ಬುಧವಾರ, ಜೂನ್ 23, 2021
22 °C

ಕಣ್ಣಿನ ಸುತ್ತ ಕಪ್ಪು ಛಾಯೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಯಾಕೆ ಹುಷಾರಿಲ್ವ ? ಏನಾಯ್ತು, ಯಾಕೋ ಡಲ್ ಆಗಿದ್ದೀರ ! ತುಂಬಾ ಕೆಲಸಾನಾ ? ನಿದ್ರೆ ಸರಿಯಾಗಿ ಮಾಡಿಲ್ವಾ ? ಕಣ್ಗಳ ಸುತ್ತ ಕಪ್ಪಾಗಿದೆ .....~

ಇತ್ಯಾದಿ ಪ್ರಶ್ನೆಗಳ ಸುರಿಮಳೆಯನ್ನು ಎದುರಿಸುತ್ತಿದ್ದಂತೆ ನಮಗೆ ತಿಳಿಯುತ್ತದೆ. ನಮ್ಮ ದೇಹವೆಂಬ ಯಂತ್ರ ಎಲ್ಲೋ ಕಂಟ್ರೋಲ್ ತಪ್ಪಿದೆ.   `ಸಮ್‌ಥಿಂಗ್ ರಾಂಗ್~ ಅಂತ ! ಅದು ದೈಹಿಕ ಅನಾರೋಗ್ಯವಿರಬಹುದು. ಅಥವಾ ಮಾನಸಿಕವಾದ ಅನಾರೋಗ್ಯವಿರಬಹುದು.ಅನಾರೋಗ್ಯದಿಂದ ಬಳಲಿದವರಿಗಷ್ಟೇ ಗೊತ್ತು ಆರೋಗ್ಯದ ಮಹತ್ವ. ಅನೇಕ ಕಾಯಿಲೆಗಳನ್ನು ತಡೆಯಲು ಮಾರ್ಗಗಳಿವೆಯಾದರೂ, ಕೆಲವು ಕಾಯಿಲೆಗಳು ತಿಳಿಯದೆಯೇ ದಿಢೀರ್ ಎಂದು ಆಕ್ರಮಿಸುವುದುಂಟು. ಕೆಲವು ಕಾಯಿಲೆಗಳನ್ನು ತಡೆಗಟ್ಟುವ ಮಾರ್ಗಗಳು ಇಲ್ಲದಿರುವುದೂ ನಿಜ.

ಅನಾರೋಗ್ಯದಿಂದ ದೇಹದ ಜೊತೆಗೆ ಮನಸ್ಸೂ ಸಹ ಬಳಲುವುದು. ಆಯಾಸ, ಸುಸ್ತು, ಲವಲವಿಕೆ ಇಲ್ಲದಿರುವಿಕೆ, ನಿಶ್ಯಕ್ತಿ, ರಕ್ತಹೀನತೆ, ಅನೇಕ ಔಷಧಿಗಳ ಸೇವನೆಯಿಂದುಂಟಾಗುವ ದುಷ್ಪರಿಣಾಮ ಇವೆಲ್ಲಾ ಮನುಷ್ಯನು ತತ್ತರಿಸುವಂತೆ ಮಾಡುವುದು. ಅನಾರೋಗ್ಯದಿಂದ ಬಳಲುವವರ ಮುಖದಲ್ಲಿ ಅನೇಕ ಲಕ್ಷಣಗಳು ಎದ್ದು ಕಾಣುವುದು.ರಕ್ತಹೀನತೆಯಿಂದಿದ್ದರೆ ಬಿಳಿಚಿಕೊಂಡ ಮುಖ, ಕಳೆಗುಂದಿದ ಗುಳಿ ಬಿದ್ದ ಕಣ್ಗಳು, ಕಣ್ಣಿನ ಸುತ್ತ ಕಪ್ಪು, ಕಣ್ಣಿನ ಸುತ್ತ ಬಾವು, ತುಟಿಯ ಚರ್ಮ ಒಣಗಿರುವುದು ಮುಂತಾದ ಚಿನ್ಹೆಗಳು! ಈ ಚಿನ್ಹೆಗಳ ಬಗ್ಗೆ ಬರೆಯುತ್ತಿದ್ದಂತೆ, ಅನೇಕರು ಕೇಳುವ ಪ್ರಶ್ನೆಯೊಂದಕ್ಕೆ ಉತ್ತರ ದೊರಕಿದಂತಾಯಿತು! ಕಣ್ಗಳ ಸುತ್ತ ಕಪ್ಪಾಗುವಿಕೆಗೆ ಪರಿಹಾರವೇನು ?ಕಣ್ಗಳ ಸುತ್ತ ಕಪ್ಪಾಗುವಿಕೆಗೆ ಕಾರಣಗಳು ಅನೇಕ ! ಕೆಲವರಿಗೆ ಅನುವಂಶಿಕವಾಗಿ ಈ ರೀತಿ ಇರಬಹುದಾದರೂ, ನಿಶ್ಯಕ್ತಿ, ಒತ್ತಡ ಜೀವನ, ಖಿನ್ನತೆ, ಸರಿಯಾಗಿ ನಿದ್ರಿಸದಿರುವುದು. ಇತರೇ ಕಾಯಿಲೆಗಳು, ಸರಿಯಾದ ವಿಟಮಿನ್‌ಯುಕ್ತ ಪೌಷ್ಟಿಕಾಂಶ ಉಳ್ಳ ಆಹಾರದ ಕೊರತೆ, ಚರ್ಮದ ತೊಂದರೆ, ಬಿಸಿಲಿನ ತಾಪ, ಮದ್ಯಸೇವನೆ, ಸಿಗರೇಟ್ ಸೇವನೆ, ವ್ಯಾಯಾಮವಿಲ್ಲದಿರುವುದು, ಅತಿಯಾದ ಕಾಫಿ ಸೇವನೆ, ವಯಸ್ಸಾದಂತೆ ಚರ್ಮದ ಕೊಲ್ಲೇಜನ್ ಹಾಗೂ ಕೊಬ್ಬಿನಂಶ ಕಡಿಮೆಯಾಗುವುದು. ಚರ್ಮ ತೆಳ್ಳಗಾಗುವುದರಿಂದ ಚರ್ಮದ ಕೆಳಗಿರುವ ರಕ್ತನಾಳಗಳೆಲ್ಲಾ ಕಾಣುವುವು.ಇಂಥಹ ಕಪ್ಪು ಕಲೆಯನ್ನು ಕಡಿಮೆಗೊಳಿಸಲು, ಮಾರುಕಟ್ಟೆಯಲ್ಲಿ ಅನೇಕ ವಿಧದ ಕ್ರೀಂಗಳು ಲಭ್ಯವಿದೆಯಾದರೂ, ಈ ತೊಂದರೆಗೆ ಕಾರಣ ಕಂಡು ಹಿಡಿಯುವುದು ಮುಖ್ಯ. ಅನಾರೋಗ್ಯ ಪೀಡಿತರು, ಸಂಪೂರ್ಣ ಚೇತರಿಸಿಕೊಂಡ ನಂತರ ಇದರ ಮಟ್ಟ ಕಡಿಮೆಯಾಗುವುದು.ದಿನನಿತ್ಯದ ಆಹಾರ ಸೇವನೆ ಬಗ್ಗೆ ಗಮನ ಅಗತ್ಯ* ಹಸಿರು ತರಕಾರಿಗಳು, ಸೊಪ್ಪು, ಹಣ್ಣು ಹಂಪಲು, ಬೇಳೆ, ಕಾಳುಗಳು, ಮೊಳಕೆ ಕಾಳುಗಳು, ಹಾಲು ಮುಂತಾದವಗಳ ಸೇವನೆ ಹೆಚ್ಚಲಿ.*ಜೊತೆಗೆ ದಿನಕ್ಕೆ 8 ರಿಂದ 10 ಗ್ಲಾಸ್ ನೀರು, ತಾಜಾ ಹಣ್ಣಿನ ರಸದ ಸೇವನೆಯೂ ಇರಲಿ.* ಕಣ್ಣಿಗೆ ಬಹಳ ಆಯಾಸವಾಗದಿರುವಂತೆ ಎಚ್ಚರವಹಿಸಿ.*ಒತ್ತಡ ನಿರ್ವಹಣೆಗೆ, ಮನಃಶಾಂತಿಗೆ ಧ್ಯಾನ ಅತ್ಯಂತ ಮುಖ್ಯ. ದಿನ ನಿತ್ಯ ಅರ್ಧ ಗಂಟೆ ಧ್ಯಾನಕ್ಕೆ ಮೀಸಲಿಡಿ.*ಕಾಯಿಲೆಯಿಂದ ಬಳಲುವವರು, ನಿಶ್ಯಕ್ತಿ, ರಕ್ತಹೀನತೆ ಇದ್ದಲ್ಲಿ ವೈದ್ಯರ ಸಲಹೆ ಮೇರೆಗೆ ವಿಟಮಿನ್‌ಯುಕ್ತ  ಟಾನಿಕ್, ಗುಳಿಗೆ ಸೇವಿಸಿರಿ.* ರಕ್ತವೃದ್ಧಿಗೆ ಕಬ್ಬಿಣಾಂಶ ಅಧಿಕವಾಗಿರುವ ಆಹಾರ(ಬೆಲ್ಲ, ಬಾಳೆಹಣ್ಣು, ಉತ್ತುತ್ತಿ, ಬಾದಾಮಿ, ಕಾಳುಗಳು, ಸೊಪ್ಪು,ತರಕಾರಿ) ಹಾಲು ಮೊಸರು ಮುಂತಾದವುಗಳನ್ನು ಸೇವಿಸಿರಿ.ಇಷ್ಟೆಲ್ಲಾ ಸಲಹೆಗಳನ್ನು ಪಾಲಿಸಿದಲ್ಲಿ, ಕ್ರಮೇಣ ತೊಂದರೆಯು ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. ಚರ್ಮದ ತೊಂದರೆ, ಇತರೇ ತೊಂದರೆಗಳಿದ್ದಲ್ಲಿ ಹೆಚ್ಚಿನ ಚಿಕಿತ್ಸೆ ಬೇಕಾಗುವುದು. ಕಣ್ಣಿನ ಸುತ್ತಲಿರುವ ಚರ್ಮ ಸೂಕ್ಷ್ಮ. ಅಲ್ಲಿಗೆ ಚಿಕಿತ್ಸೆ ಮಾಡಿದರೂ ಎಚ್ಚರವಹಿಸುವುದು ಅಗತ್ಯ.ಸೌಂದರ್ಯತಜ್ಞರ ಸಲಹೆ...ಕಣ್ಣಿನ ಸುತ್ತ ಕಪ್ಪಾದ ಚರ್ಮಕ್ಕೆ ಹಿರಿಯರು, ಸೌಂದರ್ಯ ತಜ್ಞರು, ಅನೇಕರು ಇತರೇ ಸಲಹೆಗಳನ್ನು ನೀಡುವರು. ಅವುಗಳಲ್ಲಿ  ಕೆಲವು ಈ ರೀತಿ ಇವೆ.* ಕಣ್ಗಳನ್ನು ಮುಚ್ಚಿ ಅವುಗಳ ಮೇಲೆ ಹಸಿ ಆಲೂಗಡ್ಡೆ ಅಥವಾ ಸೌತೇಕಾಯಿಯ ಬಿಲ್ಲೆಯನ್ನು 15 ರಿಂದ 20 ನಿಮಿಷಗಳ ಕಾಲವಿಟ್ಟು ನಂತರ ಸ್ವಲ್ಪ ಬೆಚ್ಚಗಿನ ನೀರಿನಿಂದ ತೊಳೆಯುವುದು.* ತುರಿದ ಸೌತೇಕಾಯಿಯನ್ನು ಮುಚ್ಚಿದ ಕಣ್ಗಳ ಮೇಲೆ ಇರಿಸುವುದು.* ಅರಿಶಿನ ಮತ್ತು ಅನಾನಸ್ ರಸದ ಪೇಸ್ಟ್‌ನ್ನು ಕಣ್ಣಿನ ಕೆಳಗೆ ಹಚ್ಚುವುದು.* ಟೊಮ್ಯೋಟೋ ಹಾಗೂ ನಿಂಬೆರಸದ ಮಿಶ್ರಣವನ್ನು ಅಥವಾ ಅಲೂ, ಹಾಗೂ ಸೌತೆರಸದಲ್ಲಿ ಹತ್ತಿಯನ್ನು ಅದ್ದಿ ಅದನ್ನು ಕಣ್ಗಳ ಮೇಲಿಟ್ಟುಕೊಳ್ಳವುದು.* ಬಾದಾಮಿ ಎಣ್ಣೆಯಿಂದ ಕಣ್ಗಳ ಕೆಳಗೆ ಸುತ್ತ ಮಸಾಜ್ ಮಾಡುವುದು.* ವಿಟಮಿನ್  ಇ  ಎಣ್ಣೆಯನ್ನು ಹಚ್ಚುವುದು.* ಬಿಸಿ ಹಾಗೂ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಒಂದಾದರೊಂದಂತೆ ಕಣ್ಗಳ ಕೆಳಗೆ ಹಾಕುವುದು.

ಒಂದೇ ? ಎರಡೇ ? ಕೇಳುತ್ತಾ ಹೋದಂತೆ ಅನೇಕರು ತಿಳಿಸಿದ ಈ ರೀತಿಯ ಮನೆವೈದ್ಯ ಉಪಯೋಗವಾಗಬಹುದೇ ? ಎಂಬ ಪ್ರಶ್ನೆ ಕಾಡತೊಡಗುವುದು. ಆರೋಗ್ಯವೃದ್ಧಿ, ವಿಟಮಿನ್‌ಯುಕ್ತ ಆಹಾರ ಸೇವನೆ, ಧ್ಯಾನಗಳಿಂದ ಸಾಕಷ್ಟು ಮಟ್ಟಿಗೆ ತೊಂದರೆ ಖಂಡಿತ ನಿವಾರಣೆಯಾಗುವುದು.* ಆಕ್ಯುಪ್ರೆಶರ್ ಚಿಕಿತ್ಸೆಯವರ ಪ್ರಕಾರ, ತೋರು ಬೆರಳಿನ ಕೆಳಗೆ ಅಂಗೈ ಮೇಲೆ ಕಣ್ಣಿಗೆ ಸಂಬಂಧಪಟ್ಟ ಪ್ರೆಶರ್ ಪಾಯಿಂಟ್ ಇದ್ದು ಅಲ್ಲಿ ಸ್ವಲ್ಪ ಒತ್ತಡ ಅಥವಾ ಒತ್ತುವುದು ತೊಂದರೆ ನಿವಾರಣೆಗೆ ಸಹಕಾರಿಯಂತೆ.* ಯೋಗಾಚಾರ್ಯರ ಪ್ರಕಾರ ಸರ್ವಾಂಗಾಸನದಿಂದ ಕಣ್ಗಳ ಸುತ್ತಲಿರುವ ಕಪ್ಪು ಮಾಯವಾಗುವುದು.*ಸೂರ್ಯನ ಕಿರಣಗಳಿಂದ ಆಗುವ ಹಾನಿಯನ್ನು ತಡೆಯಲು ಸನ್‌ಸ್ಕ್ರೀನ್ ಲೋಶನ್ ಹಚ್ಚುವುದು, ಸನ್‌ಗ್ಲಾಸಸ್ ಧರಿಸುವುದು   ಉತ್ತಮ.* ಶಹ್‌ನಾಜ್‌ರಂಥ, ಸೌಂದರ್ಯ ಪರಿಣತರಿಂದ, ಕಣ್ಣಿನ ಸುತ್ತಲಿರುವ ಚರ್ಮದ ಕಪ್ಪು ಛಾಯೆಯನ್ನು ನಿವಾರಿಸಲು ಲೋಶನ್, ಕ್ರೀಂಗಳುಂಟು. ಇವು ಫಲಕಾರಿಯೆಂದು ಕೆಲವರ ಅಭಿಪ್ರಾಯ.ಕಣ್ಣಿನ ಸುತ್ತ ಕಪ್ಪಾಗಲು ಕಾರಣ ?

ಬಿದ್ದು ಪೆಟ್ಟಾದಾಗ ಮೈ ಮೇಲೆ ನೀಲಿ ಬಣ್ಣದ ಕಲೆಗಳಾಗುವುದು. ಚರ್ಮದ ಕೆಳಗೆ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ, ನಂತರದಲ್ಲಿ ಕ್ರಮೇಣ, ದೇಹದಲ್ಲಿರುವ ದೇಹವನ್ನು ಸ್ವಚ್ಛಗೊಳಿಸುವ ರಿಪೇರಿ ಮಾಡುವ ಜೀವಕಣಗಳು ರಕ್ತಕಣಗಳನ್ನು ನಾಶಗೊಳಿಸಿ, ಆ ಜಾಗವನ್ನು ಸ್ವಚ್ಛಗೊಳಿಸುವವು. ಈ ರೀತಿಯಾಗುವಾಗ, ಆ ಜಾಗದಲ್ಲಿ ಬಣ್ಣ ಬದಲಾಗುತ್ತಾ ಮಾಮೂಲಿ ಚರ್ಮದ ಬಣ್ಣ ಬರುವುದನ್ನು ಕಂಡಿದ್ದೇವೆ. ಬಣ್ಣ ಬದಲಾಗಲು ಕಾರಣ, ರಕ್ತ ಕಣಗಳಿಂದ ಹೊರ ಬರುವ ಹೀಮೋಗ್ಲೋಬಿನ್ ಹಾಗೂ ಅದರ ಉಪಪದಾರ್ಥಗಳು.ಅದೇ ರೀತಿ, ಕಣ್ಣಿನ ಕೆಳಗಿರುವ ಚರ್ಮ ಬಹಳ ತೆಳು, ಸೂಕ್ಷ್ಮ. ಯಾವುದೇ ಕಾರಣದಿಂದ ತೊಂದರೆಯಾದಾಗ, ಚರ್ಮದ ಕೆಳಗಿರುವ ಸಣ್ಣ ರಕ್ತನಾಳಗಳು ಉಬ್ಬಿದಂತಾಗಿ, ಸ್ವಲ್ಪ ರಕ್ತಸ್ರಾವವಾದಾಗ, ರಕ್ತದಿಂದ ಹೊರ ಹಾಕಲ್ಪಡುವ ಬಣ್ಣದ ವಸ್ತುಗಳು (ಪಿಗ್ಮೆಂಟ್) ಶೇಖರಣೆಯಾದಾಗ ಈ ರೀತಿ ಕಪ್ಪು ಛಾಯೆ ಕಾಣಿಸುವುದು.ಮೇಲೆ ತಿಳಿಸಿದಂತೆ, ವಿಟಮಿನ್ ಗುಳಿಗೆಗಳು, ಕಬ್ಬಿಣಾಂಶ ಉಳ್ಳ ಗುಳಿಗೆಗಳು (ಅನಾರೋಗ್ಯದಿಂದ ಬಳಲುವವರಿಗೆ), ಸಾಕಷ್ಟು ವಿಶ್ರಾಂತಿ, ಧ್ಯಾನ ಇವುಗಳಿಂದ ಕ್ರಮೇಣ ಈ ತೊಂದರೆ ನಿವಾರಣೆಯಾಗುವುದು.

(ಲೇಖಕರ ಸಂಪರ್ಕಸಂಖ್ಯೆ  9972509785)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.