ಬುಧವಾರ, ನವೆಂಬರ್ 13, 2019
28 °C
ಡಿ.ಎಸ್. ಚೌಗಲೆ ಅವರ ಮೂರು ಕೃತಿ ಬಿಡುಗಡೆ

ಕತೆ ಓದುಗನ ಹೃದಯ ತಟ್ಟಲಿ: ಶಾನಭಾಗ

Published:
Updated:

ಬೆಳಗಾವಿ: `ಕತೆ ಓದುತ್ತಿರುವಾಗಲೇ ಓದುಗನ ಹೃದಯವನ್ನು ತಟ್ಟುವ ಮೂಲಕ ಅದರ ಅನುಭವವನ್ನು ನೀಡುವಂತಹ ನಿರೂಪಣಾ ಶೈಲಿಯನ್ನು ಕತೆಗಾರ ರೂಢಿಸಿಕೊಳ್ಳಬೇಕು' ಎಂದು ಕತೆಗಾರ ವಿವೇಕ ಶಾನಭಾಗ ಹೇಳಿದರು.ಬೆಳಗಾವಿಯ ರಂಗಸಂಪದ, ಬೆಂಗಳೂರಿನ ಸಿರಿವರ ಪ್ರಕಾಶನ ಹಾಗೂ ಭಾಗ್ಯಲಕ್ಷ್ಮೀ ಪ್ರಕಾಶನ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಾಟಕಕಾರ ಡಿ.ಎಸ್. ಚೌಗಲೆ ಅವರ `ಜಂಗು ಹಿಡಿದ ಬ್ಲೇಡು' ಕಥಾಸಂಕಲನ, ಲಕ್ಷ್ಮಣ ಗಾಯಕವಾಡರ ಆತ್ಮಚರಿತ್ರೆ ಆಧಾರಿತ `ಉಚಲ್ಯಾ' ನಾಟಕ ಹಾಗೂ ಮರಾಠಿಯ ಚಂ.ಪ್ರ. ದೇಶಪಾಂಡೆ ಅವರ ಕನ್ನಡ ಅನುವಾದ ನಾಟಕ `ಚದುರಂಗ ಮತ್ತು ಕತ್ತೆ' ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.`ಕತೆಯು ಓದುವಾಗ ಮಧ್ಯದಲ್ಲೇ ನಿಲ್ಲಿಸಿ ವಿವೇಚನೆಗೆ ಹಚ್ಚುವಂತಿರಬಾರದು. ಅದನ್ನು ಓದುತ್ತಿರುವಾಗಲೇ ಆ ಸಂದರ್ಭವನ್ನು ಅನುಭವಿಸುವಂತಿರಬೇಕು. ಇಂಥ ಅನುಭವ ನೀಡುವಂತೆ ನಿರೂಪಣೆ ಮಾಡುವುದು ಕತೆಗಾರನಿಗೆ ಸವಾಲಿನ ಕೆಲಸವಾಗಿದೆ' ಎಂದು ಅಭಿಪ್ರಾಯಪಟ್ಟರು.

`ಲೇಖಕನು ಯಾವುದೋ ಒಂದು ನಿಲುವಿಗೆ ಬದ್ಧನಾದರೆ ಅಪಾಯಕಾರಿಯಾಗಲಿದೆ. ಒಂದು ನಿಲುವಿನೊಂದಿಗೆ ಬರೆದಾಗ ಸೃಜನಶೀಲತೆ ಕಳೆದುಕೊಳ್ಳುವ ಅಪಾಯವಿದೆ' ಎಂದು ಎಚ್ಚರಿಸಿದ ಶಾನಭಾಗ, `ಒಳ್ಳೆಯ ಲೇಖಕರು ಎಂದೂ ಜನವಿರೋಧಿ ಆಗಿರುವುದಿಲ್ಲ' ಎಂದರು.

`ಲೇಖಕ ಬರೆಯುವಾಗ ಹೇಗೆ ಯಾವುದೇ ಒಂದು ನಿಲುವು ಇರಬಾರದೋ, ಹಾಗೆಯೇ ಓದುಗರು ತೆರೆದ ಮನಸ್ಸಿನಿಂದ ಓದಬೇಕು' ಎಂದರು.`ಬೆಳಗಾವಿ ಎರಡು ಸಂಸ್ಕೃತಿಗಳ ಮಿಲನದ ಜಾಗವಾಗಿದೆ. ಎರಡು ಸೇರಿದಾಗ ಸಂಘರ್ಷವೂ ಆಗಬಹುದು, ಇಲ್ಲವೇ ಸಂಗಮವಾಗಲೂ ಸಾಧ್ಯವಿದೆ. ಚಂದ್ರಕಾಂತ ಪೋಕಳೆ, ಡಿ.ಎಸ್. ಚೌಗಲೆ ಅವರಂತಹ ಲೇಖಕರು ಮರಾಠಿ ಕೃತಿಗಳನ್ನು ಕನ್ನಡಕ್ಕೆ ತಂದಿರುವುದನ್ನು ನೋಡಿದರೆ, ನನಗೆ ಸಂಗಮವಾಗಿಯೇ ಕಂಡುಬರುತ್ತದೆ' ಎಂದು ವಿಶ್ಲೇಷಿಸಿದರು.`ಚೌಗಲೆ ಅವರ `ಜಂಗು ಹಿಡಿದ ಬ್ಲೇಡು' ಕಥಾಸಂಕಲನದ ಕತೆಗಳಲ್ಲಿ ನಾಟಕದ ಭಾಷೆಗಳನ್ನು ಕಾಣಬಹುದು. ನಾಟಕೀಯ ಶಕ್ತಿಯ ನಿರೂಪಣೆ ಗಮನ ಸೆಳೆಯುತ್ತದೆ. ವೈವಿಧ್ಯಮಯ ವಸ್ತುಗಳನ್ನು ಎತ್ತಿಕೊಂಡಿದ್ದಾರೆ. ಕತೆಗಾರನು ಸತತವಾಗಿ ತನ್ನನ್ನು ತೊಡಗಿಸಿಕೊಂಡಿರುವುದರಿಂದ ಪ್ರಯೋಗಶೀಲತೆಗಳನ್ನು ಕಾಣಲು ಸಾಧ್ಯವಾಗಿದೆ. ಇದರಿಂದಾಗಿಯೇ ವಾಸ್ತವ ಮತ್ತು ಭ್ರಮೆಯ ನಡುವಿನ ವ್ಯತ್ಯಾಸ ಕಂಡು ಬರುವುದಿಲ್ಲ' ಎಂದು ಶಾನಭಾಗ ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಚಂದ್ರಕಾಂತ ಪೋಕಳೆ, `ಚೌಗಲೆ ಅವರ ಬರಹಗಳಲ್ಲಿ ಭೂಮಿ ತತ್ವದಿಂದ ಕಾರ್ಪೊರೇಟ್ ತತ್ವದವರೆಗಿನ ಆಯಾ ಮಗಳನ್ನು ನೋಡಬಹುದು. ರೈತರ, ಬಡವರ, ಗಡಿಭಾಗದ ಜನರ ಸಮಸ್ಯೆ ಗಳು ಕನ್ನಡ ಸಾಹಿತ್ಯದಲ್ಲಿ ಅಷ್ಟಾಗಿ ಬಿಂಬಿಸುತ್ತಿರಲಿಲ್ಲ. ಆದರೆ, ಚೌಗಲೆ ಅವರ ಬರಹಗಳು ಈ ಕೊರತೆಯನ್ನು ನಿವಾರಿಸಿದೆ' ಎಂದು ಹೇಳಿದರು.`ಚೌಗಲೆ ಅವರು ಕಲ್ಪನಾ ಶಕ್ತಿ (ಫ್ಯಾಂಟಸಿ)ಗಿಂತಲೂ ರೂಪಕಗಳ ಮೂಲಕ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. `ಗಾಂಧಿ ವಿರುದ್ಧ ಗಾಂಧಿ' ಕೃತಿಯಲ್ಲಿ ಗಾಂಧೀಜಿಯನ್ನು ವಿವಿಧ ಬಗೆಯಲ್ಲಿ ಪ್ರಶ್ನಿಸುವ ಮೂಲಕ ಬೇರೆ ಬೇರೆ ಆಯಾಮವನ್ನು ಕಟ್ಟಿಕೊಟ್ಟಿದ್ದಾರೆ' ಎಂದು ತಿಳಿಸಿದರು.

`ಲಕ್ಷ್ಮಣ ಗಾಯಕವಾಡರ ಆತ್ಮಕತೆ `ಉಚಲ್ಯಾ'ವನ್ನು ಮರಾಠಿಯಿಂದ ಕನ್ನಡಕ್ಕೆ ನಾನು ಅನುವಾದ ಮಾಡಿದಾಗ ಸಾಮಾನ್ಯ ಭಾಷೆಯಲ್ಲಿ ನಿರೂಪಿಸಿದ್ದೆ. ಆದರೆ, ಚೌಗಲೆ ಅವರು ತಮ್ಮ ನಾಟಕ ದಲ್ಲಿ ದೇಸಿ ಭಾಷೆಯನ್ನು ಬಳಸಿಕೊಳ್ಳುವ ಮೂಲಕ ಇನ್ನೂ ಹೆಚ್ಚಿನ ಆಪ್ತತೆಯನ್ನು ಮೂಡಿಸಿದ್ದಾರೆ. ಅವರ ಬರವಣಿಗೆಗಳಲ್ಲಿ ರಂಗಭೂಮಿ ಲೇಖಕ, ನಿರ್ದೇಶಕನನ್ನು ಕಾಣಬಹುದು' ಎಂದು ಪೋಕಳೆ ಅಭಿಪ್ರಾಯಪಟ್ಟರು.ಮರಾಠಿ ಕತೆಗಾರ ಜಿ.ಕೆ. ಐನಾಪುರೆ, `ಜಾಗತೀಕರಣದ ಮೂಲಕ ಹೊಸ ವ್ಯವಸ್ಥೆಯೊಂದು ಹುಟ್ಟಿಕೊಳ್ಳುತ್ತಿದೆ. ಆ ವ್ಯವಸ್ಥೆಗೆ ಸಜನಶೀಲ ಕತೆಗಾರ ಒಂದು ಅವಕಾಶ(ಸ್ಪೇಸ್) ಸೃಷ್ಟಿಸಿಕೊಳ್ಳುತ್ತಾನೆ. ಚೌಗಲೆ ಅಂಥ ಒಂದು ಅವಕಾಶವನ್ನು ನಿರ್ಮಿಸಿ ಕತೆ ಬರೆದಿದ್ದಾರೆ' ಎಂದು ಹೇಳಿದರು.`ಚೌಗಲೆ ಅವರ ಕತೆಗಳನ್ನು ಓದುವಾಗ ನನಗೆ ಪ್ರೇಮಚಂದ, ಮರಾಠಿಯ ಶ್ರೀ.ನಾ. ಪೇಂಡಸೆ ನೆನಪಿಗೆ ಬಂದರು. ಚೌಗಲೆ ಅವರ ಕತೆಗಳಲ್ಲಿ ಬರುವ ಜೀವಗಳು ತಳ ಸಮುದಾಯದವುಗಳಾಗಿವೆ. ಕತೆಗಳಲ್ಲಿನ ಪರಿಸರ ಬೆಳಗಾವಿಯಿಂದ ಆರಂಭಗೊಂಡು ಮಹಾರಾಷ್ಟ್ರದ ಕೊಲ್ಲಾಪುರ, ಇಚಲಕರಂಜಿ, ಜಯಸಿಂಗಪುರ ಮೂಲಕ  ಮುಂಬೈ ಕಾಮಾಟಿಪುರದವರೆಗೆ ಬಂದು ನಿಲ್ಲುತ್ತದೆ' ಎಂದು ಹೇಳಿದರು.ಲೇಖಕ ಡಿ.ಎಸ್. ಚೌಗಲೆ ಮಾತನಾಡಿ, `ಇಂದಿನ ಉದಾರ ನೀತಿಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಮನಸ್ಸು, ವಿಚಾರ ಶಕ್ತಿ ಕಳೆದುಕೊಳ್ಳುತ್ತಿದೆ. ಹಣ, ಅಧಿಕಾರವೇ ಮುಖ್ಯ ಎಂಬ ವ್ಯವಸ್ಥೆಯಲ್ಲಿ ನಾವಿದ್ದೇವೆ. ಅಸ್ಥಿರತೆ ಹಲವರನ್ನು ಕಾಡುತ್ತಿದೆ. ನನ್ನನ್ನು ಕಾಡಿದ ಇಂಥ ಹಲವು ಅಂಶಗಳನ್ನು ಈ ಮಾಧ್ಯಮದ ಮೂಲಕ ಪ್ರಕಟಿಸಿದ್ದೇನೆ' ಎಂದು ತಿಳಿಸಿದರು.ರಂಗಸಂಪದದ ಗುರುನಾಥ ಕುಲಕರ್ಣಿ ಸ್ವಾಗತಿಸಿದರು. ಕವಿ ಪಿ. ಮಂಜುನಾಥ ನಿರೂಪಿಸಿದರು. ಪತ್ರಕರ್ತ ಭೈರೋಬಾ ಕಾಂಬಳೆ ವಂದಿಸಿದರು.

ಪ್ರತಿಕ್ರಿಯಿಸಿ (+)