್ರಿಕ ವ್ಯವಸ್ಥೆ (Micro- Electro-Mechanical Systems – MEMS) ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನ ಇದಾಗಿದೆ. ಹೀಗಾಗಿ ಒಮ್ಮೆ ರೋಗಿಯ ಕಣ್ಣನ್ನು ಸ್ಕ್ಯಾನ್ ಮಾಡಿದರೆ ಸಮಗ್ರ ಮಾಹಿತಿ ಸಂಗ್ರಹಣೆ ಮಾಡಬಹುದು ಎನ್ನುತ್ತಾರೆ ತಜ್ಞರು.ಕಣ್ಣು ಪರೀಕ್ಷೆ ನಡೆಸಲು ವೈದ್ಯರು ಬಳಸುವ ‘ಆಪ್ಟಿಕಲ್ ಕೊಹಿರೆನ್ಸ್ ಟೊಮೊಗ್ರಫಿ’ (ಒಸಿಟಿ) ರೀತಿಯಲ್ಲೇ ಈ ಪುಟ್ಟ ಸಾಧನ ಕಣ್ಣ ಪರೀಕ್ಷೆ ನಡೆಸಬಲ್ಲದು.

ಜತೆಗೆ ರಡಾರ್ ಅಥವಾ ಅಲ್ಟ್ರಾಸೌಂಡ್ ಇಮೆಜಿಂಗ್ ಮಾದರಿಯಲ್ಲಿ ಇದು ಕೆಲಸ ಮಾಡಲಿದ್ದು, ಅಕ್ಷಿಪಟಲದ ಅಡ್ಡ ಅಂಗಾಂಶ ರಚನೆಯನ್ನು ಪತ್ತೆಮಾಡುತ್ತದೆ.ಈ ಸಾಧನವು ಅತಿಗೆಂಪು ಬೆಳಕಿನ (infrared light) ಕಿರಣಗಳನ್ನು ಕಣ್ಣಿನೊಳಗೆ ಮತ್ತು ಅಕ್ಷಿಪಟಲಕ್ಕೆ ಕಳುಹಿಸಿ ಪ್ರತಿಫಲನದ ಮೂಲಕ ಮರಳಿ ಪಡೆಯುತ್ತದೆ. ಈ ವೇಳೆ ಬೆಳಕು ಪ್ರತಿಫಲಿಸುವ ಸಮಯ ಮತ್ತು ಪ್ರಮಾಣವನ್ನು ವ್ಯತಿಕರಣ ಮಾಪನದ  (ಬೆಳಕಿನ ವ್ಯತಿಕರಣವನ್ನು ಬಳಸಿಕೊಂಡು, ಅಲೆಯ ಉದ್ದ, ರೋಹಿತದ ಸೂಕ್ಷ್ಮ ರಚನೆ, ಮೊದಲಾದವನ್ನು ಅಳೆಯುವ ಉಪಕರಣ) ಮೂಲಕ ಅಳೆಯುವ ವ್ಯವಸ್ಥೆ ಮಾಡಲಾಗಿದೆ.ಇದರ ಸಾಮರ್ಥ್ಯವನ್ನು ಪ್ರಯೋಗದ ಮೂಲಕ ಪರೀಕ್ಷಿಸಲಾಯಿತು.   ಹ್ಯಾಂಡಿ ವೀಡಿಯೋ ಕ್ಯಾಮೆರಾ ಹೋಲುವ ಸಮತಟ್ಟಾದ ಮೇಲ್ಮೈ ಪರದೆ ಹೊಂದಿರುವ ಸಾಧನದಿಂದ  ಪರೀಕ್ಷೆ ನಡೆಸಲಾಯಿತು. ಈ ವೇಳೆ ವೈದ್ಯರು ಕೊಠಡಿಯೊಳಗೆ ಬಳಸುವ ಸಾಧನಕ್ಕೆ ಸರಿ ಸಮಾನ ಗುಣಮಟ್ಟದಲ್ಲಿ ಈ ಸಾಧನ ಕಾರ್ಯ ನಿರ್ವಹಿಸಬಲ್ಲುದು ಎಂಬುದನ್ನು ತಜ್ಞರು ಪತ್ತೆ ಹಚ್ಚಿದರು.ಅಕ್ಷಿಪಟಲದ ಒಂದೇ ಭಾಗವನ್ನು ಬೇರೆ ಬೇರೆ ಸಮಯದಲ್ಲಿ, ವಿವಿಧ ಕೋನಗಳಿಂದ 3ಡಿ ಬಿಂಬಗಳನ್ನು ಸ್ಕ್ಯಾನ್ ಮಾಡಬೇಕು. ಇದರಿಂದ ಸ್ಕ್ಯಾನಿಂಗ್ ಸಾಧನ ಬಳಸುವ ವ್ಯಕ್ತಿಯ ಕೈ ಸರಿದಾಡುವ ಮತ್ತು ರೋಗಿಯು ಕಣ್ಣು ಮಿಟುಕಿಸುವಂತಹ ಸಮಸ್ಯೆಯನ್ನು ಸರಿಪಡಿಸಬಹುದು ಎನ್ನುತ್ತದೆ ತಜ್ಞರ ತಂಡ.

ಈ ನೂತನ ತಂತ್ರಾಂಶದ ವೈದ್ಯಕೀಯ ಪರೀಕ್ಷೆ ನಡೆಯಬೇಕಿದೆ. ಆದರೆ ಇದು  ಬಲು ದುಬಾರಿ ಸಾಧನವಾಗಿದೆ. ಹೀಗಾಗಿ ವೈದ್ಯಕೀಯ ವಲಯದಲ್ಲಿ ಬಳಕೆಗೂ ಮುನ್ನ ತಯಾರಕರು ಇದರ ಬೆಲೆ ತಗ್ಗಿಸುವ ಮಾರ್ಗ ಕಂಡುಕೊಳ್ಳಬೇಕಿದೆ ಎನ್ನುತ್ತಾರೆ ತಜ್ಞರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry