ಕಣ್ಮನ ಸೆಳೆದ ಕಂಡಾಯಗಳ ಮೆರವಣಿಗೆ

7

ಕಣ್ಮನ ಸೆಳೆದ ಕಂಡಾಯಗಳ ಮೆರವಣಿಗೆ

Published:
Updated:

ಮಳವಳ್ಳಿ: ವಿವಿಧ ಹೂವುಗಳಿಂದ ಅಲಂಕರಿಸಿದ 101 ಕಂಡಾಯಗಳು, ಸಾರೋಟ್‌ನ ಆಕರ್ಷಣೆ, ವೀರಗಾಸೆ, ಪೂಜಾ ಕುಣಿತ, ಬಾಲಕಿಯರಿಂದ ಕೋಲಾಟ, ಶಾಲಾ ಮಕ್ಕಳಿಂದ ಬೀಸುಕಂಸಾಳೆ ನೃತ್ಯ, ಬೆದರುಬೊಂಬೆ ಮೆರವಣಿ... ಎಲ್ಲವೂ ಸಣ್ಣ ದಸರಾ ಉತ್ಸವವನ್ನೇ ನೆನಪಿಸಿದವು.ಹೌದು. ಪಟ್ಟಣದಲ್ಲಿ ಸೇರಿದ ಸಾವಿರಾರು ಜನ ಭಾನುವಾರ ಈ ಸಂಭ್ರಮವನ್ನು ಕಣ್ತುಂಬಿಕೊಂಡರು. ಇದೇ ಮೊದಲಬಾರಿಗೆ ನಡೆದ ನೀಲಗಾರರ ಸಮಾವೇಶ ಹಾಗೂ ಕಂಡಾಯಗಳ ಮೆರವಣಿಗೆಗೆ ಅಪಾರ ಜನ ಸಾಕ್ಷಿಯಾದರು.ತಾಲ್ಲೂಕಿನ ಬಿ.ಜಿ. ಪುರದಲ್ಲಿ ಮಂಟೇಸ್ವಾಮಿ ಐಕ್ಯರಾದ ಗದ್ದಿಗೆ ಇದೆ. ಅವರ ಶಿಷ್ಯರಾದ ಸಿದ್ದಪ್ಪಾಜಿ, ರಾಚಪ್ಪಾಜಿ ಭಕ್ತರ ಸಂಖ್ಯೆ ಹೆಚ್ಚಿಗೆ ಇದ್ದರೂ ಇದುವರೆಗೆ ಇಂಥ ಸಮಾವೇಶ ನಡೆದಿರಲಿಲ್ಲ. ಹೀಗಾಗಿ ಮೊದಲಬಾರಿಗೆ ನಡೆಯುವ ಉತ್ಸವ ಜನ-ಮನದಲ್ಲಿ ಉಳಿಯುವಂತಾಯಿತು.ಪಟ್ಟಣದ ಪಟ್ಟಲದಮ್ಮನ ದೇವಾಲಯದ ಬಳಿ ಹೂವುಗಳಿಂದ ಅಲಂಕೃತಗೊಳಿಸಿದ್ದ 101 ಕಂಡಾಯಗಳು ಕಣ್ಮನ ಸೆಳೆದವು. ಜೊತೆಗೆ ಸಾರೋಟಿನಲ್ಲಿ ಕುಳಿತ ವರ್ಚಸ್ ಎಂ.ಎಲ್. ಶ್ರೀಕಾಂತರಾಜೇ ಅರಸು ಮತ್ತು ಇತರೆ ಗಣ್ಯರೂ ಸಾಕ್ಷಿಯಾದರು. ಪೂಜಾಕುಣಿತ, ವೀರಗಾಸೆ, ನೃತ್ಯ, ಮಂಟೇಸ್ವಾಮಿ ಕುರಿತ ಗಾಯನ, ದೇವಾಲಯಗಳ ಬಸವಗಳು ಮೆರವಣಿಗೆಗೆ ಕಳೆತಂದವು.ಪಟ್ಟಣದ ಸುಲ್ತಾನ್ ರಸ್ತೆಯಲ್ಲಿ ಹೊರಟ ಮೆರವಣಿಗೆ ಅನಿತಾ ಕಾನ್ವೆಂಟ್ ರಸ್ತೆ ಮೂಲಕ ಸಾಗಿ ಡಾ. ರಾಜ್‌ಕುಮಾರ್ ರಸ್ತೆ ಮೂಲಕ ಸಂಚರಿಸಿ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣಕ್ಕೆ ಬಂದು ಸಮಾಪನಗೊಂಡಿತು.`ಮಂಟೇಸ್ವಾಮಿ ಸಮಾಜ ಸುಧಾರಣೆಯ ಹರಿಕಾರ'

ಮಂಟೇಸ್ವಾಮಿ ಹಾಗೂ ಅವರ ಶಿಷ್ಯರಾದ ಸಿದ್ದಪ್ಪಾಜಿ, ರಾಚಪ್ಪಾಜಿ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನ ಸಮರ್ಪಣೆ ಮಾಡಿದ್ದಾರೆ. ಅವರ ಸ್ಮರಣೆ ಪುಣ್ಯದ ಕೆಲಸ ಎಂದು ಇಲ್ಲಿನ ಮಂಟೇಸ್ವಾಮಿ ಮಠದ ವರ್ಚಸ್ ಎಂ.ಎಲ್. ಶ್ರೀಕಾಂತರಾಜೇ ಅರಸು ಹೇಳಿದರು.ಪಟ್ಟಣದಲ್ಲಿ ಭಾನುವಾರ ನಡೆದ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ನೀಲಗಾರರ ಸಮಾವೇಶ ಹಾಗೂ 101 ಕಂಡಾಯಗಳ ಮೆರವಣಿಗೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಬಹಳ ಹಿಂದೆಯೇ ಸಮಾಜ ಸುಧಾರಣೆಗೆ ಮಾರ್ಗದರ್ಶನ ತೋರಿಸಿದ ಮಹಾನ್ ವ್ಯಕ್ತಿಗಳು ಅವರು, ಅವರ ಸ್ಮರಣೆಯಲ್ಲಿ ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿರುವುದು ಪ್ರಶಂಸನೀಯ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಇತಿಹಾಸ ತಜ್ಞ ಪಿ.ವಿ. ನಂಜರಾಜೇ ಅರಸು ಮಾತನಾಡಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅವರು ಸಮಾಜ ಸುಧಾರಣೆಗಾಗಿ ಶ್ರಮಿಸಿದರು. ಆದರೆ, ಅವರ ಸೇವೆ ಬೆಳಕಿಗೆ ಬರಲಿಲ್ಲ. ಆದರೆ, ನೀಲಗಾರರ ಹೃದಯದಲ್ಲಿ  ನೆಲೆಸಿರುವವರೆಗೂ ಅವರು ಜೀವಂತವಾಗಿ ಇರುತ್ತಾರೆ ಎಂದರು.ಕಂಡಾಯ ಹೊತ್ತು ಮೆರವಣಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಂಸನೀಯ ಪತ್ರ ವಿತರಣೆ ಮಾಡಲಾಯಿತು. ಮಂಟೇಸ್ವಾಮಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಿ.ಎಲ್. ಪ್ರಭುದೇವರಾಜೇ ಅರಸು ಅಧ್ಯಕ್ಷತೆ ವಹಿಸಿದ್ದರು. ಬಿ.ಎನ್. ಜ್ಞಾನಾನಂದ ಚನ್ನರಾಜೇ ಅರಸು, ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪಿ.ಕೆ. ರಾಜಶೇಖರ್, ಸಾಹಿತಿ ತೈಲೂರು ವೆಂಕಟಕೃಷ್ಣ, ಸಾಹಿತಿ ಚಲುವರಾಜು, ನಿವೃತ್ತ ಜಿಲ್ಲಾಧಿಕಾರಿ ಟಿ. ತಿಮ್ಮೇಗೌಡ, ಮಂಟೇಸ್ವಾಮಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ರಾಜಶೇಖರ್ (ಬಜಾಜ್ ಅಲಿಯನ್ಸ್), ಅಧ್ಯಕ್ಷ ಗುಡ್ಡಪ್ಪ, ಕಾರ್ಯದರ್ಶಿ ಟಿ.ಎಲ್. ನಾಗರಾಜು, ರಾಜೀವ, ಕಾರುಮುತ್ತಣ್ಣ, ಜಗದೀಶ್, ಸಿದ್ದು, ನಾಗರಾಜು, ಧನರಾಜು, ನರಸಯ್ಯ, ಮನೋಜ್, ಗೋವಿಂದ, ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry