ಕತ್ತಲಲ್ಲಿ `ದೆವ್ವ'ದ ಮಾತು!

7

ಕತ್ತಲಲ್ಲಿ `ದೆವ್ವ'ದ ಮಾತು!

Published:
Updated:
ಕತ್ತಲಲ್ಲಿ `ದೆವ್ವ'ದ ಮಾತು!

`ಬಿಡಲಾರೆ ಎಂದೂ ನಿನ್ನ' ಚಿತ್ರತಂಡ ಮೇಣದಬತ್ತಿ ಹಿಡಿದು ವೇದಿಕೆಗೆ ಬಂತು. ಇನ್ನೇನು ಪತ್ರಿಕಾಗೋಷ್ಠಿ ಆರಂಭವಾಗಬೇಕು ಎನ್ನುವಷ್ಟರಲ್ಲಿ ವಿದ್ಯುತ್ ಸ್ಥಗಿತ. ನಿರೂಪಣೆಯ ಹೊಣೆ ಹೊತ್ತಿದ್ದ ನಾಯಕ ನವೀನ್ ಕೃಷ್ಣ, ತಮ್ಮದು ದೆವ್ವದ ಚಿತ್ರವಾದ್ದರಿಂದ ಇದು ದೆವ್ವದ ಕಾಟವೇ ಇರಬೇಕು ಎಂದು ಹೇಳಿ ನಕ್ಕರು.

ಅದು `ಬಿಡಲಾರೆ ಎಂದೂ ನಿನ್ನ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಗಿಮಿಕ್ ಮಾಡಲು ಚಿತ್ರತಂಡ ದೀಪಗಳನ್ನು ಆರಿಸಿತು. ಕಾಕತಾಳೀಯ ಎನ್ನುವಂತೆ ವಿದ್ಯುತ್ ಸ್ಥಗಿತಗೊಂಡು ಚಿತ್ರತಂಡ ಕತ್ತಲಲ್ಲಿಯೇ ಪತ್ರಿಕಾಗೋಷ್ಠಿ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು.

`ಚಿತ್ರ ನೂರಕ್ಕೆ ನೂರರಷ್ಟು ಭಯ ಹುಟ್ಟಿಸುತ್ತದೆ. ಹಾರರ್ ಜೊತೆ ಪಕ್ಕಾ ಮನರಂಜನೆಯೂ ಚಿತ್ರದಲ್ಲಿದೆ. ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಅನಗತ್ಯವಾಗಿ ಕೆಟ್ಟ ಮುಖಗಳನ್ನು ತೋರಿಸುವುದಿಲ್ಲ. ಶಬ್ದದಿಂದಲೇ ಭಯ ಹುಟ್ಟಿಸುವ ಪ್ರಯತ್ನ ಇದು. ಕೊಂಚ ಗಿಮಿಕ್ಕೂ ಇದೆ' ಎಂದು ನವೀನ್ ಕೃಷ್ಣ ಚಿತ್ರದ ವಿವರ ನೀಡಿದರು.

`ದೇವರಿದ್ದ ಮೇಲೆ ದೆವ್ವ ಇದ್ದೇ ಇದೆ' ಎಂಬ ನಂಬುಗೆಯಿಂದಲೇ ಚಿತ್ರವನ್ನು ರೂಪಿಸಲಾಗಿದೆಯಂತೆ. ರಂಗಭೂಮಿ ಹಿನ್ನೆಲೆಯ ಉಮೇಶ್ ಬಾದರದಿನ್ನಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರು ಹಿರಿಯ ನಟ ಅಶೋಕ್ ಬಾದರದಿನ್ನಿ ಅವರ ಸಹೋದರ. `ಇಷ್ಟಪಟ್ಟು ಒಳ್ಳೆಯ ಸಿನಿಮಾ ಮಾಡಿರುವೆ. ಚಿತ್ರ ಚೆನ್ನಾಗಿದ್ದರೆ ಅದು ತಂಡದ ಕೊಡುಗೆ ಎಂದುಕೊಳ್ಳಿ. ಚೆನ್ನಾಗಿಲ್ಲದಿದ್ದರೆ ಅದಕ್ಕೆ ಸಂಪೂರ್ಣ ಹೊಣೆ ನಾನೇ' ಎಂದು ಬಾದರದಿನ್ನಿ ಹೇಳಿದರು.

ಚಿತ್ರತಂಡಕ್ಕೆ ಶುಭ ಕೋರಲು ಬಂದಿದ್ದ ಅಶೋಕ್ ಬಾದರದಿನ್ನಿ ಅವರಿಗೆ ನಿರ್ದೇಶಕರ ಶ್ರದ್ಧೆ, ಏಕಾಗ್ರತೆ ಇಷ್ಟವಾಗಿದೆ. ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನೂ ನಿರ್ವಹಿಸಿರುವ ಅವರು, `ಸಿನಿಮಾ ಎಂಬ ನಮ್ಮ ಮಗು ಜನರಿಗೂ ಮುದ್ದಾಗಿ ಕಾಣಿಸಿದರೆ ಗೆಲುವು ನಿಶ್ಚಿತ' ಎಂದರು.

ಚಿತ್ರದ ನಿರ್ಮಾಪಕರಾದ ಮುರಳಿ ಮತ್ತು ಚಂದ್ರಶೇಖರ್, ನಟ ಕರಿಸುಬ್ಬು, ನಾಯಕಿಯರಾದ ಭೂಮಿಕಾ, ಸ್ವಾತಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry