ಶುಕ್ರವಾರ, ಜೂಲೈ 10, 2020
24 °C

ಕಣ್ಮನ ಸೆಳೆದ ಸಾಂಸ್ಕೃತಿಕ ಮೆರವಣಿಗೆ, ಮೇಳಕ್ಕೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಣ್ಮನ ಸೆಳೆದ ಸಾಂಸ್ಕೃತಿಕ ಮೆರವಣಿಗೆ, ಮೇಳಕ್ಕೆ ತೆರೆ

ಸೋಮವಾರಪೇಟೆ: ಕೊಡವ ಸಾಂಸ್ಕೃತಿಕ ಮೇಳದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮೆರವಣಿಗೆ ಸೋಮವಾರ ಬೆಳಿಗ್ಗೆ ಅದ್ಧೂರಿಯಿಂದ ನಡೆಯಿತು.ಸಾಂಪ್ರದಾಯಿಕ ಉಡುಪು ಧರಿಸಿದ ನೂರಾರು ಮಂದಿ ಕೊಡವರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಮಹಿಳೆಯರು ದೀಪದೊಂದಿಗೆ ಸಾಂಪ್ರದಾಯಿಕ ದಿರಿಸು ಮತ್ತು ಆಭರಣ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಒಡಿಕತ್ತಿ ಮತ್ತು ಕೋವಿ ಸಹಿತ ಬಂದಿದ್ದ ಪುರುಷರು ಎಲ್ಲರ ಗಮನ ಸೆಳೆದರು.ನಗರದ ವಿವೇಕಾನಂದ ವೃತ್ತದಲ್ಲಿ ನಿರ್ಮಿಸಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ದ್ವಾರದಿಂದ ಹೊರಟ ಮೆರವಣಿಗೆ ಐ.ಮಾ.ಮುತ್ತಣ್ಣ ದ್ವಾರ, ನಡಿಕೇರಿಯಂಡ ಚಿಣ್ಣಪ್ಪ ದ್ವಾರದ ಮೂಲಕ ಸಾಗಿ ಕೊಡವ ಸಮಾಜದಲ್ಲಿ ಸಮಾವೇಶಗೊಂಡಿತು. ಜಿಲ್ಲೆಯ ವಿವಿಧ ಕೊಡವ ಸಮಾಜಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದ ಮೆರವಣಿಗೆಯಲ್ಲಿ ಅಕಾಡೆಮಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ಸ್ಥಳೀಯ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ತೆರೆದ ಜೀಪಿನಲ್ಲಿ ಸಾಗಿದರು.ಕೊಡವ ಮೂಲ ನಿವಾಸಿಗಳ ಸಂಸ್ಕೃತಿ ಬಿಂಬಿಸುವ ವಿವಿಧ ನೃತ್ಯದ ಪ್ರಕಾರಗಳು ಮೆರವಣಿಗೆಯಲ್ಲಿ ಇದ್ದವು. ಕೆದಮುಳ್ಳೂರು ಬಲಂಚೀರಿ ತಂಡದವರ ಕೋಲ, ಕಕ್ಕಬೆ ಯವಕಪಾಡಿ ತಂಡದ ಕಾಪಾಳ ನೃತ್ಯ, ಕಕ್ಕಬೆ ತಂಡದ ಪೂಮಾಲೆ ಕುಡಿಯರ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆದವು. ವಿವೇಕಾನಂದ ವೃತ್ತದ ಬಳಿ ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮಂಡೇಟಿರ ಪೊನ್ನಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ಕೊಡವ ಅಕಾಡೆಮಿ ರಿಜಿಸ್ಟ್ರಾರ್ ವಿನೋದಚಂದ್ರ ಸೇರಿದಂತೆ ಅಕಾಡೆಮಿಯ ಸದಸ್ಯರು, ವಿವಿಧ ಕೊಡವ ಸಮಾಜದ ಪದಾಧಿಕಾರಿಗಳು ಹಾಜರಿದ್ದರು.‘ಕೊಡವ ಸಂಸ್ಕೃತಿ ಉಳಿಸಲು ಪಣ ತೊಡಿ’

ಸೋಮವಾರಪೇಟೆ: ಕೊಡವ ಭಾಷೆ ಹಾಗೂ ಸಂಸ್ಕೃತಿ ಪ್ರಪಂಚದಲ್ಲಿಯೇ ವಿಶಿಷ್ಟವಾಗಿದ್ದು, ಇಂತಹ ಅಪೂರ್ವ ಸಂಸ್ಕೃತಿ ಉಳಿಸುವುದು ಕೊಡವರ ಕರ್ತವ್ಯ ಎಂದು ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನಸ್ವಾಮೀಜಿ ಅಭಿಪ್ರಾಯಪಟ್ಟರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಗರದ ಕೊಡವ ಸಮಾಜದ ಸಹಕಾರದೊಂದಿಗೆ ಕೊಡವ ಸಮಾಜದ ಆವರಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ‘ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳ’ದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.ಕೊಡವ ಜನಾಂಗದ ಅನೇಕ ಯುವಕರು ನಗರ ಪ್ರದೇಶದತ್ತ ವಲಸೆ ಹೋಗುತ್ತಿರುವುದರಿಂದ ಭಾಷೆ ಮತ್ತು ಸಂಸ್ಕೃತಿಗೆ ಪರೋಕ್ಷವಾಗಿ ಪೆಟ್ಟು ಬೀಳುತ್ತಿದೆ. ಆಧುನೀಕರಣದ ಪ್ರಕ್ರಿಯೆಯಿಂದಾಗಿ ಕೊಡವ ಭಾಷೆ ಶಿಥಿಲಗೊಳ್ಳುತ್ತಿದೆ. ಕೊಡಗಿನಲ್ಲಿ ಉನ್ನತ ಶಿಕ್ಷಣದ ವ್ಯವಸ್ಥೆ ಉತ್ತಮಗೊಂಡರೆ ಇಲ್ಲಿನ ವಿದ್ಯಾರ್ಥಿಗಳು ನಗರವನ್ನು ಆಶ್ರಯಿಸುವುದು ಕಡಿಮೆಯಾಗಿ ಭಾಷೆ ಮತ್ತು ಸಂಸ್ಕೃತಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಕೊಡಗಿನಲ್ಲಿಯೇ ಕೊಡವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದರು.  ಯುವ ಜನಾಂಗದವರು ಕೊಡಗನ್ನು ತೊರೆಯುವ ಆಲೋಚನೆ ಬಿಡಬೇಕಾಗಿದೆ. ಕೊಡವ ಜನಾಂಗದ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ. ಅವರೆಲ್ಲರೂ ತಾವು ಹುಟ್ಟಿದ ನೆಲವನ್ನು ಅಭಿವೃದ್ಧಿಗೊಳಿಸಲು ಮುಂದಾಗಬೇಕೆಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿಕುಶಾಲಪ್ಪ ಮಾತನಾಡಿ, ಕೊಡವ ಭಾಷೆಯನ್ನು ಕೊಡವ ಜನಾಂಗದವರು ಪ್ರೀತಿಸುವುದನ್ನು ಕಲಿಯಬೇಕು ಎಂದರು.

ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ, ಮಂಡ್ಯದ ಉದ್ಯಮಿ ಮಚ್ಚಂಡ ಜಯಾ ಚಿಣ್ಣಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ.ಲೋಕೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎನ್.ಎಸ್.ಮೂರ್ತಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.ಕೇಚಮಾಡ ಸುಬ್ಬಮ್ಮ (ಸಾಹಿತ್ಯ), ಚರ್ಮಂಡ ಪೂವಯ್ಯ (ಕಲೆ), ಬೊವ್ವೇರಿಯಂಡ ಚಿಣ್ಣಪ್ಪ ( ಸಂಸ್ಕೃತಿ) ಇವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದರು.ಗೆಜ್ಜೆತಂಡ ಕಿರುಚಿತ್ರದ ನಿರ್ಮಾಪಕ ಅಪಾಡಂಡ ಟಿ.ರಘು, ಜಡಿಮಳೆ ಚಲನಚಿತ್ರದ ನಿರ್ಮಾಪಕ ಮಲ್ಲೇಂಗಡ ಮಧೋಶ್ ಪೂವಯ್ಯಗೆ ಅಕಾಡೆಮಿಯ ವತಿಯಿಂದ ಸಹಾಯಧನ ವಿತರಿಸಿದರು. ಅಕಾಡೆಮಿಯ ವತಿಯಿಂದ ಪ್ರಕಟಿಸಿದ 8 ಪುಸ್ತಕ ಬಿಡುಗಡೆ ಮಾಡಲಾಯಿತು. ಚೇನಂಡ ಎಸ್.ಚಂಗಪ್ಪರ ಬಾಕೆಮನೆ ಕೊಡವ ಪುಸ್ತಕಕ್ಕೆ ಅಕಾಡೆಮಿಯ ಪುಸ್ತಕ ಬಹುಮಾನ ವಿತರಿಸಿದರು.ನಾಟಕ ಕ್ಷೇತ್ರದ ಕಲಾವಿದ ಮದ್ರೀರ ಸಂಜು, ಕೋಳೇರ ಸನ್ನು ಕಾವೇರಪ್ಪ ಹಾಗೂ ಮೂಡೆರ ಅಶೋಕರಿಗೆ ಸಹಾಯಧನ ನೀಡಲಾಯಿತು. ಕಲಾವಿದರಾದ ತೋಲಂಡ ಪೂವಯ್ಯ, ಬಾದುಮಂಡ ಪೊನ್ನಪ್ಪ, ಚೀಯಮಂಡ ಮಿಟ್ಟು, ಬಾಳೆಕುಟ್ಟಡ ತಂಗಮ್ಮ, ಮಲ್ಲಡ ಮುತ್ತವ್ವ, ನಾಪಂಡ ಚಿಣ್ಣಪ್ಪ, ಚೌರೀರ ತಿಮ್ಮಯ್ಯಗೆ ಅಕಾಡೆಮಿಯ ಸಹಾಯಧನ ವಿತರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.