ಶುಕ್ರವಾರ, ಸೆಪ್ಟೆಂಬರ್ 25, 2020
29 °C

ಕಥೆ ಕಟ್ಟಿದವರ ಜೀವನ ಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಥೆ ಕಟ್ಟಿದವರ ಜೀವನ ಚಿತ್ರಗಳು

ಕನ್ನಡ ಕಥಾ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ತಮ್ಮದೇ ಕೊಡುಗೆ ನೀಡಿದ ಮೂರು ಮಹತ್ವದ ಕಥೆಗಾರರ ಜೀವನ ಚಿತ್ರಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲೆಯಲ್ಲಿ ಪ್ರಕಟವಾಗಿರುವ ತಲಾ ಸರಿಸುಮಾರು ನೂರು ಪುಟಗಳ ಈ ಕಿರುಹೊತ್ತಿಗೆಗಳು ಕನ್ನಡ ಕಥೆ ಕಟ್ಟಿದವರ ಬದುಕು ಕಟ್ಟಿಕೊಡುತ್ತವೆ. ಒಂದೇ ಸರಣಿಯಲ್ಲಿ ಪ್ರಕಟವಾದ ಪುಸ್ತಕಗಳಾದರೂ ಏಕಸ್ವರೂಪದವುಗಳಾಗಿಲ್ಲ. ಮೂರು ಪುಸ್ತಕಗಳ ಅಧ್ಯಾಯಗಳ ವಿಂಗಡಣೆ ವಿಭಿನ್ನವಾಗಿದೆ.

ಹೆಚ್. ನಾಗವೇಣಿ ಅವರು ರಚಿಸಿರುವ ಕೊಡಗಿನ ಗೌರಮ್ಮ ಅವರನ್ನು ಕುರಿತ ಪುಸ್ತಕದಲ್ಲಿ ಒಟ್ಟು ಐದು ಅಧ್ಯಾಯಗಳಿವೆ. ಮೊದಲ ಅಧ್ಯಾಯ ಕೇವಲ ಒಂದೂವರೆ ಪುಟದಲ್ಲಿ ಮುಗಿದರೂ `ಸಿನಿಮೀಯ~ ಘಟನೆಯ ನಾಟಕೀಯ ಪ್ರಸ್ತಾಪದ ಮೂಲಕ ಕಥೆಗಾರ್ತಿಯ ಬದುಕನ್ನು ಕಥೆಯಾಗಿಸಿ ಕೊಡುವ ಮುನ್ಸೂಚನೆ ದೊರೆಯುತ್ತದೆ. ನಾಗವೇಣಿ ಅವರು ಜೀವನಚಿತ್ರಗಳಲ್ಲಿ ಸಾಮಾನ್ಯವಾಗಿ ಇರುವಂತೆ ಕೊಡಗಿನ ಗೌರಮ್ಮನವರ ಜೀವನ-ಸಾಹಿತ್ಯ ಸಾಧನೆಗಳನ್ನು ಒಣವಿವರಗಳ ಕಂತೆಯಾಗಿ ನೀಡಿಲ್ಲ. ಬದಲಿಗೆ ಕಥೆಗಳಂತೆ ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಕಟ್ಟಿಕೊಟ್ಟಿದ್ದಾರೆ.ಗೌರಮ್ಮನವರ ಜೀವನವನ್ನು ಅವರು `ಬದುಕಿನ ಅರಳುವ ಕಾಲ~ ಮತ್ತು `ಬದುಕಿನ ಬತ್ತಿ ಆರಿದ ಹೊತ್ತು~ ಎಂದು ವಿಭಾಗಿಸಿಕೊಂಡಿದ್ದಾರೆ. `ಅರಳುವ ಕಾಲ~ದಲ್ಲಿ 30 ಪುಟಗಳಷ್ಟು `ಅವಕಾಶ~ದಲ್ಲಿ ಗೌರಮ್ಮನವರ ವ್ಯಕ್ತಿತ್ವವನ್ನು ಹಿಡಿದಿಟ್ಟಿದ್ದಾರೆ. ಉಪವಾಸ ಸತ್ಯಾಗ್ರಹದ ಮೂಲಕ ಮಹಾತ್ಮ ಗಾಂಧಿ ಅವರನ್ನು ಮನೆಗೆ ಕರೆಸಿಕೊಂಡು ತಮ್ಮ ಬಳಿಯಿದ್ದ ಚಿನ್ನದ ಒಡವೆಗಳನ್ನು ಹೋರಾಟಕ್ಕೆ ಕೊಡುಗೆಯಾಗಿ ನೀಡುವ ಗೌರಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವಿವರಗಳಿವೆ. ಗೌರಮ್ಮ ಚಿನ್ನದ ಒಡವೆ ನೀಡಿದ ಘಟನೆ ಗಾಂಧೀಜಿಯವರ `ಹರಿಜನ~ದಲ್ಲಿ ಪ್ರಕಟವಾಗಿದ್ದ ಸಂಗತಿಯನ್ನು ಪ್ರಸ್ತಾಪಿಸಲಾಗಿದೆ. ಗೌರಮ್ಮ ಅವರು ತಮ್ಮ ಸಮಕಾಲೀನ ಕನ್ನಡ ಲೇಖಕರಾಗಿದ್ದ ದ.ಬಾ. ಕುಲಕರ್ಣಿ, ಬೇಂದ್ರೆ ಅವರ ಜೊತೆಗೆ ಹೊಂದಿದ್ದ ಒಡನಾಟ, ಪತ್ರ ಸಂಪರ್ಕಗಳನ್ನು ನೀಡಲಾಗಿದೆ. ಗೌರಮ್ಮನವರ ದಿನಚರಿಯ ಪುಟಗಳು, ಪತ್ರಗಳನ್ನು ಬದುಕಿನ ವಿವರ ಕಟ್ಟಿಕೊಡುವುದಕ್ಕಾಗಿ ಬಳಸಿರುವುದು ಸ್ತುತ್ಯರ್ಹ. `ಆರಿದ ಹೊತ್ತು~ ಅಧ್ಯಾಯ ಅಕಾಲ ಮೃತ್ಯುವನ್ನಪ್ಪಿದ ಘಟನೆಯನ್ನು ಸವಿವರವಾಗಿ ನೀಡುತ್ತದೆ. ಅನುಬಂಧ ಈ ಪುಸ್ತಕದ ಬಹುದೊಡ್ಡ ಪ್ಲಸ್‌ಪಾಯಿಂಟ್. ಪತ್ರಗಳು, ಮುನ್ನುಡಿಗಳು, ಲೇಖನಗಳನ್ನು ಯಥಾವತ್ತಾಗಿ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗುತ್ತದೆ.ಬೆಸಗರಹಳ್ಳಿ ರಾಮಣ್ಣ ಅವರನ್ನು ಕುರಿತ ಪುಸ್ತಕವನ್ನು ಕಥೆಗಾರ ಕೇಶವರೆಡ್ಡಿ ಹಂದ್ರಾಳ ಅವರು 10 ಅಧ್ಯಾಯಗಳಲ್ಲಿ ವಿಂಗಡಿಸಿದ್ದಾರೆ. `ಕನ್ನಡ ಸಾಹಿತ್ಯದ ಪೂರ್ವಾಪರ~ದೊಂದಿಗೆ ಆರಂಭವಾಗುತ್ತದೆ. ರಾಮಣ್ಣನವರ ವೃತ್ತಿ ಮತ್ತು ಜೀವನ ಚಿತ್ರಣ, ಪ್ರಸಿದ್ಧರು ಕಂಡಂತೆ ರಾಮಣ್ಣನವರ ಕಥೆಗಳು, ಕೌಟುಂಬಿಕ ಪರಿಸರ, ವ್ಯಕ್ತಿತ್ವ, ವೈದ್ಯರಾಗಿ ರಾಮಣ್ಣ, ರಾಮಣ್ಣನವರ ಧ್ಯೇಯೋದ್ದೇಶಗಳು, ರಾಮಣ್ಣನವರ ಕಥೆಗಳ ಆಶಯ, ವಿನ್ಯಾಸ ಮತ್ತು ಇನ್ನುಳಿದ ಸಾಹಿತ್ಯ ಎಂದು ವಿಂಗಡಿಸಿಕೊಂಡಿದ್ದಾರೆ. ಕಥೆಗಾರ ಬೆಸಗರಹಳ್ಳಿ ಅವರ ಬದುಕಿನ ಕಥೆಯನ್ನು ಅದರ ಮಾನವೀಯ ಮುಖವನ್ನು ಹಂದ್ರಾಳರು ಚಿತ್ರಿಸಿದ್ದಾರೆ.ಇಡಿಕಿರಿದು ನಿಂತಿರುವ ವಿವರಗಳು ರಾಮಣ್ಣನವರ ಬಗೆಗೆ ಸಂಪೂರ್ಣ ಮಾಹಿತಿ ಒದಗಿಸುತ್ತವೆ. ಗ್ರಾಮೀಣ ಬದುಕನ್ನು ತಮ್ಮ ಕಥೆಯೊಳಕ್ಕೆ ತಂದ ಬೆಸಗರಹಳ್ಳಿ ಅವರ ಕಥೆಗಳ ಜೀವದ್ರವ್ಯ ಹಿಡಿದಿಟಿದ್ದಾರೆ. 37 ಕಥೆಗಳ ಜೊತೆಗೆ ಒಂದು ಕಾದಂಬರಿ, ಒಂದು ಕವನ ಸಂಕಲನ ಪ್ರಕಟಿಸಿರುವ ರಾಮಣ್ಣನವರ ಸಾಹಿತ್ಯ- ವ್ಯಕ್ತಿತ್ವಗಳನ್ನು ಹಂದ್ರಾಳರು ಕಟ್ಟಿಕೊಟ್ಟಿದ್ದಾರೆ. ಅನುಬಂಧದಲ್ಲಿ ರಾಮಣ್ಣನವರ ಕೃತಿಗಳ, ಜೀವನದ ಪ್ರಮುಖ ಘಟನೆಗಳ ವಿವರ ನೀಡಲಾಗಿದೆ.ಜಿ.ಆರ್. ತಿಪ್ಪೇಸ್ವಾಮಿ ಅವರು ಚದುರಂಗರ ಜೀವನ ಚಿತ್ರವನ್ನು ಎಂಟು ಅಧ್ಯಾಯಗಳಲ್ಲಿ ವಿಂಗಡಿಸಿದ್ದಾರೆ. ಜೀವನ ವೃತ್ತಾಂತ, ಪ್ರೇರಣೆ-ಪ್ರಭಾವ, ಕಾವ್ಯ, ಸಣ್ಣಕಥೆ, ಕಾದಂಬರಿ, ನಾಟಕ, ಸಮ್ಮೇಳನಾಧ್ಯಕ್ಷರ ಭಾಷಣ, ಸಮಾರೋಪ ಅಧ್ಯಾಯಗಳಲ್ಲಿ ಚದುರಂಗರ ಬದುಕು-ಬರಹದ ಕುರಿತ ವಿವರಗಳು ದಾಖಲಾಗಿವೆ. ಜೀವನ ಚರಿತ್ರೆಯ ಸಿದ್ಧವಿನ್ಯಾಸದ ಚೌಕಟ್ಟನ್ನು ಮೀರಿ ಹೋಗದಂತೆ ಲೇಖಕರು ಎಚ್ಚರ ವಹಿಸಿದ್ದಾರೆ. ಚದುರಂಗರನ್ನು ಕುರಿತ ಯಾವ ವಿವರವೂ ತಪ್ಪಿಹೋಗದಂತೆ ಕಾಳಜಿ ವಹಿಸಿ ನೀಡಲಾಗಿದೆ. ಚದುರಂಗರ ಎಲ್ಲ ಸಾಹಿತ್ಯ ಕೃತಿಗಳ ಕುರಿತು ಪರಿಚಯಾತ್ಮಕ ಟಿಪ್ಪಣಿಗಳಿವೆ. ಅನುಬಂಧದಲ್ಲಿ ವಂಶವೃಕ್ಷ, ಪರಿಚಯ, ಕೃತಿಸೂಚಿ, ಚದುರಂಗರ ಸಾಹಿತ್ಯವನ್ನು ಕುರಿತ ಸಂಶೋಧನೆಗಳ ವಿವರ ಒದಗಿಸಲಾಗಿದೆ.ಮೂವರ ಪೈಕಿ ಕೊಡಗಿನ ಗೌರಮ್ಮ ಮಾತ್ರ ಕೇವಲ ಕಥೆಗಾರರು. ಚದುರಂಗ ಮತ್ತು ಬೆಸಗರಳ್ಳಿ ಅವರು ಕಥೆಗಳಲ್ಲದೇ ಕಾದಂಬರಿ, ನಾಟಕ, ಕವಿತೆ ರಚಿಸಿದ್ದಾರೆ. ಆದರೂ ಈ ಮೂವರು ಲೇಖಕರು ಕಥೆಗಾರರಾಗಿಯೇ ಕನ್ನಡದ ಓದುಗರಿಗೆ ಚಿರಪರಿಚಿತರು. ಸಾಹಿತ್ಯ ಪರಂಪರೆ ಅರಿಯಲು ಆಸಕ್ತರಾಗಿರುವವರಿಗೆ ಈ ಪುಸ್ತಕಗಳು ಮಾಹಿತಿ ಒದಗಿಸುವ ಆಕರಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.         

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.