ಸೋಮವಾರ, ಜೂನ್ 21, 2021
29 °C

ಕಣ್ಣುಮುಚ್ಚಿ ಕುಳಿತ ರಾಮದುರ್ಗ ಪುರಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಣ್ಣುಮುಚ್ಚಿ ಕುಳಿತ ರಾಮದುರ್ಗ ಪುರಸಭೆ

ರಾಮದುರ್ಗ: ತಾಲ್ಲೂಕಿಗೆ ವರದಾನವಾಗಿರುವ ಮಲಪ್ರಭಾ ನದಿಯಲ್ಲಿ ವಿಷಕಾರಿ ಸಸ್ಯ ಸಂಕುಲ ಬೆಳೆದು ನದಿ ನೀರು ರೋಗಗ್ರಸ್ತ ಸಮಾಜ ನಿರ್ಮಿಸುತ್ತಿದೆ. ನದಿಯಲ್ಲಿ ಬೆಳೆದಿರುವ ಆಪು ಕಳೆ ಅನೇಕ ರೋಗಗಳಿಗೆ ಕಾರಣವಾಗಿದೆ. ಆಪು ನಿರ್ಮೂಲನೆಗೆ ಜನನಾಯಕರು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪಟ್ಟಣದ ಶುದ್ಧಗೊಳಿಸಬೇಕೆಂದು ಡಾ. ಪ್ರಕಾಶ್ ಎಂ. ಆಪ್ಟೆ ಒತ್ತಾಯಿಸಿದ್ದಾರೆ.ಮೊದಲಿನಿಂದಲೂ ವಿಶಾಲವಾದ ಮಲಪ್ರಭೆಯು ಪಕ್ಕದವರಿಂದ ಆಕ್ರಮಣಗೊಂಡು ಚರಂಡಿಯಂತೆ ಗೋಚರಿಸುತ್ತಿದೆ. ಪಟ್ಟಣದ ಎಲ್ಲ ಕಲ್ಮಶಗಳನ್ನು ಪುರಸಭೆಯು ನೇರವಾಗಿ ನದಿಗೆ ಹರಿಸುವುದರಿಂದ ನದಿ ನೀರು ಕಲುಷಿತಗೊಂಡಿದೆ.ಅದೇ ನೀರನ್ನು ಸೇವಿಸಿದ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು. ನದಿಯ ದುಃಸ್ಥಿತಿ ಒಂದೆಡೆಯಾದರೆ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬಿಡಾಡಿ ಪ್ರಾಣಿಗಳ ಹಾವಳಿ ಅತಿಯಾಗಿದೆ. ಅದರಲ್ಲೂ ಪಟ್ಟಣದ ಬಹುತೇಕ ಬಡಾವಣೆಗಳು ಹಂದಿಗಳ ವಾಸಸ್ಥಳಗಳಾಗಿವೆ.ಪಟ್ಟಣ ಬಹುತೇಕ ಕಡೆಗಳಲ್ಲಿ ಹೊಲಸು ಬೇಕಾಬಿಟ್ಟಿ ಬಿದ್ದಿರುತ್ತದೆ. ಅವುಗಳಲ್ಲಿ ಬಿಡಾಡಿ ಹಂದಿಗಳು ವಾಸಮಾಡಿ ಮತ್ತಷ್ಟು ಗಲೀಜು ಮಾಡುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳಲು ಕಾರಣವಾಗಿದೆ ಎಂದು ಅವರು ದೂರಿದ್ದಾರೆ.ಪಟ್ಟಣದಲ್ಲಿ ನೈರ್ಮಲ್ಯತೆ ಇಲ್ಲದೇ ಡೆಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾ ಇನ್ನಿತರ ರೋಗಗಳು ಮಕ್ಕಳನ್ನು ಕಾಡುತ್ತಿವೆ. ಪಟ್ಟಣದ ಎಲ್ಲ ರಸ್ತೆಗಳು ಸಂಪೂರ್ಣ ಧೂಳು ಮಯವಾಗಿವೆ. ಒಂದು ವಾಹನ ದಾಟಿ ಹೋದರೆ ಸಾಕು ಎಲ್ಲರೂ ಮೂಗು ಮುಚ್ಚಿಕೊಂಡು ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

 

ಶಾಲಾ ಮಕ್ಕಳು ಶಾಲೆಗೆ ಹೋಗಿ ಸೇರುವ ಹೊತ್ತಿಗೆ ಸಾಕಷ್ಟು ಧೂಳು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಷ್ಟೆ ಅಲ್ಲದೇ ಸಾರ್ವಜನಿಕರೂ ಧೂಳು ಪ್ರಭಾವಕ್ಕೆ ಒಳಗಾಗಿ ರೋಗ ಪೀಡಿತರಾಗುತ್ತಿದ್ದಾರೆ.ಈ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಪುರಸಭೆ ಮತ್ತು ಚುನಾಯಿತ ಪ್ರತಿನಿಧಿಗಳು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ನೀಡಲು ಅವರು ವಿನಂತಿಸಿಕೊಂಡಿದ್ದಾರೆ. ಅಲ್ಲದೇ ಇಂತಹ ನಿರ್ಲಕ್ಷ್ಯವನ್ನು ಖಂಡಿಸಲು ಯುವ ಜನತೆ ಮುಂದಾಗಬೇಕೆಂದು ಅವರು ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.