ಶನಿವಾರ, ಫೆಬ್ರವರಿ 27, 2021
20 °C

ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ರಾಗಿ ಒಕ್ಕಣೆ

ಪ್ರಜಾವಾಣಿ ವಾರ್ತೆ/ಕೆ.ಎಸ್‌.ವೀರೇಶ್‌ ಪ್ರಸಾದ್‌. Updated:

ಅಕ್ಷರ ಗಾತ್ರ : | |

ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ರಾಗಿ ಒಕ್ಕಣೆ

ಸಂತೇಬೆನ್ನೂರು: ಗ್ರಾಮೀಣ ಭಾಗದಲ್ಲಿ ರಾಗಿ ಒಕ್ಕಣೆ ಎಂಬುದು  ಕಾಯಕದ ಸರಣಿ. ದಶಕಗಳ ಹಿಂದೆ ರಾಗಿ ಈ ಭಾಗದ ಪ್ರಮುಖ ಆಹಾರ ಬೆಳೆ. ಜನ, ಜಾನುವಾರಿಗೆ ಶಕ್ತಿದಾಯಕ ಶುದ್ಧ ಆಹಾರ ಧಾನ್ಯವಾಗಿತ್ತು.ಕಾಲಕ್ರಮೇಣ ವಾಣಿಜ್ಯ ಬೆಳೆಗಳು ಮಳೆ ನಂಬಿದ ರೈತನ ಪಾಲಿಗೆ ಅನಿವಾರ್ಯವಾದವು. ಕೆಲಸ ಕಡಿಮೆ, ಇಳುವರಿ ಹೆಚ್ಚು, ಧಾರಣೆಗಳ ಭರಾಟೆಯಲ್ಲಿ ರಾಗಿ ಬೆಳೆ ಇಳಿಮುಖ ಕಂಡಿತು. ಇಂದು ಬಹುಪಾಲು ಒಣ ಭೂಮಿಯ ಪ್ರಮುಖ ಬೆಳೆ ಮೆಕ್ಕೆಜೋಳ. ಈ ಹಿನ್ನೆಲೆಯಲ್ಲಿ ರಾಗಿ ಬೆಳೆದು ಸಾಂಪ್ರದಾಯಿಕ ಒಕ್ಕಣೆ ಆರಂಭಿಸಿದ ರೈತರು ಬೆರಳೆಣಿಕೆಯಷ್ಟು ಮಾತ್ರ ಕಂಡುಬರುತ್ತಾರೆ.ದೂಳು, ಕಸಕಡ್ಡಿ ರಾಗಿ ಸೇರದಂತೆ ತಡೆಯಲು ಕಣವನ ದನಕರುಗಳ ಸಗಣಿಯನ್ನು ನೀರಿನೊಂದಿಗೆ ಸೇರಿಸಿ ಬಳಿಯಲಾಗುತ್ತದೆ. ಕಾಂಡದ ಕೆಳಭಾಗದಲ್ಲಿ ಕೊಯಿಲು ಮಾಡಿದ ರಾಗಿ ಸಸಿಗಳನ್ನು ಕಟ್ಟುಗಳ ರೂಪದಲ್ಲಿ ಬಣವೆಯಲ್ಲಿ ಶೇಖರಿಸಿಡಲಾಗುತ್ತದೆ. ಚೆನ್ನಾಗಿ ಒಣಗಿದ ನಂತರ ಕಣದಲ್ಲಿ ಕಟ್ಟುಗಳನ್ನು ವೃತ್ತಾಕಾರವಾಗಿ ಹರಡಲಾಗುತ್ತದೆ. ಮಧ್ಯಾಹ್ನದವರೆಗೆ ರೋಣಗಲ್ಲನ್ನು (ಸಿಲಿಂಡರ್‌ ಆಕೃತಿಯ ಕಲ್ಲಿನ ಸಾಧನ) ಎತ್ತುಗಳ ಸಹಾಯದಿಂದ ರಾಗಿ ಹುಲ್ಲಿನ ಮೇಲೆ ಉರುಳಿಸುವ ಕೆಲಸ ನಡೆಯುತ್ತದೆ.ಆನಂತರ ಬಿದಿರಿನ ಮೆರೆಯಿಂದ ಹುಲ್ಲನ್ನು ಸಡಿಲಿಸಿ ಮೆದೆ ರೂಪದಲ್ಲಿ ಹೊರ ತೆಗೆಯಲಾಗುತ್ತದೆ. ಅಗತ್ಯವಿದ್ದಲ್ಲಿ ಮತ್ತಷ್ಟು ರೊಣಗಲ್ಲು ಹೊಡೆದು ಹಲುಬೆಯಿಂದ ಹುಲ್ಲನ್ನು ಬೇರ್ಪಡಿಸಲಾಗುತ್ತದೆ. ರಾಗಿ ಕಾಳುಗಳನ್ನು ರಾಶಿ ಮಾಡಲಾಗುತ್ತದೆ.ದಿನಕ್ಕೆ ಎರಡು ಗಾಡಿ ರಾಗಿ ಹುಲ್ಲನ್ನು ತುಳಿಸುವ ಕಾರ್ಯ ನಡೆಯುತ್ತದೆ. ರೈತರ ಶಕ್ತಾನುಸಾರ ವಾರಗಟ್ಟಲೆ ನಿತ್ಯ ಈ ಸರಣಿ ಕೆಲಸ ನಡೆಯುತ್ತದೆ. ಮನೆ ಮಂದಿಯೆಲ್ಲಾ ಈ ಕಾರ್ಯದಲ್ಲಿ ಭಾಗವಹಿಸುತ್ತಾರೆ. ಒಕ್ಕಣೆ ನಂತರ ಗಾಳಿಗೆ ತೂರಲಾಗುತ್ತದೆ. ಇದರಿಂದ ರಾಗಿ ದೂಳು, ಕಸದಿಂದ ಮುಕ್ತವಾಗುತ್ತದೆ. ಇದರಲ್ಲಿ ರೈತರಿಗೆ ಆರ್ಥಿಕ ಹೊರೆಯಿಲ್ಲ. ಖರ್ಚಿಲ್ಲದೆ ಮನೆಗೆ ರಾಗಿ ಸೇರುತ್ತದೆ. ದಿನಕ್ಕೆ 3 ರಿಂದ 4 ಕ್ವಿಂಟಲ್ ರಾಗಿ ಒಕ್ಕಣೆ ಸಾಧ್ಯ. ಇಂದು ಮಾರುಕಟ್ಟೆ ಧಾರಣೆ ₨ 1,500ರ ಆಸುಪಾಸಿನಲ್ಲಿದೆ.ಆದರೆ, ಇಂದು ಡಾಂಬರು ರಸ್ತೆಗೆ ರಾಗಿ ಹುಲ್ಲನ್ನು ಹರಡುವುದು ಸಾಮಾನ್ಯ ದೃಶ್ಯವಾಗಿದೆ. ವಾಹನಗಳ ಓಡಾಟದ ಮೂಲಕ ಒಕ್ಕಣೆ ನಡೆಸಲಾಗುತ್ತಿದೆ. ಇದರಿಂದ ವಾಹನ ಚಾಲಕರಿಗೆ ಕಿರಿಕಿರಿಯಾಗುತ್ತಿದೆ. ರಾಗಿ ಇಂದು ಉತ್ಕೃಷ್ಟ ಆಹಾರವಾದರೂ ಈ ಬೆಳೆಯಿಂದ ರೈತರು ವಿಮುಖರಾಗುತ್ತಿರುವುದು ಆತಂಕದ ಸಂಗತಿ ಎನ್ನುತ್ತಾರೆ ರೈತ ರಾಜಪ್ಪ, ಮಲ್ಲಿಕಾರ್ಜುನ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.