ಕಣ್ಮನ ಸೆಳೆಯುವ ಕಲಾ ಪ್ರದರ್ಶನ

7

ಕಣ್ಮನ ಸೆಳೆಯುವ ಕಲಾ ಪ್ರದರ್ಶನ

Published:
Updated:

ಗುಲ್ಬರ್ಗ: ಚಿತ್ರಕಲೆ, ಮೂರ್ತಿಶಿಲ್ಪ, ಗ್ರಾಫಿಕ್ ಮತ್ತಿತರ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗುಲ್ಬರ್ಗದ ವಿಶ್ವೇಶ್ವರಯ್ಯ ನಗರದಲ್ಲಿ ಜನ್ಮತಾಳಿರುವ ಚೈತನ್ಯಮಯಿ ಆರ್ಟ್ ಗ್ಯಾಲರಿಗೆ ಇದೀಗ ದಶಮಾನೋತ್ಸವದ ಸಂಭ್ರಮ.ಈ ಸಂಭ್ರಮದ ನಿಮಿತ್ತ ಆರಂಭದಲ್ಲಿ ನಗರದ ಕನ್ನಡ ಭವನದಲ್ಲಿ ಮೂರು ದಿನಗಳ ಕಾಲ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಈ ಭಾಗದ ಖ್ಯಾತ ಕಲಾವಿದರಾದ ಜೆ.ಎಸ್. ಖಂಡೇರಾವ, ಎ.ಎಸ್. ಪಾಟೀಲ, ಕಿಶನ್‌ರಾವ್ ಸರೋದೆ, ಅಮೃತಪ್ಪ ಸಾಹು, ಬಸವರಾಜ ಜಾನೆ, ಎಸ್.ಎಂ. ನೀಲಾ, ವಿ.ಬಿ. ಬಿರಾದಾರ ಮುಂತಾದವರು ರಚಿಸಿದ ವಿವಿಧ ಬಗೆಯ ಸುಮಾರು 40 ಚಿತ್ರ, ಹತ್ತಿಪ್ಪತ್ತು ಮೂರ್ತಿ ಶಿಲ್ಪಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.ವಿಶಾಲವಾದ ಸಭಾಂಗಣದ ಗೋಡೆಯ ಸುತ್ತ ತುಂಬಾ ಅಚ್ಚುಕಟ್ಟಾಗಿ ನೇತು ಹಾಕಲಾಗಿರುವ ಈ ಕಲಾಕೃತಿಗಳು ನೋಡುಗರಿಗೆ ಆಕರ್ಷಣೀಯವಾಗಿ ಕಂಡು ಬರುತ್ತಿವೆ. ಪ್ರತಿಯೊಬ್ಬರು ಒಂದೊಂದು ಕಲಾಕೃತಿಯ ಹತ್ತಿರ ನಿಂತು ಅದರ ವಿವರಣೆ ಪಡೆದು ಧನ್ಯತಾಭಾವ ಅನುಭವಿಸುತ್ತಿದ್ದಾರೆ.“ಸ್ಥಳೀಯ ವಸ್ತು, ವಿಷಯ, ಪ್ರಮುಖ ಸ್ಥಳಗಳನ್ನೇ ವಿಷಯವನ್ನಾಗಿಟ್ಟುಕೊಂಡು ರಚಿಸಲಾಗಿರುವ ಇಲ್ಲಿನ ಕಲಾ ಕೃತಿಗಳಲ್ಲಿ ಸೃಜನಶೀಲತೆ ಅರಳಿರುವುದನ್ನು ಗುರುತಿಸಬಹುದು” ಎಂದು ಯುವ ಕಲಾವಿದ ವಿಜಯಕುಮಾರ ಬಿರಾದಾರ ತಿಳಿಸುತ್ತಾರೆ.ಇಲ್ಲಿನ ಕಲಾಕೃತಿಗಳನ್ನು ವೀಕ್ಷಿಸುತ್ತಿದ್ದರೆ ಸೌಹಾರ್ದ, ಸಾಮರಸ್ಯ ವಾತಾವರಣ, ಶರಣರ ಜೀವನ ದರ್ಶನದ ಜೊತೆಗೆ ಈ ಭಾಗದ ಇತಿಹಾಸ, ಸಂಸ್ಕೃತಿ ಕಣ್ಮುಂದೆ ಬಂದು ಹೋಗುತ್ತದೆ. ನೂರಾರು ಪುಟಗಳ ಒಂದು ಗ್ರಂಥವನ್ನು ಓದುವುದಕ್ಕಿಂಥ ಇಲ್ಲಿರುವ ಕಲಾಕೃತಿಗಳನ್ನು ವೀಕ್ಷಸುವುದೇ ವಾಸಿ. ಶಾಲಾ  ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು” ಎಂದು ಉಪನ್ಯಾಸಕ ಶರಣಬಸಪ್ಪ ವಡ್ಡನಕೇರಿ ಅಭಿಪ್ರಾಯಪಡುತ್ತಾರೆ.“ಏಪ್ರಿಲ್,14, 2003ರಲ್ಲಿ ಆರಂಭವಾಗಿರುವ ಈ ಸಂಸ್ಥೆ ಅಡಿಯಲ್ಲಿ ಈವರೆಗೆ ಹಿರಿಯ, ಯುವ ಕಲಾವಿದರ 30 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, 15 ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ, 2 ಶಿಲ್ಪಕಲಾ ಪ್ರದರ್ಶನ, 3 ಚಿತ್ರಕಲಾ ಶಿಬಿರ, 2 ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಅನೇಕ ಯುವ ಕಲಾವಿದರಿಗೆ ಕಲಾ ಚೈತನ್ಯ ನೀಡಲಾಗಿದೆ.ದಶಮಾನೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಫೆ. 24, 2013ರವರೆಗೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಿರಂತರವಾಗಿ ಚಿತ್ರಕಲಾ ಪ್ರದರ್ಶನ, ಉಪನ್ಯಾಸ, ವಿಚಾರ ಸಂಕಿರಣದಂತಹ ಕಲಾ ತಿಳಿವಳಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು” ಎಂದು ಗ್ಯಾಲರಿಯ ನಿರ್ದೇಶಕ ಎ.ಎಸ್. ಪಾಟೀಲ ಹೆಮ್ಮೆಯಿಂದ ನುಡಿಯುತ್ತಾರೆ.ಕಲಾಸಕ್ತರನ್ನು ಕೈ ಬೀಸಿ ಕರೆಯುವಂತಿರುವ ಈ ಚಿತ್ರಕಲಾ ಪ್ರದರ್ಶನಕ್ಕೆ ನೀವೂ ಒಂದು ಬಾರಿ ಭೇಟಿ ನೀಡುವ ಸೌಜನ್ಯವನ್ನು ಯಾಕೆ ತೋರಬಾರದು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry