ಕತ್ತಲೆಯಿಂದ ಬೆಳಕಿನೆಡೆಗೆ

7

ಕತ್ತಲೆಯಿಂದ ಬೆಳಕಿನೆಡೆಗೆ

Published:
Updated:

ರಾಜಾ ಮಹಾಬಲಿ ತನ್ನ ರಾಜ್ಯವಾದ ಕೇರಳಕ್ಕೆ ಬರುವ ಸಮಯವದು. ಜನರೆಲ್ಲರೂ ತಮ್ಮ ಮನೆಯ ಮುಂದೆ ಹೂವಿನ ರಂಗೋಲಿ ಬಿಡಿಸಿ ರಾಜನನ್ನು ಆಹ್ವಾನಿಸುತ್ತಾರೆ. ವರ್ಷವಿಡೀ ನಡೆದ ಕಹಿ ನೆನಪುಗಳನ್ನೆಲ್ಲಾ ಮರೆತು ಖುಷಿಯ ಸಿಹಿ ಕ್ಷಣಗಳನ್ನು ಹಂಚಿಕೊಂಡು ಬೆಳಕಿನೆಡೆಗೆ ಸಾಗುವುದೇ ‘ಓಣಂ’.ಮಳೆಗಾಲಕ್ಕೆ ನೆಲ ನೆಂದು ಮೆದುವಾಗಿದೆ. ಮಳೆಗಾಲದ ಈ ಋತುವಿನಲ್ಲಿ ಕೇರಳದಲ್ಲಿ ಕೊಯ್ಲಿನ ಹಬ್ಬದ ಸಂಭ್ರಮ. ಕೊಯ್ಲಿನ ಈ ಸಂಭ್ರಮವನ್ನು ‘ಓಣಂ’ ಹೆಸರಲ್ಲಿ ಆಚರಿಸುತ್ತಾರೆ. ಈ ಹಬ್ಬ ಕೇರಳದ ಸಂಪ್ರದಾಯಗಳ ಹೂರಣ. ಸ್ನಾನ, ವಸ್ತ್ರ, ಊಟೋಪಚಾರ, ಪ್ರತಿಯೊಂದರಲ್ಲೂ ವಿಶೇಷತೆ. ರಾಜ ಮಹಾಬಲಿಯನ್ನು ಇವರು ಸ್ವಾಗತಿಸುವ ಪರಿಯೂ ಮುದ ನೀಡುತ್ತದೆ. ಆದರೆ ಹಲವು ಕಾರಣಗಳಿಗೆ ಕೇರಳ ಬಿಟ್ಟು ಇಲ್ಲಿಗೆ ಬಂದಿರುವ ಕೆಲವರಿಗೆ ಓಣಂ ಹಬ್ಬ ಬಂದಾಕ್ಷಣ ತವರು ನೆನಪಾಗುತ್ತದೆ. ಪೂಕಳಂ, ಪುಲಿಕಲಿ, ವಲ್ಲಂಕಲಿ ಹೀಗೆ ಹಲವು ವಿಶೇಷತೆಗಳು ಕಣ್ಣಮುಂದೆ ಹಾದುಹೋಗುತ್ತವೆ. ಹಬ್ಬ ಬಂದಾಕ್ಷಣ ಅಲ್ಲಿಗೆ ತೆರಳುವ ಮಂದಿ ಕೆಲವರಾದರೆ, ಇಲ್ಲೇ ಇದ್ದು, ಓಣಂನ ಸಂಭ್ರಮವನ್ನು ಪಸರಿಸುವ ಜನರೂ ನಗರದಲ್ಲಿದ್ದಾರೆ. ಓಣಂ ಬಗ್ಗೆ ‘ಮೆಟ್ರೊ’ದೊಂದಿಗೆ ಅಂಥ ಕೆಲವರು ಅನಿಸಿಕೆ ಹಂಚಿಕೊಂಡಿದ್ದಾರೆ.ಕಚಗುಳಿ ಇಡುವ ನೆನಪುಗಳು

ಓಣಂ ಹತ್ತಿರವಾಗುತ್ತಿದ್ದಂತೆ ಬಾಲ್ಯದ ದಿನಗಳ ನೆನಪೂ ಮನದಲ್ಲಿ ಹಾದುಹೋಗುತ್ತದೆ. ಹಬ್ಬದ ದಿನ ಬಂತೆಂದರೆ ಸಾಕು, ಎಲ್ಲ  ಮರೆತುಹೋಗಿ  ಸಂಭ್ರಮ ಮನೆ ಮಾಡುತ್ತದೆ. ಮನೆಯಲ್ಲಿ ಎಷ್ಟೇ ನೋವಿದ್ದರೂ ಹಬ್ಬ ಬಂದರೆ

ಅದು ಗೌಣವಾಗುತ್ತದೆ. ಬಿಸಿ ನೀರಿನಲ್ಲಿ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ಮಕ್ಕಳೆಲ್ಲಾ ಹೂ ಕೀಳಲು ಹೋಗುತ್ತಿದ್ದೆವು. ಅವುಗಳಲ್ಲಿ ರಂಗೋಲಿ ಬಿಡುಸುವುದೇ ನಮಗೆಲ್ಲ ಸೋಜಿಗ. ಹತ್ತು ದಿನಗಳವರೆಗೂ ಮನೆಯಲ್ಲಿ ಖುಷಿಯೋ ಖುಷಿ. ನೆಂಟರು ಸ್ನೇಹಿತರೊಂದಿಗೆ ಹರಟುವುದು, ಸಿಹಿ ಹಂಚಿಕೊಳ್ಳುವುದು... ಎಲ್ಲ ಸಂಭ್ರಮ. ಅಷ್ಟೇ ಅಲ್ಲ, ಪ್ರತಿ ಬೀದಿಗೂ ಹಬ್ಬದ ರಂಗು ಆವರಿಸುತ್ತಿತ್ತು. ರಂಗೋಲಿ ಸ್ಪರ್ಧೆಗಳು ನಡೆಯುತ್ತಿದ್ದವು. ನಾವು ಮಕ್ಕಳೆಲ್ಲಾ ಹುಲಿವೇಷ

ತೊಟ್ಟು (ಪುಲಿಕಲಿ) ಮನೆಮನೆಗೂ ಹೋಗಿ ಕುಣಿದು ಬರುತ್ತಿದ್ದೆವು. ಹಬ್ಬ ಬಂದಾಕ್ಷಣ ಈ ನೆನಪುಗಳೆಲ್ಲಾ ಗರಿಗೆದರುತ್ತವೆ. ಈಗ ಅಪ್ಪ ಆಸ್ಟ್ರೇಲಿಯಾದಲ್ಲಿ, ನಾನು ಬೆಂಗಳೂರಿನಲ್ಲಿದ್ದೇನೆ. ಕೇರಳದಲ್ಲಿ ಎಲ್ಲರೂ ಒಂದುಗೂಡಿ ಹಬ್ಬ ಆಚರಿಸುತ್ತೇವೆ. 

–ರೆನ್ ಜಿನ್, ರೂಪದರ್ಶಿಏಕತೆ ಸಾರುವ ಹಬ್ಬ


ಓಣಂ ಹಬ್ಬದ ಉದ್ದೇಶ ಎಲ್ಲರನ್ನೂ ಒಂದುಗೂಡಿಸುವುದು. ಈ ಹಬ್ಬದಲ್ಲಿ ಎಲ್ಲೆಲ್ಲೋ ಚದುರಿಹೋಗಿರುವ ನಮ್ಮ ಬಂಧುಮಿತ್ರರು ಒಂದೆಡೆ ಸೇರುತ್ತಾರೆ. ಸಿನಿಮಾಗಳಲ್ಲಿ ತುಂಬಾ ಬ್ಯುಸಿಯಾಗಿದ್ದರೂ ನಾನು ಈ ಹಬ್ಬದ ಆಚರಣೆಯನ್ನು ಮಾತ್ರ ಎಂದಿಗೂ ತಪ್ಪಿಸುವುದಿಲ್ಲ.

ಹಬ್ಬದ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಕೂತು ಬಾಳೆ ಎಲೆಯಲ್ಲಿ ಊಟ ಮಾಡುತ್ತಿದ್ದುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇನ್ನು ಪೂಕಳಂ ಅಲಂಕಾರವಂತೂ ಕಣ್ಣಿಗೆ ಹಬ್ಬ. ಓಣಂನಲ್ಲಿ ಇನ್ನೂ ಇಷ್ಟವಾಗುವುದು ಭೋಜನ. ಹಣ್ಣು, ತರಕಾರಿಗಳಿಂದ ತಯಾರಿಸಿದ ವಿವಿಧ ಖಾದ್ಯಗಳು ಹಬ್ಬದಲ್ಲಿ ತುಂಬಿಕೊಂಡಿರುತ್ತವೆ. ನನಗಂತೂ ಪರಿಪ್ಪುದಾಲ್‌ ತುಂಬಾ ಇಷ್ಟ. ಅದನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ ಎನಿಸುತ್ತಿದೆ. ಇನ್ನು ಓಣಂ ದಿನ ಬಟ್ಟೆ ಬರೆಯಲ್ಲೂ ವಿಶೇಷತೆ ಎದ್ದುಕಾಣುತ್ತದೆ. ಮಾಡ್‌ ಬಟ್ಟೆಗಳನ್ನೆಲ್ಲ ಮೂಲೆಗೆ ಎಸೆದು ನಮ್ಮ ಸಾಂಪ್ರದಾಯಿಕ ಸೀರೆ ಉಟ್ಟು, ಹೂ ಮುಡಿದು ಅಪ್ಪಟ ಭಾರತೀಯ ನಾರಿಯಂತೆ ಸಿಂಗಾರಗೊಳ್ಳುತ್ತೇನೆ. ಅಬುದಾಬಿಯಲ್ಲಿ ಓದುತ್ತಿದ್ದಾಗಲೂ ಕಾಲೇಜಿನಲ್ಲಿ ಸೀರೆ ಉಟ್ಟು ನಮ್ಮ ಸಂಸ್ಕೃತಿಯನ್ನು ಬಿಂಬಿಸಿದ್ದ ಹೆಮ್ಮೆ ನನಗಿದೆ. ಈ ಬಾರಿ ಊರಿಗೆ ಹೋಗಲು ಆಗುವುದಿಲ್ಲ. ಆದರೆ ಹಬ್ಬವನ್ನು ಬೆಂಗಳೂರಿನಲ್ಲೇ ಆಚರಿಸುತ್ತಿದ್ದೇನೆ. ಈ ಸಲದ ವಿಶೇಷ ಅಂದರೆ ಕನ್ನಡಿಗರೊಂದಿಗೆ ಹಬ್ಬ ಆಚರಿಸುತ್ತಿರುವುದು. ಇಲ್ಲಿನ ನನ್ನ ಕನ್ನಡದ ಗೆಳೆಯರೊಂದಿಗೆ ಹಬ್ಬದ ಯೋಜನೆ ಮಾಡಿಕೊಂಡಿದ್ದೇನೆ. ಸದ್ಯಕ್ಕೆ ತಮಿಳು, ತೆಲುಗು ಚಿತ್ರಗಳು ಕೈಯಲ್ಲಿವೆ, ಈಗಷ್ಟೇ ಮಲಯಾಳಂ ಚಿತ್ರವೊಂದನ್ನು ಮುಗಿಸಿದ್ದೇನೆ. ಒಂದೆರೆಡು ಕನ್ನಡ ಸಿನಿಮಾಗಳಿಗೂ ಕರೆ ಬಂದಿದೆ. ಮೊನ್ನೆಯಷ್ಟೇ ಮೈಸೂರು ವಿವಿಗೆ ಭೇಟಿ ಕೊಟ್ಟು ಓಣಂ ಆಚರಿಸಿ ಬಂದೆ.

–ಪಾರ್ವತಿ ನಾಯರ್, ನಟಿಹೊಸತನದ ಅನುಭವ


ಮದುವೆಯಾಗಿ ಎರಡು ತಿಂಗಳಷ್ಟೇ ಆಗಿದೆ. ಮೊದಲ ಓಣಂ ಹಬ್ಬದಾಚರಣೆಯ ಸಂಭ್ರಮದಲ್ಲಿದ್ದೇನೆ. ನಾನು ಕನ್ನಡತಿ, ನನ್ನ ಪತಿ ಜಯಶಂಕರ್‌ ಕೇರಳದವರು. ಆದ್ದರಿಂದ ಈ ವರ್ಷ ಓಣಂ ತಯಾರಿ ಜೋರಾಗಿದೆ.

ಕೇರಳ ಪ್ರವಾಸೋದ್ಯಮದಿಂದ ನೃತ್ಯ ಪ್ರದರ್ಶನದ ಸಲುವಾಗಿ ಇಡೀ ದೇಶಕ್ಕೆ ಕೇರಳದ ವೈವಿಧ್ಯವನ್ನು ಪರಿಚಯಿಸುವ ಹೊಣೆ ಇತ್ತು. ಆ ಸಂರ್ದಭದಲ್ಲಿ ಕೇರಳದ ಬಗ್ಗೆ, ಅಲ್ಲಿನ ಸಂಸ್ಕೃತಿಯ ಬಗ್ಗೆ, ಓಣಂ

ಹಬ್ಬದ ಮಹತ್ವದ ಬಗ್ಗೆ ತಿಳಿದುಕೊಂಡೆ. ಕೇರಳದ ಸಾಂಪ್ರದಾಯಿಕ ನೃತ್ಯ ಮೋಹಿನಿ ಅಟ್ಟಂ, ಕೈಕಟ್ಟಿಕೊಳಿ ಕೂಡ ಪ್ರರ್ದಶಿಸಿದ್ದೆ.

ಓಣಂನಲ್ಲಿ ಹಲವು ಹೂಗಳಿಂದ ರಂಗೋಲಿ ಬಿಡಿಸುವುದು ನನಗೆ ತುಂಬಾ ಇಷ್ಟ. ಹಬ್ಬದಲ್ಲಿ ಕಡಿಮೆಯೆಂದರೂ 29 ಬಗೆಯ ಖಾದ್ಯಗಳಿರುತ್ತವೆಯಂತೆ. ಇವೆಲ್ಲಾ ಚೊಚ್ಚಿಲ ಅನುಭವ. ಈ ಬಾರಿ ಪತಿಯ ಮನೆಯವರು, ತಾಯಿ ಮನೆಯವರೆಲ್ಲಾ ಒಟ್ಟಾಗಿ ಸೇರಿ ಹಬ್ಬ ಆಚರಿಸುತ್ತಿದ್ದೇವೆ. ಹೊಸತನ್ನು ಆಚರಿಸುವ ಖುಷಿ ತುಂಬಿಕೊಂಡಿದೆ. ಕೇರಳದ ಸಾಂಪ್ರದಾಯಿಕ ಸೀರೆ ಉಟ್ಟು, ರಂಗೋಲಿ ಬಿಡಿಸಿ, ದೀಪ ಹೊತ್ತಿಸಿ, ಬದುಕನ್ನೂ ಬೆಳಕಿನೆಡೆಗೆ ನಡೆಸುವ ಭರವಸೆ ತುಂಬಿಕೊಂಡಿದೆ. ಓಣಂ ಕೇವಲ ಹಬ್ಬವಲ್ಲ, ಅದು ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಎನ್ನುವುದು ಪತಿಯ ನಂಬಿಕೆ.

  – ಪಲ್ಲವಿ ಪ್ರಕಾಶ್, ನೃತ್ಯಗಾರ್ತಿಹಬ್ಬದೂಟ ಬಲು ಇಷ್ಟ


ಓಣಂ ಹಬ್ಬ ಬಂದಾಗ ಮೊದಲು ನೆನಪಿಗೆ ಬರುವುದು ನನ್ನ ಮೊದಲ ಸಿನಿಮಾ ‘ನೈವೇದ್ಯಂ’. ಅದು ಓಣಂ ಹಬ್ಬದ ಸಮಯ ತೆರೆಕಂಡಿತ್ತು. ಅದರ ಮೂಲಕ ನಾನು ನಟಿಯಾಗಿ ಗುರುತಿಸಿಕೊಂಡಿದ್ದೆ. ಆ ವರ್ಷದ ಹಬ್ಬ ನನಗೆ ನೀಡಿದ್ದ ಖುಷಿಯನ್ನು ಮರೆಯಲು ಸಾಧ್ಯವಿಲ್ಲ. ಈಗಲೂ ಓಣಂ ಬಂದಾಗ ನನಗೆ ನನ್ನ ಆ ಮೊದಲ ಸಿನಿಮಾದ ನೆನಪಾಗುತ್ತದೆ. ಆ ಕ್ಷಣಗಳನ್ನು ಮೆಲುಕು ಹಾಕುವುದೇ ಒಂದು ಮಧುರಾನುಭವ.ಶೂಟಿಂಗ್‌ ಇರುವಾಗ ಹಬ್ಬ ಮಿಸ್‌ ಆಗುತ್ತದೆ. ಆಗ ಸ್ವಲ್ಪ ಬೇಸರವಾಗುತ್ತದೆ ಹಾಗಂತ ಮಾಡುವ ಕೆಲಸವನ್ನು ಕಡೆಗಣಿಸಬಾರದು ಎಂದು ಸುಮ್ಮನಾಗುತ್ತೇನೆ. ಸೆಟ್‌ನಲ್ಲಿಯೇ ಹಬ್ಬ ಆಚರಿಸಿಕೊಂಡು ಖುಷಿಪಡುತ್ತೇನೆ. ಮನೆಯವರಿಗೂ ನನ್ನ ಕೆಲಸದ ಬಗ್ಗೆ ಗೊತ್ತಿರುವುದರಿಂದ ಹೆಚ್ಚು ಒತ್ತಡ ಹೇರುವುದಿಲ್ಲ.ಮನೆಯಲ್ಲಿ ಹಬ್ಬ ಆಚರಿಸುವಾಗ ನಾನು ನಮ್ಮ ಸಂಪ್ರದಾಯದ ಉಡುಗೆ ತೊಡುತ್ತೇನೆ. ಆ ಸೀರೆ ಉಟ್ಟು, ಮುಡಿಗೆ ಮಲ್ಲಿಗೆ ಮುಡಿದು, ಹಣೆಗೆ ಕೆಂಪು ಬಿಂದಿ ಇಟ್ಟುಕೊಳ್ಳುವುದು ನನಗೆ ತುಂಬಾ ಇಷ್ಟ. ಈ ರೀತಿಯ ಅಲಂಕಾರದಿಂದ ನಾನು ಪಕ್ಕಾ ಮಲಯಾಳಿ ಹುಡುಗಿ ಹಾಗೆ ಕಾಣಿಸಿಕೊಳ್ಳುತ್ತೇನೆ.ಇನ್ನು ಹಬ್ಬದೂಟವೆಂದರೆ ನನಗೆ ಬಲು ಇಷ್ಟ. ಆ ದಿನ ಯಾವುದೇ ಡಯೆಟ್‌ನ ಹಂಗಿಲ್ಲದೇ ಚೆನ್ನಾಗಿ ತಿನ್ನುತ್ತೇನೆ. ಮನೆಯಲ್ಲಿ ಬಗೆಬಗೆಯ ಕರ್ರಿ, ಸಿಹಿತಿನಿಸು ಮಾಡುತ್ತಾರೆ. ಕೆಲವೊಮ್ಮೆ ನಾನು ಅಡುಗೆಮನೆ ಹೊಕ್ಕು ಅಡುಗೆ ಕೆಲಸಕ್ಕೆ ಕೈ ಹಾಕಿದ್ದೂ ಇದೆ. ಮನೆಯ ಮುಂದೆ ಹೊಸ ಹೊಸ ವಿನ್ಯಾಸದ ಹೂಗಳ ರಂಗೋಲಿ ಹಾಕಿ, ನೋಡಿ ಖುಷಿಪಡುತ್ತೇನೆ.

– ಭಾಮಾ, ನಟಿಬಲಿಯ ಅಹಂಕಾರ ಅಳಿದ ಸಮಯ


ನಮ್ಮ ಮನೆಯವರೆಲ್ಲರೂ ಬೆಂಗಳೂರಿನಲ್ಲಿಯೇ ನೆಲೆ ನಿಂತಿದ್ದೇವೆ. ಹಾಗಾಗಿ ಕೇರಳಕ್ಕೆ ಹೋಗಿ ಆಚರಿಸುವುದು ಕಡಿಮೆ. ಇಲ್ಲಿಯೇ ಓಣಂ ಆಚರಿಸುತ್ತೇವೆ. ರಾಜ ಮಹಾಬಲಿಯನ್ನು ಪೂಜಿಸುವುದೇ ಈ ದಿನದ ವಿಶೇಷ.ಹಿರಿಯರು ಹೇಳುವ ಪ್ರಕಾರ ರಾಜಾ ಮಹಾಬಲಿ ಕೇರಳ ರಾಜ್ಯವನ್ನು ಆಳುತ್ತಿದ್ದನಂತೆ. ತನ್ನ ರಾಜ್ಯದ ಬಗ್ಗೆ ಅತೀವ ಮೋಹ, ಪ್ರೀತಿಯ ಜತೆಗೆ ಸ್ವಲ್ಪ ಅಹಂಕಾರವೂ ಇತ್ತಂತೆ. ವಿಷ್ಣು ಅವನ ಅಹಂಕಾರವನ್ನು ಇಳಿಸಲು ವಾಮನ ರೂಪದಲ್ಲಿ ಬಂದು ಮೂರು ವರ ಕೇಳಿದನಂತೆ. ಮೂರು ಅಡಿ ಜಾಗಬೇಕು ಎಂದಾಗ ಮಹಾಬಲಿ ಒಪ್ಪಿಗೆ ನೀಡುತ್ತಾನಂತೆ. ವಾಮನನು ಒಂದು ಹೆಜ್ಜೆ ಭೂಮಿ, ಇನ್ನೊಂದು ಹೆಜ್ಜೆ ಆಕಾಶಕ್ಕೆ ಇಟ್ಟು ಮೂರನೇ ಹೆಜ್ಜೆ ಎಲ್ಲಿಡಲಿ ಎಂದಾಗ ಬಲಿ ತನ್ನ ತಲೆಯ ಮೇಲಿಡು ಎನ್ನುತ್ತಾನಂತೆ. ಪಾತಾಳಕ್ಕೆ ಹೋಗುತ್ತಿದ್ದ ಬಲಿಯನ್ನು ವಿಷ್ಣು ನಿನ್ನ ಆಸೆಯೇನು ಎಂದಾಗ ವರ್ಷಕ್ಕೊಂದು ಸಲ ತನ್ನ ರಾಜ್ಯವನ್ನು, ಜನರನ್ನು ನೋಡಲು ಅವಕಾಶ ಮಾಡಿಕೊಡು ಎಂದು ಬೇಡಿಕೊಂಡಾಗ ವಾಮನನು ಒಪ್ಪಿಗೆ ನೀಡುತ್ತಾನಂತೆ. ಹೀಗೆ ಬಲಿಯು ತನ್ನ ರಾಜ್ಯವನ್ನು ನೋಡುವುದಕ್ಕೆ ಬರುವ ಈ ಸಂದರ್ಭವನ್ನು ಜನರು ಖುಷಿಯಿಂದ ಆಚರಿಸುತ್ತಾರಂತೆ.ಹತ್ತು ದಿನ ಆಚರಿಸುವ ಈ ಹಬ್ಬದಲ್ಲಿ ಪೂಕಳಂ (ಹೂವಿನ ರಂಗೋಲಿ) ಹಾಕಿ ತಮ್ಮ ರಾಜ್ಯಕ್ಕೆ ಬರುವ ರಾಜನನ್ನು ಜನರೆಲ್ಲರೂ ಸ್ವಾಗತಿಸುತ್ತಾರೆ. ಮೊದಲ ದಿನ ಹೂವಿನಿಂದ ಒಂದು ವೃತ್ತ ಹಾಕುತ್ತೇವೆ. ಹೀಗೆ ಹತ್ತು ದಿನ ಒಂದೊಂದು ವೃತ್ತ ಹಾಕಿ ಅದು ದೊಡ್ಡ ರಂಗೋಲಿಯಾಗುತ್ತದೆ. ಜತೆಗೆ 21 ಬಗೆಯ ಅಡುಗೆ ಮಾಡಿ ಸಂಭ್ರಮಿಸುತ್ತೇವೆ.ಕ್ಯಾಥೋಲಿಕ್‌ ಕ್ಲಬ್‌ನಲ್ಲಿ ಕಾಲೇಜಿನ ವಿದ್ಯಾರ್ಥಿಗಳೆಲ್ಲಾ ಸೇರಿ ಓಣಂ ಹಬ್ಬ ಆಚರಿಸುತ್ತೇವೆ. ಹೂವಿನ ರಂಗೋಲಿ ಹಾಕುತ್ತೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಬ್ಬಕ್ಕೆ ಮತ್ತಷ್ಟು ರಂಗು ತುಂಬುತ್ತೇವೆ.

–ಕುಸುಮಾ, ವಿದ್ಯಾರ್ಥಿನಿ, ಜೆ.ಡಿ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry