ಕತ್ತು ಹಿಸುಕಿ ಪತ್ನಿಕೊಲೆ

7

ಕತ್ತು ಹಿಸುಕಿ ಪತ್ನಿಕೊಲೆ

Published:
Updated:

ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಜೆ.ಪಿ.ನಗರ ಆರನೇ ಹಂತದ ಶಿವಾನಂದನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಪುಷ್ಪಾ (26) ಕೊಲೆಯಾದ ಮಹಿಳೆ. ಅವರ ಪತಿ ಆರೋಪಿ ವೆಂಕಟೇಶ್‌ನನ್ನು (28) ಬಂಧಿಸಲಾಗಿದೆ. ಆತ ಹೂ ವ್ಯಾಪಾರ ಮಾಡುತ್ತಿದ್ದ. ಪುಷ್ಪಾ ಅವರ ವಿವಾಹವಾಗಿ ಎರಡೂವರೆ ವರ್ಷವಾಗಿತ್ತು. ದಂಪತಿಗೆ ಮಕ್ಕಳಿರಲಿಲ್ಲ ಎಂದು ಜೆ.ಪಿ.ನಗರ ಪೊಲೀಸರು ಹೇಳಿದ್ದಾರೆ.ಪುಷ್ಪಾ ದಂಪತಿ ಮತ್ತು ಅವರ ಕುಟುಂಬ ಸದಸ್ಯರು ರಾತ್ರಿ ಊಟ ಮಾಡಿದ ಬಳಿಕ ಪ್ರತ್ಯೇಕ ಕೋಣೆಗಳಲ್ಲಿ ಮಲಗಿದ್ದರು. ಸ್ವಲ್ಪ ಸಮಯದ ನಂತರ ಎಚ್ಚರಗೊಂಡ ವೆಂಕಟೇಶ್, ಗಾಢ ನಿದ್ರೆಯಲ್ಲಿದ್ದ ಪತ್ನಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ದಂಪತಿ ಶನಿವಾರ ಬೆಳಿಗ್ಗೆ ಕೊಠಡಿಯಿಂದ ಹೊರಗೆ ಬಾರದಿದ್ದರಿಂದ ಅನುಮಾನಗೊಂಡ ಕುಟುಂಬ ಸದಸ್ಯರು ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ವೆಂಕಟೇಶ್‌ನ ಮಿದುಳಿನಲ್ಲಿ ಗಡ್ಡೆಯಾಗಿತ್ತು. ಈ ಕಾರಣಕ್ಕಾಗಿ ಆರು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಆತನ ಮಾನಸಿಕ ವರ್ತನೆಯಲ್ಲಿ ಬದಲಾವಣೆಯಾಗಿತ್ತು. ಇತ್ತೀಚೆಗೆ ಮನೆ ಬಿಟ್ಟು ಹೋಗಿದ್ದ ಆತ ಒಂದು ತಿಂಗಳ ನಂತರ ವಾಪಸ್ ಬಂದಿದ್ದ ಎಂದು ಗೊತ್ತಾಗಿದೆ.ಘಟನೆ ಸಂಬಂಧ ಪುಷ್ಪಾ ಅವರ ಅಣ್ಣ ಮಂಜುನಾಥ್ ದೂರು ಕೊಟ್ಟಿದ್ದಾರೆ. ವೆಂಕಟೇಶ್, ಆತನ ತಾಯಿ ಸಂಜೀವಮ್ಮ, ಸಂಬಂಧಿಕರಾದ ಜಗದೀಶ್ ಮತ್ತು ಯಶೋಧ ಅವರು ವರದಕ್ಷಿಣೆ ಹಣಕ್ಕಾಗಿ ತಂಗಿಗೆ ಕಿರುಕುಳ ನೀಡುತ್ತಿದ್ದರು. ಆ ನಾಲ್ಕು ಮಂದಿಯೇ ತಂಗಿಯನ್ನು ಕೊಲೆ ಮಾಡಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ. ಕೊಲೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry