ಕಣ್ಣ ಕನಸುಗಳನ್ನು ಕಿತ್ತುಕೊಂಡವರ‌್ಯಾರು?

7

ಕಣ್ಣ ಕನಸುಗಳನ್ನು ಕಿತ್ತುಕೊಂಡವರ‌್ಯಾರು?

Published:
Updated:

ನೀವು ಮಗುವಿನ ಕಣ್ಣುಗಳನ್ನು ನೋಡಿದರೆ ಅಲ್ಲಿ ಭರವಸೆ, ವಿಶ್ವಾಸ, ಬೆರಗು ಮತ್ತು ಮುಗ್ಧತೆಗಳನ್ನು ಮಾತ್ರ ಕಾಣಲು ಸಾಧ್ಯವಾಗಬೇಕು. ಆದರೆ ಇಂದು ಅದೇ ಕಣ್ಣುಗಳಲ್ಲಿ ಭೀತಿ, ಸಂಶಯ, ದ್ವೇಷವನ್ನು ಕಾಣುವಂತಾಗಿದೆ. ನಾಗರಿಕ ಸಮಾಜದಲ್ಲಿ ಮಕ್ಕಳು ಆತ್ಮಹತ್ಯೆಮಾಡಿಕೊಳ್ಳುವಷ್ಟು ಹತಾಶೆಗೀಡಾಗುತ್ತಿದ್ದಾರೆಂದರೆ ನಾಗರಿಕ ಸಮಾಜದ ನಡವಳಿಕೆ ಮತ್ತು ನಮ್ಮ ಅಭಿವೃದ್ಧಿಯ ಮಾದರಿಯಲ್ಲಿಯೇ ಏನೋ ದೋಷ ಇದೆ ಎನ್ನುವುದು ಸ್ಪಷ್ಟ.ಹರಿಯಾಣದಲ್ಲಿ ಹದಿನಾರು ವರ್ಷದ ಬಾಲಕಿ ಅತ್ಯಾಚಾರಕ್ಕೀಡಾದ ನಂತರ ಆತ್ಮಹತ್ಯೆ ಮಾಡಿಕೊಂಡಳು, ಹೋಂವರ್ಕ್ ಮಾಡದೆ ಇರುವುದಕ್ಕಾಗಿ ಶಿಕ್ಷೆಗೊಳಗಾಗುತ್ತೇನೆ ಎಂದು ಭೀತಿಗೀಡಾಗಿ ಬಿಜಾಪುರದ ವಿದ್ಯಾರ್ಥಿ ಅಜಯ್ ಬೆಂಕಿ ಹಚ್ಚಿಕೊಂಡು ಸತ್ತ, ತರಗತಿಗೆ ತಪ್ಪಿಸಿಕೊಳ್ಳುತ್ತಿರುವುದಕ್ಕಾಗಿ ಶಿಕ್ಷಕರು ಬೈದರು ಎನ್ನುವ ಕಾರಣಕ್ಕಾಗಿ ವಿಜಯವಾಡದ ವಿದ್ಯಾರ್ಥಿ ಆತ್ಮಹತ್ಯೆಯ ಪ್ರಯತ್ನ ಮಾಡಿದ- ಈ ಎಲ್ಲ ಘಟನೆಗಳು ಏನು ಹೇಳುತ್ತವೆ? `ನಮ್ಮ ಕಷ್ಟ, ಸಮಸ್ಯೆ, ದುಃಖಗಳನ್ನು ಹೇಳಿಕೊಳ್ಳಲು ಯಾರೂ ಇಲ್ಲ, ನಮ್ಮನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ, ಯಾರೂ ರಕ್ಷಿಸುವವರಿಲ್ಲ, ನೆರವು ನೀಡುವವರಿಲ್ಲ' ಎಂಬ ಮಕ್ಕಳ ಮನಸ್ಸಿನ ಹತಾಶ ಭಾವನೆಯಲ್ಲವೇ?

ಇವುಗಳು ಕೇವಲ ಬಿಡಿಬಿಡಿಯಾಗಿ ನಡೆಯುತ್ತಿರುವ ಘಟನೆಗಳಲ್ಲ, ದೇಶದಲ್ಲಿನ ಆಘಾತಕಾರಿ ಬೆಳವಣಿಗೆಗಳ ಸರಣಿ. `ದಿ ಲ್ಯಾನ್ಸೆಟ್' ಪ್ರಕಾರ ವಿಶ್ವದಲ್ಲಿ ಅತೀ ಹೆಚ್ಚು ಆತ್ಮಹತ್ಯೆ ನಡೆಯುತ್ತಿರುವ ದೇಶ ಭಾರತ. 2006ರಲ್ಲಿ 5857 ವಿದ್ಯಾರ್ಥಿಗಳು ಅಂದರೆ ಒಂದು ದಿನಕ್ಕೆ ಹದಿನಾರು ವಿದ್ಯಾರ್ಥಿಗಳು ಪರೀಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಗೃಹ ಇಲಾಖೆಯ ಅಪರಾಧ ದಾಖಲೆಯ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ 15ರಿಂದ 29 ವಯಸ್ಸಿನೊಳಗಿನ ಮಕ್ಕಳ ಪ್ರಮಾಣ ಶೇಕಡಾ 45. ಇದರಲ್ಲಿ ಬೆಂಗಳೂರು ಮಹಾನಗರ ಮೊದಲ ಸ್ಥಾನದಲ್ಲಿದೆ.ಆರ್ಥಿಕ ಉದಾರೀಕರಣದ ಕರಿ ನೆರಳು ಕುಟುಂಬದೊಳಗೂ ಪ್ರವೇಶಿಸುತ್ತಿದೆ. ಮಕ್ಕಳನ್ನು ಕೂಡಾ ಮಾರಾಟದ ಸರಕು ಎಂದು ಪರಿಗಣಿಸಲಾಗುತ್ತಿದೆ. ಈ ಮಕ್ಕಳ ಎಳೆಮನಸ್ಸು ಹೆತ್ತವರು ಹೇರುವ ಒತ್ತಡ, ಮತ್ತು ಎದುರಾಗುತ್ತಿರುವ ಪೈಪೋಟಿಯನ್ನು ಎದುರಿಸಲಾಗದೆ ಮುರುಟಿಹೋಗುತ್ತಿವೆ. ಈ ರೀತಿ ಭಗ್ನಗೊಂಡ ಮನಸ್ಸುಗಳ ಮಕ್ಕಳು ಆತ್ಮಹತ್ಯೆಯ ದಾರಿ ಹಿಡಿದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತಿದೆ. `ನಾಳೆಯನ್ನು ನಾವು ಎದುರಿಸಲು ಸಾಧ್ಯ ಇಲ್ಲ, ದು:ಖ, ಕಷ್ಟ ಮತ್ತು ನೋವಿನ ಹೊರತಾಗಿ ಭವಿಷ್ಯದಲ್ಲಿ ಯಾವ ಭರವಸೆಯೂ ಇಲ್ಲ, ನಮ್ಮನ್ನು ಅರ್ಥಮಾಡಿಕೊಳ್ಳುವವರು ಯಾರೂ ಇಲ್ಲ' ಎಂದು ಮಕ್ಕಳು ಯೋಚಿಸುವಂತೆ ಮಾಡಿದವರು ಯಾರು? ಅವರ ಕಣ್ಣುಗಳಲ್ಲಿನ ಕನಸುಗಳನ್ನು ಕಿತ್ತುಕೊಂಡವರು ಯಾರು? `ಗುಣಮಟ್ಟದ ಬದುಕು' ಯಾವುದು? ಇದರ ವ್ಯಾಖ್ಯೆ-ವ್ಯಾಖ್ಯಾನಗಳೇನು? ಈ ಪ್ರಶ್ನೆಗಳಿಗೆ ಸಮಾಜ ಉತ್ತರ ನೀಡಬೇಕಾಗಿದೆ.

ಒಂದು ದೇಶದ ಪ್ರಗತಿಯನ್ನು ಜಿಡಿಪಿಯಿಂದ ಇಲ್ಲವೆ ಮೆಟ್ರೊ-ಮಾಲ್‌ಗಳಿಂದ ಅಲ್ಲ. ಅಲ್ಲಿನ ಮಕ್ಕಳ ಬದುಕಿನ ಸುಖ-ಸಂತೋಷದ ಮೂಲಕ ಅಳೆಯಬೇಕಾಗುತ್ತದೆ. ಸಿಇಟಿಯಲ್ಲಿ ಪಡೆದ ಯಶಸ್ಸು ಮಾತ್ರ ರಾಜ್ಯ ಇಲ್ಲವೇ ದೇಶದ ಅಭಿವೃದ್ಧಿಯ ಸಂಕೇತ ಅಲ್ಲ, ಆ ಸಂದೇಶವನ್ನು ಮಕ್ಕಳ ಮುಗ್ಧ ನಗುವಿನಲ್ಲಿ ಕಾಣುವಂತಾಗಬೇಕು.`ವಯಸ್ಸಿಗೆ ಬಂದ ವ್ಯಕ್ತಿಗಳೆಲ್ಲರೂ ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾದ ಹಿಂಸೆಯಿಂದ ರಕ್ಷಿಸಬೇಕು' ಎಂದು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶ ಹೇಳಿದೆ. ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷೆ ನೀಡುವುದನ್ನು ಭಾರತದ ಸುಪ್ರೀಂಕೋರ್ಟ್ ನಿಷೇಧಿಸಿದೆ. ಇದರ ಹೊರತಾಗಿಯೂ ಮಕ್ಕಳನ್ನು ಹಿಂಸಿಸುವುದಾಗಲಿ, ಅವರನ್ನು ಶಾಲೆಯಲ್ಲಿ ಶಿಕ್ಷಿಸುವುದಾಗಲಿ ನಿಂತಿಲ್ಲ. `ದೇವರ ಭಯವೇ ಜ್ಞಾನದ ಆರಂಭ' ಎಂಬ ಫಲಕ ಈಗಲೂ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತವೆ. ಮಕ್ಕಳ ಮನಸ್ಸಿನಲ್ಲಿ `ಭಯ'ವನ್ನು ಬಿತ್ತದೆ ಇದ್ದರೆ ಅವರು ಒಳ್ಳೆಯ ವಿದ್ಯಾರ್ಥಿಗಳಾಗಲು ಸಾಧ್ಯ ಇಲ್ಲ ಎನ್ನುವ ಶಿಕ್ಷಕರ ಸಂಖ್ಯೆ ದೊಡ್ಡದು.ಮಕ್ಕಳನ್ನು ಪೋಷಿಸುವ ಕಲೆಯನ್ನು ಈಗಿನ ತಂದೆ-ತಾಯಿಗಳು ಮರೆತಿದ್ದಾರೆ. ಮಕ್ಕಳಿಗೆ ಬೇಕಾಗಿರುವುದು ಬೆಚ್ಚನೆಯ ಪ್ರೀತಿ ಮತ್ತು ರಕ್ಷಣೆ ಹಾಗೂ ` ಇಡೀ ಜಗತ್ತು ನಿನ್ನ ವಿರುದ್ಧ ತಿರುಗಿಬಿದ್ದರೂ ನಾವು ನಿನ್ನ ಜತೆ ನಾವಿರುವೆವು' ಎಂಬ ಭರವಸೆ ಎನ್ನುವುದು ಅವರಿಗೆ ತಿಳಿದಿಲ್ಲ. ಎಳೆಯ ಮನಸ್ಸುಗಳನ್ನು ಅರ್ಥಮಾಡಿಕೊಳ್ಳಲು ವಿಶಾಲ ಮನಸ್ಸು ಬೇಕಾಗುತ್ತದೆ. ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ವಿಶೇಷತೆ ಇರುತ್ತದೆ. ಅದನ್ನು ಗುರುತಿಸಿ ಪೋಷಿಸಬೇಕಾಗುತ್ತದೆ, ಅದರ ಮೂಲಕವೇ ಅವರ ಮನಸ್ಸಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕಾಗುತ್ತದೆ. ಬದುಕನ್ನು ಪ್ರೀತಿಸಲು ಕಲಿಸಬೇಕಾಗುತ್ತದೆ.ಇಂದಿನ ಬಹಳಷ್ಟು ತಂದೆ-ತಾಯಿಗಳು ದುಡ್ಡು ಸಂಪಾದನೆಯಲ್ಲಿ ಎಷ್ಟೊಂದು ಮುಳುಗಿಹೋಗಿದ್ದಾರೆಂದರೆ ಸಮಯವೊಂದನ್ನು ಹೊರತುಪಡಿಸಿ ಉಳಿದೆಲ್ಲವೂ  ಅವರಲ್ಲಿದೆ. ದಿನವಿಡೀ ದುಡಿದು ಕಚೇರಿಯನ್ನು ಕೂಡಾ ಹೊತ್ತುಕೊಂಡು ಸುಸ್ತಾಗಿ ಮನೆಗೆ ಬರುವ ಅವರಿಗೆ ಮಕ್ಕಳ ಕಡೆ ನೋಡುವಷ್ಟು ತಾಳ್ಮೆ ಕೂಡಾ ಇರುವುದಿಲ್ಲ. `ಶಿಕ್ಷೆ ಮತ್ತು ಆಮಿಷ'ವೇ ಮಕ್ಕಳನ್ನು ಬೆಳೆಸುವ ವಿಧಾನ ಎಂದು ಅವರು ತಪ್ಪು ತಿಳಿದುಕೊಂಡಿದ್ದಾರೆ. `ಬಲಶಾಲಿಯಷ್ಟೆ ಬದುಕಬಲ್ಲ' ಎಂಬುದನ್ನೇ ನಮ್ಮ ಶಿಕ್ಷಣ  ಕೂಡಾ ಹೇಳುತ್ತಿದೆ. ಕೊಳ್ಳುಬಾಕತನದಿಂದ ಪ್ರೇರಣೆ ಪಡೆದಿರುವ ಜಾಗತೀಕರಣ ಇಡೀ ಸಮಾಜವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು ಇದಕ್ಕೆ ನಮ್ಮ ಶಿಕ್ಷಣ ಸಂಸ್ಥೆಗಳು ಕೂಡಾ ಹೊರತಾಗಿಲ್ಲ. ಶಿಕ್ಷಣ ಎಂದರೆ ಜಾಗತಿಕ ಪೈಪೋಟಿಯನ್ನು ಎದುರಿಸಲು `ಹೈಬ್ರೀಡ್ ಭಾರತೀಯ'ನನ್ನು ಉತ್ಪಾದಿಸುವುದು ಎಂದಾಗಿಬಿಟ್ಟಿದೆ. ಬದುಕು ಮತ್ತು ಶಿಕ್ಷಣಕ್ಕೂ ಸಂಬಂಧವೇ ಇಲ್ಲದಂತಾಗಿದೆ.ಇಂತಹ ಸ್ಥಿತಿಗೆ ಒಗ್ಗಿಕೊಳ್ಳಲಾಗದ ಮಕ್ಕಳು ಬೇರೆ ದಾರಿ ಕಾಣದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಕೇವಲ ಮಕ್ಕಳಾಗಿಯೇ ಬದುಕಲು ಸಮಾಜದಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ. ಶಾಲೆ,ಟ್ಯೂಷನ್, ಮನೆಪಾಠ ಮತ್ತು ಪರೀಕ್ಷೆಗೆ ತಯಾರಿಯಲ್ಲಿಯೇ ಮಕ್ಕಳ ಬದುಕು ಕಳೆದುಹೋಗುತ್ತಿದೆ. ಹೊರಗೆ ಹೋಗಿ ಆಡೋಣವೆಂದರೂ ಉದ್ಯಾನ-ಮೈದಾನಗಳೇ ಇಲ್ಲದಂತಹ ಪರಿಸ್ಥಿತಿ. ಈ ಎಲ್ಲ ಒತ್ತಡಗಳಿಂದ ಪಾರಾಗಲು ಅವರೆದುರು ಇರುವ ಏಕೈಕ ದಾರಿ ಎಂದರೆ ಟೆಲಿವಿಷನ್ ಮತ್ತು ಇಂಟರ್‌ನೆಟ್. ಈ ಮಾಧ್ಯಮಗಳ ಮೂಲಕ ಅವರು ತಾವು ಬಯಸುವ ಭ್ರಾಮಕಲೋಕವೊಂದನ್ನು ಸೃಷ್ಟಿಸಿಕೊಳ್ಳುತ್ತಾರೆ. ಕೆಲವು ಮಕ್ಕಳು ಇದರಲ್ಲಿಯೇ ಖುಷಿಪಡುತ್ತಾರೆ, ಇನ್ನು ಕೆಲವರು ಇತರರು ಹೇಳಿದಷ್ಟನ್ನೇ ಮಾಡುವ `ರೊಬೋಟ್'ಗಳಾಗುತ್ತಾರೆ.`ಹುಟ್ಟುವ ಪ್ರತಿಯೊಂದು ಮಗು ಕೂಡಾ  ಮನುಕುಲವನ್ನು ದೇವರು ಇನ್ನೂ ನಿರಾಶೆಗೊಳಿಸಿಲ್ಲ ಎಂಬ ಸಂದೇಶವನ್ನು ಹೊತ್ತು ತರುತ್ತದೆ' ಎಂದು ರವೀಂದ್ರನಾಥ ಟ್ಯಾಗೋರ್ ಬರೆದಿದ್ದರು. ಆದರೆ ಇಂದಿನ ಮಕ್ಕಳು ಹಿಡಿದಿರುವ ದಾರಿಯನ್ನು ನೋಡಿದರೆ, ಮನುಕುಲದ ಮೇಲಿನ ವಿಶ್ವಾಸವನ್ನು ಅವರು ಕಳೆದುಕೊಂಡಿರುವಂತೆ ಕಾಣುತ್ತಿದೆ.

(ಲೇಖಕರು `ದುಡಿಯುವ ಮಕ್ಕಳ ಅಭಿವೃದ್ದಿ ಸಂಸ್ಥೆ' ಸ್ಥಾಪಕರು ಮತ್ತು ನಿರ್ದೇಶಕರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry