ಕತ್ರಿನಾ ಅಂದ್ರೆ ನಂಗಿಷ್ಟ

ಭಾನುವಾರ, ಜೂಲೈ 21, 2019
22 °C

ಕತ್ರಿನಾ ಅಂದ್ರೆ ನಂಗಿಷ್ಟ

Published:
Updated:

ಬಣ್ಣ ಬಣ್ಣದ ಬೆಳಕಿನ ಮಧ್ಯೆ ರಂಗು ರಂಗಿನ ಉಡುಗೆ ತೊಟ್ಟು, ತೆಳ್ಳಗೆ, ಬೆಳ್ಳಗಿರುವ ಬೆಡಗಿ ಹದವಾಗಿ ಬೆರೆತ ಮೇಕಪ್‌ನಲ್ಲಿ ವೇದಿಕೆ ಮೇಲೆ ಬೆಕ್ಕಿನಂತೆ ನಾಲ್ಕು ಹೆಜ್ಜೆ ಇಟ್ಟುಹೋದರೆ ನೋಡುಗರ ಕಣ್ಣಿಗೆ ಹಬ್ಬ. ಕೆಲವೊಮ್ಮೆ  ಇದೇ ವೇದಿಕೆ ಇವರಿಗೆ ಅವಕಾಶದ ಬಾಗಿಲು ತೆರೆದುಕೊಡುತ್ತದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಮೇಘನಾ ಮಾತಿಗೆ ಸಿಕ್ಕಾಗ...

ಮಾಡೆಲಿಂಗ್ ಕ್ಷೇತ್ರದತ್ತ ಮನಸ್ಸು ಮಾಡಲು ಕಾರಣ...?

ಮೊದಲಿನಿಂದಲೂ ಮಾಡೆಲಿಂಗ್ ಅಂದರೆ ನನಗೆ ತುಂಬಾನೇ ಪ್ರೀತಿ. ನನ್ನೂರು ಮಂಗಳೂರು. ಅಲ್ಲಿ ಕಾಲೇಜು ದಿನಗಳಲ್ಲಿ ಚಿಕ್ಕಪುಟ್ಟ ಫ್ಯಾಷನ್ ಶೋನಲ್ಲಿ ಭಾಗವಹಿಸುತ್ತಿದ್ದೆ. ಅದೇ  ನನಗೆ ಸ್ಫೂರ್ತಿ. 

ಮನೆಯಲ್ಲಿ ಪ್ರತಿಕ್ರಿಯೆ ಹೇಗಿತ್ತು?

ಯಾರೂ ನನ್ನ ಆಸೆಗೆ ತಣ್ಣೀರೆರಚಲಿಲ್ಲ. ತುಂಬಾ ಬೆಂಬಲ ನೀಡಿದರು. ಅವರ ಸಹಕಾರವಿಲ್ಲದಿದ್ದರೆ ನಾನು ಈ ಮಟ್ಟಕ್ಕೆ ಬರಲು ಸಾಧ್ಯವಿರಲಿಲ್ಲ.

ಮೊದಲ ಶೋ ಯಾವುದು? ಅನುಭವ ಹೇಗಿತ್ತು?

ಪ್ರಸಾದ್ ಬಿದಪ್ಪ ಅವರ ಪರಿಚಯವಾದ ನಂತರ `ನ್ಯೂ ಮಾಡೆಲ್ ಶೋ~ನಲ್ಲಿ ಹೆಜ್ಜೆ ಹಾಕಿದೆ. ಆಮೇಲೆ ಅವಕಾಶಗಳ ಬಾಗಿಲು ತೆರೆದುಕೊಂಡಿತು. ಮಾಡೆಲಿಂಗ್ ಎಂದರೆ ಸುಲಭದ ಕೆಲಸವಲ್ಲ. ಹೀಲ್ಡ್ ಚಪ್ಪಲಿ ಹಾಕಿಕೊಂಡು ರ‌್ಯಾಂಪ್ ಮೇಲೆ ಕ್ಯಾಟ್‌ವಾಕ್ ಮಾಡಲು ಕಷ್ಟವಾಗುತ್ತಿತ್ತು. ಆದರೆ ಅದನ್ನೇ ಸವಾಲಾಗಿಸಿಕೊಂಡು ಮುನ್ನಡೆದೆ.

ಮಾಡೆಲ್ ಆಗಬೇಕಾದರೆ ತೆಳ್ಳಗಿರಬೇಕು ಎಂಬಿತ್ಯಾದಿ ನಿಯಮವಿರುತ್ತದೆ ಇದರ ಬಗ್ಗೆ ಏನು ಹೇಳುತ್ತಿರಿ?

ದಪ್ಪಗಿದ್ದರೆ ಶೋನಲ್ಲಿ ಭಾಗವಹಿಸುವುದು ಕಷ್ಟ. ಯಾಕೆಂದರೆ ಇಲ್ಲಿ ಹೆಚ್ಚಾಗಿ ಉಡುಪಿನ ಫ್ಯಾಷನ್ ಶೋಗಳೇ ನಡೆಯುತ್ತದೆ. ಬಳಕುವ ಬಳ್ಳಿಯಂತಿರುವವರನ್ನು ಜನ ಮೆಚ್ಚುತ್ತಾರೆ. ಆ ಸೈಜಿಗೆ ಬಟ್ಟೆಯೂ ಚೆನ್ನಾಗಿ ಕಾಣಿಸುತ್ತದೆ.

ನಿಮ್ಮ ದೇಹ ಸೌಂದರ್ಯ ಕಾಪಾಡಿಕೊಳ್ಳಲು ಏನು ಮಾಡುತ್ತಿರಿ?

ಯೋಗ ಏನೂ ಮಾಡಲ್ಲ. ಆದರೆ ಪ್ರತಿದಿನ ಜಿಮ್‌ಗೆ ಹೋಗುತ್ತೇನೆ. ಇದರಿಂದ ದೇಹ ಗಟ್ಟಿಮುಟ್ಟಾಗಿರುತ್ತದೆ. ಎಷ್ಟು ಸಾಧ್ಯವೋ ಅಷ್ಟು ಹಸಿ ತರಕಾರಿ ತಿನ್ನುತ್ತೇನೆ. ಡಯೆಟ್ ಮಾಡುವುದಿಲ್ಲ. ಈ ಕ್ಷೇತ್ರಕ್ಕೆ ಸೌಂದರ್ಯವೇ ಮುಖ್ಯವಾಗಿರುವುದರಿಂದ ತಿನ್ನುವ ಪ್ರತಿಯೊಂದು ವಸ್ತುವನ್ನೂ ಅಳೆದು ಸುರಿದು ನೋಡಬೇಕಾಗುತ್ತದೆ.

ಆಹಾರ-ತಿಂಡಿಯಲ್ಲಿ ನಿಮಗೇನಿಷ್ಟ?

ಐಸ್‌ಕ್ರೀಮ್, ಚಾಕೊಲೇಟ್ ತುಂಬಾ ಇಷ್ಟ. ತಿನ್ನಬೇಕು ಅನಿಸಿದಾಗಲೆಲ್ಲ ಚಾಕೊಲೇಟ್ ತಿನ್ನುತ್ತೀನಿ. ಎಲ್ಲದಕ್ಕೂ ನಿಯಂತ್ರಣ ಹಾಕುವುದಕ್ಕೆ ಆಗಲ್ಲ. ಆಮೇಲೆ ಅಷ್ಟೇ ವರ್ಕ್‌ಔಟ್ ಮಾಡಿದರೆ ಆಯಿತು.

ತಿಂಗಳಿಗೆ ಎಷ್ಟು ಫ್ಯಾಷನ್ ಶೋನಲ್ಲಿ ಭಾಗವಹಿಸುತ್ತಿರಿ?

ನಾನು ತಿಂಗಳಿಗೆ ಎರಡು ಮೂರು ದಿನ ಮಾತ್ರ ಫ್ಯಾಷನ್ ಶೋಗೆ ಹೋಗ್ತೀನಿ.

ಬೇರೆ ಸಮಯದಲ್ಲಿ ಏನು ಮಾಡುತ್ತೀರಿ?

ಎಂಬಿಎ ಮುಗಿಸಿದ್ದೇನೆ. ಮಾಡೆಲಿಂಗ್‌ನಲ್ಲಿಯೇ ಬದುಕು ಸಾಗಿಸೋದು ಕಷ್ಟ. ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ.

ನಗರದಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶವಿದೆಯಾ?

ಅವಕಾಶ ಇದೆ. ಆದರೆ ದೆಹಲಿ, ಬಾಂಬೆಯಲ್ಲಿ ಇದ್ದಷ್ಟು ಇಲ್ಲ. ಹಾಗಾಗಿ ಸೌಂದರ್ಯ, ಪ್ರತಿಭೆ ಇದ್ದರೂ ಕೆಲವೊಮ್ಮೆ ಸುಮ್ಮನಿರಬೇಕಾಗುತ್ತದೆ.

ಇವರೆಗೆ ಇಷ್ಟು ಶೋಸ್ ಕೊಟ್ಟಿದ್ದೀರಿ?

ಸುಮಾರು 60ಕ್ಕೂ ಹೆಚ್ಚು ಶೋ ಕೊಟ್ಟಿದ್ದೇನೆ. ಎಲ್ಲವೂ ವಿಭಿನ್ನವಾಗಿತ್ತು. ಪ್ರತಿಯೊಂದು ಶೋನಲ್ಲೂ ಹೊಸತೊಂದು ಪಾಠ ಕಲಿತಿದ್ದೇನೆ.

ಮರೆಯಲಾಗದ  ಶೋ ಯಾವುದು?

`ಬೆಂಗಳೂರು ಫ್ಯಾಷನ್ ವೀಕ್~ ನನಗೆ ತುಂಬಾ ಇಷ್ಟದ ಫ್ಯಾಷನ್ ಶೋ . ಅದರಲ್ಲಿ ಸಿಕ್ಕ ಅನುಭವ ತುಂಬಾನೇ ಚೆನ್ನಾಗಿತ್ತು.

ಇಷ್ಟದ ಮಾಡೆಲ್ ಯಾರು?

ಕತ್ರಿನಾ ಕೈಫ್ ಅಂದರೆ ಇಷ್ಟ. ಅವರು ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದವರು. ಅವರ ಹಾಗೇ ಆಗಬೇಕು ಎಂಬ ಆಸೆ ಇದೆ.

ಇಷ್ಟದ ಸ್ಥಳ ಯಾವುದು?

ಸ್ವಿಟ್ಜರ್ಲೆಂಡ್ ನನ್ನ ಇಷ್ಟದ ಸ್ಥಳ. ಅವಕಾಶ ಸಿಕ್ಕರೆ ಅಲ್ಲಿಗೆ ಹೋಗಬೇಕು.

ಪದೇಪದೇ ತಿನ್ನಬೇಕು ಅನಿಸುವ ಇಷ್ಟದ ಫುಡ್ ಯಾವುದು?

ನನಗೆ ಕೂರ್ಗಿಸ್ ಚಿಕನ್ ಘೀ ರೋಸ್ಟ್ ಎಂದರೆ ತುಂಬಾನೇ ಇಷ್ಟ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry