ಕಣ್ಮರೆಯಾಗುತ್ತಿರುವ ತೆರೆದ ಬಾವಿಗಳು

ಸೋಮವಾರ, ಜೂಲೈ 22, 2019
27 °C

ಕಣ್ಮರೆಯಾಗುತ್ತಿರುವ ತೆರೆದ ಬಾವಿಗಳು

Published:
Updated:

ಚನ್ನಗಿರಿ: ಈ ಹಿಂದೆ ಜನ -ಜಾನುವಾರುಗಳ ಬದುಕಿಗೆ ನೆಮ್ಮದಿ ತಂದುಕೊಟ್ಟಿದ್ದು ಸಾಂಪ್ರದಾಯಿಕ ತೆರೆದ ಬಾವಿಗಳು. ಆದರೆ, ಇಂದು ಎಲ್ಲರ ನಿರ್ಲಕ್ಷ್ಯದಿಂದ ಕಣ್ಮರೆಯಾಗುತ್ತಿವೆ.ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ತೆರೆದ ಬಾವಿಗಳಿಗೆ ವ್ಯಾಪಕವಾಗಿ `ಜಲ ಮರುಪೂರಣ~ ಮಾಡಿದರೆ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು. ಚನ್ನಗಿರಿ ಪಟ್ಟಣದ ಪುಟ್ಟಬಸಪ್ಪ ಕೆರೆಯ ಬಳಿ ಒಂದು ಸಿಹಿ ನೀರಿನ ತೆರೆದ ಬಾವಿ ಹಿಂದೆಯೂ ಇತ್ತು, ಈಗಲೂ ಇದೆ. ಇಡೀ ಪಟ್ಟಣದ ಜನರ ಕುಡಿಯುವ ನೀರಿನ ದಾಹವನ್ನು ಈ ಒಂದು ಸಿಹಿ ನೀರಿನ ಬಾವಿ ಕಳೆದ ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ನೀಗಿಸುತ್ತಿತ್ತು.ಆದರೆ, ಹೊಸದಾಗಿ ನಲ್ಲಿಗಳು ಹಾಗೂ ಕಿರು ನೀರು ಸರಬರಾಜು ಘಟಕಗಳು ಬಂದ ಮೇಲೆ ತೆರೆದ ಬಾವಿಗಳು ವಿನಾಶದ ಅಂಚಿನತ್ತ ಸಾಗಿವೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ತೆರೆದ ಬಾವಿಗಳಿಗೆ ಕಸ-ಕಡ್ಡಿಗಳನ್ನು ಹಾಕಿ ಮುಚ್ಚುವ ಪ್ರಸಂಗಗಳು ಹೆಚ್ಚಾಗಿ ನಡೆಯುತ್ತಿವೆ. ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಸರಬರಾಜಾಗುತ್ತಿದ್ದರೂ, ಈ ತೆರೆದ ಬಾವಿಗಳ ಬಗ್ಗೆ ಯಾರಿಗೂ ಕೂಡ ಆಸಕ್ತಿ ಇಲ್ಲದಂತಾಗಿದೆ. ಹಾಗಾಗಿ, ತೆರೆದ ಬಾವಿಗಳು ಅವನತಿಯ ಹಾದಿಯಲ್ಲಿವೆ.ಇನ್ನು ಹೊಲಗಳಲ್ಲಿರುವ ತೆರೆದ ಬಾವಿಗಳಿಗೆ ನೇರವಾಗಿ ನೀರು ತುಂಬುವುದರಿಂದ ಕಲ್ಲು, ಮಣ್ಣು, ಕಸ.ಕಡ್ಡಿ ಸೇರಿ ಬಾವಿಗಳು ಕಸದ ತೊಟ್ಟಿಯಾಗುತ್ತಿವೆ. ಅದನ್ನು ತಡೆಗಟ್ಟಲು ಬಾವಿಗೆ ನೀರು ಬರುವ ದಾರಿಯಲ್ಲಿ ಅಲ್ಲಲ್ಲಿ ಸಣ್ಣ ಟ್ರೆಂಚ್‌ಗಳನ್ನು ತೆಗೆದು, ಅವುಗಳಲ್ಲಿ ಹರಿದು ಬಂದ ನೀರು ಶುದ್ಧಗೊಂಡು ಬಾವಿ ಸೇರುತ್ತದೆ.

 

ಬಾವಿ ದೂರದಲ್ಲಿದ್ದರೆ, ಅದರ ಪಕ್ಕ ನಾಲ್ಕು ಅಡಿ ಆಳದ ಗುಂಡಿ ತೋಡಿ, ನೀರು ಇಲ್ಲಿಂದ ಬಾವಿಗೆ ಹರಿಯುವಂತೆ ಒಂದು ಪೈಪ್ ಅಳವಡಿಸಿ, ಗುಂಡಿಯ ತಳದಲ್ಲಿ ಒಂದೂವರೆ ಅಡಿಯವರೆಗೆ ದೊಡ್ಡಕಲ್ಲು ತುಂಬಬೇಕು. ಅದರ ಮೇಲೆ ಅರ್ಧ ಅಡಿ ಇದ್ದಿಲು, ನಂತರ ಒಂದು ಅಡಿ ಸಣ್ಣ ಕಲ್ಲು, ಮೇಲ್ಭಾಗದಲ್ಲಿ ಅರ್ಧ ಅಡಿ ಮರಳನ್ನು ತುಂಬಿ ಮೇಲ್ಭಾಗದ ಅರ್ಧ ಅಡಿಯನ್ನು ಹಾಗೆಯೇ ಬಿಡಬೇಕು.ಅದೇ ರೀತಿ ಗ್ರಾಮಗಳಲ್ಲಿರುವ ತೆರೆದ ಬಾವಿಗಳಿಗೆ ನೀರು ತುಂಬಿಸುವುದಾದರೆ ಕಸ-ಕಡ್ಡಿ ಸೇರದಂತೆ ನೀರು ಹರಿಯುವ ಪೈಪ್‌ಗೆ ಶೋಧಕ ಅಳವಡಿಸಬೇಕು. ಈ ರೀತಿ ಮಾಡಿದರೆ ತೆರೆದ ಬಾವಿಗಳಲ್ಲಿ ನೀರು ಕಡಿಮೆಯಾಗುವ ಸಮಸ್ಯೆ ತಪ್ಪಿ ಕುಡಿಯಲು ಶುದ್ಧ ನೀರು ಲಭ್ಯವಾಗಿ ನೀರಿನ ಸಮಸ್ಯೆ ನೀಗಬಹುದು.ಈ ಬಗ್ಗೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳು `ಜಲ ಮರುಪೂರಣ~ ಮಾಡಲು ಮನಸ್ಸು ಮಾಡಿದರೆ ಬೇಸಿಗೆಯಲ್ಲಿ ಉಂಟಾಗುವ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಿ ನಿಶ್ಚಿಂತೆಯಿಂದ ಇರಬಹುದು. ಮೊದಲು ತೆರೆದ ಬಾವಿಗಳ ರಕ್ಷಣೆ ಮಾಡಲು ಮುಂದಾಗುವುದು ಅಗತ್ಯವಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಲಕ್ಷಾಮ ಉಂಟಾಗಿ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದೊದುಗುವುದು ನಿಶ್ಚಿತ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry