ಕತ್ತಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಿ: ಮಹದೇವ್

7

ಕತ್ತಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಿ: ಮಹದೇವ್

Published:
Updated:

ಚಾಮರಾಜನಗರ: `ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎಂಬ ಹೇಳಿಕೆ ನೀಡಿರುವ ಕೃಷಿ ಸಚಿವ ಉಮೇಶ ವಿ. ಕತ್ತಿ ಅವರನ್ನು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು~ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂ.ಮಹದೇವ್ ಒತ್ತಾಯಿಸಿದರು.ರಾಜ್ಯದ ಸಚಿವರು ತಮ್ಮ ಸ್ವಾರ್ಥಕ್ಕಾಗಿ ಅಖಂಡ ಕರ್ನಾಟಕ ವಿಭಜಿಸಿ ಪ್ರತ್ಯೇಕ ಕಲ್ಯಾಣ ರಾಜ್ಯ ಮಾಡಲು ಹೊರಟಿದ್ದಾರೆ. ಕೂಡಲೇ, ಸರ್ಕಾರ ಸಚಿವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.ಕರ್ನಾಟಕ ಒಗ್ಗೂಡಿಸುವುದರಲ್ಲಿ ಸಚಿವರ ತ್ಯಾಗವೇನು? ಇವರು ಮರಾಠಿ ಪ್ರೇಮಿಯಾಗಿ ಕನ್ನಡ ದ್ರೋಹಿಯಾಗಿದ್ದಾರೆ. ರಾಜ್ಯ  ಹಾಗೂ ಜನತೆ ಬಗ್ಗೆ ಮಮತೆ, ಗೌರವವಿಲ್ಲ. ತಮ್ಮ ಜವಾಬ್ದಾರಿ ಏನೆಂಬುದನ್ನು ತಿಳಿಯದೆ ಹೇಳಿಕೆ ನೀಡಿರುವ ಸಚಿವರು ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದ ಅವರು, ರಾಜ್ಯ ಸರ್ಕಾರ ಇಂತಹ ಸಚಿವರ ಪರವಾದರೆ, ಕರ್ನಾಟಕ ರಾಜ್ಯದ ಜನತೆಗೆ ದ್ರೋಹ ಮಾಡಿದಂತೆ ಎಂದು ಹೇಳಿದರು.ಮೊದಲೇ ಮೂರು ವಿಭಜನೆಯಾಗಿರುವ ಬಿಜೆಪಿ ಸರ್ಕಾರ ಪ್ರಸ್ತುತ ರಾಜ್ಯವನ್ನು ವಿಭಜಿಸಲು ಹೊರಟಿದೆ, ಆಡಳಿತ ಸರ್ಕಾರದಲ್ಲಿ ಯಾರೊಬ್ಬರಿಗೂ ನೈತಿಕ ಹಕ್ಕಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಮರ್ಪಕವಾಗಿ ಆಡಳಿತ ನಡೆಸಲಾಗದ ಇಂತಹ ಕೆಟ್ಟ ಸರ್ಕಾರ ಬೇಕಾ? ಎಂದು ಪ್ರಶ್ನಿಸಿದ ಅವರು, ಹೊಸ ಪಕ್ಷ ಕಟ್ಟುವುದಾಗಿ ಹೇಳುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಮ್ಮ ಹೊಸ ಪಕ್ಷಕ್ಕೆ ಕರ್ನಾಟಕ ಸೋಷಿಯಲ್ ಸರ್ವೆಂಟ್ ಪಾರ್ಟಿ(ಕೆಎಸ್‌ಎಸ್‌ಪಿ) ಎಂದು ಹೆಸರಿಡುವಂತೆ ಸೂಚಿಸಿದರು.ಕೇಂದ್ರ ಸರ್ಕಾರ ಮೂಲ ಕಾಂಗ್ರೆಸಿಗರು ಮತ್ತು ವಲಸೆ ಕಾಂಗ್ರೆಸಿಗರಿಂದ ತಟಸ್ಥವಾಗಿದ್ದು, ಒಬ್ಬರಿಗೊಬ್ಬರು ದಬ್ಬಾಳಿಕೆ ಮಾಡುತ್ತಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಭವಿಷ್ಯವಿಲ್ಲ ಎಂದು ಹೇಳಿದರು.ರಾಜ್ಯದ ಜನತೆ ಜೆಡಿಎಸ್ ಪಕ್ಷ ಸೇರುವ ಒಲವು ತೋರಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಕರ್ನಾಟಕದಲ್ಲಿ ಬಹುಮತದಲ್ಲಿ ಗೆಲ್ಲುವ ಅವಕಾಶವಿದೆ ಎಂದು ಭವಿಷ್ಯ ನುಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಸಿ.ವೀರೇಶ್, ಮೂಡ್ನಾಕೂಡು ಕುಮಾರ್, ಸಿ.ಎಂ.ಕೃಷ್ಣಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry