ಗುರುವಾರ , ಮಾರ್ಚ್ 4, 2021
18 °C

ಕತ್ರಿನಾ ಅಂದದ ಆಂತರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕತ್ರಿನಾ ಅಂದದ ಆಂತರ್ಯ

ನುಣುಪಾದ ತ್ವಚೆ, ಜಿಮ್‌ನಲ್ಲಿ ತಿದ್ದಿ ತೀಡಿದ ದೇಹ, ನೋಡಿದಷ್ಟೂ ನೋಡಬೇಕೆನಿಸುವಂತ ಸೌಂದರ್ಯ ಕತ್ರಿನಾ ಕೈಫ್‌ ಅವರದ್ದು. ಆದರೆ ಅವರ ಪ್ರಕಾರ ‘ಪ್ರತಿಯೊಬ್ಬರಲ್ಲೂ ಹೊರಗಿನ ಸೌಂದರ್ಯಕ್ಕಿಂತಲೂ ಮಿಗಿಲಾದ ಸೌಂದರ್ಯವಿದೆ’.‘ಬಾಹ್ಯ ಸೌಂದರ್ಯವನ್ನೇ ಅತಿಯಾಗಿ ನಂಬಿಕೊಳ್ಳುವುದು ಅಥವಾ ಅದಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ಕೊಡುವುದರಲ್ಲಿ ಅರ್ಥವಿಲ್ಲ. ಸೌಂದರ್ಯ ಎನ್ನುವುದು ಒಂದು ಐಡೆಂಟಿಟಿ ಅಷ್ಟೇ. ರೂಪವನ್ನೂ ಮೀರಿದ ವ್ಯಕ್ತಿತ್ವವನ್ನು ಪ್ರತಿಯೊಬ್ಬ ಮಹಿಳೆಯೂ ಹೊಂದಬೇಕಾದ್ದು ಅತ್ಯಗತ್ಯ’ ಎಂದು ಕತ್ರಿನಾ ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾ ಚಿತ್ರೀಕರಣ, ಮಾಧ್ಯಮಗಳೊಂದಿಗೆ ಸಂವಾದ ಹೀಗೆ ಕತ್ರಿನಾ ಕೈಫ್‌ ನಿತ್ಯದ ಬದುಕು ಸಾಗುತ್ತಿದೆ. ಇದಕ್ಕಾಗಿ ತಮ್ಮ ರೂಪದ ಕುರಿತು ಹೆಚ್ಚು ಗಮನ ವಹಿಸುವುದು ಅವರಿಗೆ ಅನಿವಾರ್ಯವಾಗಿದೆಯಂತೆ.‘ಇದು ನಿಜಕ್ಕೂ ಕಷ್ಟದ ಕೆಲಸ. ನಾವೆಲ್ಲರೂ ಮನುಷ್ಯರೇ. ಬಹಳಷ್ಟು ಮಂದಿಯಂತೆ ನಮ್ಮ ಜೀವನದಲ್ಲೂ ಏಳು ಬೀಳುಗಳಿವೆ. ದಿನದ ಬಹುಪಾಲು ಸಮಯವನ್ನು ಕೂದಲು ಹಾಗೂ ತ್ವಚೆಯ ಆರೈಕೆಯಲ್ಲಿ ಕಳೆಯುವುದೇ ದೊಡ್ಡ ಸವಾಲಿನ ಕೆಲಸ. ಆದರೆ ಇದೇ ಕೆಲಸವನ್ನು ಹೊಸ ತಂಡದೊಂದಿಗೆ ಮಾಡುವಾಗ ಹಿತವೆನಿಸುತ್ತದೆ’ ಎನ್ನುವುದು ಕತ್ರಿನಾ ಅನುಭವ ನುಡಿ.ಈ ಎಲ್ಲದರ ನಡುವೆ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ಕತ್ರಿನಾ. ಉತ್ತಮ ಆಹಾರ ಸೇವನೆಯಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು. ಹೀಗಾಗಿ ನಾವು ಬಳಸುವ ಆಹಾರ ಅತ್ಯುತ್ತಮ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಬೇಕು. ಇನ್ನು ತ್ವಚೆಯ ಆರೈಕೆಗೆ ಸಂಬಂಧಿಸಿದಂತೆ ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಿಕೊಳ್ಳುವುದು, ಕೂದಲಿಗೆ ಉತ್ತಮ ಶಾಂಪೂ ಹಾಗೂ ಕಂಡಿಷನರ್‌ ಇತ್ಯಾದಿ ಆಯ್ಕೆಯಲ್ಲೂ ಸಾಕಷ್ಟು ಮುತುವರ್ಜಿ ವಹಿಸಬೇಕಾದ್ದು ಅತ್ಯಗತ್ಯ’ ಎನ್ನುವುದು ಕತ್ರಿನಾ ಅವರ ಕಿವಿಮಾತು.ಕೆಲಸದ ಹೊರತಾಗಿ ಸಾಕಷ್ಟು ಸಮಯಗಳಲ್ಲಿ ಸಾಧಾರಣ ಉಡುಪು ತೊಡುವುದನ್ನು ಇಷ್ಟಪಡುವ ಕತ್ರಿನಾ, ಹೆಚ್ಚಾಗಿ ಜೀನ್ಸ್‌ ಹಾಗೂ ಟಿ–ಶರ್ಟ್‌ ತೊಡುತ್ತಾರಂತೆ. ‘ಚೆಂದವಾಗಿ ಕಾಣಬೇಕೆಂಬ ಕಾರಣಕ್ಕೆ ಭಾರಿ ಉಡುಪು ಧರಿಸುವುದು ನನ್ನಿಂದ ಆಗದು. ಇದು ಸಿನಿಮಾಗಳ ಆಯ್ಕೆಗೂ ಅನ್ವಯಿಸುತ್ತದೆ. ಸರಳವಾಗಿ ಹಾಗೂ ಮೌಲ್ಯಯುತವಾಗಿ ಬದುಕುವುದರಲ್ಲೇ ಸಂತೋಷವನ್ನು ಕಾಣುತ್ತಿದ್ದೇನೆ’ ಎಂದೆನ್ನುತ್ತಾರೆ ಕತ್ರಿನಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.