ಕಣ್ಮನ ಸೆಳೆಯುವ ನಾಗರಮಣಿ

7

ಕಣ್ಮನ ಸೆಳೆಯುವ ನಾಗರಮಣಿ

Published:
Updated:

ಸುತ್ತಲೂ ಹಸಿರು ಕಾನನ. ಕಲ್ಲು ಬಂಡೆಗಳ ನಡುವಿಂದ ಧರೆಗೆ ಧುಮ್ಮಿಕ್ಕುವ ಜಲಧಾರೆ, ಆಕಾಶಕ್ಕೆ ಕನ್ನಡಿ ಹಿಡಿದಂತಿರುವ ತಿಳಿನೀರಿನ ಪುಟ್ಟ ಕೊಳ. ಇದಕ್ಕೆ ಗೋಪುರದಂತೆ ಚಾಚಿಕೊಂಡಿರುವ ಬೃಹದಾಕಾರದ ಕಲ್ಲು ಬಂಡೆ. ಹೀಗೆ ಪ್ರಕೃತಿ ಸೌಂದರ್ಯವನ್ನೇ ತನ್ನ ಮಡಿಲಲ್ಲಿ ತುಂಬಿಕೊಂಡು ಮೆರೆಯುತ್ತಿದ್ದಾಳೆ ‘ನಾಗರಮಣಿ’.ಕಾರವಾರ ತಾಲ್ಲೂಕಿನ ಚೆಂಡಿಯಾದಲ್ಲಿರುವ ಈ ಜಲಪಾತ ವರ್ಷ ಪೂರ್ತಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಕಾರವಾರದಿಂದ ಅಂಕೋಲಾ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-17ರಲ್ಲಿ ಸುಮಾರು 10 ಕಿ.ಮೀ. ದೂರದಲ್ಲಿದೆ ಈ ಚೆಂಡಿಯಾ ಗ್ರಾಮ. ಈ ಗ್ರಾಮದಿಂದ ಹೆದ್ದಾರಿಯ ಎಡ ಭಾಗಕ್ಕಿರುವ ಸಂತೋಷಿಮಾತಾ ದೇವಸ್ಥಾನದ ಸಮೀಪದಿಂದ ಪಶ್ಚಿಮ ಘಟ್ಟಗಳ ಕಡೆ ಮುಖ ಮಾಡಿ ಕಚ್ಚಾರಸ್ತೆಯಲ್ಲಿ 3 ಕಿ.ಮೀ. ಸಾಗಿದರೆ ಜಲಪಾತದ ನೀರಿನ ಭೋರ್ಗರೆತ ಕಿವಿಗಪ್ಪಳಿಸುತ್ತದೆ. ಈ ಕಚ್ಚಾ ರಸ್ತೆಯಲ್ಲಿ ಸುಮಾರು 1.5 ಕಿ.ಮೀವರೆಗೆ ದ್ವಿಚಕ್ರ ವಾಹನದಲ್ಲಿ ಮಾತ್ರ ಹೋಗಬಹುದು. ಮುಂದೆ ಕಾಲ್ನಡಿಗೆಯಲ್ಲಿ ಸಾಗಬೇಕು.ಪಶ್ಚಿಮ ಘಟ್ಟಗಳಿಂದ ಹರಿದು ಬರುವ ಝರಿ ನೀರು ಸಂಗಮವಾಗಿ ಇಲ್ಲಿ ಜಲಪಾತ ನಿರ್ಮಿಸಿದೆ. ಸುಮಾರು 12 ಅಡಿಗಿಂತಲೂ ಮೇಲಿಂದ ಧುಮುಕುವ ನೀರಿಗೆ ಕಲ್ಲು ಬಂಡೆಗಳು ಮೈಯೊಡ್ಡಿ ನಿಂತಿವೆ. ಇವುಗಳ ಮೇಲೆ ಹೆಜ್ಜೆ ಇಟ್ಟಂತೆ ಬಳುಕುತ್ತ ಧರೆಗಿಳಿಯುವ ಜಲಧಾರೆಯ ದೃಶ್ಯ ಮನಮೋಹಕ.ಜಲಪಾತದ ನೀರು ಧುಮ್ಮಿಕ್ಕುವಲ್ಲಿ ನೆಲೆಗೆ ನಿಲುಕದಷ್ಟು ಆಳವಿರುವ ಪುಟ್ಟದೊಂದು ಕೊಳ ಇದೆ. ಇಲ್ಲಿಗೆ ಬರುವ ಪ್ರವಾಸಿಗರು ನೀರಿನಲ್ಲಿ ಈಜುತ್ತಾ ಮೈ ಮರೆಯುತ್ತಾರೆ. ಜಲಪಾತದ ಕೆಳಭಾಗದಲ್ಲಿ ದೊಡ್ಡದಾದ ಬಂಡೆಗಲ್ಲೊಂದು ಚಪ್ಪರದಂತೆ ಚಾಚಿಕೊಂಡಿದ್ದು, ಕಿರೀಟದಂತೆ ಶೋಭಿಸುತ್ತಿದೆ. ಕೊಳದ ಸುತ್ತಲು ಎತ್ತರ ಬಂಡೆಗಳಿರುವುದರಿಂದ, ನೀರಿನಲ್ಲಿ ಮನಬಂದಂತೆ ಜಿಗಿದು, ಕುಪ್ಪಳಿಸಬಹುದು. ಕೊಳದ ಮೇಲೆ ಚಾಚಿಕೊಂಡಿರುವ ಬಂಡೆಗಲ್ಲಿನ ಅಡಿಯಿಂದ ಈಜುತ್ತಾ ಜಲಪಾತದ ನೀರು ಬೀಳುವಲ್ಲಿ ಹೋಗಬಹುದು. ಅಲ್ಲಿ ಹೊಸ ಪ್ರಪಂಚವೇ ನಮ್ಮೆದುರು ತೆರೆದುಕೊಳ್ಳುತ್ತದೆ.ಹೀಗಾಗಿ ಇಲ್ಲಿ ಈಜುವುದೇ ಒಂದು ರೋಮಾಂಚನ. ಕೊಳದಲ್ಲಿ ಆಳ ಹೆಚ್ಚಿರುವುದರಿಂದ ಚೆನ್ನಾಗಿ ಈಜು ಕಲಿತವರು ಮಾತ್ರ ನೀರಿಗೆ ಇಳಿದರೆ ಒಳ್ಳೆಯದು.ಇಲ್ಲಿ ನಾಗ ದೇವತೆಯ ಶಕ್ತಿ ಇದೆ ಎನ್ನುವುದು ಇಲ್ಲಿಯ ಜನರ ನಂಬಿಕೆ. ಇದರಿಂದ ಈ ಜಲಪಾತಕ್ಕೆ ನಾಗರಮಣಿ ಎಂದು ಕರೆಯುತ್ತಾರೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಜಲಪಾತದ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry