ಕತಾರ್ ಕರೆಯುತ್ತಿದೆ...!

7

ಕತಾರ್ ಕರೆಯುತ್ತಿದೆ...!

Published:
Updated:

ಅರಬ್ಬರು ಖುಷಿಯಾಗಿದ್ದಾರೆ!ಬಿಸಿ ಏರುತ್ತಲೇ ಇದೆ. ಅದು ಕೇವಲ ಮರಳುಗಾಡಿನ ದೇಶ ಕತಾರ್‌ನ ಕಿತ್ತು ತಿನ್ನುವ ತಾಪಮಾನವಲ್ಲ. ಬದಲಾಗಿ ವಿಶ್ವದ ಸುಂದರ ಕ್ರೀಡೆ ಎನಿಸಿರುವ ಫುಟ್‌ಬಾಲ್ ವಿಶ್ವಕಪ್‌ನ ಬಿಸಿ. ಈ ದೇಶದ ಪ್ರತಿ ಮನೆಯಲ್ಲಿ ಈಗಲೇ ಸಂಭ್ರಮ ಶುರುವಾಗಿದೆ. ಆ ಕ್ಷಣವನ್ನು ಸ್ವಾಗತಿಸಲು ಭರ್ಜರಿ ಸಿದ್ಧತೆ ನಡೆಯುತ್ತಿದೆ.ಅದಕ್ಕೆ ಕಾರಣ ಇಲ್ಲಿ ನಡೆಯಲಿರುವ 2022ರ ಫಿಫಾ ವಿಶ್ವಕಪ್. ಪ್ರತಿಷ್ಠಿತ ಫುಟ್‌ಬಾಲ್ ವಿಶ್ವಕಪ್ ಆಯೋಜಿಸಿಸುತ್ತಿರುವ ಅರಬ್‌ನ ಮೊದಲ ದೇಶ ಕತಾರ್. 17 ಲಕ್ಷ ಜನಸಂಖ್ಯೆ ಇರುವ ಈ ದೇಶದಲ್ಲಿ ವಿಶ್ವಕಪ್ ನಡೆಯಲು ಇನ್ನೂ 10 ವರ್ಷಗಳಿವೆ.

 

ಈಗ ಎಲ್ಲರ ಕಣ್ಣು ಲಂಡನ್ ಒಲಿಂಪಿಕ್ಸ್  ಮೇಲೆ ನೆಟ್ಟಿದೆ. ಹಾಗಾಗಿ ಈಗಲೇ ಏಕೆ ಆ ಮಾತು ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ ಕತಾರ್ ದೇಶದ ಜನತೆ ಸಿದ್ಧತೆ ನಡೆಸುತ್ತಿರುವ ಪರಿ ನಿಮಗೆ ಅಚ್ಚರಿ ಉಂಟು ಮಾಡುತ್ತದೆ.ಎಲ್ಲರಿಗೂ ಗೊತ್ತೇ ಇದೆ ಸುಡು ಮರುಭೂಮಿ ಎನಿಸಿರುವ ಈ ದೇಶದಲ್ಲಿ ಬದುಕುವುದೇ ದುಸ್ತರ. ಏಕೆಂದರೆ ಬೇಸಿಗೆಯಲ್ಲಿ ಇಲ್ಲಿನ ಉಷ್ಣಾಂಶ ಕೆಲವೊಮ್ಮೆ 45 ಡಿಗ್ರಿ ಸೆಲ್ಸಿಯಸ್ ದಾಟಿದ ಉದಾಹರಣೆಗಳಿವೆ. ಹಾಗಾಗಿ ಯಾವುದೇ ಚಟುವಟಿಕೆಗಳಿಗೆ ಇದು ಕಷ್ಟಕಾಲ. ಇನ್ನು ವಿಶ್ವಕಪ್‌ನಂಥ ಮಹಾ ಉತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಹೀಗಾದರೆ ಹೇಗೆ?ಹಾಗಾಗಿ ಈ ದೇಶಕ್ಕೆ ಬರುವ ಫುಟ್‌ಬಾಲ್ ಆಟಗಾರರು ಹಾಗೂ ಅಭಿಮಾನಿಗಳ ಮೈಯನ್ನು ಇಲ್ಲಿನ ಬಿಸಿ ತಟ್ಟಬಾರದು ಎಂಬುದು ಸಂಘಟಕರ ನಿರ್ಧಾರ. ಅದಕ್ಕಾಗಿ ವಿದೇಶದ ತಂತ್ರಜ್ಞರನ್ನು ಆಹ್ವಾನಿಸಿ ಕೆಲಸದಲ್ಲಿ ತೊಡಗಿದ್ದಾರೆ. ಎಷ್ಟು ಖರ್ಚಾದರೂ ಪರವಾಗಿಲ್ಲ; ಅತಿಥಿಗಳಿಗೆ ತೊಂದರೆ ಆಗಬಾರದು ಎಂಬುದು ಅವರ ಪ್ರಮುಖ ಗುರಿ. ಅದಕ್ಕಾಗಿ ಹೈಟೆಕ್ ಹವಾ ನಿಯಂತ್ರಿತ ಕ್ರೀಡಾಂಗಣಗಳ ನಿರ್ಮಾಣದ ಭರವಸೆ ನೀಡಿದ್ದಾರೆ.ಈ ಸಂಬಂಧ ನಾನು ಈ ಯೋಜನೆಯ ತಾಂತ್ರಿಕ ನಿರ್ದೇಶಕ ಕೊಲಂಬಿಯಾದ ಡೆರಿಯೊ ಕೆವಿಡಾಡ್ ಅವರನ್ನೊಮ್ಮೆ ಭೇಟಿಯಾಗಿದ್ದೆ. ಆಟಗಾರರು ಹಾಗೂ ಅಭಿಮಾನಿಗಳು ಯಾವುದೇ ಸಮಸ್ಯೆ ಇಲ್ಲದೇ ಕುಳಿತು ವೀಕ್ಷಿಸುವ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಬಹುದು ಎಂದು ಅವರು ಹೇಳುತ್ತಾರೆ.

 

ಕ್ರೀಡಾಂಗಣದೊಳಗೆ ಕಾರ್ಬನ್ ನ್ಯೂಟ್ರಲ್, ಸೋಲಾರ್ ಯಂತ್ರಗಳ ಮೂಲಕ ತಣ್ಣನೆಯ ಗಾಳಿ ಹಾಯಿಸಿ ಉಷ್ಣಾಂಶ ಕಡಿಮೆ ಮಾಡಬಹುದು ಎನ್ನುತ್ತಾರೆ. ಅವರ ಪ್ರಕಾರ ಸದ್ಯದ ತಂತ್ರಜ್ಞಾನ ಬಳಸಿ ಸುತ್ತಮುತ್ತಲ ವಾತಾವರಣಕ್ಕಿಂತ ಕ್ರೀಡಾಂಗಣದೊಳಗೆ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಡಿಮೆ ಮಾಡಬಹುದು.ಕೆವಿಡಾಡ್ ಅವರ ಈ ಯೋಜನೆ ಕತಾರ್ ಜನತೆಯ ಖುಷಿಗೆ ಕಾರಣವಾಗಿದೆ. ಜೊತೆಗೆ ಚಳಿಗಾಲಕ್ಕೆ ಟೂರ್ನಿಯನ್ನು ಮುಂದೂಡುವ ಬಗ್ಗೆಯೂ ಮಾತುಗಳು ಹರಿದಾಡುತ್ತಿವೆ. ಆದರೆ ಫಿಫಾ ಅಧಿಕಾರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದಕ್ಕಿಂತ ತಂತ್ರಜ್ಞರ ಮೇಲೆ ಹೆಚ್ಚು ನಿರೀಕ್ಷೆಯ ಭಾರವಿದೆ.ಕತಾರ್‌ನ ಹಲವು ಮಂದಿಯನ್ನು ನಾನು ಭೇಟಿಯಾಗಿದ್ದೆ. ಅವರ ಪ್ರಕಾರ ವಿಜ್ಞಾನಿಗಳು ರೇಡಿಯೊ ಸಂಕೇತ ನಿಯಂತ್ರಿತ ಮಳೆ ಮೋಡಗಳನ್ನು ನಿರ್ಮಿಸಿ ಪಂದ್ಯ ನಡೆಯುವ ಸಮಯದಲ್ಲಿ ಅದನ್ನು ಕ್ರೀಡಾಂಗಣದ ಮೇಲೆ ಇರುವಂತೆ ನೋಡಿಕೊಳ್ಳುವುದು. ಆದರೆ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದಾಗ ಅಂಗಳದ ಮೇಲೆ ಮಳೆ ಮೋಡ ದಟ್ಟೈಸಿದರೆ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆ ಅವರು ಯೋಚನೆ ಮಾಡಿಲ್ಲ.

ಇನ್ನು ಕೆಲವರ ಪ್ರಕಾರ ಸೂರ್ಯನ ನೇರಳಾತೀತ ಕಿರಣಗಳನ್ನು ತಡೆಗಟ್ಟಲು ಪ್ರಮುಖ ಸ್ಥಳಗಳಲ್ಲಿ ಮೇಲ್ಛಾವಣಿ ನಿರ್ಮಿಸಿ ಸುತ್ತ ಪರದೆ ಹಾಕುವುದು. ಈ ಎಲ್ಲಾ ಯೋಜನೆಗಳು ಎಲ್ಲೂ ಕಂಡು ಬಾರದೇ ಇರಬಹುದು. ಆದರೆ ಕತಾರ್ ಎಷ್ಟು ಶ್ರೀಮಂತ ದೇಶವೆಂದರೆ ಅವರಿಗೆ ಈ ರೀತಿ ಮಾಡುವುದು ಅಸಾಧ್ಯದ ಮಾತಲ್ಲ.ಅದು ಹೇಗೆ ಎಂದರೆ ಕೊಠಡಿಯೊಳಗಿನ ಹವಾ ನಿಯಂತ್ರಿತ ವ್ಯವಸ್ಥೆಯಂತೆ. ಇದು ಹಿಂದೊಮ್ಮೆ ಅಸಾಧ್ಯದ ಮಾತಾಗಿತ್ತು. ಹಾಗೇ, ಈ ವಿಶ್ವಕಪ್ ಬಳಿಕ ಇಡೀ ನಗರಿಗೆ ಹವಾ ನಿಯಂತ್ರಿತ ವ್ಯವಸ್ಥೆ ಕಲ್ಪಿಸಬಹುದು ಎಂದು ಕತಾರ್ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ವಿಶ್ವಕಪ್ ಫುಟ್‌ಬಾಲ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲು ಇಲ್ಲಿಯ ಜನರು ಪಣತೊಟ್ಟಿರುವುದು ಮಾತ್ರ ನಿಜ. ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಅತಿಥಿಗಳನ್ನು ಉತ್ತಮ ರೀತಿಯಲ್ಲಿ ಸತ್ಕರಿಸಲು ಅವರು ಎಲ್ಲಾ ರೀತಿಯಲ್ಲಿ ತಯಾರಾಗುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry