ಕಣ್ಮನ ಸೆಳೆವ ಹಂಪಿ ಜಲಪಾತ!

ಸೋಮವಾರ, ಮೇ 27, 2019
28 °C

ಕಣ್ಮನ ಸೆಳೆವ ಹಂಪಿ ಜಲಪಾತ!

Published:
Updated:

ಹೊಸಪೇಟೆ: ಐತಿಹಾಸಿಕ ಹಂಪಿ ಪಾರಂಪರಿಕ, ಧಾರ್ಮಿಕ ಕ್ಷೇತ್ರ ಹಾಗೂ ಸಾಂಸ್ಕೃತಿಕ ರಾಜಧಾನಿಯ ಜೊತೆ ನೈಸರ್ಗಿಕ ತಾಣವೂ ಎಂದು ಘೋಷಿಸಲೇಬೇಕಾದ ಅನಿವಾರ್ಯತೆ ಇದೆ ಎಂಬುದಕ್ಕೆ ತುಂಗಭದ್ರಾ ನದಿಯಲ್ಲಿ ಕಂಡು ಬರುವ ಜಲಪಾತಗಳು ಸಾಕ್ಷಿಯಾಗಿವೆ.ಹೌದು! ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಮೂಲಕ ಹಂಪಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದಿರುವುದು ಎಲ್ಲರಿಗೆ ತಿಳಿದಿರುವ ವಿಚಾರ.ಆದರೆ ವೈವಿಧ್ಯಮಯ ಪಕ್ಷಿ ಸಂಕುಲ ಹಾಗೂ ತುಂಗಭದ್ರಾ ನದಿಯ ಜುಳು ಜುಳು ಹರಿಯುವ ನೀರಿನ ನಿನಾದದೊಂದಿಗೆ ಮಳೆಗಾಲ ದಲ್ಲಿ ಮೇಲ್ಮಟ್ಟದ ಜಲಪಾತ, ಬೇಸಿಗೆಯಲ್ಲಿ ಭಾರಿ ಆಳಕ್ಕಿರುವ ಅಂತರಗಂಗೆಯ ವೈಭವ ಹೀಗಾಗಿ ಇದೊಂದು ನೈಸರ್ಗಿಕ ತಾಣ ಎಂಬುವುದನ್ನು ಸಾಕ್ಷೀಕರಿಸುತ್ತಿದೆ.

ವಿರೂಪಾಕ್ಷ ದೇವಾಲಯದ ಹಿಂದಿನ ಕಾಲುದಾರಿಯಲ್ಲಿ ಸ್ವಲ್ಪ ಕ್ರಮಿಸಿದರೆ ಸಾಕು ಇಂತಹ ಸುಂದರ ತಾಣ ಕಾಣಸಿಗುತ್ತದೆ.ಗುಡ್ಡಬೆಟ್ಟಗಳ ಮಧ್ಯ ಹರಿಯುವ ತುಂಗಭದ್ರೆ ಇಂತಹ ಮನಮೋಹಕ ದೃಶ್ಯಗಳಿಗೆ ಸಾಕ್ಷಿ ಯಾಗಿದ್ದಾಳೆ.

ಜಲಾಶಯದಿಂದ 50 ಸಾವಿರಕ್ಕೂ ಹೆಚ್ಚಿನ ನೀರನ್ನು ನದಿಗೆ ಹರಿಯ ಬಿಟ್ಟಾಗ ಮಾತ್ರ ಇಂತಹ ದೃಶ್ಯಗಳು ಅನೇಕ ಕಡೆ ವೈವಿಧ್ಯಮಯವಾಗಿ ಕಾಣಲು ಸಾಧ್ಯ.

 

ಕಳೆದ ಒಂದು ವಾರದಿಂದ ಲಕ್ಷಾಂತರ ಕ್ಯೂಸೆಕ್ ನೀರನ್ನು ಹರಿಯಲು ಬಿಟ್ಟ ಪರಿಣಾಮ ಈ ಸ್ಥಳಗಳು ಮತ್ತಷ್ಟು ವೈವಿಧ್ಯಮಯ ವಾಗಿ ಕಂಗೊಳಿಸುವ ಮೂಲಕ ಜನಾಕರ್ಷಣೆಗೆ ಕಾರಣವಾಗಿವೆ. ಈ ದಾರಿ ಕ್ರಮಿಸಲು ಸ್ವಲ್ಪ ಎದೆಗಾರಿಕೆ ಮತ್ತು ಸಾಹಸ ಪ್ರವೃತ್ತಿಯೂ ಬೇಕು.ದಾರಿಯುದ್ದಕ್ಕೂ ವೈವಿಧ್ಯಮಯ ಅನೇಕ ಜಾತಿಯ ಪಕ್ಷಿಗಳ ಚಿಲಿಪಿಲಿ ಕಲರವ, ಮೊಸಳೆ ಮತ್ತು ನಕ್ಷತ್ರ ಆಮೆಗಳ ಸುಳಿದಾಟ ಇರುವುದರಿಂದ ಮಾರ್ಗ ತಿಳಿದವರ ಮಾರ್ಗದರ್ಶನ ಪಡೆದು ಸಾಗುವುದು ಒಳಿತು. ಹೆಚ್ಚಾಗಿ ವಿದೇಶಿಯರು ಇಂತಹ ಸಾಹಸಕ್ಕೆ ಕೈಹಾಕುವುದರಿಂದ ಅವರು ಇಂತಹ ವೈಭವ ಸವಿಯುವುದು ಸಾಮಾನ್ಯ.ಸ್ಥಳೀಯರಿಗೆ, ದೇಶಿಯ ಪ್ರವಾಸಿಗರಿಗೆ ತಿಳಿಸುವ ದೃಷ್ಟಿಯಿಂದ ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮತ್ತು ಪ್ರಾಚ್ಯ ವಸ್ತು ಪುರಾತತ್ವ ಇಲಾಖೆಗಳು ಸ್ಥಳದ ಮಹತ್ವ ಹಾಗೂ ಕ್ರಮಿಸುವ ಮಾರ್ಗದ ಬಗ್ಗೆ ಮಾಹಿತಿ ಹಾಕಿ ಹೆಚ್ಚು ಹೆಚ್ಚು ಪ್ರವಾಸಿಗರು ಈ ವೈಭವವನ್ನು ಸವಿಯುವಂತೆ ಮಾಡಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry