ಸೋಮವಾರ, ಮಾರ್ಚ್ 20, 2023
24 °C
ಸದ್ದಿಲ್ಲದ ಸಾಧಕರು–16

ಕತ್ತಲ ಜಗದಲಿ ಕಂದೀಲು ಹಿಡಿದು

ಶರಣಪ್ಪ ಹಾಳಕೇರಿ Updated:

ಅಕ್ಷರ ಗಾತ್ರ : | |

ಈ ಸಂಸ್ಥೆಯಲ್ಲಿನ ಮಕ್ಕಳು ಪಟಪಟನೆ ಓದುತ್ತಾರೆ, ಟೈಪಿಂಗ್‌ ಮಷಿನ್‌ ಮೇಲೆ ಕೈಯಾಡಿಸುತ್ತಾ ಚಕಚಕನೆ ಟೈಪ್‌ ಮಾಡುತ್ತಾರೆ, ಚೆಸ್‌ಬೋರ್ಡ್‌ ಮೇಲೆ ರಾಜಾ, ರಾಣಿ, ಕುದುರೆ, ಆನೆ, ಸೈನಿಕ  ಎಲ್ಲ ಕಾಯಿಗಳೂ ಸರಸರನೆ ಸರಿದಾಡುತ್ತವೆ. ಈ ಮಕ್ಕಳ ಕೈಯಲ್ಲಿ ಅರಳಿರುವ ಕಾಗದ ಹೂವುಗಳು, ಕಲಾಕೃತಿಗಳು ಅವೆಷ್ಟೋ...ಆದರೆ ತಾವು ಮಾಡಿದ ಟೈಪಿಂಗನ್ನಾಗಲೀ, ಕಲಾಕೃತಿಗಳನ್ನಾಗಲೀ, ಚೆಸ್‌ ಕಾಯಿಗಳನ್ನಾಗಲೀ ನೋಡುವ ಭಾಗ್ಯ ಅವರಿಗೆ ಇಲ್ಲ. ಏಕೆಂದರೆ ಇವರೆಲ್ಲ ತಮ್ಮ ಬಾಹ್ಯ ಕಣ್ಣುಗಳಿಂದ ನೋಡಲು ಅಸಮರ್ಥರು. ಹುಟ್ಟು ಅಂಧರು. ಆದರೆ ಆಂತರಿಕ ಕಣ್ಣುಗಳು ಮಾತ್ರ ಸದಾ ಚುರುಕು. ಅಷ್ಟಕ್ಕೂ ತಮ್ಮ ಕಣ್ಣುಗಳಿಂದ ಪ್ರಪಂಚವನ್ನೇ ಕಾಣದಿದ್ದ ಈ ಪುಟಾಣಿ ಮಕ್ಕಳೆಲ್ಲಾ ಇಷ್ಟೊಂದು ಸಮರ್ಥರಾಗಲು ಕಾರಣ ಏನು ಎಂಬುದನ್ನು ಹುಡುಕುತ್ತಾ ಹೋದರೆ ಅಚ್ಚರಿಯೆನಿಸುತ್ತದೆ. ಇದಕ್ಕೆ ಕಾರಣರಾದ ವ್ಯಕ್ತಿ ಕೂಡ ಇವರಂತೆಯೇ ಅಂಧರು. ಹೆಸರು ದತ್ತು ಅಗರವಾಲ. ದತ್ತು ಹುಟ್ಟು ಕುರುಡರಲ್ಲ.ಮೂರನೇ ವರ್ಷದವರೆಗೆ ಸಾಮಾನ್ಯ ಮಕ್ಕಳಂತೆ ಇದ್ದವರು. ನಂತರ ಕಾಮಾಲೆ ರೋಗಕ್ಕೆ ತುತ್ತಾಗಿ ತಮ್ಮ ಎರಡು ಕಣ್ಣುಗಳ ದೃಷ್ಟಿ ಕಳೆದುಕೊಂಡರು. ಬಡತನದ ಬೇಗೆಯಲ್ಲಿ ಬಳಲುತ್ತಿದ್ದ ತಂದೆ–ತಾಯಿಗೆ ಮಗನ ಕಣ್ಣು ಕಳೆದುಕೊಂಡಿದ್ದು ಸಿಡಿಲು ಬಡಿದಂತಾಗಿತ್ತು. ಮೊದಲೇ ಹಾಸುಹೊದ್ದಿರುವ ಬಡತನ. ಆದರೂ ನಿರಾಶರಾಗಲಿಲ್ಲ. ಸಾಲ ಸೋಲ ಮಾಡಿ ಕಂಡಕಂಡ ಆಸ್ಪತ್ರೆ ಅಲೆದಾಡಿದರು. ಆದರೆ  ಏನೂ ಪ್ರಯೋಜನವಾಗಲಿಲ್ಲ. ಮಗನಿಗೆ ದೃಷ್ಟಿ ಬರಲೇ ಇಲ್ಲ. ಮಗನ ಭವಿಷ್ಯದ್ದೇ ಚಿಂತೆಯಾಯಿತು ಅವರಿಗೆ.ಅಂಧರ ಶಾಲೆಯಲ್ಲಿ ಶಿಕ್ಷಣ

ಕಲಬುರ್ಗಿ ನಗರದಲ್ಲಿ ಅಂಧರ ಶಿಕ್ಷಣಕ್ಕಾಗಿ ಸರ್ಕಾರ ವಿಶೇಷ ಶಾಲೆ ತೆರೆದಿದೆ ಎಂಬ ವಿಚಾರ ತಿಳಿದು ನಿಟ್ಟುಸಿರುಬಿಟ್ಟರು. ಮಗನನ್ನು ಆ ಶಾಲೆಗೆ ಸೇರಿಸಿದರು. ಹೀಗಾಗಿ ದತ್ತು ಅಗರವಾಲ ಅವರು ತಮ್ಮ ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಆ ಶಾಲೆಯಲ್ಲಿಯೇ ಪೂರೈಸಿದರು. ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಪಡೆದು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.1985ರಲ್ಲಿ ಇವರು ರಾಜ್ಯಶಾಸ್ತ್ರ ಉಪನ್ಯಾಸಕ ಹುದ್ದೆಗೆ ಆಯ್ಕೆಗೊಂಡು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಲ್ಲಿ ಸರ್ಕಾರಿ ನೌಕರರಾಗಿದ್ದರೂ ಸಮಾಜ ಸೇವೆಯನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ತಮ್ಮಂತೆ ಅಂಧರಾಗಿರುವ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ.ಹೈದರಾಬಾದ್ ಕರ್ನಾಟಕದ ಕಲಬುರ್ಗಿಯಲ್ಲಿ ತಮ್ಮ ತಾಯಿಯ ನೆನಪಿನಲ್ಲಿ ‘ಶ್ರೀಮತಿ ಅಂಬೂಬಾಯಿ ಅಂಧ ಬಾಲಕಿಯರ ವಸತಿ ಶಾಲೆ’   ಯನ್ನು 2007 ರಲ್ಲಿಯೇ ಆರಂಭಿಸಿದ್ದಾರೆ. ಈಗ ಶಾಲೆಯಲ್ಲಿ 71 ಬಾಲಕಿಯರು ಅಭ್ಯಾಸ ಮಾಡುತ್ತಿದ್ದಾರೆ. 1ರಿಂದ 9ನೇ ತರಗತಿವರೆಗೆ ತರಗತಿ ನಡೆಯುತ್ತಿವೆ. ಮುಂದಿನ ವರ್ಷ 10ನೇ ತರಗತಿ ಆರಂಭಿಸುವ ಉದ್ದೇಶ ಹೊಂದಿದ್ದಾರೆ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿಯೇ ಅಂಧ ಹೆಣ್ಣುಮಕ್ಕಳಿಗಾಗಿ ಶಿಕ್ಷಣ ನಿಡುತ್ತಿರುವ ಏಕೈಕ ಶಾಲೆ ಎಂಬ ಹೆಗ್ಗಳಿಕೆ ಇದರದ್ದಾಗಿದೆ. ವಸತಿ ಶಾಲೆಯಲ್ಲಿ ಪ್ರವೇಶ ಪಡೆದ 71 ಮಕ್ಕಳಿಗೆ ಬಟ್ಟೆ, ಊಟ, ಪುಸ್ತಕ, ಕಂಪ್ಯೂಟರ್ ಜ್ಞಾನ, ಕಸೂತಿ ತರಬೇತಿ ನೀಡಲಾಗುತ್ತಿದೆ.ಹಣಕಾಸಿನ ಕೊರತೆ

‘ಮೊದಲಿನಿಂದ ಸರ್ಕಾರ 50 ವಿದ್ಯಾರ್ಥಿಗಳಿಗೆ ತಿಂಗಳ ಉಟದ ವೆಚ್ಚ ₹600 ನೀಡುತ್ತಿದೆ. ಇದರಿಂದ ಈಗ ಮುಕ್ತ ಮಾರುಕಟ್ಟೆ ಹೆಚ್ಚಾದ್ದರಿಂದ ಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಸರ್ಕಾರಕ್ಕೆ 50 ಮಕ್ಕಳಿಗೆ ನೀಡುವ ಸಹಾಯಧನವನ್ನು 75 ವಿದ್ಯಾರ್ಥಿಗಳಿಗೆ ಹೆಚ್ಚಿಸಬೇಕು. ₹600ರ ಬದಲು ₹1000ಕ್ಕೆ ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದ್ದರಿಂದ ಕೇವಲ 71 ಮಕ್ಕಳಿಗೆ ಮಾತ್ರ ಸೌಲಭ್ಯ ನೀಡಲಾಗುತ್ತದೆ. ಹೈದರಾಬಾದ್ ಕರ್ನಾಟಕ ಭಾಗದ ಅಂಧ ಬಾಲಕಿಯರು ಪ್ರತಿವರ್ಷ ಬರುತ್ತಿದ್ದಾರೆ. ಅವರ ಸಂಖ್ಯೆ ಹೆಚ್ಚುತ್ತಿದ್ದು, ಅನುದಾನ ಕಡಿಮೆ ಇರುವುದರಿಂದ ಕಷ್ಟವಾಗುತ್ತಿದೆ. ಉನ್ನುಳಿದ ಮಕ್ಕಳಿಗೆ ಸ್ವಂತ ಹಣದಿಂದಲೇ ಶಿಕ್ಷಣ ನೀಡುತ್ತಿದ್ದೇನೆ’ ಎಂದು ಹೇಳುತ್ತಾರೆ ದತ್ತು ಅಗರವಾಲ.‘ಅಂಧರ ವಿಶೇಷ ಜ್ಞಾನವನ್ನು ಹೊರ ಜಗತ್ತಿಗೆ ಪ್ರಸ್ತುತ ಪಡಿಸಲು ಸೂಕ್ತ ವೇದಿಕೆ ಸಿಕ್ಕಾಗ ಮಾತ್ರ ಅವರನ್ನು ಗುರುತಿಸಲು ಸಾಧ್ಯ. ಆದ್ದರಿಂದಲೇ ಮಕ್ಕಳಿಗೆ ಪಠ್ಯದ ಜತೆಗೆ ಹೊಲಿಗೆ ತರಬೇತಿ, ಕಂಪ್ಯೂಟರ್ ಜ್ಞಾನ ಮುಂತಾದ ಕೌಶಲಗಳನ್ನು ಕಲಿಸಲಾಗುತ್ತಿದೆ’ ಎನ್ನುತ್ತಾರೆ.  ಮಕ್ಕಳು ತಮ್ಮಂತೆಯೇ ಸಮಸ್ಯೆ ಅನುಭವಿಸುವುದು ಬೇಡ ಎಂಬುದು ಅವರ ಕಾಳಜಿ.ಸಂಬಳವಿಲ್ಲದೇ ದುಡಿತ!

ಈ ಶಾಲೆಯಲ್ಲಿ ಶಿಕ್ಷಣ ಕಲಿಸುತ್ತಿರುವ ಶಿಕ್ಷಕರಿಗೆ ಆರು ತಿಂಗಳಿಂದ ವೇತನ ನೀಡಿಲ್ಲ. ಸಂಬಳಕ್ಕೆ ಆಲೋಚಿಸದೆ ಮಕ್ಕಳಿಗೆ ಮೊದಲು ಉತ್ತಮ ಶಿಕ್ಷಣ ನೀಡಬೇಕು ಎಂಬುದು ಇಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಅಭಿಪ್ರಾಯ. ಶಿಕ್ಷಕರಿಗೆ ಈ ಅಂಧ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ, ಈ ಮಕ್ಕಳಿಗೆ ಶಿಕ್ಷಣ ಕಲಿಸಲು ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಬೇಕೆಂದು ಅವರು ಒತ್ತಾಯಿಸುತ್ತಾರೆ.‘ಮಕ್ಕಳಲ್ಲಿ ಕಲಿಯಬೇಕು ಎಂಬ ಹಂಬಲ ಹೆಚ್ಚಿದೆ. ಆದರೆ ಅವರಿಗೆ ಅಂಧತೆ ಅಡ್ಡಿಯಾಗಿದೆ. ಅದಕ್ಕೆ ಹೆದರದೆ ಮಕ್ಕಳು ಎಲ್ಲವನ್ನು ಶ್ರದ್ಧೆಯಿಂದ ಕಲಿಯುತ್ತಿದ್ದಾರೆ. ನಾವು ಯಾವುದರಲ್ಲಿ ಕಮ್ಮಿಯಿಲ್ಲ ಎನ್ನುವ ಮಾತನ್ನು ಸತ್ಯವಾಗಿಸಲು ಹೊರಟಿದ್ದಾರೆ’ ಎಂದು ಶಿಕ್ಷಕಿ ಸಂಗೀತಾ ಖುಷಿಯಿಂದ ಹೇಳುತ್ತಾರೆ.ಅಂಧ ಮಕ್ಕಳಿಗೆ ಅಂಧ ಶಿಕ್ಷಕರೇ ಇಲ್ಲಿ ಉಪನ್ಯಾಸ ಮಾಡುತ್ತಿದ್ದಾರೆ. ಸಮಾಜದಲ್ಲಿ ನಮ್ಮ ಪಾತ್ರವೇನು ಎಂಬ ಬಗ್ಗೆ ಮಕ್ಕಳಲ್ಲಿ ಶಿಕ್ಷಕರು ಉತ್ತಮ ಮಾರ್ಗದರ್ಶನ ಮಾಡುತ್ತಿದ್ದಾರೆ. ದತ್ತು ಅವರಿಗೆ ಸಾಥ್‌ ಎನ್ನುವಂತೆ ಅವರ ಪತ್ನಿ ಹಾಗೂ ಸಂಸ್ಥೆಯ ಅಧ್ಯಕ್ಷೆ ಶೋಭಾರಾಣಿ ಇಂಗ್ಲಿಷ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‘ನನಗೂ ಚಿಕ್ಕವಯಸ್ಸಿನಲ್ಲಿಯೇ ಸಮಾಜ ಸೇವೆ ಮಾಡಬೇಕು ಎಂಬ ಆಸೆ ಇತ್ತು. ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದೆ. ದತ್ತು ಅವರೇ ನನಗೆ ಸೂಕ್ತ ಸಂಗಾತಿ ಎಂದು ತಿಳಿದು ಅವರನ್ನು ವಿವಾಹವಾದೆ’ ಎನ್ನುತ್ತಾರೆ ಉಜಿರೆಯ ಶೋಭಾರಾಣಿ.‘ಅಂಧ ಮಕ್ಕಳ ಬಡ ತಂದೆ–ತಾಯಂದಿರು ತಮ್ಮ ಮಕ್ಕಳನ್ನು ಬೆಂಗಳೂರು, ಮೈಸೂರಿನಂತಹ ದೂರದ ಊರುಗಳಿಗೆ ಕರೆದುಕೊಂಡು ಹೋಗಲು ಆಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಈ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ನೀಡಿದರೆ ಈ ಭಾಗದ ಮಕ್ಕಳಿಗೆ ಅನುಕೂಲ ಆಗುತ್ತದೆ. ಅವರಿಗೆ ನೀಡುವ ಊಟದ ಸಹಾಯಧನವನ್ನು ಹೆಚ್ಚಿಸಿದರೆ ಮಕ್ಕಳಿಗೆ ಇನ್ನು ಉತ್ತಮ ರೀತಿಯಲ್ಲಿ ಶಿಕ್ಷಣ, ಸೌಲಭ್ಯಗಳನ್ನು ನೀಡಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಬಹುದು’ ಎನ್ನುತ್ತಾರೆ ಶಾಲೆಯ ಶಿಕ್ಷಕರು.‘ಅನಕ್ಷರಸ್ಥರಾದ ನಮ್ಮ ತಾಯಿ ತಂದೆಯವರಿಗೆ ಇಬ್ಬರು ಅಂಧ ಹೆಣ್ಣು ಮಕ್ಕಳು ಹುಟ್ಟಿದ್ದರಿಂದ ಅವರ ಪರಿಸ್ಥಿತಿ ಶೋಚನೀಯವಾಗಿತ್ತು. ರೇಡಿಯೊದಲ್ಲಿ ಈ ಶಾಲೆಯ ಪರಿಚಯವಾಗಿ ಇಲ್ಲಿ ಬಂದು ಸೇರಿದೆವು. ನಮ್ಮ ಪ್ರಗತಿ ನೋಡಿ ಈಗ ಅಪ್ಪ–ಅಮ್ಮನಿಗೆ ತುಂಬಾ ಖುಷಿಯಾಗಿದೆ. ನನಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಛಲ ಬಂದಿದೆ’ ಎನ್ನುತ್ತಾಳೆ ಇಲ್ಲಿಯ ವಿದ್ಯಾರ್ಥಿನಿ ಶಾರದಾ.

ದತ್ತು ಅವರ ಸಂಪರ್ಕ ಸಂಖ್ಯೆ: 9535393900.

*

ದತ್ತು ಅವರು 1994ರಲ್ಲಿ ಕರ್ನಾಟಕ ಲೂಯಿ ಅಂಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅಂಗವಿಕಲರ ಹಲವು ಸ್ವಯಂ ಸೇವಾ ಸಂಘಗಳನ್ನು ಒಗ್ಗೂಡಿಸಿ ಹೋರಾಟ ನಡೆಸಿದ ಫಲವಾಗಿ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಾರ್ಯಾಲಯಗಳಲ್ಲಿ ಒಬ್ಬ ಅಂಧ ವ್ಯಕ್ತಿಯನ್ನು ಕುರ್ಚಿ ಹೆಣೆಯುವ ಕೆಲಸಕ್ಕಾಗಿ ನೇಮಿಸಿಕೊಳ್ಳುವಂತೆ ಹಾಗೂ ಸಂಗೀತ ತರಬೇತಿಗೆ ಅಂಧ ಶಿಕ್ಷಕರನ್ನೇ ನೇಮಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.