ಬುಧವಾರ, ಅಕ್ಟೋಬರ್ 16, 2019
28 °C

ಕಣ್ಣು ಬಣ್ಣ ಕಲೆತಾಗ...

Published:
Updated:

ಕಪ್ಪು ಕಂಗಳನ್ನು ಕಾಪಿಡುವ ರೆಪ್ಪೆ ಮುಚ್ಚಿದಾಗ ಅಲ್ಲೊಂದು ಕ್ಯಾನ್ವಾಸ್‌ನಂತೆ. ಕಡಲುನೀಲಿ ವರ್ಣದ ಕಣ್ಣು!`ಸಾಗರ್ ಜೈಸಿ ಆಂಖೋವಾಲಿ... ಏತೊ ಬತಾ... ತೇರಾ ನಾಮ್ ಹೈ ಕ್ಯಾ~ ಅಂತ ಹಾಡು ಗುನುಗುವಂತೆ ಆಗುತ್ತದೆ.ಕಣ್ರೆಪ್ಪೆಯ ಕಡಲ್ಗಣ್ಣಿನ ಅಲಂಕಾರ ಒಂದು ಬಗೆಯದ್ದಾದರೆ, ಕಣ್ಣ ಸುಳಿಯಲ್ಲಿ ಸೆಳೆದೊಯ್ಯಬಲ್ಲೆ ಎಂಬ ಆತ್ಮವಿಶ್ವಾಸದಿಂದ ಕುಡಿನೋಟ ಚೆಲ್ಲುವ ಚಂಚಲೆಯ ಕಣ್ಣ ಕೆಳಗೂ ಅದೆಂಥದ್ದೋ ಬಣ್ಣ. ಒಲವಿನ ಬಣ್ಣ, ಚಂದದ ಕಣ್ಣ...!ಕಣ್ಣಿನ ಈ ಪರಿಯ ಅಲಂಕಾರಕ್ಕೆ `ಸ್ಮೋಕಿ ಐ~ ಅಂತ ಕರೆಯುತ್ತಾರೆ.  ಸ್ಮೋಕಿ ಐ ಅಲಂಕಾರದ ಇತಿಹಾಸ ಕ್ರಿಸ್ತ ಪೂರ್ವ 7-8 ಶತಮಾನಗಳಿಗಿಂತಲೂ ಹಳೆಯದು. ಗ್ರೀಕ್, ರೋಮನ್ ನಾಗರಿಕತೆಯಲ್ಲಿ ಕಣ್ಣಿನಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಭಾರತೀಯರಲ್ಲಿ ಕಣ್ಕಪ್ಪು ಅಥವಾ ಕಾಡಿಗೆಯಿಂದ ಕಣ್ಣಿನಲಂಕಾರ ಮಾಡಲಾಗುತ್ತಿತ್ತು. ದೃಷ್ಟಿ ತಾಕದಿರಲಿ ಅಂತ ಕಾಡಿಗೆ ಬಳಸಲಾಗುತ್ತಿತ್ತು. ರೋಮ್‌ನಲ್ಲಿ ಕೆಟ್ಟ ಶಕ್ತಿಗಳನ್ನು ತಡೆಯಬಹುದು ಎಂದು ನಂಬಲಾಗಿತ್ತು. ಕಣ್ರೆಪ್ಪೆ ಹಾಗೂ ಹುಬ್ಬಿನ ನಡುವೆ ಮುಖವನ್ನು ವಿಸ್ತಾರಗೊಳಿಸುವ ಪ್ರಯತ್ನವೇ ಈ ಅಲಂಕಾರವಾಗಿದೆ. ತಿಳಿ ಗುಲಾಬಿ, ಬೆಳ್ಳಿ ಹಾಗೂ ತಿಳಿ ನೀಲಿ ಬಣ್ಣದ ಐ ಶ್ಯಾಡೊಗಳ ಬಳಕೆ ಸಾಮಾನ್ಯವಾಗಿದೆ. ಆದರೆ ಫ್ಯಾಶನ್ ಚಕ್ರ ತಿರುಗಿದಂತೆ, ಗಾಢ ವರ್ಣಗಳ ಬಳಕೆ ಹೆಚ್ಚಾಯಿತು. ಹೊಂಬಣ್ಣ, ಕೆಂಬಣ್ಣ, ಗಾಢ ನೀಲಿ, ಹಸಿರು ಬಣ್ಣಗಳು ಬಂದವು.

ಸ್ಮೋಕಿ ಐ ಸೌಂದರ್ಯವನ್ನು ಆಶಾಪಾರೀಖ್ ಮೊದಲು ಬೆಳ್ಳಿ ಪರದೆಗೆ ತಂದಿದ್ದರು.ನಂತರ ಈ ತಲೆಮಾರಿನಲ್ಲಿ ಈ ಅಲಂಕಾರಕ್ಕೆ ಕರೀನಾ ಕಪೂರ್ ಮನಸೋತಿದ್ದಳು. ತನ್ನ ಚೂಪುಮುಖದಲ್ಲಿ ಕಣ್ಣು ಎದ್ದು ಕಾಣುವಂತೆ ಮಾಡಲು ಈ ಬಗೆಯ ಅಲಂಕಾರಕ್ಕೆ ಮೊರೆ ಹೋಗಿದ್ದಳು. ಸ್ಮೋಕಿ ಐ ಮೂಲಕವೇ ಗಮನ ಸೆಳೆಯುವ ಇನ್ನೊಬ್ಬ ನಟಿ ಎಂದರೆ ಬಾಲಿವುಡ್‌ನ ಏಂಜಲಿನಾ ಜ್ಯೂಲಿ.ಕಣ್ರೆಪ್ಪೆಗೆ ಐ ಲೈನರ್ ಮೂಲಕ ತೀಡಿ, ಮೇಲ್ಮೈಗೆ ಗಾಢ ಐ ಶ್ಯಾಡೋಗಳನ್ನು ಬಳಸಿ, ಹುಬ್ಬು ತೀಡಿದರೆ ಎರಡು ನಿಮಿಷಗಳಲ್ಲಿ ಕಣ್ಣಿನಲಂಕಾರ ಮುಗಿಯುತ್ತದೆ.

ಆದರೆ ಎಲ್ಲರ ಕಣ್ನೋಟ ನಿಮ್ಮತ್ತಲೇ ಸೆಳೆಯಲು ಇಷ್ಟು ಮಾತ್ರದ ಮೇಕಪ್ ಸಾಲುವುದೇ ಇಲ್ಲ. ಕನಿಷ್ಠವೆಂದರೂ ಹತ್ತು ನಿಮಿಷಗಳ ಕುಸುರಿಯ ಕಲೆ ಕಣ್ಣನ್ನು ನೇವರಿಸಲೇಬೇಕು. ಸ್ಮೋಕಿ ಐ ಅಲಂಕಾರವಿದ್ದಾಗ, ತುಟಿಗೆ ಮಾತ್ರ ಸಹಜವಾದ ತುಟಿ ರಂಗನ್ನೇ ಬಳಸಬೇಕು ಎಂಬುದು ಫ್ಯಾಶನ್ ಮಂತ್ರ.ಇಲ್ಲಿ ಮತ್ತೆ ಏಂಜಲಿನಾ ಜ್ಯೂಲಿಯನ್ನು ನೆನಪಿಸಿಕೊಳ್ಳಬಹುದು. ದುಂಡುಮುಖದ ಈ ತಾರೆ, ತನ್ನ ಮೊನಚಿಲ್ಲದ, ಮೂಗಿನ ಕೊರತೆ ನೀಗಿಸಲು, ಒಂದೋ ಕಂಗಳಿಗೆ ಹೆಚ್ಚಿನ ಅಲಂಕಾರ ಮಾಡಿಕೊಳ್ಳುತ್ತುರೆ. ಇಲ್ಲವೇ ಗಾಢವರ್ಣದ ತುಟಿ ರಂಗು ಬಳಸುತ್ತಾರೆ. ಎರಡೂ ಬಳಸಿದರೆ ಮಾಟಗಾತಿಯ ಮುಖ ಕಂಡಂತೆ ಆಗುತ್ತದೆ.

ಯಾರಿಗೆ ಚಂದ?

ನಿಮ್ಮ ಕಣ್ಣ ಸುತ್ತ ಸುಕ್ಕುಗಳಿರದಿದ್ದರೆ ಈ ಅಲಂಕಾರ ಚೆನ್ನಾಗಿಯೇ ಒಪ್ಪುತ್ತದೆ ಎನ್ನುತ್ತಾರೆ ಲ್ಯಾಕ್ಮೆ ಪಾರ್ಲರ್ ಒಡತಿ, ಮಿಸ್ ಇಂಡಿಯಾ ಪಟ್ಟ ಧರಿಸಿದ್ದ ರೇಖಾ ಹಂದೆ.ಸ್ಮೋಕಿ ಐ ಸಹಜ ಸೌಂದರ್ಯಕ್ಕೆ ಮಾದಕ ಸ್ಪರ್ಶ ನೀಡುತ್ತದೆ. ತಿಳಿಯಾದ ತುಟಿರಂಗು ಇರಬೇಕು ಎನ್ನುವುದು ಅವರ ಸಲಹೆ. ಆದರೆ ಮನೆಯಲ್ಲಿಯೇ ಪ್ರಯೋಗಕ್ಕೆ ಇಳಿಯುವುದಾದರೆ ಉತ್ತಮ ಗುಣಮಟ್ಟದ, ಮಾರುಕಟ್ಟೆಯಲ್ಲಿರುವ ಬ್ರ್ಯಾಂಡೆಡ್ ಉತ್ಪನ್ನಗಳನ್ನೇ ಬಳಸುವುದು ಒಳಿತು ಎನ್ನುತ್ತಾರೆ ಅವರು.ಕಣ್ಣಿನ ವಿಷಯವಾದ್ದರಿಂದ ಯಾವುದೇ ರೀತಿಯ ಪ್ರಯೋಗಗಳು ಬೇಡ. ಮೇಕಪ್ ತೆಗೆಯಲು ಸಹ, ಬೇಬಿ ಆಯಿಲ್ ಬದಲು ಐ ಮೇಕಪ್ ರಿಮೂವರ್ ಅನ್ನೇ ಬಳಸುವುದು ಒಳಿತು ಎಂಬ ಎಚ್ಚರಿಕೆ ನೀಡಲು ಅವರು ಮರೆಯಲಿಲ್ಲ. 

ಹೊಂಬಣ್ಣದ, ನೀಲ ವರ್ಣದ ಹಸಿರು ಬಣ್ಣದ ಅಲಂಕಾರ ಚೆಂದ ಕಾಣುತ್ತದೆ.

ಕಣ್ಣಿನ ಅಲಂಕಾರಕ್ಕೆ ಹೆಚ್ಚು ಮಹತ್ವ ನೀಡುವುದು ಸದ್ಯದ ಟ್ರೆಂಡ್ ಆಗಿದೆ.

Post Comments (+)