ಕಣ್ಣು ಬಿಟ್ಟಾಗ ಮೈ ತುಂಬಾ ರಕ್ತ

7

ಕಣ್ಣು ಬಿಟ್ಟಾಗ ಮೈ ತುಂಬಾ ರಕ್ತ

Published:
Updated:

ಗದಗ: `ನಸುಕಿನ ಜಾವ 5.30 ಇರಬಹುದು.  ಬಸ್‌ನಲ್ಲಿ ನಿದ್ದೆ ಮಾಡುತ್ತಿದ್ದೆವು. ಇದ್ದಕ್ಕಿದಂತೆ ಜೋರು ಶಬ್ದ ಕೇಳಿಸಿತು. ಏನಾಯಿತು ಎಂದು ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಮೈ ತುಂಬಾ ರಕ್ತ ಹರಡಿತ್ತು'....`ಮುಂಡರಗಿ ತಾಲ್ಲೂಕಿನ ಹರ್ಲಾಪುರ ಮತ್ತು ಹಳ್ಳಿಗುಡಿ  ಮಾರ್ಗದಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಐರಾವತ ಬಸ್ ಮತ್ತು ಲಾರಿ ನಡುವಿನ ಅಪಘಾತದಲ್ಲಿ ಎದೆ, ತಲೆಗೆ ತೀವ್ರ ಪೆಟ್ಟು ಬಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೈದಾರಬಾದಿನ ಸತ್ಯನಾರಾಯಣ ಅವರು ಆಘಾತದಿಂದ ಹೊರಬಂದಿರಲಿಲ್ಲ. ನೋವಿನ ನಡುವೆಯೇ ಘಟನೆ ಬಗ್ಗೆ ವಿವರಿಸಿದರು.`ಕಣ್ಣು ಬಿಟ್ಟಾಗ ಬಸ್‌ನಲ್ಲಿ ಕೂಗಾಟ, ಚೀರಾಟ ಜೋರಾಗಿತ್ತು. ಬಸ್‌ನ ಎಡಭಾಗ ಸಂಪೂರ್ಣ ಜಖಂ ಆಗಿತ್ತು. ಗಾಯಾಳುಗಳು ರಕ್ತದ ಮಡು ವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ ವಿಷಯ ತಿಳಿಯಿತು.  ಸ್ವಲ್ಪ ಹೊತ್ತಿನ ಬಳಿಕ ನನ್ನನ್ನು ಸೇರಿದಂತೆ ಗಾಯಾಳುಗಳನ್ನು 108 ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು' ಎಂದರು.ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವ ಬಸ್ ಚಾಲಕ ಮೌನೇಶ್, `ಬಸ್ ವೇಗದಲ್ಲಿತ್ತು. ರಸ್ತೆ ಮಧ್ಯೆ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಇಲ್ಲದಿದ್ದರೆ ದೊಡ್ಡ ಅನಾಹುತ ಸಂಭವಿಸಿ ಸಾವು, ನೋವು ಹೆಚ್ಚಾಗುತ್ತಿತ್ತು' ಎಂದು ನಿಟ್ಟುಸಿರುಬಿಟ್ಟರು.ಅಪಘಾದಲ್ಲಿ ಗಾಯಗೊಂಡಿರುವ ಹೈದರ ಬಾದ್‌ನ ಸತೀಶ್, ಬ್ರಹ್ಮರಡ್ಡಿ, ಉಡುಪಿಯ ಭಾಸ್ಕರ್‌ಶೆಟ್ಟಿ, ಕುಂದಾಪುರದ ಸುಖಶೆಟ್ಟಿ ಅವರು ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry