ಕಥೆಯೊಂದಿಗೆ ಸಾಗುವ ಕ್ಯಾಮೆರಾ

7

ಕಥೆಯೊಂದಿಗೆ ಸಾಗುವ ಕ್ಯಾಮೆರಾ

Published:
Updated:
ಕಥೆಯೊಂದಿಗೆ ಸಾಗುವ ಕ್ಯಾಮೆರಾ

ಸಣ್ಣಂದಿನಿಂದ ಸಿನಿಮಾ ಎಂದರೆ ನನಗೆ ಎಂಥದೋ ಪ್ರೀತಿ. ಪತ್ರಿಕೆಗಳಲ್ಲಿ ಬರುತ್ತಿದ್ದ ಅಷ್ಟೂ ಸಿನಿಮಾ ಸುದ್ದಿಗಳನ್ನು ಓದಿ ಗೆಳೆಯರೊಂದಿಗೆ ಚರ್ಚಿಸುತ್ತಿದ್ದೆ. `ಯಾವಾಗಲೂ ಸಿನಿಮಾ ಬಗ್ಗೆಯೇ ಮಾತಾಡ್ತೀಯ' ಎಂದು ಅವರು ಹಂಗಿಸುತ್ತಿದ್ದರು. ಆದರೂ ನನ್ನ ಆಸಕ್ತಿ ಬೇರೆ ಕಡೆ ಸರಿಯಲಿಲ್ಲ.ಗೌರಿಬಿದನೂರು ನಮ್ಮೂರು. ಅಲ್ಲಿನ ಟೊಬ್ಯಾಕೋ ಕಾಲೋನಿಯಲ್ಲಿ ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮುಗಿಸಿದೆ. ಅಲ್ಲೇ ಇರುವ ಎಚ್.ನರಸಿಂಹಯ್ಯ ಅವರ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಓದಿದೆ. ನನ್ನ ಮನೆ ಭಾಷೆ ತೆಲುಗು. ಅದು ಅಪ್ಪ-ಅಮ್ಮನೊಂದಿಗೆ ಮಾತನಾಡುವುದಕ್ಕಷ್ಟೇ ಸೀಮಿತ. ನನ್ನ ಪತ್ನಿ ಸಾಗರದವಳು. ನನ್ನ ಮಗಳು ಮುದ್ದಾಗಿ ಕನ್ನಡ ಕಲಿಯುತ್ತಿದ್ದಾಳೆ.ಉದ್ಯೋಗ ಅರಸುತ್ತಿದ್ದ ದಿನಗಳಲ್ಲಿ ವಾಯುಪಡೆ ಮತ್ತು ನೌಕಾಪಡೆಗೆ ಸೇರುವ ಪರೀಕ್ಷೆ ಬರೆದಿದ್ದೆ. ವಾಯುಪಡೆಯ ಪರೀಕ್ಷೆ ಪಾಸಾಗಿತ್ತು. ಆದರೆ ಆರೋಗ್ಯ ತಪಾಸಣೆಗೆ ಹೋದಾಗ ನನ್ನ ಎತ್ತರಕ್ಕೆ ತಕ್ಕಂತೆ ದೇಹದ ತೂಕ ಇಲ್ಲ ಎನಿಸಿಕೊಂಡು ಹೊರಗೆ ಬಂದೆ. ಅಲ್ಲಿ ಅವಕಾಶ ಸಿಕ್ಕಿದ್ದರೆ ನಾನು ವಾಯಪಡೆಯ ಅಧಿಕಾರಿಯಾಗಿರುತ್ತಿದ್ದೆ!ನನಗೆ ಸಿನಿಮಾ ಛಾಯಾಗ್ರಹಣವನ್ನು ಗಮನಿಸುವ ಹವ್ಯಾಸ ಇತ್ತು. ಮಣಿರತ್ನಂ ಅವರ `ಅಗ್ನಿನಕ್ಷತ್ರಂ' ಮತ್ತು `ದಿಲ್‌ಸೇ' ಚಿತ್ರಗಳನ್ನು ಕ್ಯಾಮೆರಾ ಕೆಲಸ ಗಮನಿಸುವುದಕ್ಕಾಗಿಯೇ ಅನೇಕ ಬಾರಿ ನೋಡಿದ್ದೆ. ಅದನ್ನು ಗಮನಿಸಿದ್ದ ನಮ್ಮೂರಿನ ಗೆಳೆಯ ಮೂರು ವರ್ಷಗಳ ಸಿನಿಮಾಟೊಗ್ರಫಿ ಡಿಪ್ಲೊಮಾಗೆ ಅರ್ಜಿ ಹಾಕಲು ಹೇಳಿದ. ಅರ್ಜಿ ಹಾಕಿದ್ದೇ ತಡ ನನಗೆ ಗೌರ್ಮೆಂಟ್ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ ಸೀಟು ಸಿಕ್ತು. ಡಿಪ್ಲೊಮಾ ಅಂತಿಮ ವರ್ಷದಲ್ಲಿ ಯಾರಾದರೂ ಒಬ್ಬ ಛಾಯಾಗ್ರಾಹಕರ ಬಳಿ ಕೆಲಸ ಮಾಡಬೇಕಿರುತ್ತದೆ. ನನಗಾಗ ಛಾಯಾಗ್ರಾಹಕ ಪಿ. ಜನಾರ್ದನ್ ಅವರಿಂದ ಎರಡು ತಿಂಗಳು ತರಬೇತಿ ಸಿಕ್ಕಿತ್ತು.ಡಿಪ್ಲೊಮಾ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ನಮ್ಮ ಕಾಲೇಜಿಗೆ ಈ ಟಿ.ವಿ ಸಂಸ್ಥೆಯವರು ಕ್ಯಾಂಪಸ್ ಸಂದರ್ಶನ ಮಾಡಲು ಬಂದಿದ್ದರು. ಅದರಲ್ಲಿ ಆಯ್ಕೆಯಾಗಿ ವಿಡಿಯೋ ಎಡಿಟರ್ ಟ್ರೈನಿ ವೃತ್ತಿಯನ್ನು ಒಪ್ಪಿಕೊಂಡು ಹೈದರಾಬಾದ್‌ಗೆ ತೆರಳಿದೆ. ಈ ಟಿ.ವಿ ಸಂಸ್ಥೆ, ಕನ್ನಡವಾಹಿನಿ ಆರಂಭಿಸಿ ನನ್ನನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿತು. ಆಗ ನನಗೆ ನಾನು ಓದಿದ್ದೇ ಬೇರೆ ಇಲ್ಲಿ ಮಾಡುತ್ತಿರುವ ಕೆಲಸವೇ ಬೇರೆ ಎಂಬ ಅರಿವಾಯಿತು. ಆರು ತಿಂಗಳು ವ್ಯರ್ಥವಾಗಿ ಸಮಯ ಹಾಳುಮಾಡಿದೆ ಎನಿಸಿ ಉದಯ ಟಿ.ವಿಯಲ್ಲಿ ಇನ್‌ಹೌಸ್ ಪ್ರೊಡಕ್ಷನ್ ಮತ್ತು ನ್ಯೂಸ್ ಕವರೇಜ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದೆ. 8-9 ತಿಂಗಳು ಕೆಲಸ ಮಾಡಿರಬೇಕು, ಅಷ್ಟರಲ್ಲಿ ಮುಂಬೈನಲ್ಲಿ ಇದ್ದ ನನ್ನ ಗೆಳೆಯನಿಂದ ಕರೆ ಬಂತು. ಅವನು ಗುಜರಾತಿ ಧಾರಾವಾಹಿಗಳನ್ನು ಚಿತ್ರಿಸುತ್ತಿದ್ದ. ಮುಂಬೈಗೆ ಹೋಗಿ ನಾನೂ ಗುಜರಾತಿಧಾರಾವಾಹಿಯೊಂದನ್ನು ಸ್ವತಂತ್ರವಾಗಿ ಚಿತ್ರೀಕರಿಸಿದೆ. ತರುವಾಯ ಸ್ನೇಹಲ್ ಪಟೇಲ್ ಅವರ ಸಂಸ್ಥೆಯಲ್ಲಿ ಅಡ್ವರ್ಟೈಸಿಂಗ್ ಕ್ಯಾಮೆರಾಮನ್ ಆಗಿ ಸೇರಿಕೊಂಡೆ.ಆಗ ಗೆಳೆಯ ಸಂತೋಷ್ ರೈ ಪಾತಾಜೆ ಕರೆ ಮಾಡಿದರು. ಸಂತೋಷ್ ಮತ್ತು ನಾನು ಒಟ್ಟಿಗೆ ಸಿನಿಮಾಟೊಗ್ರಫಿ ಓದಿದವರು. ಅವರು `ಸೆವೆನ್ ಓ ಕ್ಲಾಕ್' ಎಂಬ ಸಿನಿಮಾ ನಿರ್ದೇಶಿಸುತ್ತಿರುವ ವಿಚಾರ ತಿಳಿಸಿದರು. ಆ ಚಿತ್ರಕ್ಕೆ ಅವರಿಗೆ ಒಬ್ಬ ಒಳ್ಳೆಯ ಸಿನಿಮಾಟೊಗ್ರಾಫರ್ ಬೇಕಿತ್ತು. ಅದಕ್ಕೆ ಸಲಹೆ ನೀಡಲು ನನ್ನನ್ನು ಬೆಂಗಳೂರಿಗೆ ಬರಲು ಹೇಳಿದರು. ನಾಲ್ಕು ತಿಂಗಳು ರಜೆ ಹಾಕಿ ಮುಂಬೈನಿಂದ ಬೆಂಗಳೂರಿಗೆ ಬಂದೆ. ಸಿನಿಮಾದ ಚರ್ಚೆಯಲ್ಲಿ ತೊಡಗಿಕೊಂಡ ತರುವಾಯ ಪಾತಾಜೆ, `ನೀನೇ ಛಾಯಾಗ್ರಹಣ ಮಾಡು' ಎಂದರು. ಹಾಗೆ `ಸೆವೆನ್ ಓ ಕ್ಲಾಕ್' ನಾನು ಛಾಯಾಗ್ರಹಣ ಮಾಡಿದ ಮೊದಲ ಸಿನಿಮಾ ಆಯ್ತು. ಸಿನಿಮಾದ ಛಾಯಾಗ್ರಹಣ ಎಷ್ಟು ಗಂಭೀರ ಎಂಬುದು ನನಗಾಗ ಅನುಭವಕ್ಕೆ ಬಂತು. `ಸೆವೆನ್ ಓ ಕ್ಲಾಕ್' ಚಿತ್ರಕ್ಕಾಗಿ ಒಂದಿಡೀ ವರ್ಷವನ್ನು ವ್ಯಯಿಸಿದ್ದೆ. ನಂತರ ಮುಂಬೈಗೆ ಮರಳುವ ಸಿದ್ಧತೆಯಲ್ಲಿದ್ದೆ. ಅದೇ ಸಮಯಕ್ಕೆ `ಶ್ರೀ ಕ್ಷೇತ್ರ ಕೈವಾರ ತಾತಯ್ಯ' ಅವಕಾಶ ಬಂತು. ಆಗಿನ್ನೂ `ಸೆವೆನ್ ಓ ಕ್ಲಾಕ್' ಸಿನಿಮಾ ಬಿಡುಗಡೆಯೇ ಆಗಿರಲಿಲ್ಲ. ಮೊದಲ ಸಿನಿಮಾ ಬಿಡುಗಡೆಗೆ ಮುಂಚೆಯೇ ಬಂದ ಅವಕಾಶವನ್ನು ನಿರಾಕರಿಸಲಾಗದೇ ಒಪ್ಪಿಕೊಂಡು ಕೆಲಸ ಮಾಡಿದೆ. ಅದಾದ ಬಳಿಕ ಒಂದರ ನಂತರ ಒಂದು ಅವಕಾಶ ಬಂದು ಮುಂಬೈಗೆ ಹೋಗುವ ದಿನ ಬರಲೇ ಇಲ್ಲ.ಮತ್ತೆ ಸಂತೋಷ್ ರೈ ಪಾತಾಜೆ ನಿರ್ದೇಶನದ `ಸವಿ ಸವಿ ನೆನಪು' ಚಿತ್ರಕ್ಕೆ ಕ್ಯಾಮೆರಾ ಹಿಡಿದೆ. ಅದು ನನಗೆ ಹೆಸರು ತಂದುಕೊಟ್ಟಿತು. ಅದರಲ್ಲಿ ಫೋಟೊಫ್ರೇಮಿಂಗ್ ಹೋಲುವ ಛಾಯಾಗ್ರಹಣ ಮಾಡಿದ್ದಕ್ಕಾಗಿ ಪ್ರಶಂಸೆ ಬಂತು. ಅದರಿಂದ ಶಶಾಂಕ್ ನಿರ್ದೇಶನದ `ಮೊಗ್ಗಿನ ಮನಸು' ಸಿಕ್ಕಿತು. ಅದು ನನ್ನ ಮೊದಲ ಯಶಸ್ವಿ ಸಿನಿಮಾ. ಅದರ ನಂತರ ಬಂದ ಆರ್.ಚಂದ್ರು ನಿರ್ದೇಶನದ `ತಾಜ್‌ಮಹಲ್' ಕೂಡ ಯಶಸ್ವಿಯಾಯಿತು. ಅಲ್ಲಿಂದ ಆರ್.ಚಂದ್ರು ತಮ್ಮ ಸಿನಿಮಾಗಳಿಗೆ ನಿರಂತರವಾಗಿ ನನ್ನನ್ನೇ ಛಾಯಾಗ್ರಾಹಕನನ್ನಾಗಿ ಆಯ್ಕೆ ಮಾಡುತ್ತಾರೆ.`ಗ್ಯಾಂಗ್‌ಲೀಡರ್', `ಗುಣವಂತ', `ಪ್ರೇಮ್‌ಕಹಾನಿ', `ಯಕ್ಷ', `ಮೈಲಾರಿ', `ಕೋಕೋ' ನಾನು ಕ್ಯಾಮೆರಾ ಹಿಡಿದ ಇತರೆ ಸಿನಿಮಾಗಳು. `ಲಕ್ಷ್ಮಿ' ಮತ್ತು `ಚಾರ್‌ಮಿನಾರ್' ಬಿಡುಗಡೆಗೆ ಸಿದ್ಧವಾಗಿವೆ. `ಡವ್' ಸಿನಿಮಾ ಈಗಷ್ಟೇ ಆರಂಭವಾಗಿದೆ.ನಾನು ಗೌರಿಬಿದನೂರಿನಲ್ಲಿ ಓದುವಾಗ `ಜನುಮದ ಜೋಡಿ' ಚಿತ್ರ ನೂರು ದಿನ ಓಡಿತ್ತು. ಆ ಸಮಾರಂಭಕ್ಕೆ ಶಿವರಾಜ್‌ಕುಮಾರ್ ಬಂದಿದ್ದರು. ಅವರನ್ನು ದೂರದಿಂದ ನೋಡಿದ್ದೆ ಅಷ್ಟೇ. ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ನನ್ನನ್ನು ಹಿರಿಯ ಛಾಯಾಗ್ರಾಹಕ ಗೌರಿಶಂಕರ್ ಅವರಿಗೆ ಹೋಲಿಸಿ ಮಾತನಾಡಿದರು. ಅವರಿಂದ ಅಂಥ ಮಾತು ಕೇಳಿದ ನಾನೇ ಅದೃಷ್ಟವಂತ.ಇದುವರೆಗೂ ಕೆಲಸ ಮಾಡಿದ ಹದಿನೈದು ಸಿನಿಮಾಗಳಲ್ಲಿ ನನಗೆ `ಸವಿ ಸವಿ ನೆನಪು' ತುಂಬಾ ಖುಷಿ ಕೊಟ್ಟ ಸಿನಿಮಾ. ತಂತ್ರಜ್ಞಾನವನ್ನು ಹೆಚ್ಚು ಬಳಸದೇ ಆ ಚಿತ್ರಕ್ಕೆ ಕೆಲಸ ಮಾಡಿದ್ದೆ. ಕತೆಯನ್ನು ಛಾಯಾಗ್ರಹಣದ ಮೂಲಕವೇ ಕಟ್ಟಿಕೊಡಲು ನಿರ್ಧರಿಸಿದ್ದ ನನ್ನ ಪ್ರಯೋಗ ಅದರಲ್ಲಿ ಯಶಸ್ವಿಯಾಗಿತ್ತು. `ಈ ಸಂಭಾಷಣೆ' ಚಿತ್ರದ ಹಾಡುಗಳನ್ನು ಉತ್ತರಾಂಚಲದಲ್ಲಿ ಚಿತ್ರೀಕರಿಸಿದ್ದೆ. ಹಸಿರುತಾಣದಲ್ಲಿ ಚಿತ್ರೀಕರಿಸಬೇಕೆಂಬ ಉದ್ದೇಶದಿಂದ ಭೂಕುಸಿತ ಆಗುತ್ತಿದ್ದರೂ ಲೆಕ್ಕಿಸದೇ ಅಲ್ಲಿಗೆ ಹೋಗಿ ಬಂದೆ. ಆ ಹಾಡುಗಳಿಗೆ ಸಿಕ್ಕ ಮೆಚ್ಚುಗೆ ನನ್ನಲ್ಲಿ ಸಾರ್ಥಕತೆ ತುಂಬಿತು. `ರೋಬೊ' ಚಿತ್ರದ ಹಾಡುಗಳನ್ನು ನನ್ನ `ಯಕ್ಷ' ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣದೊಂದಿಗೆ ಹೋಲಿಸಲಾಗಿತ್ತು. ಕಡಿಮೆ ಬಜೆಟ್‌ನಲ್ಲಿ ಅಂಥ ತಾಂತ್ರಿಕತೆ ಕೊಡಬಹುದು ಎಂದು ಹೇಳಲಾಗಿತ್ತು. ಇಂಥ ಪ್ರಶಂಸೆಗಳು ಖುಷಿ ನೀಡುತ್ತವೆ. `ಡವ್' ಚಿತ್ರಕ್ಕಾಗಿ ಮೊದಲ ಬಾರಿಗೆ ಸ್ಪಾಟ್ ಎಡಿಟಿಂಗ್ ಮಾಡುತ್ತಿರುವೆ. ನಿರ್ದೇಶಕರ ದೃಷ್ಟಿಕೋನಕ್ಕೆ ಹೊಂದಿಕೊಂಡು ಕೆಲಸ ಮಾಡುವ ಛಾಯಾಗ್ರಾಹಕರ ಕೆಲಸ ನಿಜಕ್ಕೂ ಸವಾಲಿನದು. ಅದಕ್ಕೆ ಹಿರಿಯ ಛಾಯಾಗ್ರಾಹಕ ವಿ.ಕೆ. ಮೂರ್ತಿ ಮತ್ತು ಸಂತೋಷ್ ಶಿವನ್ ನನಗೆ ಸ್ಫೂರ್ತಿ.ತಂತ್ರಜ್ಞಾನ ಬಂದ ಮೇಲೆ ಛಾಯಾಗ್ರಹಣ ಸುಲಭವಾಗಿದೆ ಎಂಬ ಮಾತಿದೆ. ಅದನ್ನು ನಾನೂ ಒಪ್ಪುತ್ತೇನೆ. ಸಿನಿಮಾಟೊಗ್ರಫಿಯನ್ನು ಕಲಿತು ಬಂದಿರುವುದರಿಂದ ತಂತ್ರಜ್ಞಾನ ನಮ್ಮಂಥವರಿಗೆ ಬಲುಬೇಗ ಅರ್ಥವಾಗುತ್ತದೆ. ನಾನು ಡಿಜಿಟಲ್ ಕ್ಯಾಮೆರಾದಲ್ಲಿ ಸೆರೆಹಿಡಿದ ಮೊದಲ ಸಿನಿಮಾ `ಲಕ್ಷ್ಮಿ'. ಅದರ ಒಂದು ಹಾಡಿನಲ್ಲಿ ಅಲೆಕ್ಸ್ ಎಂಬ ಕ್ಯಾಮೆರಾವನ್ನು ಉಪಯೋಗಿಸಿರುವೆ. ಇದೀಗ ಅದಕ್ಕಿಂತಲೂ ರೆಸಲ್ಯೂಷನ್ ಹೆಚ್ಚು ಇರುವ ರೆಡ್ ಪಿಕ್ ಕ್ಯಾಮೆರಾವನ್ನು ಬಳಸಿ `ಚಾರ್ ಮಿನಾರ್' ಚಿತ್ರವನ್ನು ಸೆರೆ ಹಿಡಿದಿರುವೆ.ಡಿಜಿಟಲ್ ಮತ್ತು ಸಿನಿಮಾಟಿಕ್ ಕ್ಯಾಮೆರಾ ನಡುವೆ ಅಂಥ ವ್ಯತ್ಯಾಸ ಏನಿಲ್ಲ. ಗುಣಮಟ್ಟ ಬಯಸಿದಾಗ ಎರಡರದೂ ಒಂದೇ ಬಜೆಟ್. ಎರಡೂ ನನಗೆ ಒಲಿದಿರುವುದರಿಂದ ನಿರ್ದೇಶಕರು ಮತ್ತು ನಿರ್ಮಾಪಕರು ಯಾವುದನ್ನು ಬಯಸುತ್ತಾರೆಯೋ ಅದರಂತೆ ಕೆಲಸ ಮಾಡುವೆ. ತಂತ್ರಜ್ಞಾನ ಎಂಥದೇ ಇರಲಿ ಸಿನಿಮಾದ ಕತೆಯೊಂದಿಗೆ ಛಾಯಾಗ್ರಹಣ ಸಾಗಬೇಕು ಎಂಬುದಕ್ಕೆ ನನ್ನ ಮೊದಲ ಆದ್ಯತೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry