ಮಂಗಳವಾರ, ಜೂನ್ 15, 2021
21 °C

ಕಥೆ: ಬೆಳವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಥೆ: ಬೆಳವಣಿಗೆ

ಅತೀ ವೇಗವಾಗಿ ಬೆಳೆಯುತ್ತಿರುವ ಇಂಥದೊಂದು ಶಹರದಲ್ಲಿ `ವ್ಯಕ್ತಿತ್ವ ವಿಕಸನ~ದ ಪಾಠ ಹೇಳುವ ಅವಕಾಶ ಸಿಕ್ಕಿರುವುದು ಅಷ್ಟೇನು ಸುಲಭದ ವಿಷಯವೇನಾಗಿರಲಿಲ್ಲ.ಅವನ ಉಪನ್ಯಾಸ ಕೇಳಲು ಉದ್ಯಮಿಗಳು, ಲೇಖಕರು, ಬುದ್ಧಿ ಜೀವಿಗಳು ವೈದ್ಯರು, ಇಂಜಿನಿಯರ್‌ಗಳು ಬರುತ್ತಿರುವುದು ಅವನಿಗೆ ಹೆಮ್ಮೆಯ ವಿಷಯವಾಗಿತ್ತು.

ಈ ಹಿಂದೆ ಅವನು ಅನೇಕ ಕಡೆ `ವ್ಯಕ್ತಿತ್ವ ವಿಕಸನ~ದ ಮಾತಾಡಿ ಎಲ್ಲರ ಮೆಚ್ಚಿಗೆಗೆ ಪಾತ್ರನಾಗಿದ್ದ.ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಒಂದು ದಿನ ಮುಂಚಿತವಾಗಿ ಬಂದು ಅವನು ತನಗಾಗಿ ಕಾದಿರಿಸಲಾಗಿರುವ ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದ. ಅದೇ ಶಹರದಲ್ಲಿ ಅವನಿಗೊಬ್ಬ ಆಪ್ತ ಗೆಳೆಯನೊಬ್ಬನಿದ್ದ. ಆದರೆ ಗೆಳೆಯನಿಗೆ ತಾನು ಬಂದಿರುವ ವಿಷಯವನ್ನು ಇನ್ನೂ ತಿಳಿಸಿರಲಿಲ್ಲ.ನಾಳೆ ವೇದಿಕೆಯಿಂದ ಚೆನ್ನಾಗಿ ಮಾತಾಡಬೇಕಾಗಿತ್ತು. ಅದಕ್ಕಾಗಿ ಒಂದಿಷ್ಟು ಪುಸ್ತಕಗಳನ್ನೋದಬೇಕು, ಒಂದಿಷ್ಟು ವಿಷಯಗಳನ್ನು ಟಿಪ್ಪಣಿ ಮಾಡಕೊಳ್ಳಬೇಕು. ಇವೆಲ್ಲವನ್ನು ಯೋಚಿಸಿಯೇ ಗೆಳೆಯನಿಗೆ ಫೋನ್ ಮಾಡಲು ಹೋಗಿರಲಿಲ್ಲ. ಗೆಳೆಯ ಬಂದರೆ ಸುಮ್ಮನೆ ಸಮಯ ವ್ಯರ್ಥವೆಂದು ಅವನ ನಂಬಿಕೆಯಾಗಿತ್ತು.ಕಾರ್ಯಕ್ರಮವಿರುವುದು ನಾಳೆ ಸಂಜೆ, ನಾಳೆ ಮಧ್ಯಾಹ್ನ ಗೆಳೆಯನಿಗೆ ಫೋನ್ ಮಾಡಿದರೆ ಸರಿಯೆನಿಸಿತು ಅವನಿಗೆ.ಸದ್ಯಕ್ಕೆ ಅವನು ತನ್ನ ಕೋಣೆಯ ಕಿಟಕಿ ಪಕ್ಕ ಕುಳಿತು ತನ್ನೊಂದಿಗೆ ತಂದಿರುವ ಹತ್ತಾರು ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ತನಗೆ ಬೇಕಾಗಿರುವ ವಿಷಯಗಳನ್ನು ಓದಿಕೊಳ್ಳುವುದರಲ್ಲಿ ಮತ್ತು ಒಂದು ಹಾಳೆಯಲ್ಲಿ ಟಿಪ್ಪಣಿಗಳನ್ನು ಬರೆದುಕೊಳ್ಳುವುದರಲ್ಲಿ ಮೈಮರೆತಿದ್ದ.ಬಹಳಷ್ಟು ಹೊತ್ತು ಕುರ್ಚಿಯಲ್ಲಿ ಕುಳಿತ ಬಳಿಕ ಅವನು ಕಿಟಕಿ ಬಳಿ ಬಂದು ಹೊರ ನೋಡಿದ. ವಸತಿಗೃಹದ ಪಕ್ಕದಲ್ಲಿರುವ ರಸ್ತೆಯಲ್ಲಿ  ವಾಹನಗಳ ಓಡಾಟ ಜೋರಾಗಿತ್ತು. ಆಗಾಗ ರಸ್ತೆ ಜಾಮ್ ಸಹ ಆಗುತ್ತಿತ್ತು. ರಸ್ತೆಯ ಪಕ್ಕದಲ್ಲಿ ಹಾಕಿರುವ ದೊಡ್ಡ ಪೋಸ್ಟರ್ ಅವನ ಗಮನ ಸೆಳೆಯಿತು. ಅದೊಂದು ಸರ್ಕಸ್‌ನ ಪೋಸ್ಟರ್!ಚಿತ್ರದಲ್ಲಿ ಯುವತಿಯೋರ್ವಳು ತಂತಿ ಮೇಲೆ ಸೈಕಲ್ ಹೊಡೆಯುತ್ತಿದ್ದಳು. ಇನ್ನೊಂದೆಡೆ ಆನೆಯೊಂದು ಕಬ್ಬಿಣದ ಕುರ್ಚಿ ಮೇಲೆ ಕುಳಿತಿತ್ತು. ಮೂಲೆಯಲ್ಲಿ ಇಬ್ಬರು ಕುಳ್ಳರು ಬಣ್ಣಬಣ್ಣದ ಬಟ್ಟೆ ತೊಟ್ಟು ತಮಾಷೆ ಮಾಡುತ್ತಿದ್ದರು. ಅವರಿಬ್ಬರು ಉ್ದ್ದದನೆ ಟೋಪಿ ಹಾಕಿಕೊಂಡಿದ್ದರು.ಹಿಂದೊಂದು ಕಾಲದಲ್ಲಿ ಅವನ ಊರಿಗೂ ಸಹ ಸಣ್ಣ ಪುಟ್ಟ ಸರ್ಕಸ್ ಕಂಪನಿಗಳು ಬಂದು ಕ್ಯಾಂಪ್ ಹಾಕುತ್ತಿದ್ದವು. ಅವನು ತಪ್ಪದೆ ಸರ್ಕಸ್‌ಗೆ ಹೋಗುತ್ತಿದ್ದ. ಸರ್ಕಸ್‌ಗಳಲ್ಲಿ ಅವನು ತುಂಬ ಇಷ್ಟಪಡುತ್ತಿದ್ದದ್ದು ಜೋಕರ್‌ಗಳ ಚೇಷ್ಟೆ.ಕುಳ್ಳರ ಚೇಷ್ಟೆಗಳನ್ನು ನೋಡುವುದಕ್ಕಾಗಿಯೇ ಅವನು ಸರ್ಕಸ್‌ಗಳನ್ನು ನಾಲ್ಕಾರು ಬಾರಿ ನೋಡುತ್ತಿದ್ದ. ಜೋಕರ್‌ಗಳು ಪ್ರತಿದಿನವೂ ಒಂದೇ ರೀತಿ ಚೇಷ್ಟೆಗಳನ್ನು ಮಾಡುತ್ತಿರಲಿಲ್ಲ. ಒಂದೊಂದು ದಿನ ಒಂದೊಂದು ರೀತಿ ಚೇಷ್ಟೆ ಮಾಡುವುದಲ್ಲದೆ ಬೇರೆ ಬೇರೆ ಮಾತುಗಳನ್ನಾಡಿ ಜನರನ್ನು ನಗಿಸುತ್ತಿದ್ದರು.ಅವನು ಯೋಚಿಸಿದ.

ಅಷ್ಟೊಂದು ದೊಡ್ಡ ಸರ್ಕಸ್ ಕಂಪನಿಯಲ್ಲಿರುವ ಇಬ್ಬರ ಕುಳ್ಳರ ಪೈಕಿ ಒಂದು ವೇಳೆ ಯಾರಾದರೊಬ್ಬ ಅಥವಾ ಇಬ್ಬರೂ ಆರೋಗ್ಯ ಸರಿಯಿಲ್ಲದೆ ಬಿದ್ದುಕೊಂಡರೆ ಚೇಷ್ಟೆ ಮಾಡಲು ಯಾರಿರುತ್ತಾರೆ? ಕುಳ್ಳರಿಲ್ಲದೆ ಸರ್ಕಸ್‌ಗಳನ್ನು ಊಹಿಸಲು ಸಾಧ್ಯವಿಲ್ಲ.ಸರ್ಕಸ್‌ನವರಿಗೆ ಈ ಕುಳ್ಳರು ಎಲ್ಲಿ ಸಿಗುತ್ತಾರೆ. ಒಂದು ವೇಳೆ ಸಿಕ್ಕಿದರೂ ಅವರಿಗೆ ಇಷ್ಟೊಂದು ರಂಜಿಸುವ ಕಲೆ ಸಹ ಹೇಗೆ ಬರುತ್ತೆ? ಕುಳ್ಳರು ಎಲ್ಲಾ ಕಡೆಯೂ ಸಿಗುವುದಿಲ್ಲ. ಅವರಿಗೆ ತುಂಬಾ ಡಿಮ್ಯಾಂಡ್ ಇರಬಹುದೆಂದು ಕಾಣುತ್ತೆ? ಹಿಂದೆಲ್ಲ ಊರಲ್ಲಿ ಸರ್ಕಸ್‌ಗೆ ಹೋದಾಗಲೆಲ್ಲ ಕುಳ್ಳರು ಆರೋಗ್ಯವಾಗಿರುವಂತೆ ದೇವರಿಗೆ ಮೊರೆ ಹೋಗುತ್ತಿದ್ದನ್ನು ನೆನಪಿಸಿಕೊಂಡ ಅವನು.ಹಿಂದೆಲ್ಲ ಸರ್ಕಸ್ ನೋಡಿ ಬಂದ ಬಳಿಕ ಹತ್ತಾರು ದಿನಗಳವರೆಗೆ ಕುಳ್ಳರ ಚೇಷ್ಟೆಗಳನ್ನು ಮೆಲಕು ಹಾಕಿ ಒಬ್ಬನೇ ನಗುತ್ತಿದ್ದ.ನಾಳಿದ್ದು ಇಲ್ಲಿಂದ ಹೊರಡುವುದಕ್ಕೆ ಮುಂಚೆ ಸಾಧ್ಯವಾದರೆ ಸರ್ಕಸ್ ನೋಡಿಕೊಂಡು ಹೋಗಬೇಕೆಂದು ಯೋಚಿಸಿದ. ಈಗಿನ ಜೋಕರ್‌ಗಳು ಯಾವ ರೀತಿ ಚೇಷ್ಟೆ ಮಾಡುತ್ತಾರೆಂದು ನೋಡಬೇಕು. ಹಾಗೆಯೇ ತಾನು ಹಿಂದಿನಷ್ಟೆ ಈಗಲೂ ನಗುತ್ತೇನೆಯೋ ಇಲ್ಲವೋ ಎಂದೂ ಗಮನಿಸಬೇಕು.ಸದ್ಯಕ್ಕೆ ಸಮಯ ವ್ಯರ್ಥ ಮಾಡದೆ ಇಡೀ ಗಮನವೆಲ್ಲವನ್ನೂ ನಾಳೆಯ ಸಿದ್ಧತೆ ಬಗ್ಗೆ ನೀಡಬೇಕೆಂದು ಯೋಚಿಸಿ ಕಿಟಕಿ ಬಳಿಯಿಂದ ಬಂದು ಪುಸ್ತಕವನ್ನೆತ್ತಿಕೊಂಡ.

ಒಂದಿಷ್ಟು ಪುಟಗಳನ್ನೋದಿದ ಬಳಿಕ ಸುಮ್ಮನೆ ಮಂಚದ ಕಡೆ ದೃಷ್ಟಿ ಹಾಯಿಸಿದ. ಡಬಲ್ ಬೆಡ್ ಎಂದು ಕಾಣುತ್ತೆ, ಎಷ್ಟೊಂದು ಅಗಲವಾಗಿದೆ, ಎಷ್ಟೊಂದು ಉದ್ದವಾಗಿದೆ.ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಹಾಸ್ಟಲ್‌ನಲ್ಲಿದ್ದಾಗ ಸಿಂಗಲ್ ಬೆಡ್‌ನಲ್ಲಿ ಇಬ್ಬಿಬ್ಬರು ಮಲಗಿಕೊಳ್ಳುತ್ತಿದ್ದವು. ಆಗ ಇಷ್ಟೊಂದು ಅಗಲವಾದ ಬೆಡ್ ಇರುತ್ತಿದ್ದರೆ ಖಂಡಿತವಾಗಿ ಆರಾರು ಮಂದಿ ಮಲಗಿಕೊಳ್ಳುತ್ತಿದ್ದೆವೇನೋ.ಓದುವುದರಲ್ಲಿ ಮೈ ಮರೆತಿರುವುದರಿಂದ ಮೊಬೈಲ್ ಆಫ್ ಮಾಡಿದ್ದ. ಊರಿಂದ ಹೆಂಡತಿ ಅನಗತ್ಯವಾಗಿ ಫೋನ್ ಮಾಡುವುದಿಲ್ಲವೆಂದು ಅವನಿಗೆ ತಿಳಿದಿತ್ತು.ರಾತ್ರಿಯೂಟದ ಬಳಿಕ ಸ್ವಲ್ಪ ದೂರ ಸುತ್ತಾಡಿ ಬರಬೇಕೆಂದು ಮನಸ್ಸಾಯಿತು. ವಸತಿ ಗೃಹದ ಮುಂದಿರುವ ರಸ್ತೆಯಲ್ಲಿ ಅಷ್ಟು ದೂರ ಹೋದರೆ ಹೇಗೆಂದು ಯೋಚಿಸಿ ಹೊರಬಂದ.ಈ ಊರಿನಲ್ಲಿ ತುಂಬ ಚಳಿಯೆನಿಸಿತು. ಅವನಿಗೆ ಬಹುಬೇಗ ನೆಗಡಿಯಾಗಿ ಹೋಗುತ್ತಿತ್ತು. ಸೀನಲು ಪ್ರಾರಂಭಿಸಿದರೆ ಸುಮ್ಮನೆ ಸೀನುತ್ತಲೇ ಇದ್ದ. ಒಂದು ವೇಳೆ ತನಗೇನಾದರೂ ನೆಗಡಿಯಾಗಿ, ನಾಳೆಯೇನಾದರೂ ವೇದಿಕೆಯಿಂದ ಮಾತಾಡುವಾಗ ಸೀನಲು ಪ್ರಾರಂಭಿಸಿಬಿಟ್ಟರೆ ಏನಾಗುವುದೆಂದು ಯೋಚಿಸಿ ವಸತಿಗೃಹದ ಕಡೆ ಹೆಜ್ಜೆಯಿಟ್ಟ.ವಸತಿಗೃಹಕ್ಕೆ ತಲುಪಿ ಹೆಂಡತಿಗೆ ಫೋನ್ ಮಾಡಿ ತಾನಿಲ್ಲಿ ಆರೋಗ್ಯವಾಗಿದ್ದೇನೆಂದು ಹೇಳಿದ. ಹಾಗೆಯೇ ಈ ಊರಿನಲ್ಲಿ ಸರ್ಕಸ್ ನಡೆಯುತ್ತಿರುವ ಬಗ್ಗೆ ಹೇಳಿ, ಸಾಧ್ಯವಾದರೆ ನಾಳೆ ಸರ್ಕಸ್ ನೋಡಿಕೊಂಡು ಬರುತ್ತೇನೆಂದು ವಿವರಿಸಿದ. ಜತೆಗೆ ತನಗೆ ಜೋಕರ್‌ಗಳ ಚೇಷ್ಟೆಗಳೆಂದರೆ ತುಂಬ ಇಷ್ಟವೆಂದು ತಿಳಿಸಿದ.ಮಧ್ಯರಾತ್ರಿಯಲ್ಲಿ ಒಮ್ಮೆಯೆದ್ದು ನೀರು ಕುಡಿದ. ಹಾಗೆಯೇ ಬಚ್ಚಲ ಮನೆಗೆ ಹೋಗಿ ಬಂದ. ಮಲಗುವ ಮುಂಚೆ ಕಿಟಕಿ ಬಳಿ ಬಂದು ವಸತಿ ಗೃಹದ ಪಕ್ಕದಲ್ಲಿರುವ ರಸ್ತೆಯನ್ನು ನೋಡಿದ. ರಸ್ತೆ ಬಿಕೋ ಎನ್ನುತ್ತಿತ್ತು. ಆದರೆ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬಗಳ ಮೇಲೆ ಉರಿಯುತ್ತಿರುವ ದೀಪಗಳು ಚಳಿಯಲ್ಲಿ ನಡುಗುತ್ತಿರುವಂತೆ ಭಾಸವಾಯಿತು.ಸರ್ಕಸ್ ಪೋಸ್ಟರ್‌ಗಳಿರುವ ಆನೆ, ಸೈಕಲ್ ಹೊಡೆಯುತ್ತಿರುವ ಸುಂದರ ಯುವತಿಗೆ, ಜೋಕರ್‌ಗಳಿಗೆ ಚಳಿಯಾಗುತ್ತಿದೆಯೋ ಇಲ್ಲವೋ ಎಂದು ಒಂದೆರಡು ಕ್ಷಣ ಕಿಟಕಿ ಬಳಿ ನಿಂತು ಯೋಚಿಸಿ ಮಂಚದ ಕಡೆ ಹೆಜ್ಜೆಯಿಟ್ಟ.ಬೆಳಿಗ್ಗೆ ಮಾಮೂಲಿಗಿಂತ ಸ್ವಲ್ಪ ತಡವಾಗಿ ಎಚ್ಚರಗೊಂಡ. ಮಲಗಿಕೊಂಡೇ ಇಂದಿನ ಕಾರ್ಯಗಳ ಬಗ್ಗೆ ಯೋಚಿಸುತ್ತಿರುವಾಗಲೇ ಇದ್ದಕ್ಕಿದ್ದಂತೆ ಅವನಿಗೆ ತನ್ನ್ಲ್ಲಲೇನೋ ಬದಲಾವಣೆಯಾಗಿದೆ ಎನ್ನಿಸಿತು. ಯಾವ ರೀತಿ ಬದಲಾವಣೆಯಾಗಿದೆಯೆಂದು ಸ್ಪಷ್ಟವಾಗಿ ಹೊಳೆಯುತ್ತಿರಲಿಲ್ಲ.

 

ಬದಲಾವಣೆ ಆಗಿದೆಯೆಂದು ಅವನ ಮನಸ್ಸು ಮಾತ್ರ ಹೇಳುತ್ತಿತ್ತು. ಸುಮ್ಮನೆ ಇದೊಂದು ಭ್ರಮೆಯೆಂದು ಯೋಚಿಸಿ ಮಂಚದ ಕಡೆ ಗಮನ ಹರಿಸಿದ.ಮಂಚವೇನಾದರೂ ದೊಡ್ಡದಾಗಿ ಹೋಗಿದೆಯೋ, ಏಕೆಂದರೆ ಮಂಚ ದೊಡ್ಡದಾಗಿ ಹೋಗಿದೆಯೆಂದು ಕಾಣುತ್ತಿತ್ತು. ನಿಜವಾಗಿ ಮಂಚ ದೊಡ್ಡದಾಗಿ ಹೋಗಿದೆ! ಬರೀ ಮಂಚವಲ್ಲ, ತಾನು ಹೊದ್ದುಕೊಂಡು ಮಲಗಿದ ಹೊದಿಕೆಯೂ ದೊಡ್ಡದಾಗಿ ಹೋಗಿದೆ. ಅನುಮಾನವೇ ಇಲ್ಲ.ತಾನೇಕೆ ಹೀಗೆ ವಿಚಿತ್ರವಾಗಿ ಯೋಚಿಸುತ್ತಿದ್ದನೆಂದು ತನಗೆ ತಾನೇ ಶಪಿಸಿಕೊಂಡ. ಹೀಗೇ ಯೋಚಿಸುತ್ತ ಮಲಗಿಕೊಂಡರೆ ವಿಚಿತ್ರ ಭಾವನೆಗಳು ಬರಬಹುದೆಂದು, ಮೆಲ್ಲನೆ ಏಳಲು ಪ್ರಯತ್ನಿಸಿದ. ಆಗ ದಿಢೀರನೆ ಅವನ ಗಮನಕ್ಕೆ ಬಂದಿದ್ದೇನೆಂದರೆ, ತನ್ನ ಶರೀರದಲ್ಲಿ ಭಾರೀ ಬದಲಾವಣೆ ಆಗಿರುವುದು. ಈ ವಿಚಾರ ಬಂದ ಕೂಡಲೇ ಅವನು ತನ್ನ ಶರೀರದ ಒಂದೊಂದು ಅಂಗವನ್ನು ಮುಟ್ಟಿ ಮುಟ್ಟಿ ನೋಡಿದ.

 

ನಿಜವಾಗಿಯೂ ಶರೀರದಲ್ಲಿ ಬದಲಾವಣೆಯಾಗಿದ್ದವು. ಕೈ ಕಾಲು ಚಿಕ್ಕದಾಗಿ ಹೋಗಿದ್ದವು. ತಲೆ ಸಹ ಚಿಕ್ಕದಾಗಿ ಹೋಗಿತ್ತು, ಒಟ್ಟಿನಲ್ಲಿ ಹೇಳಬೇಕೆಂದರೆ ಅವನು ಕುಬ್ಜನಾಗಿ ಹೋಗಿದ್ದ.ಇದೇನಾಗಿ ಹೋಯಿತೆಂದು ಕಂಗಾಲಾಗಿ ಹೋದ ಅವನು ಮಂಚದ ತುದಿಗೆ ಬಂದ- ನಿನ್ನೆಯಂತೆ ಲೀಲಾಜಾಲವಾಗಿ ನೆಲಕ್ಕೆ ಕಾಲಿಟ್ಟು ಇಳಿಯಲು ಸಾಧ್ಯವಾಗಲಿಲ್ಲ.ಜೋಪಾನವಾಗಿ ನೆಲಕ್ಕೆ ಧುಮುಕಿದ. ಆಮೇಲೆ ಮೆಲ್ಲ ಮೆಲ್ಲನೆ ಒಂದೊಂದು ಹೆಜ್ಜೆಯಿಡುತ್ತ ಆಳೆತ್ತರದ ಕನ್ನಡಿ ಮುಂದೆ ನಿಂತುಕೊಂಡು ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿದ. ಮುಖದಲ್ಲಿ ಅಂಥದ್ದೇನೋ ಬದಲಾವಣೆಯಾಗಿರಲಿಲ್ಲ. ಮುಖದ ಚಹರೆ ಬದಲಾಗಿರಲಿಲ್ಲ. ಆದರೆ ಶರೀರ ಬದಲಾಗಿ ಹೋಗಿತ್ತು. ಅವನು ಎರಡು ಅಡಿಯ ಕುಳ್ಳನಾಗಿಬಿಟ್ಟಿದ್ದ!ನಿನ್ನೆಯವರೆಗೆ ತನ್ನ ಎತ್ತರ ಐದು ಅಡಿ ನಾಲ್ಕು ಇಂಚಿತ್ತು. ಕನ್ನಡಿಯ ಮುಂದೆ ಮಂಕಾಗಿ ನಿಂತುಕೊಂಡ. ಏನು ಮಾಡಬೇಕೆಂದು ತೋಚಲಿಲ್ಲ. ಸ್ವಲ್ಪ ಯೋಚಿಸಿದ ಬಳಿಕ ಹೆಂಡತಿಗೆ ಫೋನ್ ಮಾಡಿ ಬೆಳಗ್ಗೆಯಿಂದ ತಾನು ಅನುಭವಿಸುತ್ತಿರುವ ಯಾತನೆ ಬಗ್ಗೆ ವಿವರಿಸಿದ.`ನಿಮಗೆ ಭ್ರಮೆಯಾಗಿದೆ~ ಎಂದಳು ಹೆಂಡತಿ. ನಿನ್ನೆಯಿಂದ ಸರ್ಕಸ್‌ನ ಜೋಕರ್‌ಗಳ ಬಗ್ಗೆ ಯೋಚಿಸುತ್ತಿರುವುದರಿಂದ ಹಾಗನಿಸುತ್ತಿರಬಹುದೆಂದು ಹೇಳಿದಳು.

`ಇಲ್ಲ, ನಾನು ನಿಜವಾಗಿಯೂ ಕುಳ್ಳನಾಗಿ ಹೋಗಿದ್ದೇನೆ~.`ಬೇರೆಯವರಿಗೆ ತಿಳಿಸುವುದಕ್ಕೆ ಮುಂಚೆ ನಿಮ್ಮ ಸ್ನೇಹಿತರನ್ನು ನಿಮ್ಮ ಬಳಿ ಬರಲು ಹೇಳಿ, ಅವರು ಬಂದು ನಿಮ್ಮನ್ನು ನೋಡಿದ ಬಳಿಕ ನನಗೆ ಫೋನ್ ಮಾಡಿ. ನೀವು ಮಾತ್ರ ಯಾವುದಕ್ಕೂ ಧೈರ್ಯ ಕಳೆದುಕೊಳ್ಳಬೇಡಿ~ ಎಂದಾಕೆ ಅವನಲ್ಲಿ ಆತ್ಮವಿಶ್ವಾಸ ತುಂಬಿದಳು.ಅವನು ತನ್ನ ಗೆಳೆಯನಿಗೆ ಫೋನ್ ಮಾಡಿದ.

ಅವನ ಗೆಳೆಯ ಅವನನ್ನು ಕಾಣಲು ಬರುತ್ತಿರುವುದಾಗಿ ತಿಳಿಸಿದಾಗ ಅವನಿಗೆ ಸ್ವಲ್ಪ ಸಮಾಧಾನವಾಯಿತು.ಗೆಳೆಯ ತನ್ನನ್ನು ನೋಡಿ ಎಷ್ಟೊಂದು ಹೌಹಾರುತ್ತಾನೆಂದು ಯೋಚಿಸಿದ.

ಗೆಳೆಯನ ಮಾತಿರಲಿ, ಹೆಂಡತಿ ತನ್ನನ್ನು ನೋಡಿ ಎಷ್ಟೊಂದು ಕಂಗಾಲಾಗಿ ಹೋಗುತ್ತಾಳೆಯೋ ಎಂದು ಯೋಚಿಸಿ ಅವನು ಕೆಲವು ಸಮಯದವರೆಗೆ ಉಸಿರಾಡುವುದನ್ನೇ ಮರೆತು ಬಿಟ್ಟ. ಈಗ ತಾನಂತೂ ಮೊದಲಿನಂತೆ ಎಲ್ಲಾ ಕಡೆಯೂ ತಿರುಗಾಡುವಂತಿಲ್ಲ.ಎಲ್ಲಿ ಹೋದರೂ ಜನ ಮೊದಲು ನನ್ನನ್ನೇ ಗಮನಿಸುತ್ತಾರೆ, ಬೀದಿಗಿಳಿದರೆ ಮಕ್ಕಳು ನನ್ನನ್ನು ನೋಡಿ ನಗುತ್ತಾರೆ. `ಕುಳ್ಳ, ಕುಳ್ಳ~ ಎಂದು ಚುಡಾಯಿಸಲು ಹಿಂಜರಿಯುವುದಿಲ್ಲ. ತನ್ನ ಜೀವನದಲ್ಲಿ ಇಂಥ ಆಕಸ್ಮಿಕ ಬರಬಾರದಿತ್ತು. ಈ ರೀತಿ ಆಗುವುದರ ಬದಲು ಸತ್ತೇ ಹೋಗಿದ್ದರೆ ಚಿಂತೆಯಿರಲಿಲ್ಲ.ತಲೆ ತಲೆ ಬೆಚ್ಚಿಕೊಂಡ ಅವನು. ಗೆಳೆಯ ಯಾವಾಗ ಬರುತ್ತಾನೆಯೋ ಎಂದು ಯೋಚಿಸುತ್ತಿರುವಾಗಲೇ ಹೊಸದೊಂದು ವಿಚಾರ ಹೊಳೆಯಿತು. ರಾತ್ರೋರಾತ್ರಿ ತಾನೊಬ್ಬನೇ ಕುಳ್ಳನಾಗಿ ಹೋಗಿರುವೆನೋ ಅಥವಾ ಎಲ್ಲರೂ ತನ್ನಂತೆಯೇ ರೂಪಾಂತರ ಹೊಂದಿದ್ದಾರೋ? ಈ ವಿಚಾರ ಬಂದ ಕೂಡಲೇ ಅವನು ಕುರ್ಚಿಯನ್ನು ಎಳೆದುಕೊಂಡು ಕಿಟಕಿ ಬಳಿ ಇರಿಸಿ ಅದರ ಮೇಲೆ ಹತ್ತಿ ಹೊರ ನೋಡಿದ. ರಸ್ತೆಯಲ್ಲಿ ತಿರುಗಾಡುವವರಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲ. ಎಲ್ಲರನ್ನು ಬಿಟ್ಟು ತನ್ನೊಬ್ಬನಿಗೇಕೆ ಈ ಶಿಕ್ಷೆ?ಅವನು ಕಿಟಕಿಯಲ್ಲಿ ನಿಂತು ನೋಡುತ್ತಿರುವಾಗಲೇ ಕೋಣೆಯ ಕರೆಗಂಟೆಯ ಶಬ್ದವಾಯಿತು. ಬಂದಿರುವವರು ಯಾರಿರಬಹುದು, ವಸತಿಗೃಹದವರಾಗಿದ್ದರೆ ಬಾಗಿಲನ್ನು ತೆರೆಯಲೇಬಾರದು. ಕುರ್ಚಿಯನ್ನು ಬಾಗಿಲು ಬಳಿ ಎಳೆದುಕೊಂಡು ಹೋದ. ಬಾಗಿಲಿನ ಚಿಲಕವನ್ನು ಕುರ್ಚಿ ಮೇಲೆ ನಿಂತುಕೊಂಡೇ ತೆಗೆಯಲು ಸಾಧ್ಯವಿತ್ತು. ಕುರ್ಚಿಯನ್ನು ಬಾಗಿಲು ಬಳಿ ತಂದ. ಬಳಿಕ ಬಾಗಿಲಾಚೆ ನಿಂತಿರುವವರು ಯಾರಿರಬಹುದೆಂದು ತಿಳಿದುಕೊಳ್ಳಲು ಗೆಳೆಯನ ಮೊಬೈಲ್‌ಗೆ ಫೋನ್ ಮಾಡಿದ. ಆ ಕಡೆ ಮೊಬೈಲ್ ಆನ್ ಆದ ಕೂಡಲೇ-`ಎಲ್ಲಿದ್ದೀಯಾ?~ ಕೇಳಿದ.

`ನಿನ್ನ ರೂಂ ಹೊರಗಿದ್ದೇನೆ ಬಾಗಿಲು ತೆಗಿ~.

ಅವನು ಕುರ್ಚಿ ಮೇಲೆ ಹತ್ತಿಕೊಂಡು ಬಾಗಿಲು ತೆರೆದ. ನಂತರ ಕೂಡಲೇ ಕುರ್ಚಿಯಿಂದಿಳಿದು ಬಾಗಿಲು ಎಳೆದುಕೊಂಡ.ಒಳಬಂದ ಗೆಳೆಯ ಅವನನ್ನು ನೋಡಿ- `ಅರೇ, ನೀನು ನಿಜವಾಗಿಯೂ ಕುಳ್ಳನಾಗಿ ಹೋಗಿದ್ದೀಯಾ, ಎಲ್ಲೋ ತಮಾಷೆಗೆ ಹೇಳುತ್ತಿರಬಹುದೆಂದು ತಿಳಿದುಕೊಂಡಿದ್ದೆ~.

`ಈಗೇನು ಮಾಡುವುದು?~`ಗಾಬರಿಯಾಗುವುದು ಬೇಡ, ಏನೂ ಆಗಿಯೇ ಇಲ್ಲ ಎಂದು ತಿಳಿದುಕೋ~.

ತಾನು ಕುಳ್ಳನಾಗಿ ಹೋಗಿರುವುದನ್ನು ಗೆಳೆಯ ಖಾತರಿಪಡಿಸಿದ ಬಳಿಕ, ಅವನು ಹೆಂಡತಿಗೆ ಫೋನ್ ಮಾಡಿದ. ತಾನೀಗ ಊರಿಗೆ ಹಿಂತಿರುಗುವ ಬಗ್ಗೆ ಯೋಚಿಸುತ್ತಿದ್ದೇನೆಂದು ಹೇಳಿದ.`ಅಷ್ಟೊಂದು ಕುಸಿದು ಹೋಗುವುದು ಬೇಡ, ಈ ಪ್ರಪಂಚದಲ್ಲಿ ಅನೇಕ ಕುಳ್ಳರು ದೊಡ್ಡ ಸಾಧನೆ ಮಾಡಿದ್ದಾರೆ. ನೀವು ಸಾಧನೆ ಮಾಡಿ ತೋರಿಸಿ. ಕಾರ್ಯಕ್ರಮ ಇರುವುದು ಸಂಜೆಗೆ. ನಾನೀಗ ಇಲ್ಲಿಂದ ಹೊರಡುತ್ತೇನೆ, ಮಧ್ಯಾಹ್ನದ ವೇಳೆಗೆ ನಿಮ್ಮ ಬಳಿಯಿರುತ್ತೇನೆ, ನಾವೆಲ್ಲ ಕಾರ್ಯಕ್ರಮಕ್ಕೆ ಹೋಗೋಣ, ಏನಾಗುತ್ತದೆಯೋ ನೋಡಿಯೇ ಬಿಡೋಣ~.`ಕಾರ್ಯಕ್ರಮದಲ್ಲಿ ಜನ ನನ್ನನ್ನು ನೋಡಿ ನಗುವುದಿಲ್ಲವೇನು?~

`ಅವರು ನಕ್ಕರೆ ನಕ್ಕಲಿ, ನೀವಂತೂ ಧೈರ್ಯವಾಗಿರಬೇಕು~.

`ನೀನು ಹೇಳಿದಂತೆ ಮಾಡುತ್ತೇನೆ~ ಎಂದ.ಫೋನ್‌ನಲ್ಲಿ ಮಾತು ಮುಗಿಸಿ ಅವನು ಗೆಳೆಯನಿಗೆ, `ನನಗೆ ಎರಡು ಜತೆ ಬಟ್ಟೆ, ಶೂ ತೆಗೆದುಕೊಂಡು ಬಾ~ ಎಂದ.ಗೆಳೆಯ ಅವನನ್ನು ಎದುರಿಗೆ ನಿಲ್ಲಿಸಿಕೊಂಡು ಗೇಣಿನಲ್ಲಿ ಅವನ ಅಳತೆಯನ್ನು ತೆಗೆದುಕೊಂಡು ಹೊರಟ.ಮೊನ್ನೆ ತಾನೇ ತಾನು ಹೊಸ ಡೈರಿ ಕೊಂಡುಕೊಂಡು ಬಂದಾಗ ಅದರಲ್ಲಿ ತನ್ನ ಹೆಸರು, ವಿಳಾಸ, ರಕ್ತದ ಗ್ರೂಪ್, ಹೀಗೆಯೇ ಏನೇನೋ ಬರೆದಿದ್ದು ನೆನಪು. ತನ್ನ ಎತ್ತರ ಸಹ ಬರೆದಿದ್ದು ನೆನಪು. ಥೂ, ಎಂಥ ಎಡವಟ್ಟಾಗಿ ಹೋಯಿತಲ್ಲ.ಈಗ ಯೋಚಿಸುತ್ತಾ ಕೂರುವ ಬದಲು ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಂಡವರಿಗೆ ಆತ್ಮವಿಶ್ವಾಸ ತುಂಬಲು ತನಗೆ ಒದಗಿ ಬಂದಿರುವ ಅವಕಾಶವನ್ನು ಒಂದು ಸವಾಲಿನಂತೆ ಪರಿಗಣಿಸಬೇಕು ಎಂದು ಯೋಚಿಸಿ, ನಿನ್ನೆ ಬರೆದಿರುವ ಟಿಪ್ಪಣಿಗಳೆನ್ನೆತ್ತಿಕೊಂಡ.ಗೆಳೆಯ ಅವನಿಗಾಗಿ ತಂದಿದ್ದ ಹೊಸ ಬಟ್ಟೆ, ಹೊಸ ಶೂಗಳನ್ನು ಧರಿಸಿದ ಅವನು ಹೊಸ ಮನುಷ್ಯವೇ ಆಗಿಹೋದ.ಮಧ್ಯಾಹ್ನ ಅವನ ಹೆಂಡತಿ ಸಹ ಬಂದಳು. ಅವಳ ಬಂದ ಬಳಿಕ ಕುಸಿದುಹೋದ ಧೈರ್ಯ ಮರಳಿ ಬಂತು.ಸಂಜೆ ಅವನು ಕಾರ್ಯಕ್ರಮಕ್ಕೆ ಹೋದಾಗ ಸಭಿಕರು ಅವನನ್ನು ನೋಡಿ ಬಿದ್ದು ಬಿದ್ದು ನಕ್ಕರು. ಶಹರದಲ್ಲಿ ನಡೆಯುತ್ತಿರುವ ಸರ್ಕಸ್ ಅನ್ನು ಅವರಲ್ಲಿ ಅನೇಕರು ನೋಡಿರಬೇಕು. ಸರ್ಕಸ್‌ನ ಜೋಕರ್‌ಗಳು ಅವರಿಗೆ ನೆನಪಾಗಿರಬೇಕು. ಸಭಿಕರ ನಗುವಿನ ಕಡೆಗೆ ಅವು ಹೆಚ್ಚು ಗಮನ ಕೊಡಲಿಲ್ಲ. ಅವನಿಗಾಗಿ ವಿಶೇಷವಾಗಿ ತರಿಸಲಾಗಿದ್ದ ಎತ್ತರದ ಕುರ್ಚಿ ಮೇಲೆ ಕುಳಿತುಕೊಂಡ.ಮಾತಾಡುವ ಸಂದರ್ಭ ಬಂದಾಗ, ಅವನು ಕುರ್ಚಿಯ ಮೇಲೆ ನಿಂತುಕೊಂಡ. `ವ್ಯಕ್ತಿತ್ವ ವಿಕಸನ~ದ ಬಗ್ಗೆ ಮಾತಾಡಲು ಪ್ರಾರಂಭಿಸುವುದಕ್ಕೆ ಮುನ್ನ ಕಳೆದ ದಿನದ ಘಟನೆಗಳನ್ನು ವಿವರಿಸಿದ. ಹೀಗಾಗಿದ್ದರೂ ತಾನು ಮೂಲೆಗೆ ಸೇರದೆ ಹೊರ ಬಂದಿರುವುದನ್ನು ಹೇಳಿದ.ಆಮೇಲೆ `ವ್ಯಕ್ತಿತ್ವ ವಿಕಸನ~ದ ಬಗ್ಗೆ ಹೇಳಲು ತೊಡಗಿದ. ಅವನ ಒಂದೊಂದು ಮಾತು ಕೇಳಿ ಜನ ದಂಗಾಗಿ ಹೋದರು. ಅವನ ಒಂದೊಂದು ಮಾತಿಗೂ ಚಪ್ಪಾಳೆ ತಟ್ಟತೊಡಗಿದರು. ಸಭಿಕರು ಹಾಕುತ್ತಿರುವ ಒಂದೊಂದು ಚಪ್ಪಾಳೆಗೂ ತಾನು ಒಂದೊಂದು ಅಡಿ ಹೆಚ್ಚಾಗುತ್ತಿರುವಂತೆ ಅವನಿಗೆ ಭಾಸವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.