ಗುರುವಾರ , ಏಪ್ರಿಲ್ 22, 2021
30 °C

ಕಥೆಗೆ ನರೆ, ಬಣ್ಣಗಳ ತೊರೆ (ಚಿತ್ರ:ಸಾಗರ್ )

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಕಥೆಗೆ ನರೆ, ಬಣ್ಣಗಳ ತೊರೆ (ಚಿತ್ರ:ಸಾಗರ್ )

ನಿರ್ಮಾಪಕ : ರಾಮು

ನಿರ್ದೇಶಕ : ಎಂ.ಡಿ. ಶ್ರೀಧರ್

ತಾರಾಗಣ : ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ಹರಿಪ್ರಿಯ, ಸಂಜನಾ, ದೇವ್ ಗಿಲ್,ಆದಿ ಲೋಕೇಶ್, ಶರತ್ ಲೋಹಿತಾಶ್ವ ಇತರರು.

`ಹುಂಬ ಹುಡುಗ ನಾನು / ಜಂಬದ ಹುಡುಗಿ ನೀನು~ ಎನ್ನುವುದು `ಸಾಗರ್~ ಚಿತ್ರದಲ್ಲಿನ ಗೀತೆಯೊಂದರ ಸಾಲು. ಈ ತುಣುಕನ್ನೇ ಕೊಂಚ ಬದಲಿಸಿ ಸಿನಿಮಾದ ವಿಶ್ಲೇಷಣೆಗೆ ಬಳಸುವುದಾದರೆ- `ಬೋಳೆ ತರುಣನ ಹಾಗೂ ಜಾಣೆ ಹುಡುಗಿಯೊಬ್ಬಳ ಕಥೆ~ ಎಂದು `ಸಾಗರ್~ ಚಿತ್ರವನ್ನು ಬಣ್ಣಿಸಬಹುದು.ಚಿತ್ರದ ನಾಯಕನ ಮೇಲೆ ಹುಂಬತನ ಹೇರುವಲ್ಲಿ ನಿರ್ದೇಶಕ ಎಂ.ಡಿ. ಶ್ರೀಧರ್ ಪಳಗಿದವರು. ಅವರ `ಚೆಲ್ಲಾಟ~, `ಕೃಷ್ಣ~, `ಫ್ರೆಂಡ್ಸ್~ ಚಿತ್ರಗಳ ನಾಯಕರೆಲ್ಲ ಯಡವಟ್ಟು ಹೈಕಳೇ. ಸಾಗರ್ ಕೂಡ ಇದಕ್ಕೆ ಹೊರತಲ್ಲ.

 

ಆಸ್ಟ್ರೇಲಿಯಾದಲ್ಲಿ ಕಲಿತು ಬರುವ ಹುಡುಗನಿಗೆ ಹಿರಿಯರು ಗೊತ್ತು ಮಾಡಿರುವ ಮದುವೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಸರಿಯಾದ ಸುಳ್ಳು ಹೇಳಲೂ ಬರುವುದಿಲ್ಲ. ಯಾವುದೋ ಹುಡುಗಿಯ ಫೋಟೊ ತೋರಿಸಿ `ನನ್ನ ಪ್ರೇಯಸಿ~ ಎನ್ನುತ್ತಾನೆ. ಆ ಫೋಟೊ ಸುಂದರಿ ಪ್ರತ್ಯಕ್ಷಳಾಗುವುದರೊಂದಿಗೆ ಸಾಗರನ ಸಂಕಷ್ಟಗಳು ಆರಂಭವಾಗುತ್ತವೆ.ಪ್ರೇಮ ಕಥನದ ನಡುವೆ ಖಳನೊಬ್ಬನ ಹಾಜರಿ ಇಲ್ಲದಿದ್ದರೆ ಹೇಗೆ? ಇಲ್ಲಿನ ಖಳ ಸಾಮಾನ್ಯನಲ್ಲ, ಅಂತರರಾಷ್ಟ್ರೀಯ ಡಾನ್. ದೇಸಿ-ವಿದೇಸಿ ಡಾನ್‌ಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಮೂಲಕ ಸಾಗರ್ ತನ್ನ ಹುಂಬತನ ನೀಗಿಕೊಂಡು ಸಾಹಸಿ ಎನ್ನಿಸಿಕೊಳ್ಳುತ್ತಾನೆ.`ಸಾಗರ್~ ಚಿತ್ರದ ಕಥೆ ಅರ್ಥವಾಯಿತಲ್ಲ! ಹೀಗೆ ಸುಲಭಕ್ಕೆ ಕಥೆ ಅರ್ಥವಾಗುವುದೇ ಚಿತ್ರದ ದೊಡ್ಡ ಸಮಸ್ಯೆ. ನಾಯಕ ತನ್ನ ಕಲ್ಪಿತ ಪ್ರೇಯಸಿಯ ಫೋಟೊ ಸೃಷ್ಟಿಸಿದಾಕ್ಷಣ, ಮುಂದಿನ ದೃಶ್ಯಗಳು ನಮ್ಮ ಜಾಣ ಪ್ರೇಕ್ಷಕರ ಊಹೆಯಂತೆಯೇ ಚಕಾಚಕ್ ಸಾಗುತ್ತವೆ.ಪ್ರಾಚೀನ ಕಾಲದ ಕಥೆಯನ್ನು ಅದ್ದೂರಿತನದ ಬಣ್ಣಗಳಲ್ಲಿ ಸಿಂಗರಿಸುವ ಚಿತ್ರತಂಡದ ಪ್ರಯತ್ನ ಪರಿಣಾಮಕಾರಿಯಾಗಿಯೇ ಇದೆ. ಶ್ರಮಜೀವಿಗಳ ಸಾಲಿನಲ್ಲಿ ಹೆಚ್ಚು ಮಾರ್ಕ್ಸ್ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಛಾಯಾಗ್ರಾಹಕ ಕೃಷ್ಣಕುಮಾರ್‌ಗೆ ಸಲ್ಲಬೇಕು.ನಾಯಕ- ನಾಯಕಿಯ ಕಲ್ಪಿತ ಪ್ರೇಮಕಥೆಯನ್ನು ಬಿಂಬಿಸುವ ಕವಿರಾಜ್‌ರ ಎರಡು ಗೀತೆಗಳ ಸಾಹಿತ್ಯವೂ ಅವುಗಳ ದೃಶ್ಯೀಕರಣವೂ ಸೊಗಸಾಗಿದೆ. ತಾರಾಗಣದಲ್ಲಿ ರಾಧಿಕಾ ಪಂಡಿತ್ ಮುಂಚೂಣಿಯಲ್ಲಿದ್ದಾರೆ. ಅಳು-ನಗು, ಕಣ್ಣೋಟ-ತುಂಟಾಟದ ಅವರ ಅಭಿನಯ ಎಂಥ ಹದದಲ್ಲಿದೆ ಎಂದರೆ, ನಾಯಕಿಯೆದುರು ಸಾಗರನ (ಪ್ರಜ್ವಲ್) ಬೋಳೇತನ ಮತ್ತಷ್ಟು ಎದ್ದುಕಾಣುತ್ತದೆ.ಆದರೂ ಹಾಡು ಕುಣಿತಗಳಲ್ಲಿ ಪ್ರಜ್ವಲ್ ಬೆವರು ಸುರಿಸಿರುವುದನ್ನು ಗುರ್ತಿಸಲೇಬೇಕು. ಹೊಡೆದಾಟಗಳಲ್ಲಂತೂ ಮಾಲಾಶ್ರೀ `ಶಕ್ತಿ~ಯನ್ನು ಅವರು ಆವಾಹಿಸಿಕೊಂಡಂತಿದೆ. ಮತ್ತೊಬ್ಬ ನಾಯಕಿ ಹರಿಪ್ರಿಯಾ ಶಾಪಗ್ರಸ್ತ ಚೆಲುವೆ. ಈ ಚಿತ್ರದಲ್ಲೂ ಅವರ ಪಾತ್ರ ಪೋಷಣೆ ದುರ್ಬಲವಾಗಿಯೇ ಇದೆ.ತೆಲುಗಿನ `ಮಗಧೀರ~ ಖ್ಯಾತಿಯ ದೇವ್ ಗಿಲ್ ಚಿತ್ರದ ಖಳನಾಯಕ. ಅಬ್ಬರದಲ್ಲವರು ಎದ್ದುಕಂಡರೂ, ಸೀದಾಸಾದಾ ಆದಿ ಲೋಕೇಶರೇ ಹೆಚ್ಚು ದುಷ್ಟರೆನ್ನಿಸುತ್ತಾರೆ, ಇಷ್ಟವಾಗುತ್ತಾರೆ.ಅದ್ದೂರಿತನ `ಸಾಗರ್~ ಚಿತ್ರದಲ್ಲಿ ಎದ್ದುಕಾಣುತ್ತದೆ. ಹತ್ತರಲ್ಲಿ ಹನ್ನೊಂದು ಎಂದು ಚಿತ್ರತಂಡದಲ್ಲಿ ನಿರ್ದೇಶಕರು ಗುರ್ತಿಸಿಕೊಳ್ಳುವ ಇಂಥ ಚಿತ್ರಗಳಲ್ಲಿ ಹೊಸತರ ಹಂಬಲದ ಕಥೆ ಹಾಗೂ ನಿರೂಪಣೆಯ ಜಾಣ್ಮೆಯನ್ನು ನಿರೀಕ್ಷಿಸುವುದು ಕಷ್ಟ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.