ಕಥೆಯಿಲ್ಲದವರು!

7

ಕಥೆಯಿಲ್ಲದವರು!

Published:
Updated:

ಕಿವಿಗಡಚುವ ಮೈಕ್ ಸದ್ದು. ರೂಪದರ್ಶಿಗಳೋ ನಟಿಯರೋ ಎಂಬ ಗೊಂದಲ ಹುಟ್ಟಿಸುವಂತಿದ್ದ ವನಿತೆಯರು. ಅವರ ನಡುವೆ ನಿರ್ಮಾಪಕ ಹಸನ್ಮುಖಿ ನಿರ್ಮಾಪಕ ರವಿ. ಎರಡು ಹೊಸ ಚಿತ್ರಗಳ ಮುಹೂರ್ತ ಎಂಬ ನೆಪಹೇಳಿ ಅವರು ರೆಸಾರ್ಟ್ ಉದ್ಘಾಟನಾ ಸಮಾರಂಭ ನಡೆಸಿದ್ದು ಗೊಂದಲದ ವಾತಾವರಣ ಮೂಡಿಸಿತು.‘ಕ್ಷಮೆ ಇರಲಿ’ ಎಂದೇ ಅವರು ಮಾತು ಆರಂಭಿಸಿದ್ದು. ‘ಅರುಣಾಚಲ’ ಚಿತ್ರದ ನಾಯಕ ನಟ ಕೋಮಲ್ ಅಲ್ಲಿ ಕಾಣಿಸಿಕೊಂಡಷ್ಟೇ ಬೇಗ ಮಾಯವೂ ಆದರು. ಝಗಮಗಿಸುವ ದೀಪಗಳು, ಅಲಂಕಾರಿಕ ಗಿಡಗಳು, ಸುಂದರ ಹೂದೋಟ, ಚಿಕ್ಕ ಚೊಕ್ಕ ಹವಾ ನಿಯಂತ್ರಿತ ಕೋಣೆಗಳು, ಸಣ್ಣ ಸಣ್ಣ ಈಜುಕೊಳಗಳು- ಎಲ್ಲವನ್ನೂ ಅತಿಥಿಗಳಿಗೆ ತೋರಿಸುತ್ತಿದ್ದ ನಿರ್ಮಾಪಕರು ಸಿನಿಮಾ ವಿಷಯಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಯಾಕೆಂದರೆ, ಕಥೆಯೇ ಫೈನಲ್ ಆಗದ ಎರಡು ಚಿತ್ರಗಳ ಮುಹೂರ್ತ ಸಮಾರಂಭವದು! ಸಿನಿಮಾ ಕುರಿತು ಒಂಚೂರಾದರೂ ಮಾತನಾಡಲು ನಿರ್ಮಾಪಕರು ಮುಂದಾಗುವ ಹೊತ್ತಿಗೆ ಕಗ್ಗತ್ತಲು ಕವಿದಿತ್ತು.  ‘ಗಂಧರ್ವ’ ಹಾಗೂ ‘ಅರುಣಾಚಲ’ ಎಂಬ ಎರಡು ಚಿತ್ರಗಳಿಗೂ ಕಾನ್‌ಫಿಡೆಂಟ್ ಗ್ರೂಪ್ ಹಾಗೂ ರವಿ ಅವರೇ ನಿರ್ಮಾಪಕರು. ಗಂಧರ್ವ ಚಿತ್ರವನ್ನು ಚೇತನ್ ನಿರ್ದೇಶಿಸುವರಂತೆ. ಆದರೆ, ಅವರು ಅಲ್ಲಿ ಹಾಜರಿರಲಿಲ್ಲ. ‘ಅರುಣಾಚಲ’ಕ್ಕೆ ಪದ್ಮನಾಭ ಅವರ ನಿರ್ದೇಶನವಿದೆ. ಈ ಎರಡೂ ಚಿತ್ರಗಳಿಗೆ ತಾಂತ್ರಿಕ ವರ್ಗದವರಾಗಲೀ, ನಟ-ನಟಿಯರಾಗಲೀ ಇನ್ನೂ ಗೊತ್ತಾಗಿಲ್ಲ.  ಕಥೆ ಕೂಡ ಫೈನಲ್ ಆಗಿಲ್ಲ ಎಂದು ನಗುನಗುತ್ತಲೇ ರವಿ ಹೇಳುವಾಗ ಕೋಮಲ್ ಮುಖದಲ್ಲಿ ಎಂಥದೋ ಗೊಂದಲ. ಅರ್ಧ ಡಜನ್ ಹುಡುಗಿಯರು ಅಲ್ಲಿ ಕಾಣಿಸಿಕೊಂಡರು.ನಟನೆಯ ಅನುಭವವಿಲ್ಲದ ಅವರನ್ನು ಚಿತ್ರದ ನಾಯಕಿಯರು ಎಂದು ನಿರ್ಮಾಪಕರು ಪರಿಚಯಿಸಿದ ಕೆಲವೇ ಕ್ಷಣಗಳಲ್ಲಿ ಕೋಮಲ್ ಮಾಯ! ಬಹುಶಃ ಅವರೇ ತಮ್ಮ ನಾಯಕಿಯರು ಎಂಬ ಸಂಗತಿ ಕೋಮಲ್‌ಗೂ ಗೊತ್ತಿರಲಿಲ್ಲವೋ ಏನೋ?ದಿನ ಚೆನ್ನಾಗಿದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಎರಡೂ ಚಿತ್ರಗಳಿಗೂ ಮುಹೂರ್ತ ನಿಗದಿಪಡಿಸಿದ್ದನ್ನು ನಿರ್ಮಾಪಕರು ಹೇಳಿಕೊಂಡರು. ಕಥೆಯೇ ಇಲ್ಲದೆ ಸಿನಿಮಾ ಮುಹೂರ್ತ ನಡೆಸಿದ ರವಿ ಆ ದಿನ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸುಖಿಸಿದ ರೀತಿಯೇ ಇನ್ನೊಂದು ಚಿತ್ರಕ್ಕೆ ವಸ್ತುವಾದೀತೇನೋ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry