ಕಣ್ಮನ ಸೆಳೆಯುವ ಬತ್ತದ ಬಯಲು...

7

ಕಣ್ಮನ ಸೆಳೆಯುವ ಬತ್ತದ ಬಯಲು...

Published:
Updated:
ಕಣ್ಮನ ಸೆಳೆಯುವ ಬತ್ತದ ಬಯಲು...

ಗೋಣಿಕೊಪ್ಪಲು: ಬತ್ತದ ಕಣಜವೆಂದೇ ಹೆಸರು ಪಡೆದಿರುವ ದಕ್ಷಿಣ ಕೊಡಗಿನ ಗದ್ದೆಯ ಬಯಲು ಸಮೃದ್ಧ ಹಸಿರಿನಿಂದ ಕಂಗೊಳಿಸುತ್ತಿದೆ. ಕೆಲವು ಕಡೆ ಗದ್ದೆ ಬಯಲು ಪಾಳು ಬಿದ್ದಿದ್ದರೂ, ಕೃಷಿ ಮಾಡಿರುವ ಗದ್ದೆ ಬಯಲು ಕೃಷಿಕರ ಗಮನ ಸೆಳೆಯತ್ತಿದೆ.ಬೆಟ್ಟಗುಡ್ಡಗಳ ನಡುವಿನ ಕಾಫಿ ತೋಟದ ಮಧ್ಯೆ ಇರುವ ವಿಶಾಲವಾದ ಬಯಲಿನಲ್ಲಿ ಬತ್ತದ ಕೃಷಿ ಮಾಡಿರುವ ಗದ್ದೆ ಹಸಿರು ಸಾಗರದಂತೆ ಕಂಡು ಬರುತ್ತಿದೆ. ಮಳೆ ಆಶ್ರಯದಲ್ಲಿ ಬೆಳೆಯುವ ಬತ್ತ ಇದೀಗ ಹೂ ಬಿಟ್ಟು ತೆನೆದಾಟುವ ಹಂತ ತಲುಪಿದೆ.ಕಾಫಿ ತೋಟದ ನಡುವೆ ಹೆಬ್ಬಾವಿನ ಆಕಾರದಲ್ಲಿ ಸುತ್ತಿ ಬಳಸಿರುವ ರಸ್ತೆ, ಅದರ ಇಕ್ಕೆಲಗಳಲ್ಲಿರುವ ವಿಶಾಲ ಬತ್ತದ ಬಯಲು ನೋಡುಗರ ಮನ ಸೆಳೆಯುತ್ತಿದೆ.ಕಾರ್ಮಿಕರ ಸಮಸ್ಯೆಯಿದ್ದರೂ ಅಲ್ಲಲ್ಲಿ ಕೃಷಿ ಕಂಡಿರುವ ಗದ್ದೆ ಬಯಲು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಇಲ್ಲಿನ ಸಾಂಪ್ರದಾಯಕ ಕೃಷಿಯಾದ ಬತ್ತದ ಕೃಷಿ ದುಬಾರಿ ಕೂಲಿ,  ಕಾರ್ಮಿಕರ ಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆದರೂ ಕೆಲವು ಕೃಷಿಕರು ಯಂತ್ರಗಳನ್ನು ಅವಲಂಬಿಸಿ ಬತ್ತ ಬೆಳೆಯುತ್ತಿದ್ದಾರೆ.ಈ ಬಾರಿ ಆಗಾಗ್ಗೆ ಮಳೆ ಬೀಳುತ್ತಿದ್ದು ಕೃಷಿಗೆ ಸಹಕಾರಿ ಎನ್ನಲಾಗುತ್ತಿದೆ. ಆದರೆ ಕೆಲವು ಕಡೆ ಬೆಂಕಿ ರೋಗದ ಬಾಧೆಯೂ ಕಾಡುತ್ತಿದೆ. ಕೊಡಗಿನ ಪ್ರಮುಖ ಹಬ್ಬವಾದ ಹುತ್ತರಿ (ಡಿಸೆಂಬರ್) ವೇಳೆಗೆ ಬತ್ತ ಕಟಾವಿಗೆ ಬರುತ್ತದೆ.ಹೊಸ ಅಕ್ಕಿಯನ್ನು ಮನೆಗೆ ತರುವ ಹಬ್ಬವಾದ ಹುತ್ತರಿಯಲ್ಲಿ ಜನತೆ ಸಂಭ್ರಮದಿಂದ ಗದ್ದೆಗೆ ತೆರಳಿ ಬತ್ತದ ತೆನೆ ಪೂಜಿಸಿ ಮನೆಗೆ ತಂದು ದೇವರ ಮುಂದೆ ಕಟ್ಟುತ್ತಾರೆ. ಬಳಿಕ ಹೊಸ ಅಕ್ಕಿ ಪಾಯಸ ಮಾಡಿ ಸವಿಯುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry