ಕಣ್ಣೇಗಾಲ: ಅನೈರ್ಮಲ್ಯ ತಾಂಡವ

7

ಕಣ್ಣೇಗಾಲ: ಅನೈರ್ಮಲ್ಯ ತಾಂಡವ

Published:
Updated:

ಸಂತೇಮರಹಳ್ಳಿ:ಸಮೀಪದ ಕಣ್ಣೇಗಾಲ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆಯೇ ಕಸದ ರಾಶಿಗಳು ಸ್ವಾಗತ ನೀಡುತ್ತವೆ. ರಸ್ತೆ ಪಕ್ಕದಲ್ಲಿ ಬಯಲು ಶೌಚಾಲಯ ಕಣ್ಣಿಗೆ ರಾಚುತ್ತದೆ. ಆ ಮೂಲಕ ನಿರ್ಮಲ ಭಾರತ ಅಭಿಯಾನದ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಹಿಂದೇಟು ಹಾಕಿರುವುದನ್ನು ಸಾರುತ್ತದೆ.ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯೇ ಇಲ್ಲ. ಮನೆಗಳ ಮುಂಭಾಗ ನಿಂತಿರುವ ಕಲ್ಮಷ ನೀರಿನಿಂದ ಅನೈರ್ಮಲ್ಯ ಸೃಷ್ಟಿಯಾಗಿದೆ. ಹೀಗಾಗಿ, ನಿತ್ಯವೂ ನಾಗರಿಕರು ಪರದಾಡುವಂತಾಗಿದೆ.ಕಣ್ಣೇಗಾಲದ ಎಲ್ಲ ಬಡಾವಣೆಗಳಲ್ಲೂ ಸಂಪೂರ್ಣವಾಗಿ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಕೆಲವೆಡೆ ಬೆರಳೆಣಿಕೆಯಷ್ಟು ಚರಂಡಿ ನಿರ್ಮಾಣವಾಗಿದ್ದರೂ ಅವುಗಳಲ್ಲಿ ಸಂಗ್ರಹವಾಗಿರುವ ಹೂಳು ತೆಗೆಸಿಲ್ಲ.ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯೂ ಅನೈರ್ಮಲ್ಯ ಸೃಷ್ಟಿಯಾಗಿದೆ. ಇದರಿಂದ ಮಕ್ಕಳು ಹುಳುಹುಪ್ಪಟೆ ಕಾಟಕ್ಕೆ ನಿತ್ಯವೂ ಭಯಪಡುವಂತಾಗಿದೆ.ಗ್ರಾಮದ ಹಳೆಯ ಬಡಾವಣೆಯೊಂದರಲ್ಲಿ ಚರಂಡಿ ನಿರ್ಮಿಸದಿರುವ ಪರಿಣಾಮ ಮನೆಗಳ ಮುಂಭಾಗ ಕಲ್ಮಷ ನೀರು ನಿಂತಿದೆ. ಬೇರೆಡೆಗೆ ಹರಿಸುವ ಪ್ರಯತ್ನ ಮಾಡಿಲ್ಲ. ಈ ಪ್ರದೇಶದಲ್ಲಿ ದುರ್ವಾಸನೆ ಹೆಚ್ಚಿದೆ. ಸೊಳ್ಳೆಗಳ ಹಾವಳಿಯೂ ಹೆಚ್ಚಿದ್ದು, ರೋಗರುಜಿನಗಳಿಗೆ ಕಾರಣವಾಗಿದೆ ಎಂದು ನಿವಾಸಿಗಳು ದೂರುತ್ತಾರೆ.ಕಳೆದ 4 ವರ್ಷದ ಹಿಂದೆ ಗ್ರಾಮದ ಕೆಲವು ಬೀದಿಗಳಿಗೆ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಇನ್ನುಳಿದ ಬೀದಿಗಳು ಇದರಿಂದ ವಂಚಿತವಾಗಿವೆ ಎಂದು ಗ್ರಾಮಸ್ಥರು ದೂರುತ್ತಾರೆ.ಸಿಮೆಂಟ್ ರಸ್ತೆಯಿಂದ ವಂಚಿತವಾಗಿರುವ ಬೀದಿಗಳಲ್ಲಿ ಮಳೆಗಾಲದ ಸಮಯದಲ್ಲಿ ಕೊಚ್ಚೆ ನೀರು ತುಳಿದುಕೊಂಡೆ ತಿರುಗಾಡುವಂತಾಗಿದೆ.ಗ್ರಾಮದಲ್ಲಿ ಎರಡೂವರೆ ಸಾವಿರದಷ್ಟು ಜನಸಂಖ್ಯೆ ಇದೆ. ಪ್ರತಿನಿತ್ಯ ನಗರ ಪ್ರದೇಶಗಳಿಗೆ ಹೋಗಿ ಬರುವಂತಹ ಜನರು ಹೆಚ್ಚಿದ್ದಾರೆ. ಪ್ರಯಾಣಿಕರಿಗೆ ಅನುಕೂಲವಾಗುವಂತಹ ಬಸ್‌ನಿಲ್ದಾಣ ನಿರ್ಮಿಸಿಲ್ಲ.`ಹಲವು ತಿಂಗಳಿನಿಂದ ಚರಂಡಿ ನಿರ್ಮಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸರ್ಕಾರದಿಂದ ನಮಗೆ ಯಾವ ಸೌಲಭ್ಯವೂ     ಬೇಡ. ಕನಿಷ್ಠ ಸೂಕ್ತವಾದ ಚರಂಡಿ ನಿರ್ಮಿಸಿಕೊಟ್ಟರೆ ಸಾಕು' ಎನ್ನುತ್ತಾರೆ ಗ್ರಾಮಸ್ಥ ಚನ್ನಮಲ್ಲಶೆಟ್ಟಿ.`ಗ್ರಾಮದಲ್ಲಿ ಸಿಮೆಂಟ್ ರಸ್ತೆ ಪೂರ್ಣಗೊಳಿಸಲು ಪಂಚಾಯಿತಿಯಲ್ಲಿ ಅನುದಾನ ಇಲ್ಲ. ಚರಂಡಿ ನಿರ್ಮಾಣ ಹಾಗೂ ಸಿಮೆಂಟ್ ರಸ್ತೆ ಪೂರ್ಣಗೊಳಿಸಲು ಶಾಸಕರಿಗೆ ಕೋರಲಾಗಿದೆ. ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಆ ಅನುದಾನ ಬಿಡುಗಡೆಯಾದರೆ ಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು' ಎಂದು ಕೆಂಪನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ರಾಮಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry