ಶನಿವಾರ, ನವೆಂಬರ್ 23, 2019
17 °C

ಕಣ್ಣಿರಿಗೂ ಕರಗದ ಸೋಮಶೇಖರ ರೆಡ್ಡಿ

Published:
Updated:

ಬಳ್ಳಾರಿ: `ಅಣ್ಣಾ ನಾಮಪತ್ರಂ ಇವ್ವ. ನುವ್ವ ಲೇಕ ಮೇಮು ಲೇದು. ನೀನಿಲ್ಲದಿದ್ದರೆ ನಮಗ್ಯಾರು ಗತಿ. ನೀನು ಗೆದ್ದೇ ಗೆಲಿತೀಯಾ. ದಮ್ಮಯ್ಯ ಸ್ಪರ್ಧೆಗೆ ಧುಮುಕು' ಎಂದು ಹೆಂಗಳೆಯರು ಕಣ್ಣಿರಿಟ್ಟರೂ ಕರಗದ ಶಾಸಕ ಜಿ.ಸೋಮಶೇಖರ ರೆಡ್ಡಿ, `ನೇನು ದೇವುಡು (ಆಂಜನೇಯ ಸ್ವಾಮಿ) ದೆಗ್ಗರ ಆಶೀರ್ವಾದಂ ತೀಸ್ಕೊಲೇದು. ಎಲೆಕ್ಷನ್‌ಲೊ ನಿಲಬಡನು. ಅದಿ ಮಾತ್ರಂ ಅಸಾಧ್ಯಮು' ಎಂದು ತಿಳಿಸಿ, ಅನೇಕರಲ್ಲಿ ನಿರಾಸೆ ಮೂಡಿಸಿದರು.ಬಿಎಸ್‌ಆರ್ ಕಾಂಗ್ರೆಸ್‌ನಿಂದ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವಂತೆ ಮಧ್ಯಾಹ್ನ 3.30ರ ವೇಳೆಯಲ್ಲಿ ಅನೇಕರು ಕಣ್ಣೀರಿಟ್ಟು ಮನವಿ ಮಾಡಿದರೂ ಪುರಸ್ಕರಿಸಿದ ರೆಡ್ಡಿ, ಎಸ್.ಲಿಂಗಣ್ಣ ಅವರ ಪುತ್ರ ಎಸ್.ಮುರಳಿಕೃಷ್ಣ ಅವರು ನಾಮಪತ್ರ ಸಲ್ಲಿಸಿದ ಸಂದರ್ಭ ಹಾಜರಿದ್ದು ಮರಳಿದರು.ಮಧ್ಯಾಹ್ನ 1ರ ವೇಳೆ ಬಿಎಸ್‌ಆರ್ ಕಾಂಗ್ರೆಸ್‌ನ ಅಭ್ಯರ್ಥಿ ಜತೆ ಮೆರವಣಿಗೆ ಮೂಲಕ ಮಹಾನಗರ ಪಾಲಿಕೆಗೆ ಆಗಮಿಸಿದ ಅವರು, ಪಕ್ಷದ ಬೆಂಬಲಿಗರು ಮತ್ತು ಮುಖಂಡರ ಜತೆ ಸಮಾಲೋಚನೆ ನಡೆಸುತ್ತ, 3.30ರವರೆಗೆ ಕುಳಿತರು. ನಾಮಪತ್ರ ಸಲ್ಲಿಕೆಯ ಸರದಿ ಬಂದ ಕೂಡಲೇ ಕಚೇರಿ ಆವರಣದಲ್ಲಿ ದಿಢೀರ್ ಬೆಳವಣಿಗೆ ನಡೆಯಿತು.ಕೆಲವು ಮಹಿಳೆಯರು ಇದ್ದಕ್ಕಿದ್ದಂತೆಯೇ ಸ್ಥಳಕ್ಕೆ ಆಗಮಿಸಿ, ನಾಮಪತ್ರ ಸಲ್ಲಿಸುವಂತೆ 10 ನಿಮಿಷಗಳ ಕಾಲ ಗೋಗರೆದರು. ಪಾಲಿಕೆಯ ಸದಸ್ಯ ಗೋವಿಂದರಾಜುಲು, ಮಾಜಿ ಉಪ ಮೇಯರ್ ಕೆ.ಶಶಿಕಲಾ ಮತ್ತಿತರರೂ ಅವರಿಗೆ ಜತೆಯಾಗಿ ಕಣ್ಣೀರು ಸುರಿಸಿದರೂ ಅದಕ್ಕೆ ರೆಡ್ಡಿ ಕರಗಲಿಲ್ಲ.ಎರಡು ದಿನಗಳ ಹಿಂದಷ್ಟೇ, `ನನಗೆ ಜೈಲಿನಲ್ಲಿರುವ ಸೋದರ ಜನಾರ್ದನ ರೆಡ್ಡಿ ಅವರ ಬಿಡುಗಡೆ ಮುಖ್ಯ. ಚುನಾವಣೆ ಮುಖ್ಯವಲ್ಲ' ಎಂದು ತಿಳಿಸಿದ್ದ ರೆಡ್ಡಿ, `ಪಕ್ಷದ ಅನೇಕರು ರಾಜಕಾರಣದಲ್ಲಿ ಮುಳುಗಿದ್ದು, ತಮ್ಮನನ್ನು ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಬರುವ ಜವಾಬ್ದಾರಿ ನನ್ನ ಹೆಗಲ ಮೇಲಿದೆ' ಎಂದು ಹೇಳಿದ್ದರಲ್ಲದೆ, ಸ್ಪರ್ಧೆಗೆ ಸಂಬಂಧಿಸಿದಂತೆ ಚಿಂತನೆ ನಡೆಸುವುದಾಗಿ ತಿಳಿಸಿದ್ದರು.ಆದರೆ, ಎರಡು ದಿನಗಳ ನಂತರವೂ ನಿಲುವು ಬದಲಿಸದೆ ಅವರು ಸ್ಪರ್ಧಾ ಕಣಕ್ಕೆ ಇಳಿಯಲು ಹಿಂಜರಿದರು.

ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಿಂದ ಕಂಗೆಟ್ಟಿರುವ ಸೋಮಶೇಖರರೆಡ್ಡಿ ಸ್ಪರ್ಧೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಬೆಂಬಲಿಗರು ತಿಳಿಸಿದರು.ನಾಗೇಂದ್ರ, ವಾಟಾಳ್‌ಗೆ ಬೆಂಬಲ: ರಾಜ್ಯದ 209 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಜಿಲ್ಲೆಯ ಕೂಡ್ಲಿಗಿಯಲ್ಲಿ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸಿಲ್ಲ. ಬದಲಿಗೆ, ಪಕ್ಷೇತರ ಅಭ್ಯರ್ಥಿ ಬಿ.ನಾಗೇಂದ್ರ ಅವರನ್ನು ಪರೋಕ್ಷವಾಗಿ ಬೆಂಬಲಿಸಲಾಗುವುದು ಎಂದು ಬಿ.ಶ್ರೀರಾಮುಲು ತಿಳಿಸಿದರು.ಬುಧವಾರ ಬಳ್ಳಾರಿ ನಗರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಮುರಳಿಕೃಷ್ಣ ಅವರು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ನಟಿ ರಕ್ಷಿತಾ ಕಣದಿಂದ ದೂರ ಸರಿದಿರುವ ಚಾಮರಾಜನಗರ ಕ್ಷೇತ್ರದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ  ಎಂದರು.ಲೋಕಸಭೆಗೆ ಸ್ಪರ್ಧೆ: ಪಕ್ಷ ಸಂಘಟನೆ ಮತ್ತು ರಾಜ್ಯದಾದ್ಯಂತ ಪ್ರಚಾರ ನಡೆಸುವ ಹಿನ್ನೆಲೆಯಲ್ಲಿ ಸೋಮಶೇಖರ ರೆಡ್ಡಿ ಅವರು ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಅಲ್ಲದೆ, ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುವುದರಿಂದ ರಾಜ್ಯದಲ್ಲಿ ಪಕ್ಷ ಸಂಘಟಿಸುವುದಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)