ಕಣ್ಣು ತುಂಬಿತು ಪ್ರೇಮದ ಬೆಳಕು!

7

ಕಣ್ಣು ತುಂಬಿತು ಪ್ರೇಮದ ಬೆಳಕು!

Published:
Updated:
ಕಣ್ಣು ತುಂಬಿತು ಪ್ರೇಮದ ಬೆಳಕು!

`ಚಿಕ್ಕಂದಿನಲ್ಲೇ ಅಪ್ಪ-ಅಮ್ಮನ ಪ್ರೀತಿ ಕಳೆದುಕೊಂಡು ಮರುಭೂಮಿಯಂತಾಗಿದ್ದ ನನ್ನ ಹೃದಯಕ್ಕೆ ಆಕೆ ಪ್ರೀತಿಯ ಸಿಂಚನ ನೀಡಿದಳು. ಜೀವನದ ಬಗ್ಗೆ ಆಸೆ ಹುಟ್ಟಿಸಿದಳು. ಸ್ಫೂರ್ತಿ ತುಂಬಿದಳು. ನನ್ನಲ್ಲಿ ಬದಲಾವಣೆ ತಂದಳು. ಕಿವಿಗಳಲ್ಲಿ ತುಟಿಯನ್ನಿಟ್ಟು ಪ್ರಣಯಗೀತೆ ಹಾಡಿದಳು. ಬಾಳಿಗೆ ಬೆಳಕಾದಳು' -ಬಾಳಸಂಗಾತಿ ರೂಪಾ ಬಗ್ಗೆ ಶೇಖರ್ ನಾಯ್ಕ ಆಡಿದ ಮಾತುಗಳಿವು.ಹುಟ್ಟಿನಿಂದಲೇ ದೃಷ್ಟಿದೋಷವಿದ್ದ ಶೇಖರ್ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಅಂಧರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಭಾರತ ತಂಡದ ನಾಯಕರಾಗಿದ್ದವರು. ಮಂದ ದೃಷ್ಟಿಯ ರೂಪಾ ಅತ್ಯುತ್ತಮ ನೃತ್ಯಗಾರ್ತಿ. ವಿವಿಧ ದೇಶಗಳಿಗೆ ತೆರಳಿ ನೃತ್ಯ ಕಾರ್ಯಕ್ರಮ ನಡೆಸಿಕೊಡುವ ಗಟ್ಟಿಗಿತ್ತಿ.`ಆಕೆಯ ನಿಸ್ವಾರ್ಥ ಪ್ರೀತಿಯಿಂದಾಗಿ ನಾನು ಬದುಕಿದ್ದೇನೆ. ಇದು ಬರೀ ಪ್ರೀತಿಯಲ್ಲ. ಅದಕ್ಕಿಂತ ಮಿಗಿಲಾದ ಇನ್ನೇನೋ...' ಎಂಬುದು ಶೇಖರ್ ಬಣ್ಣನೆ. ಪ್ರೀತಿಯ ಸೆಲೆ ಹುಟ್ಟುವುದು ಕಣ್ಣಿನಿಂದಲ್ಲ; ಹೃದಯದಿಂದ ಎಂಬುದಕ್ಕೆ ನಿದರ್ಶನ ಈ ಜೋಡಿ.ಪ್ರೇಮಗಾಥೆ...

ಶಿವಮೊಗ್ಗ ಜಿಲ್ಲೆಯವರು ಶೇಖರ್, ರೂಪಾ. ಇಬ್ಬರ ಕುಟುಂಬಗಳಲ್ಲಿ ಅನೇಕರಿಗೆ ದೃಷ್ಟಿದೋಷವಿದೆ. ಶೇಖರ್ ತಾಯಿಗೂ ಅದೇ ಸಮಸ್ಯೆ. ಅವರ ತಾಯಿಯ ನಾಲ್ಕು ಮಂದಿ ಸಹೋದರಿಯರಿಗೂ ಕಣ್ಣು ಕಾಣಿಸುವುದಿಲ್ಲ. ವಂಶಪಾರಂಪರ್ಯವಾಗಿ ಬಂದ ಸಮಸ್ಯೆಯಿದು.ಶೇಖರ್ ಚಿಕ್ಕ ವಯಸ್ಸಿನಲ್ಲೇ ಅಪ್ಪ-ಅಮ್ಮನನ್ನು ಕಳೆದುಕೊಂಡರು. ಅಂಧರಾದ ಶೇಖರ್ ಹಾಗೂ ರೂಪಾ 2004ರಲ್ಲಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ `ಸಮರ್ಥನಂ ಅಂಗವಿಕಲರ ಸಂಸ್ಥೆ' ಸೇರಿಕೊಂಡರು. ಇಬ್ಬರಿಗೂ ನೃತ್ಯದಲ್ಲಿ ಆಸಕ್ತಿ. ಹಾಗಾಗಿ ಸಂಸ್ಥೆಯ ವಿವಿಧ ಕಾರ್ಯಕ್ರಮಗಳ ವೇಳೆ ಒಟ್ಟಿಗೆ ಅಭ್ಯಾಸ ನಡೆಸುತ್ತಿದ್ದರು. ಒಟ್ಟಿಗೆ ನೃತ್ಯ ಮಾಡುತ್ತಾ, ರಿಯಾಜ್ ನಡೆಸುವಾಗ ಹೃದಯದಲ್ಲೂ ಜುಗಲ್‌ಬಂದಿ ಶುರುವಾಯಿತು. ಪ್ರೇಮ ನಿವೇದನೆಯೂ ಆಯಿತು.`ಶೇಖರ್ ಆಗಲೇ ಉತ್ತಮ ನೃತ್ಯಪಟು ಹಾಗೂ ಕ್ರಿಕೆಟ್ ಆಟಗಾರರಾಗಿದ್ದರು. ಅವರಿಗೆ ತಂದೆ-ತಾಯಿ ಇಲ್ಲ ಎಂಬ ವಿಷಯ ನನ್ನ ಗಮನಕ್ಕೆ ಬಂತು. ಇವರನ್ನೇ ಪ್ರೀತಿಸಬೇಕು ಎಂಬ ತೀರ್ಮಾನಕ್ಕೆ ಬಂದೆ' ಎಂದು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ರೂಪಾ.`ಅವರು ಅಂಧರು ಎಂಬುದು ನನಗೆ ಗೊತ್ತಿತ್ತು. ಆದರೆ ಪೋಷಕರ ಪ್ರೀತಿಯಿಂದ ವಂಚಿತರಾಗಿರುವ ಇಂಥವರಿಗೆ ನಿಜವಾದ ಪ್ರೀತಿಯ ಬೆಲೆ ಏನು ಎಂಬುದು ಗೊತ್ತಿರುತ್ತದೆ. ಅಂಥವರ ಹೃದಯದೊಳಗೆ ಪ್ರೀತಿ ತುಂಬುವುದು ಸುಲಭ. ಅಷ್ಟೇ ಪ್ರೀತಿ ನನಗೂ ಸಿಗಬಹುದು ಎಂಬ ನಿಸ್ವಾರ್ಥ ಭಾವನೆ ಖಂಡಿತ ಇರಲಿಲ್ಲ. ಅವರಿಗೆ ಪ್ರೀತಿಯ ವಿಷಯವನ್ನು ಹೇಗೆ ತಿಳಿಸುವುದು ಎಂಬ ಚಡಪಡಿಕೆ ಶುರುವಾಯಿತು. ಕೆಲ ದಿನಗಳ ಬಳಿಕ ಸ್ನೇಹಿತೆ ನಾಗವೇಣಿ ಮೂಲಕ ನಾನು ಶೇಖರ್ ಬಳಿ ಪ್ರೇಮ ನಿವೇದನೆ ಮಾಡಿದೆ. ಆದರೆ ನನ್ನ ಪ್ರೀತಿಯನ್ನು ಒಪ್ಪಿಕೊಳ್ಳಲು ಅವರು 15 ದಿನ ಕಾಲಾವಕಾಶ ಕೇಳಿದರು' ಎಂದು ವಿವರಿಸುತ್ತಾರೆ.ಒಂದು ದಿನ ಕಬ್ಬನ್ ಪಾರ್ಕ್‌ಗೆ ಬರಲು ಹೇಳಿದ ಶೇಖರ್ ಅಲ್ಲಿ ರೂಪಾಳೊಂದಿಗೆ ಪ್ರೀತಿಯ ವಿಷಯದ ಬಗ್ಗೆ ಮಾತನಾಡಿದರಂತೆ.`ನಾನು ಅಂಧ. ನಿನಗೂ ಇದೇ ಸಮಸ್ಯೆ ಇದೆ. ಹಾಗಾಗಿ ಕಣ್ಣಿದ್ದವರನ್ನು ಪ್ರೀತಿಸಿ ಸುಖವಾಗಿರು ಎಂದು ನಾನು ರೂಪಾಳಿಗೆ ಹೇಳಿದೆ.  ಮದುವೆಯಾಗುವುದಿದ್ದರೆ ನಿಮ್ಮನ್ನು ಮಾತ್ರ ಎಂದು ಪಟ್ಟು ಹಿಡಿದು, ಅಳಲು ಶುರು ಮಾಡಿದಳು. ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾಳೆ ಎಂಬ ಭಾವನೆ ನನಗೆ. ಕೊನೆಯಲ್ಲಿ ಆಕೆಯ ಪ್ರೀತಿಗೆ ನಾನು ಶರಣಾದೆ. ಅವಳ ಪ್ರೀತಿ ಕಣ್ಣು ತೆರೆಸಿತು' ಎಂಬುದು ಶೇಖರ್ ನೆನಪುಗಳ ಮೆಲುಕು.ರೂಪಾ ಕುಟುಂಬದವರನ್ನು ಒಪ್ಪಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತು. ಹಾಗಾಗಿ ಮೂರು ವರ್ಷ ಇವರ ಪ್ರೇಮ ಕದ್ದು ಮುಚ್ಚಿಯೇ ಮುನ್ನಡೆಯಿತು. `ನಾನು ಲಂಬಾಣಿ. ರೂಪಾ ನನಗಿಂತ ಮೇಲಿನ ಜಾತಿಯವರು. ಜೊತೆಗೆ ನಾನು ಅಂಧ. ಅವರಿಗೆ ಅಷ್ಟಿಷ್ಟು ಕಾಣಿಸುತ್ತಿತ್ತು. ಈ ಪ್ರೀತಿಗೆ ಅವರ ಕುಟುಂಬದವರು ಒಪ್ಪುವುದು ಅನುಮಾನವಿತ್ತು. ಈ ವಿಷಯ ಕೇಳಿ ಅವರ ಅಪ್ಪ- ಅಮ್ಮ  ಕೂಡ ಆರಂಭದಲ್ಲಿ ಮುಜುಗರಕ್ಕೆ ಒಳಗಾದರು. ನಾನೇ ಅವರ ಮನೆಗೆ ತೆರಳಿ ಮಾತನಾಡಿದೆ. ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿತು' ಎಂದು ನಗುತ್ತಾರೆ ಶೇಖರ್.ನನಸಾದ ತಾಯಿಯ ಕನಸು

`ನಿನಗೆ ಸರಿಯಾಗಿ ಕಣ್ಣು ಕಾಣಿಸದೇ ಇರಬಹುದು. ಆದರೆ ಇಡೀ ಪ್ರಪಂಚಕ್ಕೆ ನೀನು ಕಾಣಿಸಬೇಕು. ನೀನು ಯಾರು ಎಂದು ಎಲ್ಲರಿಗೂ ಗೊತ್ತಾಗಬೇಕು' ಎಂದು ಶೇಖರ್‌ಗೆ ಅವರ ಅಮ್ಮ ಪದೇಪದೇ ಹೇಳುತ್ತಿದ್ದರಂತೆ. ತಮ್ಮ ಮಗ ಭಾರತ ತಂಡದಲ್ಲಿ ಕ್ರಿಕೆಟ್ ಆಡಬೇಕು ಎಂಬುದು ಅವರಮ್ಮನ ಕನಸಾಗಿತ್ತಂತೆ. ಅವರ ಅಮ್ಮ ಈಗ ಇಲ್ಲ. ಆದರೆ ಅವರ ಕನಸನ್ನು ಮಗ ನನಸಾಗಿಸಿದ್ದಾರೆ (ಶೇಖರ್ ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ).`ಈ ಸಾಧನೆ ನೋಡಲು ನನ್ನಮ್ಮ ಬದುಕಿರಬೇಕಿತ್ತು. ಆದರೆ ಪತ್ನಿ ರೂಪಾಳ ಪ್ರೀತಿಯಲ್ಲಿ ಅಮ್ಮನನ್ನು ಕಂಡಿದ್ದೇನೆ. ಅವಳ ಈ ಪ್ರೀತಿಗೆ ನಾನು ಚಿರಋಣಿ' ಎನ್ನುವಾಗ ಶೇಖರ್ ಕಣ್ಣಲ್ಲಿ ನೀರಹನಿ.ಈ ದಂಪತಿಗೆ ಪೂರ್ವಿಕಾ ಎಂಬ ಮಗಳಿದ್ದಾಳೆ. ದೃಷ್ಟಿದೋಷದೊಂದಿಗೇ ಹುಟ್ಟಿದ ಮಗುವಿಗೆ ಶಸ್ತ್ರಚಿಕಿತ್ಸೆ ಬಳಿಕ ಸಮಸ್ಯೆ ಸಂಪೂರ್ಣ ನಿವಾರಣೆಯಾಗಿದೆ. ಅಂದಹಾಗೆ, ಶೇಖರ್ ಅವರಿಗೂ ಶಸ್ತ್ರಚಿಕಿತ್ಸೆಯಿಂದ ದೃಷ್ಟಿದೋಷ ಬಹುಪಾಲು ಕಡಿಮೆಯಾಗಿದೆ.`ಒಂದು ಬಾಗಿಲು ಮುಚ್ಚಿದಾಗ ಮತ್ತೊಂದು ಬಾಗಿಲು ಖಂಡಿತ ತೆರೆಯುತ್ತದೆ. ಆದರೆ ಮುಚ್ಚಿದ ಬಾಗಿಲೆಡೆಗೆ ನಾವು ತುಂಬಾ ಸಮಯ ನೋಡುತ್ತಿರುತ್ತೇವೆಯೇ ಹೊರತು ತೆರೆದ ಬಾಗಿಲಿನತ್ತ ಕಣ್ಣು ಹರಿಸುವುದೇ ಇಲ್ಲ' ಎಂಬ, ಕಣ್ಣು-ಕಿವಿಯ ವೈಕಲ್ಯವಿರುವ ಅಮೆರಿಕದ ಖ್ಯಾತ ಲೇಖಕಿ ಹೆಲೆನ್ ಕೆಲ್ಲರ್ ಮಾತುಗಳೇ ಶೇಖರ್‌ಗೆ ಸ್ಫೂರ್ತಿಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry