ಗುರುವಾರ , ಮೇ 6, 2021
32 °C

ಕಥೆ

ಡಾ. ಮಿರ್ಜಾ ಬಶೀರ್ Updated:

ಅಕ್ಷರ ಗಾತ್ರ : | |

ಬಟ್ಟೆಇಲ್ಲದ ಊರಿನಲ್ಲಿ

ಆ ನಗರದಲ್ಲಿ ಒಂದುದಿನ ಇದ್ದಕ್ಕಿದ್ದಂತೆ ಬಟ್ಟೆಗಳು ಮಾಯವಾದವು. ಬಟ್ಟೆ ಮಿಲ್ಲಿನಲ್ಲಿ ಗೋದಾಮುಗಳಲ್ಲಿ ಅಂಗಡಿಗಳಲ್ಲಿ ಬಟ್ಟೆಗಳು, ಸಿದ್ದಉಡುಪುಗಳು ನಾಪತ್ತೆಯಾದವು. ದರ್ಜಿ ಅಂಗಡಿಗಳಲ್ಲಿ ಕತ್ತರಿಸಿಟ್ಟಿದ್ದ ಬಟ್ಟೆ, ಹೊಲೆದಿಟ್ಟಿದ್ದ ಉಡುಪು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆತುಂಡುಗಳು ಇಲ್ಲವಾದವು. ಜೋಪಡಿಪಟ್ಟಿಗಳ ಚಿಂದಿ ಬಟ್ಟೆಗಳಿಂದ ಹಿಡಿದು ಭವ್ಯಬಂಗಲೆಗಳ ಲಕ್ಷಾಂತರ ರೂಪಾಯಿಯ ಬಟ್ಟೆಗಳು ಕಣ್ಮರೆಯಾದವು. ಅಷ್ಟೆ ಅಲ್ಲ, ಹೆಂಗಸರು ಗಂಡಸರು ಮಕ್ಕಳುಮರಿ ವಯಸ್ಸಾದ ಮುದುಕ ಮುದುಕಿಯರ ಮೈಮೇಲಿನ ಬಟ್ಟೆಗಳು ಒಂದೂ ಬಿಡದಂತೆ ಅದೃಶ್ಯವಾದವು. ನಗರದಲ್ಲಿ ಒಂದೇ ಒಂದು ನರಪಿಳ್ಳೆಯನ್ನು ಬಿಡದಂತೆ ಪ್ರತಿಯೊಬ್ಬರೂ ಇದ್ದಕ್ಕಿದ್ದಂತೆ ಬೆತ್ತಲಾದರು.ಅಲ್ಲೊಬ್ಬ ಪ್ರಭಾವಿ ಮಂತ್ರಿ ದೊಡ್ಡ ಮೈದಾನದಲ್ಲಿ ಸುಳ್ಳು ಭರವಸೆಗಳ ಭಾಷಣ ಬಿಗಿಯುತ್ತಿದ್ದವನು ಬೆತ್ತಲಾದದ್ದೇ `ಅಯ್ಯಯ್ಯಪ್ಪೋ' ಎಂದು ಕಿರುಚಿ ವೇದಿಕೆಯಿಂದ ಧುಮುಕಿ ತನ್ನ ಕಾರಿನ ಬಳಿಗೆ ಓಡಿದ. ಅದುವರೆಗೆ ಅವನ ಭಾಷಣ ಕೇಳುತ್ತಿದ್ದ ಸಾವಿರಾರು ಜನರು ಬೆತ್ತಲಾದದ್ದೇ ನಾಚಿಕೆಯಲ್ಲಿ ಗಾಬರಿಯಲ್ಲಿ ದಿಕ್ಕಾಪಾಲಾಗಿ ಓಡತೊಡಗಿದರು. ಜನರು ತೊಟ್ಟಿದ್ದ ಬಟ್ಟೆಯ ಕ್ಯಾನ್ವಾಸ್ ಬೂಟುಗಳು ಮಾಯವಾಗಿದ್ದವು. ಲೇಸುಗಳು ನಾಪತ್ತೆಯಾಗಿ ಚರ್ಮದ ಬೂಟುಗಳು ಸಡಿಲವಾಗಿದ್ದರಿಂದ ಜನರು ಅವುಗಳನ್ನು ಅಲ್ಲಲ್ಲೇ ಎಸೆದು ಓಡಿದರು. ಇಡೀ ಮೈದಾನವೇ ಬೂಟುಚಪ್ಪಲಿಗಳಿಂದ ತುಂಬಿ ಹೋಯಿತು. ಕಾಲ್ತುಳಿತಕ್ಕೆ ಸಿಕ್ಕು ಹಲವರು ಕೈಕಾಲು ಮುರಿದುಕೊಂಡರು. ಕೆಲವರು ಸತ್ತೇಹೋದರು. ಭಾಷಣ ಕೇಳುತ್ತ ಸೀಟಿ ಚಪ್ಪಾಳೆ ಹೊಡೆಯುತ್ತಿದ್ದವರೆಲ್ಲ ನೆಪಮಾತ್ರಕ್ಕೆ ಹಾಗೆ ಮಾಡುತ್ತಿದ್ದರು. ನಿಜವಾಗಿಯೂ ಅವರಿಗೆಲ್ಲ ಮಂತ್ರಿಯ ಸುಳ್ಳು, ಭ್ರಷ್ಟಾಚಾರದ ಬಗ್ಗೆ ಸಿಟ್ಟಿತ್ತು. ಅಸಹಾಯಕ ಸ್ಥಿತಿಯಲ್ಲಿದ್ದ ಮಂತ್ರಿಯನ್ನು ಕಂಡ ಕೂಡಲೆ ತಮ್ಮ ಬೆತ್ತಲೆಯನ್ನು ಕ್ಷಣಮರೆತು ತಲಾ ಒಂದೊಂದು ಲಾತ ಬಿಟ್ಟರು. ಅವನ ಭರ್ಜರಿ ಕಾರನ್ನು ಪುಡಿಪುಡಿ ಮಾಡಿದರು. ಗಂಟೆಗಟ್ಟಲೆ ಕಾದಿದ್ದ ಅವರಿಗೆ ತಿಂಡಿ ಪೊಟ್ಟಣವಾಗಲಿ ಕುಡಿಯುವ ನೀರಾಗಲಿ ಸಿಕ್ಕಿರಲಿಲ್ಲ. ತಲೆಗೆ ಇನ್ನೂರು ರೂಪಾಯಿ ಕೊಡುವ ವಾಗ್ದಾನವು ಹುಸಿಹೋಗಿತ್ತು. ಹಣ್ಣುಗಾಯಿ ನೀರುಗಾಯಿಯಾಗಿದ್ದ ಮಂತ್ರಿ ಮನೆಯತ್ತ ತೆವಳತೊಡಗಿದ. ಸ್ವಲ್ಪ ಹೊತ್ತಿನಲ್ಲಿ ಅವನನ್ನು ಮಂತ್ರಿ ಎಂದು ಗುರುತಿಸಲು ಯಾರಿಂದಲೂ ಸಾಧ್ಯವೆಯಿರಲಿಲ್ಲ. ಬೆತ್ತಲೆಯಾಗಿ ನೀರಾನೆಯಂತೆ ಕಾಣುತ್ತಿದ್ದ ಅವನ ಮೈಕೈಗೆಲ್ಲಾ ಕೆಸರು ಮಣ್ಣು ಮೆತ್ತಿಕೊಂಡಿತ್ತು. ಅಷ್ಟೇಅಲ್ಲ. ತೆವಳುತ್ತಲೇ ಅವನು- `...ಮಂತ್ರಿಗೆ ಧಿಕ್ಕಾರ' ಎಂದು ತನ್ನ ವಿರುದ್ಧ ತಾನೇ `ಧಿಕ್ಕಾರ' ಕೂಗಿಕೊಳ್ಳುತ್ತಿದ್ದುದರಿಂದ ಸಜೀವವಾಗಿ ಮನೆ ಸೇರಿದ. ಅವನ ಅರಮನೆಯಂಥ ಮನೆಯ ಕಿಟಕಿ ಬಾಗಿಲುಗಳೆಲ್ಲಾ ಹಾರೊಡೆದುಕೊಂಡಿದ್ದವು. ಅವನ ಹೆಂಡತಿ ಮತ್ತು ಅಸಂಖ್ಯಾತ ಮಕ್ಕಳು ಮನೆಯ ಮೂಲೆಮೂಲೆಗಳಲ್ಲಿ, ಬಾಗಿಲುಗಳ ಸಂದಿಗಳಲ್ಲಿ, ಮಂಚ ಮೇಜು ಸೋಫಾಸೆಟ್ಟುಗಳ ಅಡಿಯಲ್ಲಿ ಅವಿತುಕೊಂಡಿದ್ದರು. ಕೆಲವರು ರೂಮುಗಳಲ್ಲಿ ಸೇರಿಕೊಂಡು ಬಾಗಿಲು ಮುಚ್ಚಿ ಯಾರು ಕರೆದರೂ ಹೊರ ಬರದಂತಾಗಿದ್ದರು. ಅವರಲ್ಲಿ ಯಾರೂ ಬೆತ್ತಲೆ ಎದ್ದು ಬಂದು ಕಿಟಕಿ ಬಾಗಿಲು ಮುಚ್ಚಲು ತಯಾರಿರಲಿಲ್ಲ. ಮನೆಯಲ್ಲಿ ಕೆಲಸಕ್ಕಿದ್ದ ಆಳುಗಳು ಓಡಿ ಹೋಗುವಾಗ ಕೈಗೆ ಸಿಕ್ಕ ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದರು.ರಸ್ತೆಗಳಲ್ಲಿ ಓಡುತ್ತಿದ್ದ ವಾಹನಗಳ ಚಾಲಕರು ಬೆತ್ತಲಾದದ್ದೇ ಯರ್ರಾಬಿರ್ರಿ ವರ್ತಿಸತೊಡಗಿದರು. ಬೈಕುಗಳು ಪಲ್ಟಿ ಹೊಡೆದವು. ಬಸ್ಸು ಕಾರು ಲಾರಿಗಳು ಅಡ್ಡಾದಿಡ್ಡಿ ಓಡಿ ಅಪಘಾತಗಳಾದವು. ನಗರ ಸಾರಿಗೆ ಬಸ್ಸಿನಲ್ಲಿ ಒತ್ತೊತ್ತಿ ನಿಂತುಕೊಂಡು ಸೆಂಟು ಪೂಸಿಕೊಂಡು ಘಮಘಮಿಸುತ್ತ ಪ್ರಯಾಣಿಸುತ್ತಿದ್ದ ಗಂಡಸು ಹೆಂಗಸರ ಸ್ಥಿತಿ ವರ್ಣಿಸಲಸದಳವಾಗಿತ್ತು. ಸಂಪ್ರದಾಯಸ್ಥ ಮಹಿಳೆಯೊಬ್ಬಳು ಬೆತ್ತಲೆಯ ಆಘಾತ ತಡೆಯಲಾರದೆ ದೇವರ ಹೆಸರು ಹೇಳಿ ಮರುಕ್ಷಣವೇ ಪ್ರಾಣಬಿಟ್ಟಳು.ಬಟ್ಟೆ ಮರೆಯಾದ ಕ್ಷಣದಲ್ಲಿ ಮನೆಯಲ್ಲಿದ್ದವರು ಮೂಲೆಮುಡಿಕೆಗಳಲ್ಲಿ ಅವಿತು ಸುಧಾರಿಸಿಕೊಂಡರು. ಆದರೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜನರು ಬೆತ್ತಲಾದ್ದ್ದದೇ ಹುಚ್ಚು ಹಿಡಿದವರಂತೆ ತಮ್ಮ ಮರ್ಮಾಂಗ ಮತ್ತು ಮುಖಗಳನ್ನು ಆದಷ್ಟು ಮುಚ್ಚಿಕೊಳ್ಳುತ್ತ ಓಡತೊಡಗಿದರು. ಹಲವರು ಬಿದ್ದರು. ಕೆಲವರು ಎದ್ದರು. ಎದ್ದವರು ತಟ್ಟರಿಸುತ್ತ ಎಲ್ಲಾದರೂ ಬಚ್ಚಿಟ್ಟುಕೊಳ್ಳಲು ದೌಡಾಯಿಸತೊಡಗಿದರು. ಕೈಗಳಲ್ಲಿ ಮರ್ಮಾಂಗವನ್ನು ಮುಚ್ಚಿಕೊಂಡು ಓಡುತ್ತಿದ್ದರಿಂದ ಅವರ ಓಟಕ್ಕೆ ಬೇರೆಯದೇ ಶೈಲಿ ಬಂದಿತ್ತು. ಎಲ್ಲಿ ಮರೆಯಿತ್ತೋ ಅಲ್ಲಿ ಅವಿತರು. ಕಂಡ ಕಟ್ಟಡಗಳತ್ತ ನುಗ್ಗಿದರು.ಬೆತ್ತಲೆ ಮರೆಸಿಕೊಳ್ಳಲು ಅವರಿಗೆ ಜಾಗ ಬೇಕಿತ್ತು. ಹೆಣ್ಣುಮಕ್ಕಳ ಗೋಳು ಮುಗಿಲು ಮುಟ್ಟಿತ್ತು. ಅವರೆಲ್ಲ ಯಾವುದೇ ಕಾರಣಕ್ಕೆ ಒಂಟಿಯಾಗಿ ಗಂಡಸರ ಕೈಗೆ ಸಿಗಬಾರದೆಂದು ಗುಂಪುಗುಂಪಾಗಿ ಚಲಿಸತೊಡಗಿದರು. ಬೆತ್ತಲೆಯಾಗಿ ಬರಿಗಾಲಲ್ಲಿ ಚಲಿಸುತ್ತಿದ್ದ ಅವರು ಹತ್ತಿರದಲ್ಲಿದ್ದ ಸ್ಪೋರ್ಟ್ಸ್ ಅಂಗಡಿಗೆ ನುಗ್ಗಿ ಕೈಗೆ ಸಿಕ್ಕ ಕ್ರಿಕೆಟ್ ಬ್ಯಾಟ್, ಸ್ಟಂಪ್, ಹಾಕಿ ಸ್ಟಿಕ್‌ಗಳನ್ನು ಹಿಡಿದು ನಡೆದರು. ಭೀತಿಯಿಂದ ದುಃಖದಿಂದ ಒಮ್ಮೆಲೇ ಎರಗಿದ ಆಘಾತದಿಂದ ಅವರೆಲ್ಲ ಅರ್ಧಪ್ರಾಣವಾಗಿದ್ದರು. ದೂರದಿಂದಲೇ ಕ್ಯಾಮೆರಾಗಳಲ್ಲಿ ಮೊಬೈಲುಗಳಲ್ಲಿ ತಮ್ಮ ನಗ್ನತೆಯನ್ನು ಅನೇಕ ಗಂಡಸರು ಸೆರೆಹಿಡಿಯುತ್ತಿದ್ದುದು ಅವರಿಗೆ ಗೊತ್ತಿತ್ತು. ಮುಖಮುಚ್ಚಿ ನಡೆಯುವುದೊಂದೇ ಅವರಲ್ಲಿದ್ದ ಉಪಾಯ. ಆದರೂ ಕ್ಯಾಮೆರಾ ಹಿಡಿದು ಹತ್ತಿರಬಂದ ಪೋಕರಿಗಳಿಗೆ ಕೈಯಲ್ಲಿದ್ದ ಅಸ್ತ್ರಗಳಿಂದ ಸರಿಯಾಗಿ ಥಳಿಸಿದರು.ಕಚೇರಿ, ಆಸ್ಪತ್ರೆಗಳ ಸ್ಥಿತಿಯೂ ಬೇರೆಯಾಗಿರಲಿಲ್ಲ. ನೌಕರರು ಬೀರುಗಳಲ್ಲಿದ್ದ ಫೈಲುಗಳನ್ನು ತೆಗೆದು ಕೆಳಗೆಸೆದು ಒಳಸೇರಿದರು. ಲಕ್ಷಾಂತರ ಸಂಬಳದ ದೊಡ್ಡ ಅಧಿಕಾರಿ ಮೆಟ್ಟಿನ ಗೂಡಿನಲ್ಲಿ ಬೆತ್ತಲೆ ಮರೆಸಿಕೊಂಡು ಏದುಸಿರು ಬಿಡುತ್ತಿದ್ದ. ದೊಡ್ಡ ಅಧಿಕಾರಿ, ಸರ್ಜನ್, ಸೂಪರ್ ಸ್ಪೆಶಲಿಸ್ಟ್ ಇತ್ಯಾದಿಗಳೆಲ್ಲವನ್ನು ಬೆತ್ತಲೆ ಕ್ಷಣಾರ್ಧದಲ್ಲಿ ಇಲ್ಲವಾಗಿಸಿತ್ತು. ಹೇಲು, ಉಚ್ಚೆಗಳನ್ನು ಬಾಚುವ ಸೇವಕರ ಜೊತೆ ಆಸ್ಪತ್ರೆ ನಿರ್ದೇಶಕರು ಮಂಚದಡಿ ನೆಲದಮೇಲೆ ಬೆತ್ತಲೆ ಕುಳಿತಿದ್ದರು. ಸೇವಕರು ನಿರ್ದೇಶಕರಿಗೆ ಅಡಗಿಕೊಳ್ಳಲು ಅಕ್ಕಪಕ್ಕದಲ್ಲಿ ಜಾಗತೋರಿಸಿದರೇ ವಿನಹ ತಲೆಬಾಗಿ ನಮಸ್ಕರಿಸಿ ಎದ್ದು ಹೋಗಲಿಲ್ಲ.ಹುಚ್ಚಾಸ್ಪತ್ರೆಯಲ್ಲಿ ಬೆತ್ತಲಾದ ಕೂಡಲೆ ವೈದ್ಯರೆಲ್ಲ ಹುಚ್ಚರಂತೆ ವರ್ತಿಸಿದರೆ ಹುಚ್ಚರೆಲ್ಲ ಯಾವುದೇ ಗಲಿಬಿಲಿ ತೋರದೆ ಎಂದಿನಂತಿದ್ದರು. ಬೆತ್ತಲೆಯಲ್ಲಿ ವೈದ್ಯರಾರೋ ಹುಚ್ಚರಾರೋ ತಿಳಿಯದಂತಾಗಿತ್ತು. ಬಡಬಗ್ಗರ ಮನೆಗಳಲ್ಲಿ ಬಟ್ಟೆಯ ತೊಟ್ಟಿಲಲ್ಲಿ ಸುಖ ನಿದ್ದೆಯಲ್ಲಿದ್ದ ಪುಟ್ಟ ಕಂದಮ್ಮಗಳು ತೊಟ್ಟಿಲು ಮಾಯವಾದ ಕೂಡಲೆ ನೆಲಕ್ಕೆ ಬಿದ್ದು ಚೀರತೊಡಗಿದವು.ಜೈಲಿನ ಉಸ್ತುವಾರಿಯಲ್ಲಿದ್ದ ಪೋಲೀಸರು ಬೆತ್ತಲಾದದ್ದೇ ಗಲಿಬಿಲಿಯಲ್ಲಿ ಏನಾಗುತ್ತಿದೆಯೆಂಬುದನ್ನು ಅರಿತುಕೊಳ್ಳುವಷ್ಟರಲ್ಲಿ ಪರಿಸ್ಥಿತಿಯ ಪ್ರಯೋಜನವನ್ನು ಪಡೆದುಕೊಂಡ ಕೆಲವು ಕಳ್ಳರು ಜೈಲಿಂದ ಪಾರಾಗಿ ಓಡತೊಡಗಿದರು. ಕಳ್ಳರ ಮತ್ತು ಪೋಲಿಸರ ಸಮವಸ್ತ್ರ ಮಾಯವಾಗಿದ್ದರಿಂದ ಅವರ ನಡುವಿನ ವ್ಯತ್ಯಾಸ ಅಳಿಸಿಹೋಗಿತ್ತು.ನಗರದ ಎಲ್ಲೆಲ್ಲೂ ಬಹಳಹೊತ್ತು ಬರೀ ಚೀರಾಟ, ಕೂಗಾಟವೇ ತುಂಬಿಹೋಗಿತ್ತು. ಜನರಿಗೆ ಅವಿತುಕೊಳ್ಳಲು ಜಾಗ ಸಿಕ್ಕಂತೆ ಸದ್ದುಗದ್ದಲ ಕಡಿಮೆಯಾಗತೊಡಗಿತು. ಹರೆಯದವರೆಲ್ಲಾ ಅವಿತ ನಂತರ ವಯಸ್ಸಾದವರು ಪಿಸುಮಾತುಗಳಲ್ಲಿ ಜಾಗಗಳನ್ನು ಹುಡುಕಿ ಹೊರಟಿದ್ದರು.ಈಜುಕೊಳವೊಂದರ ಬಳಿ ಐಟಂ ಸಾಂಗಿನ ಚಿತ್ರೀಕರಣ ನಡೆಯುತ್ತಿತ್ತು. ಚಡ್ಡಿ ಧರಿಸಿ ಡ್ಯಾನ್ಸ್ ಮಾಡುತ್ತಿದ್ದ ನಟಿ, ತನ್ನ ಚಡ್ಡಿಯೂ ನಾಪತ್ತೆಯಾದೊಡನೆ ಹುಚ್ಚುಹಿಡಿದವಳಂತೆ ಆಡತೊಡಗಿದಳು. `ಆಹಾ! ಎಲ್ಲಾ ಐಟಂ ಡ್ಯಾನ್ಸ್‌ಗಿನ್ನಾ ಇದು ಬೊಂಬಾಟ್' ಎಂದು ಜೊಲ್ಲು ಸುರಿಸುತ್ತಾ ಚಿತ್ರೀಕರಿಸತೊಡಗಿದ ಕ್ಯಾಮೆರಾಮನ್ ಮತ್ತು ನಿರ್ದೇಶಕರು ತಮ್ಮ ಬಂಡವಾಳವೂ ಬಯಲಾಗಿರುವುದನ್ನು ಕಂಡು ಕ್ಯಾಮೆರಾವನ್ನು ಇದ್ದಲ್ಲೇ ಬಿಟ್ಟು ದಿಕ್ಕಾಪಾಲಾದರು. ನಟಿಯನ್ನು `ಸಿಸ್ಟರ್ ಸಿಸ್ಟರ್' ಎಂದು ಕರೆಯುತ್ತ ಅವಳ ಹಿಂದೆ ಮುಂದೆ ಓಡಾಡುತ್ತಿದ್ದ ಚಿತ್ರತಂಡದ ಕೆಲವರು ಇದೇ ಸುಸಮಯವೆಂದು ಬಗೆದು ಅಂಥ ದಿಕ್ಕೆಟ್ಟ ಪರಿಸ್ಥಿತಿಯಲ್ಲಿಯೂ ರಾಕ್ಷಸರಂತೆ ನಟಿಯ ಮೇಲೆರಗಿ ಅವಳು ಹೆಣವಾಗುವತನಕ ಸರತಿಯ ಮೇಲೆ ಅತ್ಯಾಚಾರವೆಸಗಿದರು. ಕೆಲವರು ಈ ದೃಶ್ಯವನ್ನು ಸೆರೆಹಿಡಿದು ಸಂಭ್ರಮಿಸತೊಡಗಿದರು. ಈ ಪಾಪಿಗಳು ನಗರದ ಯಾವ್ಯಾವುದೋ ಮೂಲೆಯಲ್ಲಿ ಸುಳಿವು ಸಿಗದಂತೆ ಅವಿತರು. ನಡೆದ ನೂರಾರು ಅತ್ಯಾಚಾರ ಪ್ರಕರಣಗಳಲ್ಲಿ ಒಂದಾದರೂ ದಾಖಲಾಗಲಿಲ್ಲ.ದೂರದರ್ಶನದ ಎಲ್ಲಾ ವಾಹಿನಿಯವರು ತಮ್ಮ ಕಾರ್ಯಕ್ರಮಗಳನ್ನು ಬರಖಾಸ್ತು ಮಾಡಿ ಸಿಕ್ಕ ಗೂಡು ಸೇರಿದರು. ಬ್ರೇಕಿಂಗ್ ನ್ಯೂಸ್ ಕೊಡಲು ಅವರ ಜೀವವೇನೋ ತಹತಹಿಸುತಿತ್ತು ಆದರೆ ತಮ್ಮ ಮರ್ಯಾದೆ ನಾಡಿನ ಮನೆಮನೆಗೆ ಬಿತ್ತರವಾಗುವುದನ್ನು ನೆನೆದು ತೆಪ್ಪಗಾದರು. ಆದರೂ ಕೆಲವರು ಇಂಥ ಅವಕಾಶವನ್ನು ಕಳೆದುಕೊಳ್ಳದೆ ಆಯ್ದ ಸುಂದರಿಯರ ದೇಹ ಸೌಂದರ್ಯವನ್ನು ಗುಪ್ತವಾಗಿ ರೆಕಾರ್ಡ್ ಮಾಡಿಕೊಂಡು ಸೂಕ್ತಸಮಯದಲ್ಲಿ ಲಾಭಗಿಟ್ಟಿಸುವ ಕನಸು ಕಾಣತೊಡಗಿದರು.ಕೂಡಲೇ ಮೊಬೈಲ್‌ನಲ್ಲಿ ಮಾತನಾಡಿದವರಿಗೆ ಆಚೆಬದಿಯಿಂದ ಸರಿಯಾದ ಉತ್ತರಗಳು ಸಿಗಲಿಲ್ಲ. ಅನೇಕ ಜನ ಗಡಿಬಿಡಿಯಲ್ಲಿ ಮೊಬೈಲ್ ಕಳೆದುಕೊಂಡಿದ್ದರು. ಇದ್ದವರು ಸಿಕ್ಕಸಿಕ್ಕವರೊಡನೆ ಅಸಂಬದ್ಧವಾಗಿ ಬಡಬಡಿಸಿದರು. ಇಡೀ ನಗರವೇ ಹುಚ್ಚು ಹಿಡಿದಂತೆ ವರ್ತಿಸತೊಡಗಿತು.

ಚಲನಚಿತ್ರ ಮಂದಿರಗಳು ಖಾಲಿ. ರಂಗ ಮಂದಿರಗಳು ಖಾಲಿ. ಮಟನ್ ಚಿಕನ್ ಮೀನು ತರಕಾರಿ ಮಾರ್ಕೆಟುಗಳು ಚಿಕ್ಕ ದೊಡ್ಡ ಮಾಲ್‌ಗಳು ಖಾಲಿ. ಶಾಲಾ ಕಾಲೇಜು ಕಚೇರಿಗಳು ಖಾಲಿ. ರಸ್ತೆಮೇಲೆ ಎಲ್ಲೆಂದರಲ್ಲಿ ನಿಂತಿರುವ ಕಾರು ಜೀಪು ಬಸ್ಸು ಇತ್ಯಾದಿ ಅವುಗಳ ಸೀಟು ಕೆಳಗೆ ಬಚ್ಚಿಟ್ಟುಕೊಂಡಿರುವ ಬೆತ್ತಲೆ ದೇಹಗಳು. ಸುಲಭ್ ಶೌಚಾಲಯದ ಸ್ನಾನಗೃಹ, ಕಕ್ಕಸ್ಸುಗಳ ಒಳಗಿದ್ದವರು ಒಳಗೇ ಬಂಧಿಗಳಾದರು.ಸುದ್ದಿ ಕೇಳಿ ಅಕ್ಕಪಕ್ಕದ ಊರುಗಳಿಂದ ನಗರಕ್ಕೆ ಆಗಮಿಸಿದವರು, ನಗರ ಹತ್ತಿರವಾಗುತ್ತಿದ್ದಂತೆ ಉಟ್ಟ ಬಟ್ಟೆಗಳು ಮಾಯವಾಗಿ ಬೆತ್ತಲಾದರು. ಬೆತ್ತಲಾದದ್ದೇ ತಮ್ಮನ್ನು ತಾವು ಶಪಿಸಿಕೊಳ್ಳುತ್ತ ಅವಿತುಕೊಳ್ಳಲು ಜಾಗ ಹುಡುಕಿ ಓಡಿದರು. ಈ ಸುದ್ದಿ ಪ್ರಚಾರವಾದಂತೆಲ್ಲ ವಾಹನಗಳ ಚಾಲಕರು ಆ ನಗರವನ್ನು ತಪ್ಪಿಸಿ ಬೇರೆಮಾರ್ಗಗಳ ಮೂಲಕ ಗುರಿತಲುಪಲು ತಮ್ಮ ಬಟ್ಟೆಗಳ ಮೇಲೆ ಒಂದು ಕಣ್ಣಿರಿಸಿ ವೇಗವಾಗಿ ಸಾಗಿದರು.ನಗರದ ಅಂಚಿನಲ್ಲಿದ್ದ ಕೆಲವು ರೈತರು ಕೂಲಿ ಹುಡುಕಿಕೊಂಡು ನಗರದತ್ತ ಹೊರಟ್ಟಿದ್ದರು. ನಿಜಕ್ಕೂ ಅವರು ರೈತರಾಗಿರಲಿಲ್ಲ. ಯಾಕೆಂದರೆ ರಾಕ್ಷಸನಂತೆ ಬೆಳೆಯುತ್ತಿದ್ದ ಆ ನಗರ ಅವರ ಹೊಲ ಗದ್ದೆ ತೋಟಗಳನ್ನು ನುಂಗಿ ನೀರುಕುಡಿದಿತ್ತು. ಹೊಲದ ಮಾರಾಟದಿಂದ ಬಂದ ಹಣ ಕೆಲದಿನಗಳಲ್ಲಿ ಖಾಲಿಯಾಗಿ ರೈತರು ಭಿಕಾರಿಗಳಾಗಿದ್ದರು. ಅವರ ಮಕ್ಕಳೆಲ್ಲ ನಗರದ ಸೆಳೆತಕ್ಕೆ ಸಿಕ್ಕು ಬೀದಿಪಾಲಾಗಿದ್ದರು. ತಮ್ಮ ನಾಡಿನ್ಲ್ಲಲೇ ತಬ್ಬಲಿಗಳಾಗಿದ್ದ ರೈತರು ಉಟ್ಟಿದ್ದ ಹರಕು ನಿಕ್ಕರ್ ಬನಿಯನ್ನುಗಳು ಮಾಯವಾದದ್ದೇ `ಇದೇನು ಹೊಸ ರೋಗವೋ ಈ ನಗರಕ್ಕೆ' ಎಂದು ಶಪಿಸುತ್ತ ಕಂಡ ರಸ್ತೆ ಹಿಡಿದು ಓಡತೊಡಗಿದರು.ಪ್ಲಾಸ್ಟಿಕ್ ಹಾಳೆ, ಪೇಪರ್, ತಗಡು ಮುಂತಾದ ವಸ್ತುಗಳಿಂದ ಬೆತ್ತಲೆಯನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದರೆ ಆ ವಸ್ತುಗಳೂ ಮಾಯವಾಗುತ್ತಿದ್ದವು. ಬೆತ್ತಲೆ ಎಂಬುದು ಅನುಭವಿಸಲೇಬೇಕಾದ ಅನಿವಾರ್ಯ ಅನಿಷ್ಟದಂತೆ ಕಾಡತೊಡಗಿತು. ವಜ್ರಖಚಿತವಾದ ಬಂಗಾರದ ಚಡ್ಡಿಯನ್ನು ಹೊಲಿಸಿದ್ದ ಶ್ರೀಮಂತನೊಬ್ಬನ ಚಡ್ಡಿ ಉಟ್ಟೊಡನೆ ಮಾಯವಾಯಿತು. ಶ್ರೀಮಂತ ಕೂಡಲೆ ತನ್ನ ಪರಮಾಪ್ತ ಧರ್ಮಗುರುವಿಗೆ ಫೋನಾಯಿಸಿದ. ಆ ಧರ್ಮಗುರುವಿನ ಪರಿಸ್ಥಿತಿಯೂ ಉತ್ತಮವಾಗಿರಲಿಲ್ಲ. ಅವರೂ ಸಂಪೂರ್ಣ ಬೆತ್ತಲಾಗಿದ್ದರು. ಕಾರಣ ಅರಿಯದೆ ಕಂಗಾಲಾಗಿದ್ದರು. ಅವರಿಗೀಗಾಗಲೇ ನೂರಾರು ದೂರವಾಣಿ ಕರೆಗಳು ಬಂದಿದ್ದವು. ಮಂತ್ರಿ ಮಹೋದಯರು, ಶ್ರೀಮಂತ ಶಿಷ್ಯರು, ಜನಸಾಮಾನ್ಯರು, ಸ್ನೇಹಿತರು, ವೈರಿಗಳು, ತವಕದಲ್ಲಿ ಭರವಸೆಯಲ್ಲಿ ಕರೆ ಮಾಡಿದ್ದರು. ಉತ್ತರ ಗೊತ್ತಿಲ್ಲದ ಗುರುಗಳು ಫೋನನ್ನು ಎತ್ತಿಕೊಳ್ಳಲಿಲ್ಲ. ಸದ್ಯದ ಘಟನೆ ಬಿಡಿಸಲಾರದ ಕಗ್ಗಂಟಾಗಿದ್ದು, ಏನುಹೇಳಿದರೂ ಸುಳ್ಳಾಗಬಹುದಾದ ಸಾಧ್ಯತೆಯನ್ನು ಮನಗಂಡು ಮೌನವ್ರತ ವಹಿಸಿರುವ ಬಗ್ಗೆ ಶಿಷ್ಯರಿಂದ ಪ್ರಚಾರ ಪಡಿಸಿದರು.ವೈರಾಗ್ಯ, ಬ್ರಹ್ಮಚರ್ಯ ಬೋಧಿಸುತ್ತಿದ್ದ ಹಲವಾರು ಗುರುವರ್ಯರು ತಮ್ಮ ಮನೋನಿಗ್ರಹದ ಬಗ್ಗೆ ನಂಬಿಕೆ ಸಾಲದೆ ಬೆತ್ತಲೆ ಹೆಣ್ಣು ಮಕ್ಕಳ ಎದುರು ಅಕಸ್ಮಾತ್ತಾಗಿಯೂ ಬರಬಾರದೆಂದು ತೀರ್ಮಾನಿಸಿ ಏಕಾಂತದಲ್ಲಿಯೇ ಇರಲು ನಿರ್ಧರಿಸಿದರು.ಅನೇಕ ನಾಗರಿಕರು ನಗರದಲ್ಲೆಲ್ಲಾ ಜನಪ್ರಿಯರಾಗಿದ್ದ ಜ್ಯೋತಿಷಿಗೆ ಫೋನು ಮಾಡಿದರು. ಏಕೆ ಈ ಸ್ಥಿತಿ ಬಂದಿದೆ? ಇನ್ನೆಷ್ಟು ದಿನ ಈ ಪರಿಸ್ಥಿತಿ ಮುಂದುವರಿಯಬಹುದು? ಈ ಸಂಕಷ್ಟದ ಪರಿಹಾರಕ್ಕೆ ಏನು ಮಾಡಬೇಕು? ಮುಂತಾದ ಪ್ರಶ್ನೆಗಳಿಗೆ ಅವರ ಬಳಿ ಯಾವುದೇ ಉತ್ತರವಿರಲಿಲ್ಲ. ಬಟ್ಟೆ ನಾಪತ್ತೆ ಪ್ರಸಂಗದಿಂದ ಜ್ಯೋತಿಷ್ಯದಲ್ಲಿ ತಮ್ಮ ಸ್ಥಾನಮಾನ ನಶಿಸಿಹೋಗುತ್ತಿರುವುದರ ಬಗ್ಗೆ ಅವರಿಗೆ ಸಿಟ್ಟೇರಿ, ಉತ್ತರಿಸಲಾಗದೆ ಕಟಕಟ ಹಲ್ಲು ಕಡಿಯತೊಡಗಿದರು.ಇಕ್ಕಟ್ಟಿಗೆ ಸಿಲುಕಿದ ಮಂತ್ರಿ ಮಹೋದಯರು ನಗರದಲ್ಲಿದ್ದ ಹಿರಿಯರನ್ನು, ಶತಾಯುಷಿಗಳನ್ನು ಸಂಪರ್ಕಿಸಿದರು. ಅವರಲ್ಲನೇಕರು ಮನೆಮಾರು ಸೇರಲಾಗದೆ ಎಲ್ಲೆಲ್ಲೋ ಕಣ್ಮರೆಯಾಗಿದ್ದರು. ಮನೆಯಲ್ಲಿದ್ದವರು ನಿರುತ್ತರರಾಗಿದ್ದರು. ಅವರೆಲ್ಲ ಪರಿಸ್ಥಿತಿಯ ಹೊಡೆತಕ್ಕೆ ಇದ್ದಕ್ಕಿದ್ದಂತೆ ಇನ್ನಷ್ಟು ವಯಸ್ಸಾದವರಂತಾಗಿದ್ದರು. ಅವರ ನೂರಾರು ವರ್ಷಗಳ ಬದುಕಿನಲ್ಲಿ ಒಂದಾದರೂ ಈ ತರಹದ ಘಟನೆಗಳಾಗಿರಲಿಲ್ಲ.ಕಾರ್ಯಕಾರಣ ಸಂಬಂಧವಿಲ್ಲದ ಬಟ್ಟೆ ನಾಪತ್ತೆಯಂಥ ಘಟನೆ ಎದುರು ಬುದ್ಧಿಜೀವಿಗಳು ಗರಬಡಿದವರಂತಾಗಿದ್ದರು. ನಗರದ ಕಂಪ್ಯೂಟರ್ ತಜ್ಞರೆಲ್ಲ ಅಂತರ್ಜಾಲವನ್ನು ಜಾಲಾಡಿ ಸುಸ್ತುಹೊಡೆದರು. ಕಂಪ್ಯೂಟರ್ ಎಂಬ ಗಿಣಿ ಮನುಕುಲದ ಈ ಸಮಸ್ಯೆಗೆ ನಿರುತ್ತರವಾಗಿತ್ತು.ಕೊನೆಗೆ ಮಂತ್ರಿಮಹೋದಯರು ನೆನಪು ಮಾಡಿಕೊಂಡು ವಿಜ್ಞಾನಿಗಳಿಗೆ ಫೋನಾಯಿಸಿದರು. ನಗರದಲ್ಲಿ ನೂರಾರು ವಿಜ್ಞಾನಿಗಳು ತಮ್ಮ ಮನೆಯ ರೂಮುಗಳಲ್ಲೋ ಪ್ರಯೋಗಶಾಲೆಗಳಲ್ಲೋ ಬಂಧಿಗಳಾಗಿ ಬೆತ್ತಲೆ ಅವಿತುಕೊಂಡಿದ್ದರು. ಬಟ್ಟೆ ನಾಪತ್ತೆಯಂಥ ಪ್ರಕರಣವು ಅವರು ಇದುವರೆಗೆ ತಿಳಿದಿದ್ದ ವಿಜ್ಞಾನದ ಯಾವುದೇ ಸಿದ್ಧಾಂತಕ್ಕೂ ಸಿಕ್ಕದೆ ಅರ್ಥೈಸಲಸಾಧ್ಯವಾಗಿತ್ತು. ಅವರಲ್ಲನೇಕರು ನಾಡಿನ ಭಾರಿ ಶ್ರೀಮಂತರ ಹಾಗೂ ರಾಜಕಾರಣಿಗಳ ತಾಳಕ್ಕೆ ಕುಣಿಯುತ್ತ ಅವರ ಆದೇಶಕ್ಕನುಗುಣವಾಗಿ ವಿಜ್ಞಾನವನ್ನು ಹಣಮಾಡಿಕೊಳ್ಳುವ ದಂಧೆಯನ್ನಾಗಿ ಮಾರ್ಪಡಿಸಿದ್ದರು. ಯಾವುದೇ ಉಪಾಯ ಕಾಣದೆ ವಿಜ್ಞಾನಿಗಳೆಲ್ಲ ತಲೆಕೊಡವಿದರು.ಯಾರ ಎದುರೂ ಬರಲಾರದ ಮುಖ್ಯಮಂತ್ರಿಗಳು `ಇದೆಲ್ಲಾ ವಿರೋಧ ಪಕ್ಷದವರ ಕಿತಾಪತಿ, ಸಕಾಲದಲ್ಲಿ ಎಲ್ಲವನ್ನೂ ಬಹಿರಂಗಪಡಿಸುವುದಾಗಿ' ಫೋನಿನಲ್ಲಿ ಬುಸುಗುಟ್ಟಿದರು.`ವಿರೋಧ ಪಕ್ಷದವರನ್ನು ಅವಮಾನಿಸಲು ಮುಖ್ಯಮಂತ್ರಿ ಮಾಡಿಸಿದ ಮಾಟ ಇಡೀ ನಗರದ ಜನರಿಗೆ ಮುಳುವಾಗಿದೆ. ಇದಕ್ಕೆಲ್ಲ ಮುಖ್ಯಮಂತ್ರಿಯೇ ಕಾರಣ. ಮುಂದಿನ ಚುನಾವಣೆಯಲ್ಲಿ ಆಡಳಿತ ಪಕ್ಷದವರಿಗೆ ಸರಿಯಾದ ಪಾಠ ಕಲಿಸಿರಿ' ಎಂದು ವಿರೋಧ ಪಕ್ಷದ ನಾಯಕ ಪ್ರಜೆಗಳೆಲ್ಲರಿಗೆ ಸಂದೇಶ ರವಾನಿಸಿದರು.ಲಕ್ಷಾಂತರ ಜನ ಎಲ್ಲೆಂದರಲ್ಲಿ ಅವಿತುಕೊಂಡು ಸ್ವಂತ ಮನೆಗಳಿಂದ ಕಣ್ಮರೆಯಾಗಿದ್ದರು. ಯಾರು ಯಾರನ್ನು ಎಲ್ಲಿ ಹುಡುಕುವುದು? ಸಂಪೂರ್ಣ ಬೆತ್ತಲೆಯಾಗಿ ಎಲ್ಲೋ ಅವಿತಿರುವ ಹೆಣ್ಣನ್ನು ಬೀದಿಬೀದಿ ಅಲೆಯುತ್ತ ಬೆತ್ತಲೆ ಗಂಡೊಬ್ಬ ಹುಡುಕುವುದು ಹೇಗೆ? ಅಥವ ಬೆತ್ತಲೆ ಹೆಣ್ಣು ಕಾಣದ ಕಡೆ ಅವಿತಿರುವ ಗಂಡನ್ನು ಹುಡುಕುತ್ತ ಬೀದಿ ಬೀದಿ ಅಲೆಯುವುದು ಹೇಗೆ? ಎಂಥ ಅಸಂಬದ್ಧ?ನಗರದ ಅನೇಕ ಕಡೆ ಗಂಡಸರ ಮರ್ಮಾಂಗಗಳನ್ನು ಪರೀಕ್ಷಿಸಿ ಅವರು ಯಾವ ಧರ್ಮಕ್ಕೆ ಸೇರಿದವರೆಂದು ಕ್ಷಣಮಾತ್ರದಲ್ಲಿ ಪತ್ತೆ ಹಚ್ಚಿ ಹುಳು ಹುಪ್ಪಟೆಗಳಂತೆ ಬಡಿದು ಸಾಯಿಸಿದರು. ಬೆತ್ತಲೆಯಲ್ಲೂ ಕೋಮುವೈಷಮ್ಯ ಭುಗಿಲೆದ್ದಿತು. ಸದರಿ ವಿಷಯವು ಮೊಬೈಲುಗಳ ಮೂಲಕ ನಗರದಲ್ಲೆಲ್ಲ ವಿಕಾರವಾಗಿ ಹಬ್ಬಿ ಗಂಡಸರು ಚಲನೆಯನ್ನೇ ಕಳೆದುಕೊಂಡು ಇದ್ದಲ್ಲೇ ಸ್ಥಗಿತರಾದರು. ಎಲ್ಲ ಹೆಣ್ಣುಮಕ್ಕಳೂ ಧರ್ಮಾತೀತವಾಗಿ ತಮ್ಮ ಮನೆಯ ಗಂಡಸರ ಸಾವನ್ನು ನಿರೀಕ್ಷಿಸುತ್ತ ಅಸಹಾಯಕರಾಗಿ ಸಂತೈಸುವವರು ಸಹ ಇಲ್ಲದೆ ರೋಧಿಸತೊಡಗಿದರು.ಪ್ಯಾರಿಸ್ ನಗರದಲ್ಲಿ ನಡೆಯುವ ವಿಶ್ವಮಟ್ಟದ `ಫ್ಯಾಷನ್ ಶೋ'ಗಾಗಿ ತನ್ನೆಲ್ಲ ಕ್ರಿಯಾಶೀಲತೆಯನ್ನು ಬಳಸಿ ವಿನ್ಯಾಸ ಮಾಡಿದ್ದ ಡ್ರೆಸ್‌ಗಳು ಮಾಯವಾಗಿದ್ದು ಕಂಡು ಬುಗುಲು ಸ್ವಭಾವದ ವಸ್ತ್ರವಿಷ್ಯಾಸಕಾರನೊಬ್ಬ ನಗರದ ಹೃದಯ ಬಾಗದಲ್ಲಿದ್ದ ಕಟ್ಟಡದ ಹದಿನೆಂಟನೆಯ ಮಹಡಿಯಿಂದ ಜಿಗಿದು ನಾಗರಿಕರ ರಕ್ತ ಹೆಪ್ಪುಗಟ್ಟುವಂತೆ ಆತ್ಮಹತ್ಯೆ ಮಾಡಿಕೊಂಡ. ಛಿದ್ರವಾಗಿದ್ದ ಅವನ ದೇಹ ಮುಖ್ಯರಸ್ತೆಯೊಂದರ ಮಧ್ಯಭಾಗದಲ್ಲಿ ಹೇಳುವವರು ಕೇಳುವವರು ಇಲ್ಲದೆ ಹಾಗೆಯೇ ಬಿದ್ದಿತ್ತು.ಇಡೀ ನಗರ ಅನಾಥಪ್ರಜ್ಞೆಯಿಂದ ನರಳತೊಡಗಿತು.2

ನಗರದ ಭವ್ಯವಾದ ವಸತಿ ಸಮುಚ್ಚಯದಲ್ಲೊಂದು ಮನೆ. ಆ ಮನೆಯ ತಾಯಿ ಮಗುವನ್ನು ಮಲಗಿಸಿ ಸ್ನಾನಕ್ಕಿಳಿದಿದ್ದಾಳೆ. ಹೂ ಹೆಜ್ಜೆಗಳನ್ನಿಡುತ್ತ ಆಗಷ್ಟೆ ಓಡಾಡಲು ಕಲಿತಿರುವ ಮಗು. ಈ ದಿನ ಮಗು ಯಾಕೋ ಕಿರಿಕಿರಿ ಮಾಡುತ್ತ ಉಪವಾಸವೇ ಮಲಗಿದೆ. ಮಗು ಉಪವಾಸವಿದ್ದುದರಿಂದ ತಾಯಿಯೂ ಹೊಟ್ಟೆಗೇನೂ ತಿಂದಿಲ್ಲ. ಮಗು ಏಳುವ ಮುನ್ನವೇ ಸ್ನಾನ ಮುಗಿಸೋಣವೆಂದು ಸಮಯ ಮಾಡಿಕೊಂಡು ಬಚ್ಚಲನ್ನು ಪ್ರವೇಶಿಸಿದ್ದಾಳೆ. ಸ್ನಾನ ಮಾಡುತ್ತಾ ನೋಡುತ್ತಾಳೆ! ತಾನು ಬಚ್ಚಲಲ್ಲಿ ತಂದಿಟ್ಟಿದ್ದ ಉಡುಪುಗಳು ಮತ್ತು ಟವಲ್ ನಾಪತ್ತೆಯಾಗಿವೆ! ಬಟ್ಟೆಗಳೆಲ್ಲಿ ಹೋದವು? ಆ ತಾಯಿಗೆ ಆಶ್ಚರ್ಯವಾಯಿತು. ಸ್ವಲ್ಪವೇ ಸ್ವಲ್ಪ ಬಾಗಿಲು ಓರೆ ಮಾಡಿ ಹೊರಗೆ ಇಣುಕಿದಳು. ಕಿಟಕಿ ಬಾಗಿಲುಗಳಿಗೆ ಹಾಕಿದ ಪರದೆ ಇಲ್ಲ. ನೆಲಕ್ಕೆ ಹಾಸಿದ್ದ ರತ್ನಗಂಬಳಿಗಳಿಲ್ಲ. ಮನೆಯಲ್ಲಿ ಒಂದೇ ಒಂದು ಬಟ್ಟೆ ಇಲ್ಲ! ಅವಳಿಗೆ ಗಾಬರಿ ಆಗತೊಡಗಿತು. ತನ್ನ ಮನೆ ದರೋಡೆ ಆಗಿರಬಹುದೇ? ಬೆತ್ತಲೆಯಾಗಿ ಹೊರಬರಲು ಸಂಕೋಚವಾಗಿ ಅಲ್ಲೇ ನಿಂತಳು. ಆದರೆ ಮಗುವಿನ ಶಬ್ದ ಇಲ್ಲದ್ದು ಗಮನಕ್ಕೆ ಬಂದಿದ್ದೇ ಸ್ನಾನಕ್ಕಿಳಿಯುವ ಮುಂಚೆ ತಾನು ಮನೆಯ ಹೊರಬಾಗಿನ್ನು ಮುಚ್ಚಿದ್ದೆನೋ ಇಲ್ಲವೋ ಎಂಬ ಅನುಮಾನ ಬಂದಿತು. ಬಚ್ಚಲ ಕೋಣೆಯಿಂದ ಒಮ್ಮೆಲೆ ಹೊರಕ್ಕೆ ಧಾವಿಸಿ ಬಂದಳು. ಅವಳಿಗೆ ಎದೆ ಹೊಡೆಯುವಂತೆ ಮಂಚದ ಮೇಲೆ ಹಾಸಿಗೆ ಇಲ್ಲ, ಹೊದಿಕೆ ಇಲ್ಲ ಮತ್ತು ಮಗು ಇಲ್ಲ ಎಂಬುದು ಗಮನಕ್ಕೆ ಬಂದಿತು. ಮನೆಯ ಮುಂದಿನ ಬಾಗಿಲು ತೆರೆದೇ ಇತ್ತು. ಬಟ್ಟೆ ಹೊರತಾಗಿ ಎಲ್ಲಾ ವಸ್ತುಗಳೂ ಯಥಾ ಪ್ರಕಾರ ಇದ್ದುವು.ಕಿಟಕಿ ಗಾಜಿನ ಹೊರಗೆ ಯಾರೋ ಹತ್ತಾರು ಜನ ಗಂಡಸರು ಹೆಂಗಸರು ಬೆತ್ತಲೆಯಾಗಿ ಆತುರಾತುರವಾಗಿ ಓಡಾಡುತ್ತಿರುವುದು ಕಾಣಿಸಿತು. ಮೈಯೆಲ್ಲಾ ಹಿಡಿಯಾಗಿ ಮನೆಯಲ್ಲೆಲ್ಲಾ ಮಗುವಿಗಾಗಿ ಹುಡುಕಾಡಿದಳು. ಮಗು ಮನೆಯೊಳಗೆ ಎಲ್ಲೂ ಇರಲಿಲ್ಲ. ಉಸಿರು ಕಟ್ಟಿದಂತಾಗಿ ಹೊರಗೆ ಬಂದು ಇಣುಕಿದಳು. ರಸ್ತೆಯಲ್ಲಿ ಒಂದೇ ಒಂದು ವಾಹನ ಇರಲಿಲ್ಲ. ಆ ಹುಚ್ಚರು, ಭಿಕ್ಷುಕರು, ರದ್ದಿ ಆಯುವವರ ಗುಂಪು ಬಿಟ್ಟರೆ ರಸ್ತೆ ನಿರ್ಜನವಾಗಿತ್ತು. ವಿಚಿತ್ರವಾದುದ್ದೇನೋ ಘಟಿಸಿರುವುದು ಅವಳಿಗೆ ಖಚಿತವಾಯಿತು.ಬೀದಿಯಲ್ಲಿ ಬೆತ್ತಲೆ ತಿರುಗುತ್ತಿದ್ದ ಹುಚ್ಚರಲ್ಲಿ ಒಬ್ಬಳು ಒಮ್ಮೆಲೆ ಜೋರಾಗಿ ಗಹಗಹಿಸಿ ನಗುತ್ತಾ- “ಏನ್ರೋ ಹಲ್ಕಟ್‌ಗಳ, ಲೋಫರ್‌ಗಳ, ಇಷ್ಟು ದಿನ ನನ್ನೊಬ್ಬಳನ್ನೆ ಬೆತ್ತಲೆ ಮಾಡಿ ಮಜಾ ಮಾಡ್ತಿದ್ದೀರೇನ್ರೋ? ಈಗ ನೋಡ್ರೋ ಏನಾಗಿದೆ! ನಿಮ್ಮ ಮನೆಯ ಹೆಂಗಸರೆಲ್ಲಾ ಬೆತ್ತಲಾಗಿದ್ದಾರೆ!ನನ್ನನ್ನ ಸೂಳೆ ಮಾಡ್ದೋರು ನೀವೇ, ಮಜಾ ಮಾಡ್ದೋರು ನೀವೇ, ನಗೋರು ನೀವೇ ಏನ್ರೋ?” ಎಂದು ಕೇಕೆ ಹೊಡೆಯತೊಡಗಿದಳು.

ತಾಯಿಗೆ ಭಯ ಹೆಚ್ಚಿತು. ತನ್ನ ಮಗು ಹೊರಗೆ ಹೋಗಿರುವುದು ಖಚಿತ! ಮಗು ಎಲ್ಲಾದರೂ ನಾಯಿಗಳ ಪಾಲಾದರೆ? ದನಗಳ ತುಳಿತಕ್ಕೆ ಸಿಕ್ಕರೆ? ಹುಚ್ಚರು ಭಿಕ್ಷುಕರು ಹೊತ್ತೊಯ್ದರೆ? ಯೋಚಿಸಿದಂತೆಲ್ಲಾ ತಾಯಿ ಹೃದಯ ನಗಾರಿಯಾಯಿತು. ಆದರೆ ಮಗುವನ್ನು ಹುಡುಕಲು ಬೆತ್ತಲೆಯಾಗಿ ಹೊರಗೆ ಹೆಜ್ಜೆ ಇಡುವುದಾದರೂ  ಹೇಗೆ? ನಗರದ ಮುಖ್ಯ ರಸ್ತೆಯೊಂದರಲ್ಲಿ ಹರೆಯದ ಹೆಣ್ಣಾಗಿ ತಾನು ಬೆತ್ತಲೆ ಹೊರಟರೆ ಅಪಾಯ ಕಟ್ಟಿಟ್ಟದ್ದು. “ಇದೆಂತಹ ಪರೀಕ್ಷೆ” ಎಂದು ದೇವರಲ್ಲಿ ಮೊರೆಯಿಟ್ಟಳು. ಕೊನೆಗೆ, ಜನರೆಲ್ಲಾ ಬೆತ್ತಲೆಗೆ ಹಿಂಜರಿದು ನಾನಾ ರೀತಿಯಲ್ಲಿ ಹೆದರಿ ಎಲ್ಲೆಂದರಲ್ಲಿ ಅವಿತಿದ್ದರೆ ಈ ತಾಯಿ ಮಗುವಿಗಾಗಿ ಪರಿತಪಿಸುತ್ತಾ ರಸ್ತೆಗಿಳಿದೇ ಬಿಟ್ಟಳು. ರಸ್ತೆಯ ಈ ತುದಿಯಿಂದ ಆ ತುದಿಯವರೆಗೆ ದೃಷ್ಟಿ ಹಾಯಿಸಿದಳು. ಹತ್ತಾರು ಜನ ಕೇಕೆ ಹಾಕುತ್ತಾ ಅವಳ ಸುತ್ತಾ ಸುತ್ತತೊಡಗಿದರು. ಇದೇನು ನಗರವೋ ನರಕವೋ ಎನಿಸಿತು ತಾಯಿಗೆ.

ಆ ತಾಯಿಗೆ ಹೆಜ್ಜೆಹೆಜ್ಜೆಗೆ ಉಸಿರು ಸಿಕ್ಕಿಕೊಳ್ಳತೊಡಗಿತು. ಮಗು ಏನಾದರೂ ಈ ತಿರುವಿನಲ್ಲಿ ಹೋಗಿದೆಯೇ? ಎಂದು ಒಂದು ತಿರುವಿನಲ್ಲಿ ಓಡಿದಳು. ಚರಂಡಿಗೇನಾದರೂ ಬಿದ್ದಿತೇ ಎಂದು ಚರಂಡಿ ಇಳಿದು ನೋಡಿದಳು. ಬೆತ್ತಲೆಯ ನಾಚಿಕೆ ಮುಜುಗರ ಮೆಲ್ಲನೆ ಹಿಂದೆ ಸರಿದು ಅವಳಲ್ಲಿ ಆತಂಕ ದಟ್ಟೈಸಿತು. ತೆರೆದೇ ಇದ್ದ ಅನೇಕ ಮನೆ ಅಂಗಡಿಗಳ ಒಳಹೊಕ್ಕು ಹುಡುಕುತ್ತಾ ಮುನ್ನಡೆದಳು. ಬಿಕ್ಕಿದಳು. ಕೊನೆಕೊನೆಗೆ ಜೋರಾಗಿ ರೋದಿಸುತ್ತಾ ಮಗುವಿನ ಹೆಸರಿಡಿದು ಕೂಗುತ್ತಾ ತನ್ನ ಸರ್ವಸ್ವವನ್ನೂ ಮರೆತಳು. ಜಗತ್ತನ್ನೇ ಮರೆತಳು. ಕಳೆದು ಹೋದ ಮಗು ಅವಳ ಜಗತ್ತಾಯಿತು.ತಾಯಿ ಅಳುವುದನ್ನು ಕಂಡು ಕೇಕೆ ಹೊಡೆಯುತ್ತಿದ್ದ ಜನ ತೆಪ್ಪಗಾದರು. ಪರಿಸ್ಥಿತಿಯ ಗಂಭೀರತೆ ಅವರನ್ನು ತಟ್ಟತೊಡಗಿತು. ಅವರೆಲ್ಲಾ ತಾಯಿಯ ಸುತ್ತಾ ನೆರೆತು ಮಗುವಿನ ವಿವರಗಳನ್ನು ತಿಳಿದುಕೊಂಡು ಹುಡುಕಾಟದಲ್ಲಿ ತೊಡಗಿದರು. ರದ್ದಿ ಆಯುವವರು ಗಲ್ಲಿಗಲ್ಲಿಗಳ ಮೂಲೆ ಮುಡಿಕೆಗಳನ್ನು ಅರಸಿದರು. ಹಮಾಲರು ತೆರೆದಿದ್ದ ಅಂಗಡಿಗಳನ್ನು ಮನೆಗಳನ್ನು ಜಾಲಾಡಿದರು. ಇತರರು ತಮ್ಮ ದೃಷ್ಟಿಯ ಬಲೆ ಹಾಕಿ ಇಡೀ ಪ್ರದೇಶವನ್ನೇ ಸೋಸಿದರು. ತಾಯಿ ಮಗುವನ್ನು ಕೂಗಿದಾಗ ತಾವೂ ಕೂಗಿದರು. ತಾಯಿ ಚರಂಡಿಗಿಳಿದರೆ ತಾವೂ ಧುಮುಕಿದರು. ತಾಯಿ ಅತ್ತಾಗ ತಾವೂ ಅತ್ತರು.ಅದೇ ಮಾರ್ಗದಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಓಡಿ ಬರುತ್ತಿದ್ದ ಕಳ್ಳರ ಗುಂಪೊಂದು ಅಳುತ್ತಾ ಸಾಗಿದ್ದ ತಾಯಿ ಮತ್ತು ಅವಳ ಸುತ್ತಾ ಇದ್ದ ವಿಚಿತ್ರ ಪಡೆಯನ್ನು ಕಂಡು, ವಿಷಯ ತಿಳಿದು ತಾವೂ ಮಗುವಿನ ಹುಡುಕಾಟದಲ್ಲಿ ತೊಡಗಿದರು. ಗೊತ್ತು ಗುರಿಯಿಲ್ಲದೆ ಓಡುತ್ತಿದ್ದ ಅವರಿಗೆ ಇದ್ದಕ್ಕಿದ್ದಂತೆ ಗುರುತರವಾದ ಕೆಲಸ ಸಿಕ್ಕಂತಾಗಿತ್ತು.ತಾಯಿಗೆ ನಿಧಾನವಾಗಿ ನಿರಾಸೆ ಆವರಿಸತೊಡಗಿತು. ಮಗು ಸಿಗಲಿಕ್ಕಿಲ್ಲ ಎನಿಸಿತು. ಮೈಯಲ್ಲಿ ಬಲವೇ ಇಲ್ಲವಾಗಿ ಕುಸಿದು ಕೂತಳು. ಕೊಳಕರು, ನಿಕೃಷ್ಟರು, ಪಾಪಿಷ್ಠರು, ನಿರ್ಗತಿಕರು ಎನಿಸಿಕೊಂಡ ಭಿಕ್ಷುಕರು, ಹುಚ್ಚರು, ಸೂಳೆಯರು, ಹಮಾಲರು, ಕಳ್ಳರು, ತಾಯಿಯನ್ನು ಸಂತೈಸತೊಡಗಿದರು. ತಾಯಿಯನ್ನು ಎಬ್ಬಿಸಿಕೊಂಡು- “ನಾವು ಹುಡುಕಿ ಕೊಡುತ್ತೇವೆ, ಬಾ” ಎಂದು ಯುದ್ಧಕ್ಕೆ ಹೊರಟವರಂತೆ ತಾಯಿಯನ್ನು ಮುಂದಿಕ್ಕಿಕೊಂಡು ನಡೆದರು. ತಾಯಿ ಹೊಸ ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದಳು.3

ನಗರಕ್ಕೆ ನಗರವೇ ಬೆತ್ತಲೆಯ ಆಘಾತದಿಂದ ಮತ್ತು ಸುಡು ಬಿಸಿಲಿನಿಂದ ತತ್ತರಿಸಿದ್ದರೆ, ಗಾಂಧಿ ಪಾರ್ಕ್ ಮಾತ್ರ ತಣ್ಣಗಿತ್ತು. ನಿರ್ಜನವಾಗಿದ್ದ ವಿಶಾಲ ಪ್ರದೇಶದಲ್ಲಿ ಹಬ್ಬಿ ನಿಂತಿದ್ದ ಪಾರ್ಕಿನೊಳಗೆ ಎತ್ತ ನೋಡಿದರತ್ತ ನೆರಳಿತ್ತು. ಅಂದು ಕೂಲಿ ಕೆಲಸ  ಸಿಗದೇ ಬೆತ್ತಲಾಗಿ ಬಂದ ರೈತರ ಗುಂಪು ನೆರಳಿನಲ್ಲಿ ವಿಶ್ರಮಿಸಿಕೊಳ್ಳತೊಡಗಿತ್ತು. ಉಪವಾಸವಿದ್ದ ರೈತರು ಬಿಸಿಲಿನ ಹೊಡೆತಕ್ಕೆ ಹೈರಾಣಾಗಿ ಬೆತ್ತಲೆ ಮರೆಮಾಚಿಕೊಳ್ಳಲು ಒಬ್ಬೊಬ್ಬರೂ ಒಂದೊಂದು ಮರದಡಿ ಮಲಗಿ ನಿದ್ರಾವಶರಾಗುತ್ತಿರುವಾಗ ಒಂದು ಪುಟ್ಟ ಮಗುವಿನ ಕಿಲಕಿಲ ನಗುವಿಗೆ ಎಚ್ಚೆತ್ತರು. ನೋಡುತ್ತಾರೆ: ಒಂದು ಪುಟ್ಟ ಮಗು ಸಾವಿರಾರು ಬಣ್ಣಬಣ್ಣದ ಹೂಗಳ ಮತ್ತು ಹೂವಿಂದ ಹೂವಿಗೆ ಹಾರಾಡುತ್ತಿರುವ ಚಿಟ್ಟೆಗಳ ಸೌಂದರ್ಯಕ್ಕೆ ಮರುಳಾಗಿ ಚಿಟ್ಟೆಗಳನ್ನು ಹಿಡಿಯಲು ಓಡುತ್ತಿದೆ. ಅಂದು ಬೆಳಿಗ್ಗೆಯಿಂದ ಘಟಿಸಿರುವ ವಿವರಣೆಗೆ ನಿಲುಕದ ಸಂಗತಿಗಳಿಂದ ಗಲಿಬಿಲಿಯಲ್ಲಿದ್ದ ಮುಗ್ಧ ರೈತರಿಗೆ ಏಳುತ್ತಾ ಬೀಳುತ್ತಾ ಓಡುತ್ತಿರುವ ಮಗು ಈ ಲೋಕದ ಮಗುವಿನಂತೆ ಕಾಣಲಿಲ್ಲ. ಮಂತ್ರ ಮುಗ್ಧರಂತಾದ ರೈತರೆಲ್ಲ ಮಗು ಬಿದ್ದಾಗ ಎಬ್ಬಿಸಿ, ಓಡಿದಾಗ ತಾವೂ ಓಡಿ, ಕೇಕೆ ಹೊಡೆದಾಗ ತಾವೂ ಕೇಕೆ ಹೊಡೆದು, ತಮ್ಮ ಬೆತ್ತಲೆ ಮತ್ತು ಹಸಿವನ್ನು ಮರೆತು ನಲಿಯತೊಡಗಿದರು. ಆಡುತ್ತಾಡುತ್ತಾ ಮೈಮರೆತಿರುವ ರೈತರು ಮತ್ತು ಮಗು! ಅಲ್ಲಿಗೆ ಆಗ ಆಗಮಿಸಿತು ತಾಯಿ ಮತ್ತು ಅವಳ ಪಡೆ.ತಾಯಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಮಗುವಿನ ಮುಂದೆ ಬಂದು ನಿಂತ ಕೂಡಲೇ ಮಗು ಚಪ್ಪಾಳೆ ತಟ್ಟುತ್ತಾ ಚಿಟ್ಟೆಗಳ ತೋರಿಸುತ್ತಾ ತಾಯಿಯ ಕಂಕುಳವನ್ನೇರಿತು. ತಾಯಿಯ ಕಣ್ಣಲ್ಲಿ ಆನಂದ ಬಾಷ್ಪ. ಆಕೆ ಈ ಲೋಕದವಳಲ್ಲವೋ ಎಂಬಂತೆ ಶುಭ್ರವಾಗಿ ನಿಷ್ಕಳಂಕಳಾಗಿ ಎಲ್ಲವನ್ನೂ ತೊರೆದ ಮುಕ್ತಳಂತೆ ಕಂಗೊಳಿಸಿದಳು. ಇನ್ನೇನು ಯಾವುದೋ ಅದೃಶ್ಯ ಲೋಕಕ್ಕೆ ಜಿಗಿಯುವಳೋ ಎಂಬಂತೆ ಆನಂದದಿಂದ ಪುಟಿಯತೊಡಗಿದಳು.ತಾಯಿ ಮತ್ತು ಮಗುವಿನ ಮಿಲನವನ್ನು ನೋಡುತ್ತಾ ನಿಂತ ಗುಂಪು ತಾವು ನೋಡುತ್ತಿರುವುದು ಪ್ರೀತಿ ವಾತ್ಸಲ್ಯ ತುಂಬಿದ ವ್ಯಕ್ತಿಗಳೋ ಅಥವಾ ಪ್ರೀತಿ ವಾತ್ಸಲ್ಯ ಭಾವಗಳ ಮೊತ್ತವೋ ಎಂದು ಪ್ರತಿಮೆಗಳಂತೆ ನಿಂತೇ ಇದ್ದರು.ಸ್ವಲ್ಪ ಹೊತ್ತಿನಲ್ಲಿ ಮಗುವಿಗೆ ತನ್ನ ಹಸಿವೆ ನೆನಪಾಗಿ ಕೈಗೆ ಎಟುಕುತ್ತಿದ್ದ ತಾಯಿಯ ಎದೆಗೆ ಬಾಯಿ ಹಾಕಿತು. ತಾಯಿ ಅಲ್ಲೇ ಒಂದು ಮರದ ಕೆಳಗಿನ ತಂಪು ನೆರಳಲ್ಲಿ ಮಟ್ಟಸವಾಗಿ ಚಕ್ಕಳಮಕ್ಕಳ ಕುಳಿತು ಹಾಲು ಕುಡಿಸತೊಡಗಿದಳು. ಗಂಟೆಗಟ್ಟಲೆ ಕಟ್ಟಿಕೊಂಡಿದ್ದ ಹಾಲು ಮಗುವಿನ ಬಾಯಿಯ ಬಟ್ಟಲಿಗೆ ನುಗ್ಗಿ ಹರಿಯತೊಡಗಿದ್ದೇ ತಾಯಿಯ ಜೀವಕ್ಕೆ ಹಾಯೆನಿಸಿತು.ತಾಯಿ ಮಗು ಇಬ್ಬರನ್ನು ಅಲ್ಲೇ ಬಿಟ್ಟು ಗುಂಪು ಪಾರ್ಕಿನಿಂದ ಹೊರಬಂದಿತು. ಅಲ್ಲಿ ಮುಖ್ಯರಸ್ತೆಯಲ್ಲಿ ಸಾಲು ಸಾಲು ಹೋಟೆಲುಗಳು, ಹಣ್ಣು ತರಕಾರಿ ತಿಂಡಿ ಅಂಗಡಿಗಳಿದ್ದವು. ಇದ್ದಕ್ಕಿದ್ದಂತೆ ಬೆತ್ತಲಾಗಿದ್ದರಿಂದ ಏನೇನೋ ಕಲ್ಪಿಸಿಕೊಂಡು ಹೆದರಿ ಓಡಿದ್ದ ಅಂಗಡಿ ಹೋಟೆಲ್‌ಗಳ ಮಾಲೀಕರು ಗಡಿಬಿಡಿಯಲ್ಲಿ ಸರಿಯಾಗಿ ಬಾಗಿಲು ಹಾಕದೇ ಓಡಿದ್ದರು. ಹೇಳುವವರು ಕೇಳುವವರು ಇಲ್ಲದ ಅಂಗಡಿ ಹೋಟೆಲ್ಲುಗಳನ್ನು ಬಹಳ ಹೊತ್ತಿನಿಂದ ಗಮನಿಸುತ್ತಲೇ ಇದ್ದ ಆ ಗುಂಪಿನ ಮಂದಿಗೆ ತಮ್ಮ ಹಸಿವು ಗಮನಕ್ಕೆ ಬಂತು. ಅವರು ಎಲ್ಲಾ ತರಹದ ತಿಂಡಿ ತಿನಿಸುಗಳನ್ನು ತಟ್ಟೆ ಪಾತ್ರೆ ಸಮೇತ ಪಾರ್ಕಿಗೆ ತಂದರು. ಹಣ್ಣಿನಂಗಡಿಗೆ ನುಗ್ಗಿ ಪುಟ್ಟಿಗಟ್ಟಲೆ ಹಣ್ಣು ತಂದರು. ತಾಯಿ ಎದುರು ಹಣ್ಣು ತಿಂಡಿಯನ್ನಿಟ್ಟು ತಾವೂ ಕುಳಿತು ಹೊಟ್ಟೆ ಬಿರಿಯುವಂತೆ ಉಣ್ಣತೊಡಗಿದರು. ಕೈಕಾಲುಗಳಲ್ಲಿ ಆಡುತ್ತಿದ್ದ ನಾಯಿಗಳಿಗೆ ತಿಂಡಿಯ ರಾಶಿಯನ್ನೇ ಸುರಿದರು. ದನಕರುಗಳಿಗೆ ತರಕಾರಿ ಹಣ್ಣು ಕಾಳುಗಳನ್ನು ಮನಸೋ ಇಚ್ಛೆ ಸುರಿದರು. ದನಕರುಗಳು ನಾಯಿಗಳು ಇದೇನು ಕನಸೋ ನನಸೋ ಎಂಬುದನ್ನು ಖಚಿತಪಡಿಸಿಕೊಳ್ಳಲೋ ಅಥವಾ ತಮಗಾದ ಸಂತೋಷವನ್ನು ವ್ಯಕ್ತಪಡಿಸಲೋ ಎಗರೆಗರಿ ಬಿದ್ದವು.ಇಡೀ ವಾತಾವರಣ ಹಬ್ಬದ ಸಂಭ್ರಮವಾಗಿ ಮಾರ್ಪಟ್ಟಿತು. ಅಲ್ಲಿದ್ದವರೆಲ್ಲಾ ಹಸಿವು ಹಿಂಗಿಸಿಕೊಳ್ಳಲು ಉಣ್ಣುವುದರಲ್ಲಿ ಮಗ್ನರಾದರು.

ಹಾಲು ಹೀರಿದಂತೆ ಮಗುವಿನ ಹೊಟ್ಟೆ ತುಂಬುತ್ತಿರಲು, ಅದು ತಾಯಿಯ ತೊಡೆಯ ಮೇಲೆ ಸಂತೃಪ್ತ ಭಾವದೊಂದಿಗೆ ಯಾವುದೇ ಲೋಕದ ತಮಾಷೆಗೆ ನಗುತ್ತಾ ನಿದ್ದೆಗೆ ಜಾರತೊಡಗಿತು.ತನ್ನ ಮಗುವನ್ನು ಹುಡುಕಿಕೊಡಲು ಯಾರೂ ಊಹಿಸಲು ಸಾಧ್ಯವಿಲ್ಲದಂತೆ ಒತ್ತಾಸೆಯಾಗಿ ನಿಂತ ಈ ನಿರ್ಗತಿಕರ, ಕಡೆಗಣನೆಗೆ ಒಳಗಾದವರ ಗುಂಪು ಶತಮಾನದ ಹಸಿವನ್ನು ನೀಗಿಸಿಕೊಳ್ಳುತ್ತಿದೆಯೇನೋ ಎಂಬಂತೆ ಹಂಚಿ ಊಟ ಮಾಡುವುದನ್ನು ಕಂಡು ತಾಯಿಗೆ ಧನ್ಯತೆಯ ಭಾವ ಮೂಡಿತು. ಈ ಗುಂಪು ಬೇರೆಯಲ್ಲ, ತನ್ನ ಮಗು ಬೇರೆಯಲ್ಲ ಎನಿಸಿತು. ತಾಯಿಯ ಕಣ್ಣಲ್ಲಿ ನೀರು ಜಿನುಗತೊಡಗಿತು. ಪಕ್ಕಕ್ಕೆ ಒತ್ತರಿಸಿದವರನ್ನು ಸಮಾಜ ತನ್ನ ತೆಕ್ಕೆಗೆ ತೆಗೆದುಕೊಳ್ಳದೇ ಮುಕ್ತಿಯಿಲ್ಲ ಎಂದೆನಿಸಿತು. `ಇದೇ ಸುದಿನ' ಎಂಬ ಮಾತು ಅವಳೆದೆಯಲ್ಲಿ ಮಾರ್ದನಿಸತೊಡಗಿದ್ದೇ ಬೆತ್ತಲೆಯಾಗಿದ್ದ ಎಲ್ಲರ ಮೈಮೇಲೆ ಸರಳ ಸುಂದರವಾದ ಬಟ್ಟೆಗಳು ಪ್ರತ್ಯಕ್ಷವಾಗತೊಡಗಿದವು. ಮಗುವಿನ ಬಟ್ಟೆಯ ಮೇಲೆ ಹೂಗಳು ಮತ್ತು ಹಾರಾಡುವ ಚಿಟ್ಟೆಗಳಿದ್ದವು.ಪಾರ್ಕಿನಲ್ಲಿದ್ದ ಎಲ್ಲರಿಗೂ ಬಟ್ಟೆಗಳು ಪ್ರತ್ಯಕ್ಷವಾಗತೊಡಗಿದಾಗಷ್ಟೆ ವಿಸ್ಮೃತಿಗೆ ಸಂದಿದ್ದ ಅವರ ಅದುವರೆಗಿನ ಬೆತ್ತಲೆ ನೆನಪಾದದ್ದು!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.