ಕತ್ತಲ ಕೋಣೆ ಯುವಕ ಬಂಧಮುಕ್ತ

7

ಕತ್ತಲ ಕೋಣೆ ಯುವಕ ಬಂಧಮುಕ್ತ

Published:
Updated:

ಜಗಳೂರು: ಹೆತ್ತ ಪೋಷಕರಿಂದಲೇ 16 ವರ್ಷಗಳಿಂದ ಕತ್ತಲ ಕೋಣೆಯಲ್ಲಿ ಬಂಧಿಯಾಗಿದ್ದ ತಾಲ್ಲೂಕಿನ ಲಕ್ಕಂಪುರ ಗ್ರಾಮದ ಅಸ್ವಸ್ಥ ಯುವಕನಿಗೆ ಶನಿವಾರ ಕೊನೆಗೂ ಘೋರ ಬಂಧನದಿಂದ ಬಿಡುಗಡೆಯ ಭಾಗ್ಯ ಸಿಕ್ಕಿತು.ಕೇಶವಮೂರ್ತಿ ಎಂಬ ಮಾನಸಿಕ ಅಸ್ವಸ್ಥ ಯುವಕನನ್ನು ಬಾಗಿಲೇ ಇಲ್ಲದ ಕತ್ತಲ ಕೋಣೆಯಲ್ಲಿ ಸರಪಳಿಯಿಂದ
ಅಮಾನವೀಯವಾಗಿ ಬಂಧಿಸಿರುವ ಬಗ್ಗೆ `ಪ್ರಜಾವಾಣಿ~ಯಲ್ಲಿ ಶುಕ್ರವಾರ ವಿಶೇಷ ವರದಿ ಪ್ರಕಟವಾಗಿತ್ತು.  ವರದಿಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ವಿಭಾಗೀಯ ಆಯುಕ್ತ ಕೆ. ಶಿವರಾಂ ಅವರು  ಯುವಕನನ್ನು ಕತ್ತಲಕೂಪದಿಂದ ಬಿಡುಗಡೆಗೊಳಿಸುವ ಕಾರ್ಯಾಚರಣೆಯ ನೇತೃತ್ವವಹಿಸಿದರು.ಕತ್ತಲ ಕೋಣೆಯಲ್ಲಿ ಊಟ, ನೀರು ಕೊಡುತ್ತಿದ್ದ ಕಿಟಕಿಯ ಸಮೀಪ ಬೆತ್ತಲಾಗಿ, ಗಡ್ಡಮೀಸೆಗಳಿಂದ ವಿಕಾರವಾಗಿದ್ದ ಯುವಕನನ್ನು ಕಂಡು ಶಿವರಾಂ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಬೆಚ್ಚಿ ಬಿದ್ದರು. ಜನರನ್ನು ನೋಡುತ್ತಲೇ ಅಸ್ವಸ್ಥ ಯುವಕ `ಕದ.... ಕದ (ಬಾಗಿಲು)~ ಎಂದು ಹಲವು ಬಾರಿ ತೊದಲುತ್ತ ತನ್ನ ಎರಡೂ ಕೈಗಳಿಗೆ ಬಿಗಿದ ಕಬ್ಬಿಣದ ಸರಪಳಿಯನ್ನು ಅಸಹಾಯಕನಾಗಿ ಎತ್ತಿ ತೋರಿಸುತ್ತಿದ್ದ ದೃಶ್ಯ ಎಂತಹವರಿಗೂ ಕರಳು ಕಿತ್ತು ಬರುವಂತಿತ್ತು.ಅಧಿಕಾರಿಗಳ ಸೂಚನೆಯ ಮೇರೆಗೆ ಗೋಡೆ ಕೆಡವಿ ನೆರೆದಿದ್ದ ಸಹಸ್ರಾರು ಜನರ ಜಂಗುಳಿಯ ಮಧ್ಯೆ ಮನೆಯಿಂದ ಹೊರಗೆ ಕರೆ ತಂದಾಗ 16 ವರ್ಷಗಳಿಂದ ಸೂರ್ಯನ ಬೆಳಕನ್ನೇ ಕಾಣದ ಯುವಕ ಮುಖ ಎತ್ತಿ ಆಕಾಶ ನೋಡಿ ಮಂದಸ್ಮಿತನಾದ.ತಲೆ ಮೇಲೆ ಬೆಳೆದ ದಟ್ಟ ಕೂದಲು ಗಂಟು ಕಟ್ಟಿಕೊಂಡು, ಗಡ್ಡ, ಮೀಸೆ ಬೃಹದಾಕಾರವಾಗಿ ಬೆಳೆದು ಅಸ್ವಸ್ಥನಾಗಿದ್ದ ಈತನನ್ನು ಮನೆ ಅಂಗಳದ ಕುರ್ಚಿಯಲ್ಲಿ ಕೂರಿಸಿ ಚೊಕ್ಕವಾಗಿ ಕ್ಷೌರ ಮಾಡಿ, ಸ್ನಾನ ಮಾಡಿಸಲಾಯಿತು. ಹೊಸ ಬಟ್ಟೆಗಳನ್ನು ಧರಿಸಿ ನಿಂತಾಗ, ಅಸ್ವಸ್ಥ ಯುವಕನ ದಯನೀಯ ಸ್ಥಿತಿಯನ್ನು ಕಂಡು ಮರುಗಿದ್ದ ಜನರು ಒಂದು ಕ್ಷಣ ಭಾವುಕರಾದರು. ಮಾನಸಿಕ ಅಸ್ವಸ್ಥನಾಗಿದ್ದರೂ ಆತ ಚಡಪಡಿಸದೆ ಮಗುವಿನಂತೆ ಕುಳಿತು ಎಲ್ಲಾ ಕ್ರಿಯೆಗಳನ್ನು ಹೊಸ ಅನುಭವ ಎನ್ನುವಂತೆ ಶಾಂತಚಿತ್ತದಿಂದ ಸ್ವೀಕರಿಸಿದ.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಂ, `ನನ್ನ ಜೀವನದಲ್ಲಿ  ಕಂಡು, ಕೇಳರಿಯದ ಘಟನೆ ಇದು. ಪ್ರಜಾವಾಣಿ ಪತ್ರಿಕೆಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇಂತಹ ಅಪರೂಪದ ಮಾನವೀಯ ವರದಿಯಿಂದಾಗಿ ನಾನು ಇಲ್ಲಿಗೆ ಬರಲು ಸಾಧ್ಯವಾಯಿತು.ಪ್ರತಿಭಾನ್ವಿತ ಯುವಕನನ್ನು ಅಸ್ವಸ್ಥನೆಂಬ ಕಾರಣಕ್ಕೆ ವರ್ಷಗಟ್ಟಲೆ ಬಾಗಿಲೇ ಇಲ್ಲದ ಕತ್ತಲ ಕೋಣೆಯಲ್ಲಿ ಕೂಡಿ ಹಾಕಿರುವುದು ಘೋರ ಹಾಗೂ ಅಮಾನವೀಯ ಕೃತ್ಯ.  ಅನಕ್ಷರತೆ ಮತ್ತು ಬಡತನ ಇದಕ್ಕೆ ಕಾರಣ. ಬಂದಿಯಾಗಿದ್ದ ಕೇಶವಮೂರ್ತಿಗೆ  ಸರ್ಕಾರದ ವತಿಯಿಂದ ಚಿಕಿತ್ಸೆ ನೀಡಲಾಗುವುದು. ಆತನ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು~ ಎಂದರು.`ಯುದ್ಧ ಕೈದಿಗಿಂತಲೂ ಕ್ರೂರವಾಗಿ ಈ ಯುವಕನನ್ನು ನಡೆಸಿಕೊಳ್ಳಲಾಗಿದೆ. ಯುವಕನ ಹೊಸ ಜೀವನಕ್ಕೆ ಅಗತ್ಯ ಸಹಕಾರ ನೀಡಲಾಗುವುದು~ ಶಾಸಕ ರಾಮಚಂದ್ರ ಹೇಳಿದರು. ಮಾನವ ಹಕ್ಕು ಕಾರ್ಯಕರ್ತ ಸಿದ್ದಲಿಂಗೇಗೌಡ, ಡಿವೈಎಸ್‌ಪಿ. ರಾಧಾಮಣಿ, ಎ.ಸಿ. ಇಬ್ರಾಹಿಂ, ತಹಶೀಲ್ದಾರ್ ವಿ.ಆರ್. ಪಾಟೀಲ್, ಸಿಪಿಐ ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry