ಕಣ್ಮರೆಯಾದ ಕಡಲು

7

ಕಣ್ಮರೆಯಾದ ಕಡಲು

Published:
Updated:

ಮತ್ತೂರು ಕೃಷ್ಣಮೂರ್ತಿ ಅವರನ್ನು ಹಲವಾರು ವರ್ಷಗಳಿಂದ ನಾನು ಬಲ್ಲವನಾಗಿದ್ದರೂ ಅವರ ನಿಕಟ ಸಂಪರ್ಕ ದೊರೆತಿದ್ದು ಎರಡು ವರ್ಷಗಳ ಹಿಂದಷ್ಟೇ. ನನ್ನ ಮನೆಯಲ್ಲಿ `ಗಮಕ~ ಕಾರ್ಯಕ್ರಮ ಏರ್ಪಡಿಸಲು ತೀರ್ಮಾನಿಸ್ದ್ದಿದೇ ಅವರ ಪರಿಚಯಕ್ಕೆ ಕಾರಣವಾಯಿತು (ಗಮಕ ಕರ್ನಾಟಕದಲ್ಲಿ ಮಾತ್ರ ಚಾಲ್ತಿಯಲ್ಲಿರುವ, ಅಳಿವಿನಂಚಿನಲ್ಲಿರುವ ಕಲೆ.

 

ಪುರಾಣದ ಕಥೆಯನ್ನು ಪದ್ಯದ ರೂಪದಲ್ಲಿ ಸೂಕ್ತವಾದ ರಾಗದೊಂದಿಗೆ ಗಾಯಕ/ಕಿ ವಾಚಿಸುತ್ತಾರೆ. ಸಾಲುಗಳಲ್ಲಿನ ಅರ್ಥ ಮತ್ತು ಸತ್ವವನ್ನು ವಾಚನದ ರಾಗ ಅಥವಾ ರಸ ನಮ್ಮ ಮನಸ್ಸಿಗೆ ದಾಟಿಸುವ ಶಕ್ತಿ ಹೊಂದಿದೆ). ಕಾರ್ಯಕ್ರಮದ ಕುರಿತು ಮಾತನಾಡುವ ಸಲುವಾಗಿ ಮತ್ತೂರು ಕೃಷ್ಣಮೂರ್ತಿ ಅವರನ್ನು ಬೆಳಗಿನ ಉಪಾಹಾರಕ್ಕೆ ನಮ್ಮ ಮನೆಗೆ ಆಹ್ವಾನಿಸಿದ್ದೆ. ಹೇಳಿದ್ದ ಸಮಯಕ್ಕೆ ಸರಿಯಾಗಿ ಆಗಮಿಸಿದ ಅವರ ವ್ಯಕ್ತಿತ್ವ ಅಂದು ಬೀರಿದ ಪ್ರಭಾವ ಎಂದಿಗೂ ಮರೆಯಲಾಗದ್ದು.ಕನ್ನಡ - ಸಂಸ್ಕೃತ ಪಂಡಿತರಂತೆ ಅವರು ಸಾಂಪ್ರದಾಯಿಕ ಶೈಲಿಯಲ್ಲಿ ಉಡುಪು ಧರಿಸಿದ್ದರು. ಗರಿಗರಿಯಾದ ಹತ್ತಿಯ ಬಿಳಿ ಪಂಚೆ, ಬಿಳಿ ಖಾದಿ ಅಂಗಿಯ ಮೇಲೆ ವೇಯ್ಸ್ಟ ಕೋಟ್. ಕಣ್ಣುಗಳಲ್ಲಿ ವಿಶೇಷ ಕಾಂತಿಯಿತ್ತು. ಲವಲವಿಕೆಯ ಮತ್ತು ಪಾದರಸದಂತಹ ಚುರುಕುತನ ಎದ್ದು ಕಾಣುತ್ತಿತ್ತು.ಸಂಸ್ಕೃತ, ಕನ್ನಡ, ತಮಿಳು, ಇಂಗ್ಲಿಷ್ ಮತ್ತು ಭಾರತದ ಅನೇಕ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲ ಸಾಮರ್ಥ್ಯ ಅವರದ್ದು. ವಾಲ್ಮೀಕಿ ರಾಮಾಯಣ ಅಥವಾ ಮಹಾಭಾರತದ ಘಟನಾವಳಿಗಳನ್ನಾಧರಿಸಿದ ಗಮಕ ವಾಚನವನ್ನು ಏರ್ಪಡಿಸಲು ಉದ್ದೇಶಿಸಿದ್ದು, ತಾವು ಅದನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ವಾಚಿಸಲು ಸಾಧ್ಯವೇ ಎಂದು ನಾನು ಅವರನ್ನು ಕೇಳಿದಾಗ ಅವರಿಗೆ ಆಶ್ಚರ್ಯ ಮತ್ತು ಸಂತೋಷ ಒಮ್ಮೆಗೇ ಆಯಿತು.ಏಕೆಂದರೆ ವ್ಯಾವಹಾರಿಕ ಪ್ರಪಂಚಕ್ಕೆ ಧುಮುಕಿದವರಿಗೆ ಇಂತಹ ಸಾಂಪ್ರದಾಯಿಕ ಕಲಾ ಪ್ರಕಾರವನ್ನು ಗುರುತಿಸಲು ಸಮಯ ಅಥವಾ ಆಸಕ್ತಿ ಇರುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಲೂ ಅವರಿಗೆ ಸಾಧ್ಯವಾಗಿರಲಿಲ್ಲ. ಹದಿನೆಂಟು ವರ್ಷದ ಯುವಕನಂತೆ ಶಕ್ತಿ ಮತ್ತು ಉತ್ಸಾಹದ ಚಿಲುಮೆಯಾಗಿದ್ದ ಅವರು ಕಾರ್ಯಕ್ರಮ ನೀಡಲು ಕೂಡಲೇ ಒಪ್ಪಿಕೊಂಡರು.ಮತ್ತೂರು ಕೃಷ್ಣಮೂರ್ತಿಯವರ ಪಕ್ಕದಲ್ಲಿ ಕುಳಿತುಕೊಳ್ಳುವುದೇ ಒಂದು ರೋಮಾಂಚನಕಾರಿ ಅನುಭವ; ಕಡಲಿನ ತೀರದಲ್ಲಿ ಕುಳಿತಂತೆ. ಭಗವದ್ಗೀತೆಯ ಪ್ರವಚನ ಮಾಡುವಾಗ ಆಗಲೀ, ಕೌಟುಂಬಿಕ ಬದುಕಿನ ಕುರಿತು ಮಾತನಾಡುವಾಗ ಆಗಲೀ ಸಂಪದ್ಭರಿತ ಬೃಹತ್ ಪರ್ವತಕ್ಕೆ ಮತ್ತು ವಿಶಾಲ ಕಡಲಿಗೆ ಸಮಾನವೆಂಬಂತೆ ಅವರು ಗೋಚರಿಸುತ್ತಿದ್ದರು. ಅವರ ಮಾತಿನಲ್ಲಿ ಚತುರತೆಯಿತ್ತು.ಮನಸ್ಸನ್ನು ದೀರ್ಘಕಾಲ ಹಿಡಿದಿಡುವ ಅಮೋಘ ಕಥಾ ವ್ಯಾಖ್ಯಾನದ ಶಕ್ತಿಯಿತ್ತು. ಭಗವದ್ಗೀತೆ, ರಾಮಾಯಣ, ಮಹಾಭಾರತ, ಉಪನಿಷತ್ ಮತ್ತು ಪುರಾಣ ಹಾಗೂ ಕನ್ನಡ - ಸಂಸ್ಕೃತದ ಮಹಾನ್ ಕವಿಗಳ ಬಗ್ಗೆ ತಮ್ಮ ನೆನಪಿನಾಳದಿಂದಲೇ ಗಂಟೆಗಟ್ಟಲೆ ನಿರಂತರವಾಗಿ ಉಪನ್ಯಾಸ ನೀಡಬಲ್ಲ ಜ್ಞಾನ ಅವರಿಗಿತ್ತು.ಅವರು ಪುರಾಣ ಇತಿಹಾಸದ ದಂತಕಥೆಗಳ ಖಜಾನೆಯಾಗಿದ್ದರು. ತಮ್ಮ ಸ್ವಂತ ಜೀವನದ ಮತ್ತು ಪೌರಾಣಿಕ ಘಟನಾವಳಿಗಳ ಕಥೆಯನ್ನು ಹೇಳುವಾಗ ಅವರು ನಮ್ಮನ್ನು ಆವರಿಸಿಕೊಂಡಂತೆ ಅನಿಸುತ್ತಿತ್ತು.ಸಂಪ್ರದಾಯವಾದಿಯಾಗಿದ್ದರೂ, ಚಿಂತನಾಲಹರಿಯಲ್ಲಿ ಆಧುನಿಕರಾಗಿದ್ದ ಅವರು ಅಪ್ಪಟ ಗಾಂಧಿವಾದಿ. ಅವರ ಎರಡು ದಶಕಗಳ ಲಂಡನ್ ಜೀವನವೇ ಇಲ್ಲಿ ಭಾರತೀಯ ವಿದ್ಯಾಭವನದ ನಿರ್ಮಾಣಕ್ಕೆ ಪ್ರಮುಖ ಪ್ರೇರಣೆಯಾಯಿತು.

ತಮ್ಮ 84ರ ಹರಯದಲ್ಲೂ ವಿಡಿಯೊ - ಆಡಿಯೊ ನಿರ್ಮಾಣ, ಬರವಣಿಗೆ, ಪ್ರಕಟಣೆ, ಟೀವಿ ವಾಹಿನಿಗಳಲ್ಲಿ ದಿನನಿತ್ಯದ ಉಪನ್ಯಾಸ ಕಾರ್ಯಕ್ರಮಗಳು, ಬೆಂಗಳೂರಿನ ಭಾರತೀಯ ವಿದ್ಯಾಭವನದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು- ಹೀಗೆ, ವಿವಿಧ ಕಾರ್ಯಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದರು.ಎಲ್ಲಕ್ಕಿಂತ ಹೆಚ್ಚು ಇಷ್ಟವಾಗುವ ಅವರ ಗುಣವೆಂದರೆ ಮಾನವೀಯತೆ. ಯೌವನದಲ್ಲಿ ಅತ್ಯಂತ ಸಂಕಷ್ಟದ ದಿನಗಳನ್ನು ಅವರು ಎದುರಿಸಿದ್ದರು. ಆಶ್ರಮಗಳಲ್ಲಿ ವಾಸ ಮಾಡಿದ್ದೇ ಅಲ್ಲದೆ ಹಿತೈಷಿಗಳ ಮನೆಗಳಲ್ಲಿ ವಾರಾನ್ನ ಮಾಡುವ ಮೂಲಕ ಶಿಕ್ಷಣ ಪಡೆದರು. ಬಸ್ ಕಂಡಕ್ಟರ್, ಹೋಟೆಲ್‌ನಲ್ಲಿ ವೇಟರ್ ಸೇರಿದಂತೆ ಹಲವಾರು ವೃತ್ತಿಗಳನ್ನು ನಿರ್ವಹಿಸಿದರು.ನಾನು ಒಮ್ಮೆ ಅವರ ವಿದ್ವತ್ತನ್ನು ಶ್ಲಾಘಿಸಿದಾಗ, `ನಾವು ನಮ್ಮ ಯಾವುದೇ ಕಾರ್ಯಕ್ಕೂ ಶ್ರೇಯಸ್ಸನ್ನು ಪಡೆದುಕೊಳ್ಳಬಾರದು. ನಾವೆಲ್ಲರೂ ಆತನ ಕೈಗಳ ಸಾಧನಗಳಷ್ಟೇ. ನೀವು ನಿಮ್ಮ ಕೆಲಸವನ್ನು ಮಾಡಬೇಕು ಮತ್ತು ಉಳಿದಿದ್ದನ್ನು ಆತನಿಗೆ ಬಿಟ್ಟುಬಿಡಬೇಕು~ ಎಂದು ಹೇಳಿದ್ದರು.ಅವರು ಅಗಲಿದ ಇಪ್ಪತ್ತು ದಿನಗಳ ಹಿಂದಷ್ಟೇ ನನ್ನ ಮನೆಗೆ ಬಂದಿದ್ದರು. ಆಗಲೂ ಅವರಲ್ಲಿ ಚೈತನ್ಯ ತುಂಬಿ ತುಳುಕುತ್ತಿತ್ತು. ತಾವು ಆಗಷ್ಟೇ ಬರೆದು ಮುಗಿಸಿದ್ದ `ಗಾಂಧಿ ಉಪನಿಷದ್~ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದರು. ಹಲವು ಕಥೆ ಮತ್ತು ದಂತಕಥೆಗಳ ಸವಿರುಚಿಯನ್ನು ನಮಗೆ ಬಡಿಸಿದರು.ಇತರ ವಿದ್ವಾಂಸರಂತೆ ಒಂದು ವಿಷಯದಿಂದ ಇನ್ನೊಂದಕ್ಕೆ ಅವರ ಮಾತು ಹೊರಳುತ್ತಿರಲಿಲ್ಲ. ಮನೆಯಿಂದ ಹೊರಡುವಾಗ ಪ್ರೀತಿ ಮತ್ತು ವಾತ್ಸಲ್ಯದ ಮಾತಿನ ಮಹತ್ವದ ಬಗ್ಗೆ ಸುಭಾಷಿತವೊಂದರ ಕೆಲವು ಸಾಲುಗಳನ್ನು ಹೇಳಿದರು. ಸದಾ ನನ್ನ ಜೇಬಿನಲ್ಲಿರುವ ಚಿಕ್ಕ ನೋಟ್‌ಪುಸ್ತಕ ತೆಗೆದು ಕೊಟ್ಟು, ಅವರ ಕೈಯಾರೆ ಅದನ್ನು ಬರೆದುಕೊಡುವಂತೆ ಕೋರಿದೆ. ಆಗ ಅವರು ಬರೆದ ಸಾಲುಗಳು ಹೀಗಿದೆ-

ಜಿಹ್ವಾಗ್ರೇ ವರ್ತತೇ ಲಕ್ಷ್ಮೀ

ಜಿಹ್ವಾಗ್ರೇ ಮಿತ್ರ ಬಾಂಧವಾಃ

ಜಿಹ್ವಾಗ್ರೇ ಬಂಧನಂ ಪ್ರಾಪ್ತಿಃ

ಜಿಹ್ವಾಗ್ರೇ ಮರಣಂ ಧ್ರುವಂ

ವಚನೈಕಾ ದರಿದ್ರತಾ

(`ನಿಮ್ಮ ನಾಲಗೆಯಲ್ಲೇ ಲಕ್ಷ್ಮಿ ನೆಲೆಸಿದ್ದಾಳೆ,

ನಾಲಗೆ ಸ್ನೇಹಿತರು, ಸಂಬಂಧಗಳನ್ನು ಗೆಲ್ಲಬಲ್ಲದು

ನಾಲಗೆ ಸೆರೆಮನೆಗೂ ದೂಡಬಹುದು

ಮತ್ತು ನಾಲಗೆ ಮರಣವನ್ನೂ ತಂದೊಡ್ಡಬಹುದು

ಒಳ್ಳೆಯ ಮಾತುಗಳಿಗೆ ಏನಾದರೂ ಬಡತನವಿದೆಯೇ?~)

ಮತ್ತೂರು ನಮ್ಮನ್ನು ಹಠಾತ್ತಾಗಿ ಅಗಲಿದ್ದಾರೆ (ಅಕ್ಟೋಬರ್ 6, 2011). ಅವರನ್ನು ಬಲ್ಲವರೆಲ್ಲರಿಗೂ ಅವರ ಮರಣ ತೀವ್ರ ಆಘಾತ ಉಂಟುಮಾಡಿದೆ. ಆದರೆ, ಅವರು ನೀಡಿರುವ ಸಂದೇಶಗಳು ಎಂದೆಂದಿಗೂ ಜೀವಂತ.

 

ಕಾಯಕವೇ ಕೈಲಾಸ, ಸಾರ್ವತ್ರಿಕ ಪ್ರೀತಿಗೆ ವಿರೋಧಿಯಾಗದ ಜೀವನ ಪ್ರೀತಿ, ಮಾತು ಮತ್ತು ಕೃತಿಯಲ್ಲಿ ಅಹಿಂಸೆ, ಪರಿಶುದ್ಧತೆ, ಸಾರ್ವಕಾಲಿಕತೆ, ದಿನನಿತ್ಯದ ಚಟುವಟಿಕೆಗಳಲ್ಲಿನ ಉತ್ಸಾಹ, ಜನರಿಗೆ ಒಳಿತು ಮಾಡುವುದರಿಂದ ಸಿಗುವ ಸಂತೋಷ ಮತ್ತು ಆತ್ಮೋದ್ಧಾರ, ಒಬ್ಬರಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ಸಮರ್ಪಣಾ ಭಾವ- ಇವೆಲ್ಲವನ್ನೂ ಮತ್ತೂರರು ತಮ್ಮ ಬದುಕಿನ ಮೂಲಕ ತೋರಿಸಿದ್ದಾರೆ. ಅವರ ಇಡೀ ಜೀವನವೇ ಒಂದು ಸಂದೇಶ.

(ಲೇಖಕರು ಭಾರತದ ಪ್ರಥಮ ಅಗ್ಗದ ವಿಮಾನಯಾನ ಸಂಸ್ಥೆ `ಏರ್ ಡೆಕ್ಕನ್~ ಸ್ಥಾಪಿಸಿದ್ದ ಪ್ರಸಿದ್ಧ ಉದ್ಯಮಿ) 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry