ಕಥೆ : ಆ ಕತ್ತಲೆಯಿಂದ

ಶನಿವಾರ, ಜೂಲೈ 20, 2019
27 °C

ಕಥೆ : ಆ ಕತ್ತಲೆಯಿಂದ

Published:
Updated:

ಆ ಉರಿಬಿಸಿಲಿನ ಮಧ್ಯಾಹ್ನ ನಾನು, ನನ್ನ ಅಕ್ಕಂದಿರು ಮನೆಯ ಜಗುಲಿಯ ಮೇಲೆ ಗಾಳಿ ಬೀಸಿಕೊಳ್ಳುತ್ತಾ, ಬೆವರೊರೆಸಿಕೊಳ್ಳುತ್ತಾ ಕುಳಿತಿರಬೇಕಾದರೆ ಬಾಳೆಹಿತ್ತಲ ಸಾವಿತ್ರಕ್ಕ ಸೆರಗಿನಲ್ಲೇನೋ ತುಂಬಿಕೊಂಡು ಓಣಿಯಲ್ಲಿ ಪುಟು ಪುಟು ಬರುತ್ತಿರುವುದು ಕಾಣಿಸಿತು.

 

ಅದಾವ ಭೂತಕಾಲದ ಗುಹೆಯಿಂದ ಇವಳು ಎದ್ದು ಬಂದಳಪ್ಪ ಎಂದುಕೊಳ್ಳುತ್ತಿದ್ದ ಹಾಗೇ  ನಮ್ಮ ಮನೆಯ ಗೇಟನ್ನೇ ತೆರೆದು ಒಳನುಗ್ಗಿದಳು. ಸೆರಗಿನಲ್ಲಿ ತುಂಬಿಕೊಂಡ ಗುಳಬದನೆಕಾಯಿಗಳನ್ನೆಲ್ಲ ಸುರುವಿ ಏದುಸಿರು ಬಿಡುತ್ತ `ಪಾರ್ವತಕ್ಕನ ಮನೆಯಿಂದ ಕೊಯ್ದುಕೊಂಡು ಬಂದೆ.  ಪಲ್ಯ ಮಾಡೋಣವೆಂದರೆ ಸೊಸೆ ಬೇಡ ಎಂದಳು. ಮಗನೂ ಹಾಗೇ ಅಂದ. ಇವತ್ತು ಮಧ್ಯಾಹ್ನ ಗುಳಬದನೆ ಪಲ್ಯ ಮಾಡಿಯೇ ಉಣ್ಣುವವಳು ನಾನು ಎಂದು ಶಪಥ ಮಾಡಿ ಬಂದಿದ್ದೇನೆ.

 

ರುಚಿರುಚಿಯಾಗಿ ಪಲ್ಯ ಮಾಡಿಕೊಡುತ್ತೇನೆ. ಆಗಬಹುದೆ?~ ಎಂದು ಹೇಳಿ ಉತ್ತರಕ್ಕೆ ಕಾದಳು. ಟೊಂಕಕ್ಕೆ ಕೈಯಿಟ್ಟು ಅವಳು ನಿಂತ ಭಂಗಿ, ಕೆದರಿದ ತಲೆಗೂದಲು, ಸವಾಲು ಹೊತ್ತ ಮುಖ- ಹಣೆಯಲ್ಲಿ ಸಣ್ಣಗೆ ಬೆವರ ಹನಿಗಳು ಮೂಡಿದ್ದವು- ಸೀರೆಯನ್ನು ಹೇಗೆ ಹೇಗೋ ಸುತ್ತಿದ್ದಳು - ಕಾಲು ಸುಡುವ ಉರಿಕಾವಲ್ಲೂ ಚಪ್ಪಲಿಯಿಲ್ಲದೆ ಬಂದಿದ್ದಳು - ಅಷ್ಟು ಗಿಡ್ಡ ಆಕೃತಿಯ ಜೀವದ ತುಂಬ ಈ ಮಧ್ಯಾಹ್ನ ಗುಳಬದನೆ ಪಲ್ಯ ಮಾಡಿ ಉಣ್ಣುವುದನ್ನು ಜೀವನ್ಮರಣದ ಪ್ರಶ್ನೆಯನ್ನಾಗಿಸಿಕೊಂಡು ನಿಂತಿದ್ದಳು.ಸಾವಿತ್ರಕ್ಕಳನ್ನು ನೋಡದೆ ಎಷ್ಟೋ ವರ್ಷಗಳಾಗಿಬಿಟ್ಟಿದ್ದವು. ಎಲ್ಲೆಲ್ಲಿಯೋ ತಿರುಗಾಡುತ್ತಿರುತ್ತಾಳೆ. ಯಾವಾಗಲೋ ಕಾಣಿಸಿಕೊಳ್ಳುವಳು, ಮತ್ತೆ ಮರೆಯಾಗುವಳು. ಕನಸಿನಲ್ಲೊಮ್ಮೆ ಯಕ್ಷಗಾನಕ್ಕೆ ಕರೆದೊಯ್ಯುವಳು. ನಮಗಿಂತ ದೊಡ್ಡವಳಾದರೂ ನಮ್ಮ ಚಿಕ್ಕಂದಿನ ಮಂಗಾಟಗಳಿಗೆಲ್ಲ ಸಂಗಾತಿಯಾಗಿರುತ್ತಿದ್ದಳು.ಮಧ್ಯಾಹ್ನದ ಹೊತ್ತು ದೊಡ್ಡವರೆಲ್ಲ ಸ್ವಲ್ಪ ಕಾಲ ಮಲಗಿದರೆ ಆಗಲೂ ನಾವು ಆಡಿ ಕುಣಿದು ಗದ್ದಲವೆಬ್ಬಿಸಲು ಸಾವಿತ್ರಕ್ಕನ ಹಾಜರಿ ನೆರವಾಗುತ್ತಿತ್ತು. `ಈ ಸಾವಿತ್ರಿಗೂ ಬೇರೆ ದಂಧೆಯಿಲ್ಲ~ ಎಂದು ದೊಡ್ಡವರು ಬೈದು ಸುಮ್ಮನಾಗುತ್ತಿದ್ದರು.`ಸಾವಿತ್ರಕ್ಕ, ಮೊದಲು ಕುಳಿತುಕೊಳ್ಳುವಂಥವಳಾಗು~ ಎಂದೆ. ಇಲ್ಲ, ಇಲ್ಲ. ಏನು, ಪಲ್ಯ ಮಾಡೋಣವೇ- ಅದನ್ನು ಮೊದಲು ಹೇಳಿ~ ಎಂದಳು. `ಮಾಡು ಸಾವಿತ್ರಕ್ಕಾ ಮಾಡು.

ಮಧ್ಯಾಹ್ನದ ಊಟ ಗುಳಬದನೆಕಾಯಿ ಪಲ್ಯದಿಂದ ಭೂಷಿತವಾಗಿರಲಿ. ಅದು ನವರಸಗಳಿಂದ ತುಂಬಿದ ನವನವೀನ ಪ್ರಸಂಗವಾಗಿರಲಿ. ಅಷ್ಟೇಕೆ, ಈ ಇಂದಿನ ಆಟದ ಮುಖ್ಯ ಪಾತ್ರಧಾರಿಯಾಗಿ ಗುಳಬದನೆಕಾಯಿ ಪಲ್ಯವು ಮೆರೆಯಲಿ - ಅದನ್ನು ಈ ಭೂಮಂಡಲವು ಅರಿಯಲಿ, ಮಿಕ್ಕಿದ್ದೆಲ್ಲವನ್ನೂ ಮರೆಯಲಿ, ತೊರೆಯಲಿ ಹಾಗೂ ಜರೆಯಲಿ~ ಎನ್ನುತ್ತಿದ್ದಂತೆ ಲಲಿತಕ್ಕ `ಸಾಕು ಮಾಡೋ ನಿನ್ನ ಯಕ್ಷಗಾನವನ್ನ~ ಎಂದಳು.`ಹಾಗಲ್ಲ ಲಲಿತಕ್ಕಾ, ಏನೆಂದು ತಿಳಿದಿರುವೆ. ಈ ಗುಳಬದನೆಕಾಯಿ ಪಲ್ಯವನ್ನು? ಅದರ ಮಹಾತ್ಮೆಯನ್ನು ಬಲ್ಲವರೇ ಬಲ್ಲರು. ಮೇಲೆ ಸುರರು ಬಲ್ಲರು. ಸ್ವಲ್ಪ ಕೆಳಗೆ ಗಂಧರ್ವರು, ಅಪ್ಸರಸ್ತ್ರೀಯರು ಅರಿತಿರುವರು. ಪಾತಾಳದಲ್ಲಿ ಆದಿಶೇಷನು ಬಲ್ಲನು.ಈ ಭೂಮಂಡಲದಲ್ಲಿ ನಾವು ನಾಲ್ವರು ಬಲ್ಲೆವು. ನಾವು ನಾಲ್ವರನುಳಿದು ಈ ಇಹದಲ್ಲಿಹ ಈ ನರಮನುಷ್ಯರು ಏನು ಬಲ್ಲರು ಗುಳಬದನೆ ಪಲ್ಯದ ದಿವ್ಯ ಮಹಿಮೆಯನು?~ ಎಂದು ಯಕ್ಷಗಾನದ ಶೈಲಿಯಲ್ಲಿ ಹೇಳಿದೆ. ಆಗಲೇ ಸಡಗರದಿಂದ ಸಾವಿತ್ರಕ್ಕ ಅಡುಗೆಮನೆ ಸೇರಿ ಗುಳಬದನೆಕಾಯಿಗಳನ್ನು ತೊಳೆದು ಮೆಟ್ಟುಗತ್ತಿಯಲ್ಲಿ ಪುಟ್ಟದಾಗಿ ಹೆಚ್ಚುತ್ತಿದ್ದಳು.

 

`ತೆಂಗಿನೆಣ್ಣೆಯಲ್ಲಿ ಚೆನ್ನಾಗಿ ಹುರಿದು, ಕಾಯಿಸುಳಿ ಹಾಕಿ ತೊಳಸಿ ಸಣ್ಣಬೆಂಕಿಯಲ್ಲಿ ಬೇಯಿಸಿಟ್ಟರೆ ಇನ್ನಾವ ಪಲ್ಯವೂ ಗುಳಬದನೆಕಾಯಿ ಪಲ್ಯಕ್ಕೆ ಸಮನಲ್ಲ~ ಎಂದಳು.ಇಲ್ಲದ ಗಾಂಭೀರ್ಯವನ್ನು ನಟಿಸಿ ಲಲಿತಕ್ಕ, ಪದ್ಮಕ್ಕರೂ ಹೌದು ಹೌದೆಂದರು.ಇದು ಇವಳ ಸ್ವಭಾವ. ಎಲ್ಲಿಯೋ ಸಿಟ್ಟಿಗೇಳುವಳು, ಇನ್ನೆಲ್ಲಿಯೋ ಹೋಗಿ ಸಮಾಧಾನ ಪಡೆಯುವಳು. ಇವಳ ಅತ್ತೆ - ಗಿರಿಜತ್ತೆ ಎಂದು ಕರೆಯುತ್ತಿದ್ದೆವು ಅವಳನ್ನು - ಒಂದು ಸಲ `ಬೇಕಾಬಿಟ್ಟಿಯಾಗಿ ಹೀಗೆಲ್ಲ ತಿರುಗಾಡಬೇಡ. ನೋಡಿದವರು ಏನೆಂದಾರು?~ ಎಂದು ಇವಳಿಗೆ ಬುದ್ಧಿ ಹೇಳಿದಳಂತೆ.ಆ ಮಾತೊಂದು ನೆವವಾಯಿತು ಇವಳಿಗೆ, ಸಿಟ್ಟಿಗೆದ್ದು ಯಲ್ಲಾಪುರದ ಹತ್ತಿರದ ಕಿರವತ್ತಿಯಲ್ಲಿದ್ದ ಇವಳ ಮಾವನ ಭಾವನ ಅಳಿಯನ ಮನೆಗೆ ಹೋಗಿ ಉಳಿದುಬಿಟ್ಟಳು. ಒಂದು ವಾರದ ಮೇಲೆ ಈಕೆ ಮನೆಗೆ ಬಂದಾಗ ಗಿರಿಜತ್ತೆ `ಮಾರಾಯ್ತಿ, ನಿನಗೆ ಏನೂ ಹೇಳುವುದಿಲ್ಲ. ನಿನಗೆ ಬೇಕಾದ ಹಾಗೆ ಇರು, ಮಾತ್ರ, ಈ ಮನೆಯಲ್ಲೇ ಇರು.ಹೇಳದೇ ಕೇಳದೇ ಕಿರವತ್ತಿಗೆ, ಇಡಗುಂಜಿಗೆ ಹೋಗಿಬಿಡಬೇಡ~ ಎಂದು ಕೇಳಿಕೊಂಡಳಂತೆ. `ಮುದುಕಿಗೆ ಬುದ್ಧಿ ಕಲಿಸಿದೆ~ ಎಂದು ಇವಳು ಊರಿಡೀ ಹೇಳಿಕೊಂಡು ತಿರುಗಾಡಿದಳು.ನಾವೆಲ್ಲ ಹುಟ್ಟುವ ಮೊದಲೇ ಇವಳ ಗಂಡ ಸತ್ತು ಹೋಗಿದ್ದ. ಆಗ ಇವಳ ಮಗ ಗಂಗಾಧರನಿಗೆ ಇನ್ನೂ ಒಂದು ವರ್ಷ. `ಅಪ್ಪ ಎಲ್ಲಿ ಹೋಗಿದ್ದಾನೆ?~ ಎಂದರೆ ಆಕಾಶ ತೋರಿಸಿ `ಟಾ ಟಾ ಹೋಗಿದ್ದಾನೆ~ ಎನ್ನುತ್ತಿದ್ದನಂತೆ. ಇವಳ ಅಪ್ಪನ ಮನೆಯಲ್ಲಿದ್ದು ಅವನು ಶಾಲೆಗೆ ಹೋಗುತ್ತಿದ್ದ. ಅದು ಅಳವಳ್ಳಿ.ಹೊನ್ನಾವರ-ಕುಮಟಾ ನಡುವಿನ ಒಂದು ಹಳ್ಳಿ. ಮನೆಯಲ್ಲಿ ಇವಳು, ಇವಳ ಅತ್ತೆ - ಮಾವ. ಎಂಟು ಹತ್ತು ತೆಂಗಿನಮರಗಳ ಪುಟ್ಟ ಹಿತ್ತಿಲು ಅವರ ಜೀವನಾಧಾರ. ಅಷ್ಟು ದಿನ ಇವಳು ಹೊಲಿಗೆ ಕಲಿಯುತ್ತೇನೆ ಎಂದು ಓಡಾಡಿದಳು. ಹೊಲಿಗೆ ಕಲಿಯುವ ಮೊದಲೇ `ನನಗೆ ಹೊಲಿಗೆ ಮಷಿನ್ ತಂದುಕೊಡಲು ಮಾವ ಸಿದ್ಧವಿಲ್ಲ~ ಎಂದು ನಾಕೈದು ಮನೆಗಳಿಗೆ ಸಾರಿ ಬಂದಳು.

ಈಕೆ ಹೊಲಿಗೆ ವಿದ್ಯೆ ಸಾರೋದ್ಧಾರ ಮಾಡಲಿಲ್ಲ ಎನ್ನುವುದು ಬೇರೆ ಮಾತು. ಆದರೆ ಅದಕ್ಕೂ ಮೊದಲೇ ಇವಳಿಗೆ, ಇವಳ ಶ್ರೇಯಸ್ಸಿಗೆ ಎಲ್ಲರೂ ಆತಂಕ ಒಡ್ಡುವವರಾಗಿಯೇ ಕಾಣಿಸಿದ್ದರು.ಇವಳು ಕಲಿತ ಅಲ್ಪ ಸ್ವಲ್ಪ ಹೊಲಿಗೆಯಿಂದ ಪ್ರಯೋಜನವಾದದ್ದು ನಮಗೆ. ನಮ್ಮ ಆಟದ ಗೊಂಬೆಗಳಿಗೆ ಇವಳು ಅಂಗಿ ಹೊಲಿದುಕೊಟ್ಟಳು. ಎಲ್ಲೋ ಗುಂಡಿ, ಇನ್ನೆಲ್ಲೋ ಕಾಜು! ಪಾಪ! ಮಾತು ಬಾರದ ಆ ಗೊಂಬೆಗಳು ಸುಮ್ಮನೆ ಹಾಕಿಕೊಂಡವು. ಮಿಕ್ಕಾರ ಗೊಂಬೆಗಳಿಗೂ ಅಂಗಿಗೆ ದಿಕ್ಕಿರದ ಸಂದರ್ಭದಲ್ಲಿ ನಮ್ಮ ಹುಲಿ, ಸಿಂಹಗಳಿಗೂ ಸಾವಿತ್ರಕ್ಕ ಹೊಲಿದ ನಾಕೈದು ಬಣ್ಣದಂಗಿಗಳು! ಹೊಲಿಗೆಯಂಗಡಿಯ ಚೂರು ಪಾರು ಬಟ್ಟೆಗಳಿಂದ ತಯಾರಾದವು ಅವು. ಅವನ್ನೆಲ್ಲ ಧರಿಸಿದ ಮೇಲೆ ನಮ್ಮ ಮುರುಕುಗೊಂಬೆಗಳೂ ಗೆಲುಮುಖವಾದಂತೆ ಕಂಡವು.ಸಾವಿತ್ರಕ್ಕ ಅರ್ಧಕ್ಕೆ ನಿಲಿಸಿದ ಇಂಥ ಸಾಹಸಗಳ ಲೆಕ್ಕ ಇರಿಸುವುದು ಕಷ್ಟ. ಅಷ್ಟು ದಿನ ಹಪ್ಪಳ ಬಾಳಕ ಮಾಡಿ ಮಾರಾಟ ಮಾಡುತ್ತೇನೆಂದು ಓಡಾಡಿದಳು. ಅಪ್ಪೆ ಮಾವಿನಮಿಡಿ ಉಪ್ಪಿನಕಾಯಿ ಮಾರಿಯೇ ಗೋಕರ್ಣದ ಸರೋಜತ್ತೆ ಎರಡೂ ಕೈಗೆ ಎರಡೆರಡು ಪಾಟಲಿ ಬಳೆ ಮಾಡಿಸಿಕೊಂಡಳೆಂದು ತಿಳಿದು ಇವಳು ನಮ್ಮ ಇಡೀ ಊರಿಗೆ ಸುತ್ತು ಹಾಕಿ ಸರ್ವೆ ಮಾಡಿಬಂದಳು. ಅವಳ ಉತ್ಸಾಹಕ್ಕೆ ಸಾವಿಲ್ಲ. ಎಲ್ಲೋ ಕಾಗಾಲದ ರಾಮಭಟ್ಟರ ಸೊಸೆಗೆ ಹೆರಿಗೆ ನೋವೆಂದು ಸಹಾಯಕ್ಕೆ ಓಡುವಳು.ಗೋಪಾಲ ಪಂಡಿತರ ವಾತಕ್ಕೆ ಬೆಳಂಬರದ ಔಷಧ ತರಿಸಿಕೊಡುವೆನೆಂದು ಮುನ್ನುಗ್ಗುವಳು. ಶಾಲೆಯ ಕಾರ್ಯಕ್ರಮ ಒಂದಕ್ಕೆ ಡಾನ್ಸ್ ಕಲಿಯಬೇಕಿತ್ತೆಂದರೆ ತಾನು ಕಲಿತಿದ್ದ ಡಾನ್ಸನ್ನೇ ಕಲಿಸಿಕೊಡುವುದಾಗಿ ಉಮೇದು ಮಾಡುವಳು. ರವಿವಾರದ ಮಧ್ಯಾಹ್ನ ಕಲಿಸುವೆನೆಂದು ಸಮಯ ನಿಗದಿಗೊಳಿಸುವಳು.ಆದರೆ ಆ ಸಮಯಕ್ಕೆ ಇನ್ನೆಲ್ಲೋ ಹೋಗಿಬಿಡುವಳು. ಬಂದ ಮೇಲೆ ಗಂಟು ಬಿದ್ದರೆ `ಆಯಿತು, ಹೇಳಿಕೊಡುವೆ, ಅದೆಷ್ಟು ಹೊತ್ತು?~ ಎಂದು ಸೀರೆ ಸೊಂಟಕ್ಕೆ ಕಟ್ಟುವಳು.ಚಂಗನೆ ಜಿಗಿದು `ಸುನಿತಿದೇವಿ/ನಿದ್ದೆ ತಿಳಿದು/ಎದ್ದು ಕುಳಿತಳು~ ಎಂದು ಒಂದೊಂದು ಗೀಟಿಗೂ ಒಂದೊಂದು ಹೆಜ್ಜೆ, ಒಂದೊಂದು ಭಾವ ತೋರುತ್ತ ಮುಂದೆ ಬರುವಳು. ಮುಂದಿನ ಸಾಲೇನು? ಅದು ನೆನಪಾಗದು. ಆ ಡಾನ್ಸಿನ ಮುಂದಿನ ಸಾಲನ್ನು ಅವಳು ಲಲಿತಕ್ಕನಿಗೆ ಕಲಿಸಲೇ ಇಲ್ಲ. ಅಷ್ಟಕ್ಕೆ ನಾವು ಬಿಡುವೆವೆ? ಮುಂದೊಂದು ದಿನ ಸಾವಿತ್ರಕ್ಕ ಬಂದಾಗ-

`ಸುನಿತಿದೇವಿ ನಿದ್ದೆ ತಿಳಿದು ಎದ್ದು ಕುಳಿತಳು

ಸಾವಿತ್ರಕ್ಕನನ್ನು ಅವಳು ಹುಡುಕಿ ಹೊರಟಳು~

ಎಂದು ಸಮೂಹನೃತ್ಯ ಮಾಡಿ ತೋರಿಸಿದೆವು. `ಹಾಗಲ್ಲ, ಹೀಗೆ, ಸಾವಿತ್ರಕ್ಕನನ್ನು - ಎನ್ನುವಾಗ ಹೀಗೆ ಅಭಿನಯಿಸಬೇಕು~ ಎಂದು ತನ್ನ ನಡಿಗೆಯನ್ನು ತಾನೇ ನಟಿಸಿ ತೋರಿಸಿ ನಗಿಸಿದಳು. ಇಂಥ ಆಟಗಳಲ್ಲೇ ಇವಳ ಜೀವನವೆಲ್ಲ ಕಳೆದಂತಿದೆ.ಯಾರಾರದೋ ಮಗುವಿನ, ಅಜ್ಜನ, ಅಜ್ಜಿಯ ಆರೈಕೆಗೆ, ದೇಖ-ರೇಖೆಗೆ ಮುಂಬಯಿ, ಧಾರವಾಡ, ಬೆಂಗಳೂರುಗಳ ಪಾರ್ಟ್ ಟೈಂ ಕೋರ್ಸುಗಳು ಬೇರೆ. ಗಂಟೆಗಟ್ಟಲೆ ಕ್ಯೂದಲ್ಲಿ ನಿಂತು ಇತ್ತೀಚೆಗೆ ಥಾನಾದಲ್ಲಿ `ಟೈಟಾನಿಕ್~ ಸಿನಿಮಾ ನೋಡಿ ಬಂದುದನ್ನು ಸಂಭ್ರಮದಿಂದ ವರ್ಣಿಸುತ್ತ ಗುಳಬದನೆ  ಪಲ್ಯ ಮಾಡಿ ಮಲಗಿಸಿದಳು.ಅವಳ ವೃತ್ತಾಂತ ಕೇಳಿದರೆ ನಮ್ಮ ಸುತ್ತವೇ ಎಲ್ಲೆಲ್ಲೋ ಓಡಾಡುತ್ತಿದ್ದೂ ನಮ್ಮ ಕಥೆಯೊಳಗೆ ಸೇರಿರದಂತೆ ತೋರುತ್ತಿದ್ದಳು - ಯಾವ ಕ್ಷಣದಲ್ಲೂ ನಮ್ಮ ಕಥಾನಕದೊಳಕ್ಕೆ ನುಗ್ಗಬಹುದಾಗಿದ್ದ ಅವಳ ಪಾತ್ರವು ಇದೀಗ ಸೆರಗಲ್ಲಿ ಪುಟ್ಟ ಪುಟ್ಟ ಗುಳಬದನೆಗಳನ್ನು ತುಂಬಿಕೊಂಡು ಪುಟುಪುಟು ಹೆಜ್ಜೆ ಹಾಕುತ್ತ ಪ್ರವೇಶಿಸಿತ್ತು ಮತ್ತು ಸದ್ಯದ ಕ್ಷಣದಲ್ಲಿ ಒಲೆಯ ಸಣ್ಣಬೆಂಕಿಯ ಮುಂದೆ ಬಂಡಿಯ ಪಲ್ಯವನ್ನು ಸಾಟಿನಿಂದ ತೊಳಸುತ್ತಲಿತ್ತು.ಇವಳನ್ನು ಕಥೆಯಾಗಿಸುವುದೆ? ಇಲ್ಲ, ಇವಳೇ ಒಂದು ಕಥೆ. ದಿಕ್ಕಿಲ್ಲದಂತೆ ಹರಿಯುವಳು, ಆದರೆ ದಿಕ್ಕಿದೆ. ವಿಚಿತ್ರ ತಿರುವುಗಳಲ್ಲಿ ಬಂದು ನಿಲ್ಲುವಳು. ಕಥೆ ಮುಗಿಯಿತೆನ್ನುವಾಗ ಒಂದು ಉದ್ದಾನುದ್ದ ರಸ್ತೆಯೇ ಕಣ್ಣೆದುರು ತೋರುವುದು. ಆ ರಸ್ತೆಯಲ್ಲಿ ನಡೆಯುವುದು ಕಷ್ಟವೆ? ಓಡಿರಿ. ಆದರೆ ಇವಳು, ಈ ಸಾವಿತ್ರಕ್ಕ ರಾಜ ಮಹಾರಾಜರನ್ನು ಆ ರಸ್ತೆಯಲ್ಲಿ ಬರಿಗಾಲಲ್ಲಿ ನಡೆಸಿರುವಳು.ಅವರು ಈಕೆಯನ್ನು ಮಾತನಾಡಿಸದೆ ಮುಂದೆ ಹೋದ ದಿನ ಇವಳು ಅವರ ಕುದುರೆಗಳಿಗೆ  ಬರಬಾರದ  ರೋಗಗಳ ದಯಪಾಲಿಸಿರುವಳು. ಇವಳ ಕಾಲಿಗೆ ಬಿದ್ದು ಮಹಾರಾಜರನೇಕರ ಮಡದಿಯರು ಸಂತಾನಪ್ರಾಪ್ತಿ ಮಾಡಿಕೊಂಡಿರುವರು. ಕಥೆಗೆ ಕಾಲಿಲ್ಲ ಎನ್ನುವರು. ಹಾಗಾದರೆ ಅದನ್ನು ಏರೋಪ್ಲೇನ್ ಮೇಲೆ ಕೂರಿಸಿಬಿಡೋಣ ಎನ್ನುವಳು ಸಾವಿತ್ರಕ್ಕ.ಸತ್ಯವಾನನ ಮಡದಿ ಸಾವಿತ್ರಿಯಾಗಿದ್ದವಳು ಅವಳು. ಹೇಗೆ ಆ ಜನ್ಮದಲ್ಲಿ ಯಮನ ಬೆನ್ನು ಬಿಡದೆ ಹೋಗಿ ಗಂಡನ ಪ್ರಾಣ ವಾಪಸು ಪಡೆದೆ ಎಂದು ನಮಗೆ ಮನದಣಿಯ ವರ್ಣಿಸುತ್ತಿದ್ದಳು. `ನಮ್ಮ ಹಿಂದಿನ ಜನ್ಮಗಳದೂ ಕಥೆ ಹೇಳು~ ಎಂದು ಅವಳನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವು. `ಕೇಳಿರಿ, ನಾವೆಲ್ಲರೂ ಮಹಾಭಾರತ ಕಾಲದಲ್ಲಿ ಗೋಪಿಕಾ ಸ್ತ್ರೀಯರಾಗಿದ್ದೆವು.ಶ್ರೀಕೃಷ್ಣನ ತುಂಟಾಟಗಳನ್ನು ಹತ್ತಿರದಿಂದ ನೋಡಿದವರು ನಾವು. ಅವನೊಡನೆ ಆಟಗಳನ್ನು ಆಡಿದ್ದೆವು. ಮತ್ತೆ - ರಾಮಾಯಣದಲ್ಲಿ ಮಾತ್ರ.. (ಸ್ವಲ್ಪ ತಡೆದು).. ನಾವು ಕಪಿಗಳಾಗಿದ್ದೆವು. (ನಾವೆಲ್ಲ ನಗಲಾರಂಭಿಸುವೆವು). ನಕ್ಕರೆ ಕಥೆ ಇಲ್ಲ. ಹಾಗೆ ನೋಡಿದರೆ ಇದು ಕಥೆಯೇ ಅಲ್ಲ. ನಿಜಕ್ಕೂ ನಡೆದದ್ದು.

 

(`ಛೆ ಛೆ ಛೆ~, `ಆದರೂ ಮಂಗಗಳೆಂದರೆ..~, `ಅಲ್ಲ, ಆ ಬಾಲಗಳು ಎಲ್ಲಿ ಹೋದವೋ!~, `ಮುಖ್ಯ ಪಾತ್ರಗಳಲ್ಲದಿದ್ದರೂ ಅಯೋಧ್ಯೆಯ ಪ್ರಜೆಗಳು ಎನ್ನಬಹುದಿತ್ತು~.. ಎಂದೆಲ್ಲ ನಮ್ಮ ಉದ್ಗಾರಗಳು. ಸಾವಿತ್ರಕ್ಕ ನಕ್ಕು ಮುಂದುವರಿಸುವಳು). ಹಾಗೇ ಆಗಲಿ, ರಾಮಾಯಣ ಕಾಲದಲ್ಲಿ ನಾವು ಅಯೋಧ್ಯೆಯ ಸತ್ಪ್ರಜೆಗಳಾಗಿದ್ದೆವು. ಈಗ ಮಾತ್ರ ಬಾಲವಿಲ್ಲದ ವಾನರರಾಗಿರುವೆವು.

 

(`ಇದು ನಿಜಕ್ಕೂ ಅನ್ಯಾಯ~, `ಏನು, ಮಾನವನಿಂದ ಮಂಗನೆ?~, `ಕಥೆಯನ್ನು ಬದಲಾಯಿಸು. ಆಗ ಮಂಗಗಳಾಗಿದ್ದೆವು, ಈಗ ಮನುಷ್ಯರಾಗಿದ್ದೇವೆ ಎಂದಿಟ್ಟುಕೊಳ್ಳೋಣ~). ಹ್ಞಾಂ.. ಹೀಗೆ ಬನ್ನಿ ಹಾದಿಗೆ. ರಾಮಾಯಣ ಕಾಲದಲ್ಲಿ ನಾವೆಲ್ಲರೂ ಮಂಗಗಳಾಗಿದ್ದೆವು. ಕವಿಗಳು ಮಂಗಗಳ ಉಪವಾಸ ಎಂಬ ಕಥೆ ಬರೆದದ್ದು (`ಕಥೆಯಲ್ಲ ಅದು ಕವಿತೆ~, `ಸರಿ, ಏನೋ ಒಂದು~) ಆ ಕಾಲದಲ್ಲಿಯೇ. ಹೀಗೆ ಎಲ್ಲೆಲ್ಲೋ ಅವಳ ಮನಸ್ಸು ಓಡುತ್ತ ಓಡುತ್ತ ಯಾವುದೋ ಪಾಯಿಂಟಲ್ಲಿ ಅಘನಾಶಿನಿಯ ಕೊನೆ ಬಸ್ಸಿನ ಬ್ರೇಕೊತ್ತಿದಂತೆ ನಿಂತುಬಿಡುವುದು..ನಮ್ಮ ಕಥೆಗಳು ನಿಂತಿದ್ದು ಕೂಡ ಹಾಗೆಯೆ. ಅದೆಷ್ಟು ದಿನದವರೆಗೆ ಸಾವಿತ್ರಕ್ಕ ನಮಗೆ ಇಂಥ ಕಥೆಗಳ ಸಂಗಾತಿಯಾಗಿದ್ದಳೋ, ಬಳಿಕ ಯಾರ ಮನೆಗೆ ಮುರಗಲಕಾಯಿ ಹೆಕ್ಕಲು ಹೋಗಿ ಕಳೆದುಹೋದಳೋ, ಯಾರ ಮನೆಯಲ್ಲಿ ಹಪ್ಪಳ ಒರೆಯುತ್ತಲೇಉಳಿದುಬಿಟ್ಟಳೋ.ಮುಪ್ಪು ಸಾವಿತ್ರಕ್ಕನನ್ನೂ ಬಿಡದಲ್ಲ! ಒಂದು ದಿನ ಈಕೆ ಸತ್ತೂ ಬಿಡುವಳು. ಅಲ್ಲಿಗೇ ಕಥೆ ಮುಗಿದುಬಿಡುವುದೇನು? ಅಲ್ಲ, ಈಗ, ಇದೀಗ ಎಷ್ಟೋ ಮಳೆಗಾಲ, ಬೇಸಿಗೆಗಳ ಬಳಿಕ ನಮ್ಮ ಕಥೆಯ ಆವರಣದೊಳಕ್ಕೆ ಇವಳು ಯಾವ ಹಕ್ಕಿನಿಂದ ಗೇಟು ತೆರೆದು ನುಗ್ಗಿದಳು? ಈ ಕಥೆ ಈಗ ಹೇಗೆ ಮುಂದುವರಿಯುವುದು?ಊಟಕ್ಕೆ ಬೆಳಗಿನ ಬಸಳೆದೋಸೆಯನ್ನೂ ಹಾಕಿಕೊಂಡು ಪಲ್ಯದೊಡನೆ ಮೆಲ್ಲುತ್ತ `ಆಹಾ~ ಎಂದೆ. ನಿಜಕ್ಕೂ ಪಲ್ಯ ರುಚಿಯಾಗಿತ್ತು. ಲಲಿತಕ್ಕ, ಪದ್ಮಕ್ಕ ಏನೇನೋ ಪ್ರಶ್ನೆ ಕೇಳುತ್ತ ಸಾವಿತ್ರಕ್ಕನಿಗೆ ಕಿಚಾಯಿಸುತ್ತಿದ್ದರು. `ನೀನು ಹೇಳಿಕೊಟ್ಟ ಡಾನ್ಸ್ ನನಗೆ ಎಂದೂ ಮರೆಯುವುದಿಲ್ಲ ಸಾವಿತ್ರಕ್ಕ. ನನ್ನ ಮಕ್ಕಳಿಗೂ ಹೇಳಿಕೊಟ್ಟಿದ್ದೇನೆ~ ಎಂದು ಲಲಿತಕ್ಕ ಹಳೆಯದನ್ನು ನೆನೆದಳು.ಗಂಭೀರವಾಗಿ `ಏಯ್, ನಿನ್ನ ಮಕ್ಕಳು ನನ್ನನ್ನು ಬಹಳ ಸದರ ಮಾಡಿಕೊಂಡಾರು~ ಎಂದಳು. `ನಿನ್ನ ವಿಷಯದಲ್ಲಿ ದೂರಕ್ಕೆ, ಸದರಕ್ಕೆ ವ್ಯತ್ಯಾಸ ಎಲ್ಲಿದೆ, ಹೇಳು~ ಎಂದವಳು ಪದ್ಮಕ್ಕ. ಅವಳು ಬೇರೆಯದೇ ಪ್ರಸಂಗಕ್ಕೆ ಅಣಿಯಾಗುತ್ತಿದ್ದಳು.ಸಾವಿತ್ರಕ್ಕ, ನೀನು ಕಲಿಸಿದ `ದೇವಿ, ನೀಡೆ ನೀ ಶುಭವ~ ಪೂಜೆ ಹಾಡು ಸ್ವಲ್ಪ ಮರೆತೇ ಹೋಗಿದೆ~~ ಎಂದಳು. `ಓಹೋ, ಈಗಲೂ ಹೇಳುತ್ತೇನಲ್ಲ~ ಎನ್ನುತ್ತ ಸಾವಿತ್ರಕ್ಕ ಎಂಜಲುಕೈಯನ್ನು ಹಿಡಿದೇ ಊಟದ ಮಧ್ಯೆಯೇ ಆ ಪದ್ಯ ಹಾಡಿಯೇ ಬಿಟ್ಟಳು.ಎಲ್ಲವೂ ಎಂದಿನಂತೆ. ಸಾವಿತ್ರಕ್ಕಳ ಜೀವನದಲ್ಲಿ ಯಾವುದೂ ಬದಲಾಗಿಲ್ಲ. ಬಹುಶಃ ನಾವು ಬದಲಾಗಿದ್ದೇವೆ. ಅಂದಿನಂತೆ ಅವಳ ಸಖರಾಗಿ ಆಡಲಾರೆವು, ಹಾಡಲಾರೆವು.ನಾವೇ ಬಿಟ್ಟು ಬಂದ - ಅವಳಿಗಿಂತ ಎಷ್ಟೋ ಚಿಕ್ಕವರು ನಾವು - ನಾವು ಬಿಟ್ಟು ಬಂದ ಅದೊಂದು ಕಾಲಘಟ್ಟವನ್ನು, ಆ ಅಚ್ಚರಿಗಳನ್ನು, ಭಯಗಳನ್ನು ಇವಳು ತನ್ನ ಸುತ್ತಲೂ ಇನ್ನೂ ಇಟ್ಟುಕೊಂಡು ಓಡಾಡುತ್ತಿದ್ದಾಳೆ ಎನ್ನಿಸಿತು. ಇವಳ ಜಗತ್ತಿನಲ್ಲಿ ನಾವು - ಏನು? ರೆಕ್ಕೆಗಳಿಲ್ಲದ ಹಕ್ಕಿಗಳೆ? ಬರಿಗಾಲಲ್ಲಿ ನಡೆವ ರಾಜಕುಮಾರರೆ? ಇವಳ ಅನುಗ್ರಹ ಪಡೆದು ಏನನ್ನಾದರೂ ಸಾಧಿಸಬಹುದಾದ ವರಪುತ್ರರೆ? ಇವಳ ಜಗತ್ತಿನಲ್ಲಿ ನಾನು ಬರೆವ ಕಥೆ, ಕವಿತೆಗಳಿಗೆ ಯಾವ ಬೆಲೆ? ಏನು ಬೆಲೆ!`ಇಂವ ಪದ್ಯ-ಗಿದ್ಯ ಬರೀತಾ ಹೇಳಿ ನಿಂಗುತ್ತಿದ್ದೋ?~ ಎಂದಳು ಪದ್ಮಕ್ಕ. `ಟೀವೀಲೂ ಬಂದಿದ್ನಲೇ~ ಎಂದು ಲಲಿತಕ್ಕ ಒಗ್ಗರಣಿ ಹಾಕಿದಳು. `ಗುತ್ತಿದೆ, ಗುತ್ತಿಲ್ಲದೆ ಏನು? ಆದರೂ ಕವಿ ಎಂದರೆ ಶಿವರಾಮ ಕಾರಂತರು~ ಎಂದಳು. `ಶಿವರಾಮ ಕಾರಂತರು ಕವಿಗಳಲ್ಲ ಸಾವಿತ್ರಕ್ಕ. ಕಾದಂಬರಿಕಾರರಲ್ಲವೇನು?~ ಎಂದಳು ಲಲಿತಕ್ಕ. `ಎಲ್ಲಾ ಒಂದೇಯ~ ಎಂದು ಸಾವಿತ್ರಕ್ಕ ಚುಟುಕಾಗಿ ಹೇಳಿದಳು. `ಅದೇಯ~ ಎಂದು ಪದ್ಮಕ್ಕ ರಾಗವೆಳೆದಾಗ ಕಷ್ಟಪಟ್ಟು ನಗು ಹತ್ತಿಕ್ಕಿಕೊಂಡೆ.ಕಥೆಗೆ ತಲೆಯಿಲ್ಲ, ಬುಡವಿಲ್ಲ ಎನ್ನುವವಳು ಸಾವಿತ್ರಕ್ಕ. ತಲೆಯೂ, ಬುಡವೂ ಇದೆ ಎನ್ನುವವರು ನಾವು. ಕಾರಣಗಳ ಹಂಗಿಲ್ಲದೆ ಬದುಕುವೆನೆನ್ನುವ ನಿನ್ನ ಬದುಕಲ್ಲೂ ಕಾರಣಗಳಿಲ್ಲವೆ, ಸಾವಿತ್ರಕ್ಕ? ನೀನು ನಮ್ಮ ಮನೆಗೀಗ ಬಂದುದಕ್ಕೆ ಕಾರಣವಿದೆ - ಪಲ್ಯ ಮಾಡಿ ತಿನ್ನಲು.ನಮ್ಮ ಮನೆಗೇ ಬಂದುದಕ್ಕೆ ಕೂಡ ಕಾರಣವಿದೆ - ನಮ್ಮ ಅಪ್ಪ, ಆಯಿ ಎಲ್ಲಿಗೋ ಹೋಗಿದ್ದಾರೆ, ನಾವು ಮಕ್ಕಳು ಮಾತ್ರ ಸದ್ಯ ಇಲ್ಲಿದ್ದೇವೆ, ಇಲ್ಲಿ ಪಲ್ಯ ಮಾಡಲು ಒಪ್ಪಿಗೆ ಪಡೆಯುವುದು ಸುಲಭ. ಆದರೆ ಕಾರಣ ತಿಳಿಯದ ಸಂಗತಿಗಳೂ ಇವೆ- ನಿನಗೇಕೆ ಈ ದಿನವೇ ಆ ಪಲ್ಯ ಮಾಡಿ ತಿನ್ನಬೇಕು?ನಮ್ಮ ಕಥೆಯಿಂದ ಒಂದು ದಿನ ಅಡ್ರೆಸ್ಸಿಲ್ಲದೆ ಪರಾರಿಯಾಗಿ ಹೋದ ನೀನು ಈ ಉರಿಬಿಸಿಲಲ್ಲೇಕೆ ಈ ಧಾವಂತದಿಂದ ಬಂದು ಸೇರಿಕೊಳ್ಳಬೇಕು? ಯಾವ ಸಾವನ್ನು ಮೀರುವ ಹವಣಿಕೆ ನಿನ್ನದು? ನೀನೂ ಕಡಿಮೆಯವಳಲ್ಲ, ಬಲೇ ರಾಜಕಾರಣಿ.ಸತ್ಯವಾನನ ಪ್ರಾಣ ತರಲು ಹೋದವಳು ನೀನೇ ಹೌದೋ, ಅಲ್ಲವೋ- ನನಗೆ ತಿಳಿಯದು. ಆದರೆ ನಿನ್ನ ಪ್ರಾಣವನ್ನು ನನ್ನ ಕಥೆಯಲ್ಲಿಟ್ಟು ಹೋಗಲು ಈಗ ಬಂದಿರುವಿ, ನೀನು ಮಾಯಾವಿ, ನೀನು ಚಿರಕನ್ಯೆ, ಯುಗಯುಗಗಳಿಂದ ನೀನು ಹೀಗೇ ಮಾಡುತ್ತ ಬಂದಿರುವೆ, ಪ್ರಚಂಡ ಧೈರ್ಯಶಾಲಿ ನೀನು. ನಿನ್ನಲ್ಲಿ ಎಂತೆಂಥವೋ ಗುಟ್ಟುಗಳಿವೆ.ಅವನ್ನೆಲ್ಲ ಮುಚ್ಚಿಟ್ಟು ಗುಳಬದನೆ ಪಲ್ಯದ ನೆವ ಮಾಡಿಕೊಂಡು ನನ್ನ ಮನೆಯೊಳಕ್ಕೆ ಹೊಕ್ಕಿದ್ದೀ - ಅಲ್ಲ? ನೀನು ಚಿರಚೇತನೆ, ನಿನ್ನದು ಹಿಂಗದ ದಾಹ, ಕಾರಣಗಳ ಹಂಗಿಲ್ಲ ಎನ್ನುತ್ತಲೇ ಕಾರಣಗಳ ಹಗ್ಗ ಕೈಗೆ ಕೊಟ್ಟು ಅಷ್ಟು ದೂರ ಅಳೆಸುವೆ, ಅಳೆಯಲಾಗದ ಇನ್ನೊಂದಿಷ್ಟು ದೂರ ಉಳಿಸುವೆ, ಯಾಕೆ-ಯಾಕೆ - ಈ ಆಟಗಳೆಲ್ಲ ಯಾಕೆ? ಏನು ನಿನ್ನ ಹುನ್ನಾರ?   ಗಕ್ಕನೆ ಎದ್ದು ಕೂತೆ. ಇನ್ನೂ ಹಳೆಯ ಪ್ರಸಂಗಗಳನ್ನು ನೆನೆಸಿಕೊಳ್ಳುತ್ತ ಲಲಿತಕ್ಕ, ಪದ್ಮಕ್ಕ ಹೊರಜಗುಲಿಯ ಆರಾಮ ಕುರ್ಚಿಯಲ್ಲಿ ಕುಳಿತು ಸಾವಿತ್ರಕ್ಕನ ಹುಡುಗಾಟಿಕೆಯ ಒಂದೊಂದೇ ಪರೆ ಬಿಡಿಸುತ್ತಿದ್ದರು. ಅವಳೂ ಉಮೇದುಗೊಂಡು ಏನೇನೋ ಹಲುಬುತ್ತಿದ್ದಳು.ನಾನು ಒಮ್ಮೆಲೆ ಆ ಕಥಾರಂಗವನ್ನು ಪ್ರವೇಶಿಸಿ-

`ಸಾವಿತ್ರಕ್ಕ, ಆ ಸಂಜೆ ನೀನು ಪಂಡಿತರ ಕೇರಿಯ ಆ ಹಳೆ ಮನೆಯೊಳಕ್ಕೆ ನಮ್ಮನ್ನು ಕರೆದುಕೊಂಡು ಹೋಗಿದ್ದೆ, ನೆನಪಿದೆಯೇನು?~ - ಎಂದು ಕೇಳಿದೆ.

ಸಂಜೆಯಾಗುತ್ತಿತ್ತು, ಪಡುವಣದ ಕೆಂಪು ನಮ್ಮ ತೋಟದಲ್ಲೂ ಸುರಿದು, ಸುರಿದು ಈಗ ಎಲ್ಲವೂ ಕಪ್ಪಾಗತೊಡಗಿತ್ತು.`ನೆನಪಿದೆ, ನೆನಪಿದೆ~ ಎಂದು ಮೂರೂ ದನಿಗಳು ಒಮ್ಮೆಲೆ ಉತ್ತರಿಸಿದವು.

`ಮೊದಲು ಆ ಕೋಟೆ ಬಾಗಿಲನ್ನು ಕಂಡೆವು, ಅಚ್ಚರಿಗೊಂಡೆವು~.

`ಶಿಥಿಲವಾದ ಆ ಗೋಡೆ, ಹೆಜ್ಜೆಗಳಲ್ಲಿ ಚಿಗುರಿದ್ದ ಪುಟ್ಟ ಗಿಡಗಳನ್ನು ಕಂಡೆವು, ಮೂಸಿದೆವು~.

`ನಿಧಾನಕ್ಕೆ ಒಳಗೆ ಹೆಜ್ಜೆ ಇಟ್ಟೆವು~

`ಒಂದು~

`ಎರಡು~

`ಮೂರು~

`ಹೆಜ್ಜೆಗಳನ್ನಿಡುತ್ತಾ ಕೋಟೆಯೊಳಗೆ ಹೊಕ್ಕೆವು~.

`ಎಂಥ ಮನೆ! ಎಂಥ ಮನೆ!~

`ಹಳೆಕಾಲದ ಒಳ್ಳೆ ಗುಹೆಯಂಥ ಮನೆ~

`ಬಾಗಿಲು ನೂಕಿ ಒಳಹೋದೆವು~

`ಅಬ್ಬಾ! ಕತ್ತಲೆ~

`ಗವ್ವೆನ್ನುವ ಕತ್ತಲೆ~

`ಅಂಗಳದಲ್ಲಿ ಕತ್ತಲೆ~

ಜಗುಲಿಯಲ್ಲಿ ಕತ್ತಲೆ~

`ಒಳಗಂತೂ ಕತ್ತಲೆ - ಕತ್ತಲೋ ಕತ್ತಲೆ~

`ಈಗ ಎಲ್ಲಿದೆ ಆ ಮನೆ, ಸಾವಿತ್ರಕ್ಕಾ?~

`ಅಲ್ಲೇ ಇದೆಯಲ್ಲೋ ಬೆಪ್ಪಾ, ಅದೆಲ್ಲಿ ಹೋಗುವುದು?~

`ನನ್ನ ಕಥೆಗೊಮ್ಮೆ ಅದನು ಕಡ ಕೊಡವಿಯೇನೇ?~

`ತೆಗೆದುಕೊಳ್ಳೋ ಹುಚ್ಚ - ಅದು ನನ್ನದೇನೋ?~

`ಯಾರದದು ಆ ಮನೆ, ಕೇಳುವವರಿಲ್ಲೇ?~

`ಆ ಪಂಡಿತರು ಇನ್ನಿಲ್ಲ ಕೇಳಿಬಲ್ಲೆ~

`ಎಂಥ ಮನೆ! ಎಂಥ ಮನೆ! ಎಂಥ ಕತ್ತಲು!~

`ಕರಿದೆವ್ವದಂಥ ಕತ್ತಲು~

`ಒಬ್ಬರ ಕೈ ಒಬ್ಬರು ಹಿಡಿದು ನಾಲ್ವರೂ ಆ ಮನೆಯೊಳಕ್ಕೆ ಪ್ರವೇಶಿಸಿದೆವು. ಕೈಯಲ್ಲಿ ಬ್ಯಾಟರಿ ಹಿಡಿದಿದ್ದಳು ಸಾವಿತ್ರಕ್ಕ. ಬ್ಯಾಟರಿಯ ಇಷ್ಟು ಬೆಳಕಲ್ಲಿ ಅಲ್ಲಿ ಎಲ್ಲವೂ ಚಿತ್ರ ವಿಚಿತ್ರವಾಗಿ ತೋರುತ್ತಿತ್ತು. ಮುಚ್ಚೇ ಇದ್ದ ಕಿಟಕಿಗಳನ್ನು ಕಷ್ಟಪಟ್ಟು ತೆರೆಯಲೆತ್ನಿಸಿದರೆ ಕಿಟಕಿಗೆ ಬಡಿದಿದ್ದ ಕಪ್ಪೆಲ್ಲ ಕೈಗೆ, ಮೈಗೆ ಅಂಟಿಕೊಂಡಿತು.

 

ಈ ಬೆಳಕನ್ನು ತಾಳೆವೆಂಬಂತೆ ಬಾವಲಕ್ಕಿಗಳು ಪಟ ಪಟ ರೆಕ್ಕೆ ಬಡಿದು ಎಲ್ಲೆಂದರಲ್ಲಿ ಹಾರಲಾರಂಭಿಸಿದವು. ನಮ್ಮ ಮೈಗೂ ಢಿಕ್ಕಿ ಹೊಡೆದು ಕಿರಿಕಿರಿ ಉಂಟು ಮಾಡಿದವು. ಅದಾವುದೋ ಮೂಲೆಯಿಂದ ಥಟ್ಟನೆ ಕೇಳಿಸಿದ ಹೂಂಕಾರದ ಅಬ್ಬರಕ್ಕೆ ಕಿಟಕಿ, ಬಾಗಿಲುಗಳು ಧಡಾರನೆ ಮುಚ್ಚಿಕೊಂಡವು. ಕವಿದ ಕತ್ತಲೆಯೊಳಗೆ ಪ್ರತಿಧ್ವನಿಸುವ ಹೂಂಕಾರ. ಯಾವ ರಾಕ್ಷಸನ ನಿದ್ದೆ? ಯಾವ ಕರಾಳ ಪುರುಷನ ಕ್ರೋಧ? ಯಾವ ಪಿಶಾಚಿಯ ಚೀರು? ದಿಗ್ಭ್ರಾಂತರಾದ ನಾವು ನಾಲ್ವರು ಮತ್ತು ಒಂದು ಹೂಂಕಾರ.

 

ಹೊರಹೋಗಲು ಹಾದಿಯಿಲ್ಲ, ಬಾಗಿಲಿಲ್ಲ, ಬೆಳಕಿಲ್ಲ. ಕೋಟೆಯೊಳಗೆ ಈ ಕರಿಪಿಶಾಚಿ ಮನೆ ಇದರ ಕರಿಗತ್ತಲೆಯೊಳಗೆ ನಾವು. ಈಗ ನಾವು ಏನು ಮಾಡಬೇಕು? ನಮ್ಮನ್ನು ಹೊರಗೊಯ್ಯುವ ಶಕ್ತಿ ಯಾವುದು? ಸಾವಿತ್ರಕ್ಕಾ, ನೀನೇ ನಮ್ಮನ್ನು ಕಾಪಾಡು -

`ಹಾಗಲ್ಲ, ಹಾಗಲ್ಲ- ಅದು~ ನನ್ನನ್ನು ನಿಲ್ಲಿಸಿದಳು ಸಾವಿತ್ರಕ್ಕ.`ಆ ಕತ್ತಲೆಯಿಂದ ಒಂದು ಕೈ ಮುಂದೆ ಬರುವುದು~

-ಎದ್ದು ನಿಂತಿದ್ದಳು ಸಾವಿತ್ರಕ್ಕ, ಅವಳು ಈ ಭೂಮಿಯ ಹೆಣ್ಣಾಗಿರಲಿಲ್ಲ. ತನ್ನ ಕೈಯನ್ನು `ಇಷ್ಟು~ ಮುಂದೆ ಮಾಡಿ ತಂದು ತೋರಿಸಿದಳು.

`ಏನು? ಏನು? ನಿನಗೇನು ಬೇಕು?~ ಪಕ್ಕದಲ್ಲಿರುವ ಮಕ್ಕಳನ್ನು ಒತ್ತಿ ಹಿಡಿದು ಧೈರ್ಯ ಬಿಡದೆ ಕೇಳುವಳು ಸಾವಿತ್ರಕ್ಕ.

`ನನಗೆ ಹಸಿವು~ ಲಲಿತಕ್ಕ ಆ `ಕೈ~ನ ವ್ಯಕ್ತಿಯಾದಳು.

`ಹಸಿವು ಹಸಿವು~ ನಾನೂ ಹಸಿದಂತೆ ಅಭಿನಯಿಸಿದೆ.

`ನಿನ್ನ ಹಸಿವಿಗೆ ನಾನೇನು ಮಾಡಲಿ?~ ನನ್ನ ಮುಂದೆ ಬಂದು ಸಿಟ್ಟಿನಿಂದ ಕೇಳಿದಳು ಸಾವಿತ್ರಕ್ಕ.

`ದೋಸೆ ಎರೆ~ ನಾನು ಅಣಕಿಸಿದೆ.

`ಕಚ್ಚಲು ಗುಳಬದನೆ ಪಲ್ಯ ಮಾಡು~ ಪದ್ಮಕ್ಕ ಹೇಳಿದಳು. ಇದೀಗ ಅವಳೂ ಕಥೆಯಲ್ಲಿ ಸೇರಿಹೋಗಿದ್ದಳು.

`ನನಗೆ ಗುಳಬದನೆ ಪಲ್ಯ ಮಾಡಿಕೊಡು~ ಲಲಿತಕ್ಕ ಮುಂದೆ ಬಂದಳು.`ಹಾಗಲ್ಲ. ನನಗೆ ಗುಳಬದನೆ (ಸ್ವಲ್ಪ ನಿಂತು) ಪಲ್ಯ ಮಾಡಿಕೊಡು (ಎರಡು ಹೆಜ್ಜೆ ಮುಂದೆ ಬಂದು) ನನಗೆ ಗುಳಬದನೆ (ಸ್ವಲ್ಪ ನಿಂತು) ಪಲ್ಯ ಮಾಡಿಕೊಡು (ಇನ್ನೂ ಒಂದು ಹೆಜ್ಜೆ ಮುಂದು ಬಂದು ಏರು ಧ್ವನಿಯಲ್ಲಿ) ನನಗೆ ಗುಳಬದನೆ ಪಲ್ಯ ಮಾಡಿಕೊಡು~ ಎಂದು ಸಾವಿತ್ರಕ್ಕ ಅಭಿನಯಿಸಿ ತೋರಿಸಿದಳು. ಲಲಿತಕ್ಕ ಅದೇ ರೀತಿ ಅಭಿನಯಿಸಿದಳು.`ಆಹಾ ಗುಳಬದನೆಕಾಯಿ! ನಿನಗ್ಯಾಕಪ್ಪಾ ಪಲ್ಯ?~ ನಾನು ಸಾವಿತ್ರಕ್ಕಳ ಪಾತ್ರವಾಗಿಬಿಟ್ಟಿದ್ದೆ.

`ಈಗ ಯಾಕೆ? ನಾಳೆ ಮಾಡಿದರಾಯ್ತು~ ತನ್ನ ಸೊಸೆಯನ್ನು ನೆನಪಿಸುವಂತೆ ನಟಿಸಿದಳು ಸಾವಿತ್ರಕ್ಕ.

`ಹೌದು, ಹೌದು ನಾಳೆ ಮಾಡಿದರಾಯ್ತು~ ಅವಳ ಮಗನಂತೆ ನಾನು ಹೇಳಿದೆ.

`ಅದಾಗದು~ ಸಾವಿತ್ರಕ್ಕ ಸಿಟ್ಟಿಗೆದ್ದು ನುಡಿದಳು. `ಈಗಲೇ ಗುಳಬದನೆಕಾಯಿ ಪಲ್ಯ ಮಾಡಿ ತನ್ನಿರಿ~

`ಹೌದು, ಹೌದು ಈಗಲೇ ತನ್ನಿರಿ~ ಲಲಿತಕ್ಕ, ಪದ್ಮಕ್ಕ ದನಿಗೂಡಿಸಿದರು.

ಅಂಕ ಬದಲಾಯಿತು.

`ನನಗೆ ಗುಳಬದನೆ ಪಲ್ಯ ಮಾಡಿಕೊಡು~ ಸಾವಿತ್ರಕ್ಕ ಹೇಳಿದಳು.`ನನಗೆ ಗುಳಬದನೆ ಪಲ್ಯ ಮಾಡಿಕೊಡು~ ಈಗ ಲಲಿತಕ್ಕಳ ಸರದಿ. ಹಾಗೇ ಪದ್ಮಕ್ಕ. ಕಡೆಗೆ ಮೂವರೂ ಒಟ್ಟಿಗೆ `ನನಗೆ ಗುಳಬದನೆ ಪಲ್ಯ ಮಾಡಿಕೊಡು~ ಎಂದು ಒಂದು ಕೈ ಚಾಚುತ್ತ ನನ್ನ ಮುಂದೆ ಬಂದು ನಿಂತರು. ಕತ್ತಲು, ಬಾಗಿಲು ಮುಚ್ಚಿಹೋದ ಕೋಟೆಯೊಳಗಿನ ದೆವ್ವದಂಥ ಮನೆ, ಸಾವಿತ್ರಕ್ಕನೇ ಕೈ ಚಾಚಿ ನಿಂತಿದ್ದಾಳೆ - ಈಗ ನಾನೇನು ಮಾಡಬೇಕು? ಏನಾದರೂ ಮಾಡಲು ನಾನು ಯಾರು? ಆದರೆ ಈ ಪಾತ್ರಗಳು ಮಾತ್ರ ನನ್ನನ್ನು ಹಿಂಸಿಸುತ್ತಲೇ ಇದೆ: `ನನಗೆ ಗುಳಬದನೆ ಪಲ್ಯ ಮಾಡಿಕೊಡು~.ನಾನು ಮೂವರನ್ನೂ ನನ್ನ ಎದೆಗೊತ್ತಿಕೊಂಡು, ಕುರುಳು ನೇವರಿಸಿ `ಬನ್ನಿ ಮಕ್ಕಳೇ, ನಿಮಗೆ ಪಲ್ಯ ಮಾಡಿಕೊಡುವೆನು~ ಎಂದೆ.

`ಹಾಂ - ಹಾಗೆ, ಎಲ್ಲಿ, ಇನ್ನೊಮ್ಮೆ ಹೇಳು~ ಎಂದಳು ಲಲಿತಕ್ಕ.

`ಬನ್ನಿ ಮಕ್ಕಳೇ, ನಿಮಗೆ ಪಲ್ಯ ಮಾಡಿಕೊಡುವೆನು~ ಮತ್ತೊಮ್ಮೆ ಕುರುಳು ನೇವರಿಸುತ್ತ ಹೇಳಿದೆ. ಇನ್ನೊಮ್ಮೆ, ಇನ್ನೊಮ್ಮೆ, ಎನ್ನುತ್ತ ನಾಕೈದು ಸಲ ಹಾಗೇ ಹೇಳಿಸಿದರು. ಬಳಿಕ ನನ್ನನ್ನು ನಡುವೆ ನಿಲ್ಲಿಸಿ ಮೂವರೂ ಕೈ-ಕೈ ಹಿಡಿದು `ಗುಳ ಬದನೆ ಪಲ್ಯ! ಬೇಗ ಮಾಡಯ್ಯ~ ಎಂದು ಹಾಡುತ್ತಾ ಕುಣಿಯಲಾರಂಭಿಸಿದರು. ಈಗ ನಾನೇನು ಮಾಡಬೇಕೆಂದು ಯೋಚಿಸುತ್ತ ನಿಂತೆ.ಇವೆಲ್ಲ ಐದು ಹತ್ತು ನಿಮಿಷಗಳಾಗಿರಬಹುದು. ಒಮ್ಮೆಲೆ ಎಲ್ಲರೂ ಕುಳಿತೆವು. ಇವೆಲ್ಲ ಏನು? ನಮ್ಮ ಕಥೆ ಎಲ್ಲಿತ್ತು, ಎಲ್ಲಿಗೆ ಮುಂದುವರಿಯಿತು? ನಿಜಕ್ಕೂ ಅಂದು ಕಂಡಿದ್ದ ಆ ಕರಾಳ ಕತ್ತಲೆಯ ಮನೆಯೊಳಕ್ಕೆ ಇಂದು - ಈಗ ನಾವೆಲ್ಲರೂ ಹೋದುದು ಹೇಗೆ? ಪಲ್ಯ ಯಾಕೆ ಬಂದಿತು? ಸಾವಿತ್ರಕ್ಕಳ ಸೊಸೆ ಹೇಗೆ ಬಂದಳು?ಮಗ ಎಲ್ಲಿಂದ ಬಂದ? ಆ ಕತ್ತಲೆಯಿಂದ ಇನ್ನೂ ಯಾರ‌್ಯಾರು ಬರಲಿರುವರು? ಆ ಹೂಂಕಾರ ಯಾರದು? ಅಂದು ಅದನ್ನು ಕೇಳಿ ಓಡಿ ಬಂದ ನಮಗೆ ಇಂದು ಆ ಮನೆಯೊಳಕ್ಕೆ ಹೋಗಬೇಕೆನಿಸಿದ್ದೇಕೆ? ನಮ್ಮ ಮನಸಿನ ಯಾವ ಮೂಲೆಯಲ್ಲಿ ಆ ಮನೆ, ಆ ಕತ್ತಲೆ, ಆ ಬಾವಲಕ್ಕಿಗಳು ಅಡಗಿ ಕುಳಿತಿದ್ದವು?

 

ಯಾವ ಕಿಟಕಿಯಿಂದ ಬೆಳಕು ತೂರಿ ಆ ಬಾವಲಕ್ಕಿಗಳು ಪಟ ಪಟ ರೆಕ್ಕೆ ಬಡಿದು ಹಾರಿದವು?ಒದ್ದೆಗಣ್ಣುಗಳನ್ನು ತೋರಗೊಡದೆ ಸಾವಿತ್ರಕ್ಕ ಎದ್ದುಬಿಟ್ಟಳು. ಒಂದು ಮಾತು ಹೇಳದೆ, ನಾವೆಲ್ಲ ನೋಡುತ್ತಿದ್ದ ಹಾಗೆಯೇ ಓಣಿಯೊಳಗಿನ ಕತ್ತಲಲ್ಲಿ ಕತ್ತಲಾಗಿ ಕರಗಿಹೋದಳು - ಅವಳ ಕಥೆಗಳಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry