ಮಂಗಳವಾರ, ನವೆಂಬರ್ 19, 2019
28 °C

ಕಣ್ಮರೆಯಾದ ಕಲಾ ಭಂಡಾರ

Published:
Updated:
ಕಣ್ಮರೆಯಾದ ಕಲಾ ಭಂಡಾರ

ಬೆಂಗಳೂರು: ಮಲ್ಲೇಶ್ವರದ ದೇವಾಲಯ ರಸ್ತೆಯಲ್ಲಿ ಇರುವ ಆ ಅಟ್ಟದ ಮನೆಗೆ ಯಾರಾದರೂ ಬಂದಿದ್ದಾದರೆ ಮುದುಡಿಕೊಂಡೇ ಒಳಗೆ ಪ್ರವೇಶಿಸಬೇಕಿತ್ತು. ಬಿಡುಬೀಸಾಗಿ ನಡೆಯಲು ಹೊರಟರೆ ನೂರಾರು ಪುಸ್ತಕಗಳು ಕೆಳಗೆ ಉರುಳಿ ಬೀಳುತ್ತಿದ್ದವು. ಆ ಮನೆ ಒಡೆಯ - ಶುಕ್ರವಾರವಷ್ಟೇ ಅಗಲಿದ- ಅ.ಲ. ನರಸಿಂಹನ್. ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡಲು ಈ ಪ್ರಸಂಗಕ್ಕಿಂತ ಬೇರೆ ಉದಾಹರಣೆ ಇನ್ನೇನು ಬೇಕು?ನರಸಿಂಹನ್ ಅವರ ತಂದೆ ತಿರುಮಲಾಚಾರ್ಯರು ಪುಸ್ತಕ ವ್ಯಾಪಾರಿಯಾಗಿದ್ದರು. ಹೀಗಾಗಿ ಈ ಕಲಾವಿದನಿಗೆ ಪುಸ್ತಕ ಪ್ರೇಮ ಎನ್ನುವುದು ರಕ್ತಗುಣವಾಗಿತ್ತು. ಪಡಸಾಲೆ, ಊಟದ ಹಾಲ್, ಮಲಗುವ ಕೋಣೆ, ಸಜ್ಜಾ ಸೇರಿದಂತೆ ಮನೆಯ ಸಿಕ್ಕ-ಸಿಕ್ಕ ಜಾಗದಲ್ಲೆಲ್ಲ ಅವರು ಪುಸ್ತಕಗಳನ್ನೇ ತುಂಬಿದ್ದರು. ರ‌್ಯಾಕ್‌ಗಳು ಇಲ್ಲದ್ದರಿಂದ ಒಂದರ ಮೇಲೆ ಒಂದರಂತೆ ಪುಸ್ತಕಗಳನ್ನು ಪೇರಿಸಿಟ್ಟಿದ್ದರು. ಛಾವಣಿ ಎತ್ತರದವರೆಗೆ ಅವುಗಳ ಸಾಲು ಚಾಚಿಕೊಂಡಿದೆ.ಯಾರನ್ನಾದರೂ ಮನೆಯೊಳಗೆ ಕರೆದೊಯ್ಯುವಾಗ, `ಹುಷಾರು, ಕೈತಗುಲಿದರೆ ಪುಸ್ತಕಗಳು ಬಿದ್ದು ಬಿಡುತ್ತವೆ' ಎನ್ನುವ ಎಚ್ಚರಿಕೆ ನೀಡಲು ನರಸಿಂಹನ್ ಮರೆಯುತ್ತಿರಲಿಲ್ಲ. ಕಲಾ ಪ್ರಪಂಚದ ದೊಡ್ಡ ಭಂಡಾರವೇ ಅವರ ಮನೆಯಲ್ಲಿ ಬಿಡಾರ ಹೂಡಿದೆ. ಕಲೆ ವಿಷಯವಾಗಿ ಯಾರಾದರೂ ಸಂಶೋಧನೆ ನಡೆಸುತ್ತಿದ್ದರೆ ತಪ್ಪದೆ ನರಸಿಂಹನ್ ಅವರ ಮನೆಗೆ ಬರುತ್ತಿದ್ದರು. ತಾಳೆಗರಿ ಕಾಲದಿಂದ ಇಲ್ಲಿನವರೆಗೆ ಕಲಾಪ್ರಪಂಚದ ಇತಿಹಾಸ ಹೇಳುವ ಸುಮಾರು ಹತ್ತು ಸಾವಿರಕ್ಕೂ ಅಧಿಕ ಕೃತಿಗಳು ಅವರ ಮನೆಯಲ್ಲಿವೆ.ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಕಲೆಗೆ ಸಂಬಂಧಿಸಿದ ಲೇಖನ ಮತ್ತು ಚಿತ್ರಗಳನ್ನು ಸಂಗ್ರಹಿಸಿ ಇಡುವುದು ಅವರ ಹವ್ಯಾಸವಾಗಿತ್ತು. ಕಲಾಕೃತಿಗಳ ರಚನೆಗಿಂತ, ಕಲಾ ಸಾಹಿತ್ಯ ರಚನೆಯಲ್ಲೇ ಅವರು ಹೆಚ್ಚಾಗಿ ತೊಡಗಿಕೊಂಡಿದ್ದರು. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡಿದ್ದ ಅವರು, ಮುದ್ರಣ ತಂತ್ರಜ್ಞಾನದಲ್ಲೂ ಡಿಪ್ಲೊಮಾ ಶಿಕ್ಷಣ ಪಡೆದಿದ್ದರು. `ಕರ್ನಾಟಕ ಚಿತ್ರಕಲೆಯ ಸಾಂಸ್ಕೃತಿಕ ಅಧ್ಯಯನ'ದ ವಿಷಯವಾಗಿ ಪ್ರಬಂಧ ಮಂಡಿಸಿದ್ದ ಈ ಕಲಾಪೋಷಕ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ.ಎಚ್‌ಡಿ ಕೂಡ ಪಡೆದಿದ್ದರು.1965ರಲ್ಲಿ ಸರ್ಕಾರಿ ಮುದ್ರಣಾಲಯದಲ್ಲಿ ನೌಕರಿ ಆರಂಭಿಸಿದ ನರಸಿಂಹನ್, 1978ರಲ್ಲಿ ಕರ್ನಾಟಕ ಗ್ಯಾಸೆಟಿಯರ್ ಇಲಾಖೆಗೆ ಅನ್ವೇಷಕರಾಗಿ ಸೇರ್ಪಡೆಯಾದರು. 2004ರಲ್ಲಿ ನಿವೃತ್ತಿ ಹೊಂದಿದರು. `ಅಲೇಖ್ಯ' ಸೇರಿದಂತೆ ಚಿತ್ರಕಲೆಗೆ ಸಂಬಂಧಿಸಿದಂತೆ ಆರು ಕೃತಿಗಳನ್ನು ಅವರು ರಚನೆ ಮಾಡಿದ್ದಾರೆ. 30ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಲಲಿತಕಲಾ ಅಕಾಡೆಮಿಯ `ಕಲಾವಾರ್ತೆ' ಮತ್ತು `ಕಲಾವಿಕಾಸ' ಪತ್ರಿಕೆಗಳಿಗೆ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಲಲಿತಕಲಾ ಅಕಾಡೆಮಿ ಸದಸ್ಯರಾಗಿಯೂ ಅವರು ದುಡಿದಿದ್ದಾರೆ.ಎಲ್ಲಿಯಾದರೂ ಕಲಾಶಿಬಿರ, ಕಲಾ ಪ್ರದರ್ಶನ ನಡೆದಿದೆ ಎಂದರೆ ಬಗಲಿಗೊಂದು ಕ್ಯಾಮೆರಾ ಹಾಕಿಕೊಂಡು ಹೊರಟು ಬಿಡುತ್ತಿದ್ದರು. ಕಲಾ ಪ್ರಪಂಚದ ದಾಖಲೀಕರಣಕ್ಕೆ ಅವರ ಮನಸ್ಸು ಸದಾ ಹಾತೊರೆಯುತ್ತಿತ್ತು. ನೂರಾರು ಕಲಾವಿದರ ಅಸಂಖ್ಯ ಚಿತ್ರಗಳು ಅವರ ಕ್ಯಾಮೆರಾ `ಚಿಪ್'ನಲ್ಲಿ ಸೆರೆಯಾಗಿವೆ. ವರ್ಷಗಳ ಹಿಂದೆ ತೆಗೆದ ಅವರು ಚಿತ್ರದ ರೀಲುಗಳು ಕಿಲೋ ಮೀಟರ್‌ಗಟ್ಟಲೆ ಉದ್ದ ಚಾಚಿಕೊಳ್ಳುತ್ತವೆ. `ಅವರೊಬ್ಬ ಚಿತ್ರಕಲೆ ವಿಶ್ವಕೋಶವಾಗಿದ್ದರು' ಎಂದು ಎಸ್.ಜಿ. ವಾಸುದೇವ ನೆನೆಯುತ್ತಾರೆ.ನಾಡೋಜ ಆರ್.ಎಂ. ಹಡಪದ ಪ್ರಶಸ್ತಿ, ಮೈಸೂರು ದಸರಾ ಉತ್ಸವ ಮತ್ತು ಲಲಿತಕಲಾ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳು ಅವರಿಗೆ ಒಲಿದಿವೆ. ನರಸಿಂಹನ್ ಅವರ ಪತ್ನಿ ಡಾ. ಮಂಜುಳಾ ಸಹ ಪಿ.ಎಚ್‌ಡಿ ಪಡೆದಿದ್ದರು. ಐದು ವರ್ಷಗಳ ಹಿಂದೆ ಅವರಿಗೆ ಪತ್ನಿವಿಯೋಗ ಕಾಡಿತ್ತು.ನರಸಿಂಹನ್ ತಮ್ಮ ಅನಾರೋಗ್ಯದ ನಡುವೆಯೂ ಈಚೆಗೆ ಏರ್ಪಡಿಸಲಾಗಿದ್ದ `ವೃಕ್ಷ ವಾಸುದೇವ್ ಅವರ ಕಲೆ ಮತ್ತು ಬದುಕು' ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಏರಲಾರದೆ ವೇದಿಕೆ ಏರಿದ್ದ ಅವರು, ಯು.ಆರ್. ಅನಂತಮೂರ್ತಿ ಅವರಿಂದ ಪುಸ್ತಕದ ಪ್ರತಿ ಪಡೆದಿದ್ದರು. ಅಂದಿನ ಕಾರ್ಯಕ್ರಮ ಸಂಘಟಿಸಿದ್ದ ಕೃತಿ ಸಂಪಾದಕ ಎನ್.ಮರಿಶಾಮಾಚಾರ್ ಬಾರದ ಪ್ರಪಂಚದ ಹಾದಿ ಹಿಡಿದ ಎರಡೇ ದಿನಗಳಲ್ಲಿ ನರಸಿಂಹನ್ ಸಹ ಅವರನ್ನು ಹಿಂಬಾಲಿಸಿದ್ದು ಕೇವಲ ಕಾಕತಾಳೀಯವಾಗಿ ಕಾಣುತ್ತಿಲ್ಲ.ಕಲಾಪ್ರಿಯರಲ್ಲಿ ಈ `ಅಗಲಿಕೆ'ಗಳು ದುಃಖ ಮತ್ತೆ ಮತ್ತೆ ಉಮ್ಮಳಿಸುವಂತೆ ಮಾಡಿವೆ. ಪೆಟ್ಟಿನ ಮೇಲೆ ಪೆಟ್ಟನ್ನೂ ಕೊಟ್ಟಿವೆ.ಅ.ಲ. ನರಸಿಂಹನ್ ಇನ್ನಿಲ್ಲ

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಲಾವಿದ, ಕಲಾ ಲೇಖಕ ಅ.ಲ. ನರಸಿಂಹನ್ (66) ಮಲ್ಲೇಶ್ವರದ ತಮ್ಮ ನಿವಾಸದಲ್ಲಿ ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದರು. ಅವರಿಗೆ ಒಬ್ಬ ಪುತ್ರ ಇದ್ದಾರೆ.ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ, ಮಾಜಿ ಅಧ್ಯಕ್ಷ ಸಿ.ಚಂದ್ರಶೇಖರ್, ಹಿರಿಯ ಕಲಾವಿದ ಎಸ್.ಜಿ. ವಾಸುದೇವ ಹಾಗೂ ಪ.ಸ. ಕುಮಾರ್ ಸೇರಿದಂತೆ ನೂರಾರು ಕಲಾವಿದರು, ಕಲಾಪ್ರೇಮಿಗಳು ಅಂತಿಮ ದರ್ಶನ ಪಡೆದರು. ಹರಿಶ್ಚಂದ್ರ ಘಾಟ್‌ನಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪ್ರತಿಕ್ರಿಯಿಸಿ (+)