ಭಾನುವಾರ, ಆಗಸ್ಟ್ 9, 2020
21 °C

ಕಥೆ : ಹೆಣಗಳ ಭಾಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಥೆ : ಹೆಣಗಳ ಭಾಷೆ

“ಮಸಣದ ಅಂಚಿನಲೊಂದು ಮನೆಯ ಮಾಡಿ ಹೆಣಗಳಿಗಂಜಿದೊಡೆಂತಯ್ಯ”- ಥೇಟ್ ಹೀಗೆ ನನ್ನ ಪೀಕಲಾಟ ಒದಗಿ ಬಂದದ್ದೇ ಈ ಸರ್ಕಾರದ ಹೊಲಸು ವರ್ಗಾವಣೆ ದೆಸೆಯಿಂದ. ಸರ್ಕಾರಿ ಹಿರಿಯ ವೈದ್ಯನಾದ ನನ್ನನ್ನು ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಎಂಬ ಪಕ್ಕಾ ಹಸಿ ಸುಳ್ಳು ಬಳಸಿ ಹನ್ನೊಂದೇ ತಿಂಗಳಿಗೆ ಎತ್ತಿ ಹಾಕಿದ್ದರಿಂದ ಮನೆ ಹುಡುಕಲು ಟೈಮೇ ಇಲ್ಲದೆ ಬ್ರೋಕರ್ ಒಬ್ಬನಿಗೆ ಹೊಸ ಪಟ್ಟಣದಲ್ಲಿ ಮನೆ ಹುಡುಕುವ ಕಾಂಟ್ರಾಕ್ಟ್ ಕೊಟ್ಟಾಗ ಆತ `ಫಸ್ಟ್ ಕ್ಲಾಸ್ ಜಾಗ.ಎಲ್ಲಾ ಸವಲತ್ತು ಛಲೋ ಅದಾವ್ರಿ ಚಿಂತೀನೇ ಬ್ಯಾಡ, ಲಾರಿಗೆ ಸಾಮಾನು ಹಾಕ್ರಿ ಹಿಂದಾ ಕಾರಲ್ಲಿ ಹೊಂಡ್ರಲಾ~ ಅಂದ. ನಾನು, ಹೆಂಡತಿ ಶಾಂತಿ, ಮೆಡಿಕಲ್ ಓದು ಮುಗಿಸಿರುವ ಮಗಳು ಕೋಮಲ, ಮಗ ಪ್ರಾಣೇಶ್ ಅವನ ಆಣತಿ ಪಾಲಿಸಿದೆವು. ಸಂಜೆ ಹೊಸ ಊರಿನಲ್ಲಿ ಉತ್ತರ ಕರ್ನಾಟಕದಿಂದ ಮಲೆನಾಡಿನ ಈ ನಗರಕ್ಕೆ ಆತ ಹೇಳಿದ ಹೊಸ ಸ್ಥಳಕ್ಕೆ ಬಂದು ಇಳಿದಾಗ ಸಿಕ್ಕಿದ್ದೇ ವೀರಶೈವ ರುದ್ರಭೂಮಿಗೆ ಹೊಂದಿಕೊಂಡೇ ಇದ್ದ ಒಂಟಿ ಬಂಗಲೆ ಸ್ವರೂಪದ ಮನೆ.ಹೆಂಡತಿ ಶಾಂತಿ ಸ್ಮಶಾನದ ಗೋಡೆಯ ಪಕ್ಕದ ಒಂಟಿ ಮನೆ ನೋಡಿದ್ದೇ ಗಾಬರಿಕೊಂಡು ಇಲ್ಲಸಲ್ಲದ್ದು ಕಲ್ಪಿಸಿಕೊಂಡು ಅಳು ನಿಲ್ಲಿಸಿದ್ದೇ ಮೂರು ತಾಸು ಕಳೆದ ಮೇಲೆ. ಮಗಳು ಕೋಮಲ ಮೆಡಿಕಲ್ ಓದಿದವಳಾಗಿದ್ದು ತಣ್ಣನೆಯ ಶವಗಳನ್ನು ಮುಟ್ಟಿದ ಅನುಭವ ಇದ್ದು ಗಾಬರಿಗೊಳ್ಳಲಿಲ್ಲ. ಸೈಕಾಲಜಿ ಎಂ.ಎಸ್ಸಿ. ಕೊನೆ ಹಂತದಲ್ಲಿದ್ದ ಮಗ ಮಾತ್ರ ಪುಕ್ಕಲು ಗುಣದ ಸಂಕೀರ್ಣ ವ್ಯಕ್ತಿತ್ವದಿಂದಾಗಿ ಅವರಮ್ಮನಿಗೆ ಜುಗಲ್‌ಬಂದಿ ಸಾಥ್ ಮುಂದುವರೆಸಿದ.ಧುತ್ತನೆ ಎದುರಾದ ಹೊಸ ಬಿಕ್ಕಟ್ಟಿಗೆ ನನಗೂ ತಲೆ ಬಿಸಿಯಾಗಿ ಬ್ರೋಕರ್‌ಗೆ ಇಪ್ಪತ್ತು ರೂಪಾಯಿ ಕರೆನ್ಸಿ ಖರ್ಚಾಗುವಷ್ಟು ಬೈಗುಳದ ಹೂವು ಪತ್ರೆ ಏರಿಸಿದೆ. ಅವ ಸಖತ್ ಕೂಲ್ ಆಗಿ `ಸಾಹೇಬ್ರೆ ಏನಂತ ತಿಳಿದ್ದೀದ್ದೀರಾ ನನ್ನ? ಹ್ಞಾ! ಮೂರು ದಿನ ಹಗಲು ರಾತ್ರಿ ಅಡ್ಡಾಡಿ ತಲಾಷ್ ಮಾಡಿ ಹುಡುಕ್ಸಿದೀನ್ರಿ.ನೀವೆಲ್ಲೋ ಮುರಾ ಸಂಜೀಲಿ ಮನೆ ನೋಡಿರಬೇಕು. ಮುಂಜಾನೆ ಬೆಳಕಿನಾಗ ಒಮ್ಮೆ ನೋಡ್ರೆಲ್ಲಾ ಮನಿ ಎಲ್ಲಿದ್ರೇನ್ ಸರ‌್ರಾ. ಸೌಕರ್ಯ ನೋಡ್ರಲಾ. ಗ್ರಾನೈಟ್ ಪ್ಲೋರಿಂಗ್ ಅಟ್ಯಾಚ್ಡ್ ಬೆಡ್‌ರೂಂಗಳು, ಬಾಲ್ಕನಿ, ಆರೂ ಆರೂ ಸೈಜಿನ ಕಿಟಿಕಿಗಳು, ಗ್ರಿಲ್, ಬೋರ್ ಕಾರ್ ಪಾರ್ಕಿಂಗ್. ಡಾಕ್ಟ್ರೇ ನೀವು ನೂರಾರು ಹೆಣ ಕಂಡೀರಿ. ಕೊಯ್ದದೀರಿ.ನೀವೇ ಹೊಂದ್ಕಳ್ಳಾಲ್ಲ ಅಂದ್ರೆ ಹ್ಯಾಂಗ್ರೀ ಆಶ್ವಿನಿ ದೇವತೆಗಳೇ~ ಅಂತ ಹಂಗಿಸೋದೇ ಕಿಲಾಡಿ ನನ್‌ಮಗ. ಆಮೇಲೆ ತಿಳಿದಿದ್ದೇನೆಂದರೆ ಈ ಮನೆಯು ಮಸಣದ ಭಾಗವೇ ಆಗಿದ್ದು ಶಾಸಕನ ಚೀಲಾ ಪ್ರಭಾವಿ ಕೌನ್ಸಿಲರ್ ಭೂ ದಾಖಲೆ ಗೋಲ್‌ಮಾಲ್ ಮಾಡಿ ಮನೆ ಕಟ್ಟಿಸಿದ್ದೆಂದು ತಿಳಿಯಿತು.ಬೆಳ್ಳಂಬೆಳಗ್ಗೆ ಕಿಟಿಕಿ ಬಳಿ ನೋಡುತ್ತೇನೆ: ಇಡೀ ರುದ್ರಭೂಮಿ ಮನೆಯ ಒಂದು ಭಾಗವೇ ಎನ್ನುವಂತೆ ನಿಚ್ಚಳವಾಗಿ ಕಾಣುತ್ತಿದೆ. ಬೃಹತ್ ಆರ್ಚ್, ಬಗೆಬಗೆ ಬಣ್ಣದ ಗೋರಿಗಳು ದೇವಕಣಗಿಲೆ, ಬಿಲ್ವಪತ್ರೆ, ನಾಗಲಿಂಗ ಪುಷ್ಪದ ಬೃಹತ್ ಮರಗಳು. ರುದ್ರಶಕ್ತಿ ಮೌನತಾಳಿ ನೀರವವಾದದಂತೆ ಆತಂಕ ಹುಟ್ಟಿಸಿದ ಕ್ಷಣವದು. ಹೆಂಡತಿ ಶಾಂತಾಳನ್ನು ಈ ಸುಮುಹೂರ್ತ ಬಳಸಿಕೊಂಡು ಸಂಪ್ರೀತಗೊಳಿಸಬಹುದೆನಿಸಿತು.ಸರಿ ಶುರುವಾಯಿತು: ಸಾಕ್ಷಾತ್ ಶಿವ ಕೂಡ ಇಂತಹ ಮಸಣದ ಬೂದಿಯೊಳಗೆ ಎದ್ದು ಬಂದವನು; ತೊಟ್ಟಿಲಿಂದ ಗೋರಿಯವರೆಗೆ ಎಲ್ಲರೂ ಪ್ರಯಾಣಿಸಬೇಕು; ಯಾಕೆ ಬಡಿದಾಡ್ತಿ ತಮ್ಮ ಮಾಯಾ ಮೆಚ್ಚಿ - ಈ ತತ್ವ ಪದದ ವಿವರ ಇತ್ಯಾದಿ, ಹೀಗೆ ನಯವಾಗಿ, ಮನೋಜ್ಞವಾಗಿ, ಪ್ರಾಜ್ಞನಂತೆ ಪ್ರಾಂಜಲ ಮನಸ್ಕನಾಗಿ ಅವಳಿಗೆ ಅಣಿಗೊಳಿಸುತ್ತಾ ಅವಳ ಮನೋಲೋಕ ಪ್ರವೇಶಿಸಿ ವಿಪ್ಲವ ಕ್ರಾಂತಿ ಮಾಡಿ ಯಶಸ್ವಿಯಾಗುತ್ತಿದ್ದೇನೆಂದು ನಾನು ಭಾವಿಸುವಷ್ಟರಲ್ಲಿ ಚಂಡಿಯ ಅವತಾರ ತಾಳಿ ಗುರ‌್ರೆಂದು ಎಗರಿ ಬಿದ್ದಳು. ಬೋರೆಂದು ಅಳುಮಳೆ ಸಿಂಪಡಿಸಿದಳು.   “ಹಾಳು ಬಡಿಸ್ಕೊಂಡು ನೀವೇ ಹೆಣಗಳ ನಡುವೆ ಬದುಕ್ರಿ; ಮೂರು ತಿಂಗಳೊಳಗೆ ಮನೆ ಬದಲಾಯಿಸದಿದ್ದರೆ ನಮ್ಮಿಬ್ಬರಿಗೂ ಡೈವೋರ್ಸ್ ಆದ್ರೂ ಚಿಂತೆ ಇಲ್ಲ” ಎಂದು ಬಾಂಬ್ ಎಸೆದಳು. ನನಗೋ ಕಿರಿಕಿರಿ ಆಗುವ ಬದಲು ಖಿನ್ನತೆ ಆವರಿಸಿತು.ನನ್ನದೇ ಸ್ವಂತ ಮನೆ ಇದ್ದರೂ ಈ ವೃತ್ತಿ ಸಲುವಾಗಿ ಭ್ರಷ್ಟ ರಾಜಕಾರಣಿಗಳು ನನ್ನಂತಹವನನ್ನು ನೆನಪಾದಾಗಲೆಲ್ಲಾ ವರ್ಗಾಯಿಸಿದಾಗ ಯಾರೋ ಕಟ್ಟಿದ್ದ ಎಲ್ಲೋ ಇರುವ ಹೇಗೋ ಇರುವ `ಮನೆಯಿಂದ ಮನೆಗೆ~ ಬಾಡಿಗೆದಾರನಾಗಿರಬೇಕಾದ್ದು; ಭಯ ಸಂಕೋಚವೇ ಮೈವೆತ್ತ ವ್ಯಕ್ತಿತ್ವದ ಹೆಂಡತಿ ಮಸಣದಂಚಿನ ಮನೆ ಬಗ್ಗೆ ಭಾವನಾತ್ಮಕ ಹೇರಿಕೆಯ ತಿಳಿವಿನಿಂದ ಬೆದರಿರುವುದು ಚಿಂತೆಗೀಡು ಮಾಡಿತು. ಲಯ ತಪ್ಪಿದರೆ ಮನೆ ಬದುಕೂ ಕೂಡ ಎಷ್ಟೋ ಸಲ ಮಸಣದ ಬದುಕಿನಂತೆಯೇ ಅಲ್ಲವೇ?ಸ್ಮಶಾನ, ಸುಡುಗಾಡು, ಚಿತಾಗಾರ, ರುದ್ರಭೂಮಿ- ಯಾವ ಹೆಸರಿನಿಂದ ಕರೆದರೇನು ಅದು ಅದೇ. ಹೌದು ಶವ ಕಂಡರೆ ಶವ ಆಗಿರದ ಮನುಷ್ಯ ಅಳುಕುವುದಾದರೂ ಯಾಕೆ? ಶವದ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿ ನೋಡಲು ಸಾಧ್ಯವೇ ಇಲ್ಲ ಬಿಡಿ. ಶವದ ಕಣ್ಣುಗಳ ಮೇಲಿನ ರೆಪ್ಪೆಯನ್ನು ರೋಲಿಂಗ್ ಶಟರ್ ಎಳೆದಂತೆ ಎಳೆದು ಬಾಗಿಲು ಮುಚ್ಚಿರುತ್ತಾರೆ.

 

ಹರಿಶ್ಚಂದ್ರ ಸಹ ಯಾವ ಭಯವೂ ಇಲ್ಲದೆ ಅದೆಷ್ಟು ಇರುಳು ಕಾಯ್ದು ತನ್ನ ಮಗನ ಶವಸಂಸ್ಕಾರವನ್ನೇ ಕಳ್ಳ ಕೇಸೆಂದು ಪತ್ನಿಯನ್ನು ದಂಡಿಸಿದನಲ್ಲ. ನನಗೂ ಬಾಲ್ಯದಲ್ಲಿ ಸತ್ತವರನ್ನು ಧೈರ್ಯವಾಗಿ ನೋಡಿದ ನೆನಪಿಲ್ಲ. ಸಾವಾದರೂ ಎಂತಹದು. ಜೀವದ್ದಾದೀತು.ವ್ಯಕ್ತಿತ್ವದ್ದೂ ಆದೀತು. ಕಾಲೇಜು ಕಲಿಯುವಾಗ ಲಂಕೇಶರ `ಗಿಳಿಯು ಪಂಜರದೊಳಿಲ್ಲ~ ನಾಟಕದಲ್ಲಿ ತಂದೆಯ ಪಾತ್ರ ಮಾಡಿದ್ದೆ. ಕ್ಷೌರಿಕನಿಗೆ ಸುಳ್ಳು ಹೇಳಿದ್ದಕ್ಕೆ ಮಗಳು ವ್ಯಂಗ್ಯವಾಗಿ ಕೇಳುವ ಮಾತು- `ಅಪ್ಪಾ ಸತ್ತೋರ ಮುಖ ಹೇಗಿರುತ್ತೆ~ ಅಂತ ಕೇಳಿದ್ದು ಆತ್ಮಸಾಕ್ಷಿ ಇರುವ ಯಾರೂ ಮರೆಯಲಾಗದ್ದು.ನಾನು ನೋಡಿದ ಹತ್ತಾರು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳ ಮುಖದಲ್ಲಿ ಕಣ್ಣುಗಳಷ್ಟೇ ಕಾಣುತ್ತಿರುತ್ತದೆ. ಸಾಮಾಜಿಕ ಕ್ರೌರ್ಯಗಳ ಬಲೆಯಲ್ಲಿ ಅವರ ನಿಸ್ತೇಜ ಮುಖಗಳಲ್ಲಿ ಬಣ್ಣ, ಬೆಳಕು ಏನೂ ಇರೋಲ್ಲ. ನಾನು ಮೆಡಿಕಲ್ ಕಾಲೇಜು ಸೇರಿದ ಮೇಲೆ ಹೆಣಗಳನ್ನು ನೋಡುತ್ತ ವೈದ್ಯನಾದ ಮೇಲೆ ಅವುಗಳನ್ನು ಕೊಯ್ಯುತ್ತಾ ದಿಗ್ಭ್ರಮೆಗೊಳ್ಳತೊಡಗಿದೆ. ಜೀವ ಎಲ್ಲಿದೆ? ಎಲ್ಲಿ ಹೋಯಿತು? ಹೀಗೆಲ್ಲಾ ನೆನಪಾಗಿ ನರ್ಸಿಂಗ್ ಹೋಂ ಕಟ್ಟುವ ಅಮಲು, ಹುಚ್ಚು ಏಕೋ ಹಿಡಿಯಲಿಲ್ಲ.ಜೀವಾತ್ಮ- ಪರಮಾತ್ಮ: ಸಾವು-ಮರುಜನ್ಮ: ಸೃಷ್ಟಿ-ಲಯ- ಇಂತಹ ದ್ವಂದ್ವ ಮತ್ತು ಅಧ್ಯಾತ್ಮದ ಪಾರಿಭಾಷಿಕ ಚರ್ಚೆಗಳು ನನ್ನನ್ನು ತುಂಬಾ ಜಿಜ್ಞಾಸೆಗೆ ಒಡ್ಡಿದೆ. ರಾಮಕೃಷ್ಣ ಪರಮಹಂಸ, ರಮಣಮಹರ್ಷಿ, ಸ್ವಾಮಿರಾಮ, ವಿವೇಕಾನಂದರೂ ಸಾಕಷ್ಟು ಕಾಡಿದ್ದಾರೆ. ಜೀವ ಅವತರಿಸಿದ್ದುದು ಹೋಗುವುದಾದರೂ ಎಲ್ಲಿಗೆ ಎಂದು ಅನೇಕ ರಾತ್ರಿ ತಾರ್ಕಿಕ ಲಹರಿಯಲ್ಲಿ ಯೋಚಿಸಿ ನಿರುತ್ತರನಾಗಿದ್ದೇನೆ.

 

ಸೃಷ್ಟಿ-ಲಯದ ದ್ವಂದ್ವ ಮೀಮಾಂಸೆಯಂತೂ ನನ್ನನ್ನು ಸಾಕಷ್ಟು ಅಲುಗಾಡಿಸಿದೆ. ಕಣ್ಣು ರೆಪ್ಪೆ ಬಿಡಿಸಿ ಕಣ್ಣಿನ ಗೊಂಬೆ ನೋಡುತ್ತಿದ್ದಾಗ ಸ್ಟೆತೊಸ್ಕೋಪ್‌ನಲ್ಲಿ ಲಬ್‌ಡಬ್ ಹೃದಯ ಬಡಿತ ಕೇಳುತ್ತಿರುವಾಗ; ರೋಗಿಯನ್ನು ಎತ್ತಿ ನನ್ನ ತೋಳುಗಳಲ್ಲಿ ಹಿಡಿದಾಗ - ಹಾಗೇ ಅನೇಕರು ಗತಪ್ರಾಣರಾಗಿ ಶವವಾಗಿದ್ದಾರೆ. ಇಷ್ಟೆಲ್ಲಾ ಪಕ್ವ ಅನುಭವ ಇರುವ ನಾನು ಹೆಂಡತಿಯ ಭಯ ದೂರ ಮಾಡಲೇಬೇಕು.

 

ಇದಕ್ಕಾಗಿ ತಂತ್ರಗಳನ್ನು ಹೆಣೆಯತೊಡಗಿದೆ. ಈಗ ವೈದ್ಯಳಾಗಲು ಅಣಿಯಾಗುತ್ತಿರುವ ಮಗಳು ಕೋಮಲ ಕೂಡ ತನ್ನ ಅಮ್ಮಳನ್ನು ಮೌಢ್ಯದ ಭ್ರಮೆಗಳಿಂದ ಬಿಡಿಸಲು ಊರುಗಳೇ ಮಸಣ ಸದೃಶವಾಗಿರುವ, ಮಸಣದ ಎಷ್ಟೋ ನಿರ್ಜನ ಸ್ಥಳಗಳೇ ಲೇಸಾಗಿರುವ ಸಾಮ್ಯಗಳನ್ನು ಹೇಳುತ್ತಿರುತ್ತಾಳೆ.

 

ಶಾಂತಾ ಎಷ್ಟು ನಿರಾಕರಿಸಿದರೂ ಕೋಮಲ ಬಿಡುತ್ತಿಲ್ಲ. ಈಗೊಂದು ಶುಭ ಸೂಚನೆ ಕಾಣಿಸುತ್ತಿದೆ. ಶಾಂತಾ ಸ್ವಲ್ಪ ಸ್ವಲ್ಪ ಹೊಂದಿಕೊಳ್ಳತೊಡಗಿದ್ದಾಳೆ. ಮಗ ಪ್ರಾಣೇಶ ಗತಪ್ರಾಣ ಬಂಧುಗಳೊಡನೆ ಸಂಭಾಷಿಸಿ ಸಾವಿನ ಮನಃಶಾಸ್ತ್ರೀಯ ಪಾರಿಭಾಷಿಕ ಕಿರುಹೊತ್ತಿಗೆ ತಯಾರಿಸಬೇಕೆಂದು ಯೋಚಿಸುತ್ತಿದ್ದಾನೆ.ಮುಂಜಾನೆ ಬೇಗ ಎದ್ದು ವಾಕಿಂಗ್ ಹೋಗುವುದು ಹೊಸ ಊರಿನಲ್ಲಿ ತಪ್ಪಿ ಹೋಗಿತ್ತು. ಮತ್ತೆ ಚಾಲೂ ಮಾಡುವ ಸಲುವಾಗಿ ಎದ್ದು ಬಾಗಿಲಿಗೆ ಬಂದೆ. ರುದ್ರಭೂಮಿಯ ಆರ್ಚ್ ಮೇಲೆ ಬರೆದಿದ್ದ `ಕೈಲಾಸವಾಸಿಗಳಿಗೆ ಸುಸ್ವಾಗತ~ ಆಹ್ವಾನ ನೀಡಿತು. ಅಳುಕಿನಿಂದ ಒಳಗೆ ಹೋದೆ. ಗೂಡು, ಕಮಾನು, ಲಘು ಚಾವಣಿ, ಬೃಂದಾವನಾಕಾರ, ಗದ್ದುಗೆ ರೂಪ, ಅರೆವೃತ್ತಾಕಾರ, ಶಿವಲಿಂಗದ ಆಕೃತಿ ತರಹೇವಾರು ಸಮಾಧಿಗಳು ಗಮನ ಸೆಳೆದವು. ಕೆಲವು ಬರಹಗಳು ಗಕ್ಕನೆ ನನ್ನನ್ನು ನಿಲ್ಲಿಸಿಬಿಟ್ಟೆವು.`ಪ್ರಿಯೇ, ನಿನ್ನ ಕಣ್ಣಿನ ನಂದಾದೀಪದ ಬೆಳಕು ಆರಿಸಿಕೊಂಡು ನಮ್ಮನ್ನೆಲ್ಲಾ ಇರುಳಿಗೆ ದೂಡಿ ಚಿರನಿದ್ರೆಯಲ್ಲಿದ್ದೀಯಾ ಮರಳಿ ಬಾ~. ಮತ್ತೊಂದೆಡೆ, `ಹೇ ಪ್ರಭು ಈ ಸಾವು ನ್ಯಾಯವೇ? ನಮ್ಮ ಕೈಯಿಗೆ ಹಣತೆ ಕೊಟ್ಟು ಬೆಳಕನ್ನು ಯಾಕೆ ಕಸಿದುಕೊಂಡೆ, ಈ ಕುಟುಂಬ ಬರಸಿಡಿಲಿನಿಂದ ತತ್ತರಿಸಿದೆ~. ಮಗದೊಂದು ಫಲಕ `ತುಂಬು ಜೀವನ ನಡೆಸಿ ಮನೆ ಮನ ತುಂಬಿದಿರಿ.ನಮ್ಮ ದಾರಿಯ ಮುಳ್ಳುಗಳ ನೀವೇ ಆಯ್ದು ಮಲ್ಲಿಗೆಯ ಹೂ ರಾಶಿ ಸುರಿಸಿದ್ದೀರಿ. ನಿಮ್ಮ ಲೋಕ ತಣ್ಣಗಿರಲಿ~ - ಇಂತಹ ಹಾರೈಕೆಗಳು ಗಮನ ಸೆಳೆಯುತ್ತಿದ್ದಂತೆಯೇ ಮೂಲೆಯೊಂದರಲ್ಲಿ ಇಬ್ಬರು ಮಧ್ಯ ವಯಸ್ಕರು ಹೊಸ ಅತಿಥಿಗಾಗಿ ಕುಳಿ ತೋಡುತ್ತಾ ನನ್ನನ್ನು ಗಮನಿಸಿ ನಮಸ್ಕರಿಸಿದರು.ನಾನು ಡಾಕ್ಟರ್ ಎಂದು ಅವರಿಗೆ ಗೊತ್ತೆಂದು, ಆದ್ದರಿಂದಲೇ ಮಸಣದ ಅಂಚಿನ ಬಂಗಲೆಯಲ್ಲಿ ನಮ್ಮ ಕುಟುಂಬ ಧೈರ್ಯದಿಂದ ಇರುವುದೆಂದು ಕಳೆದ ಎರಡು ವರ್ಷಗಳಲ್ಲಿ ನಾಲ್ಕು ಬಾರಿ ಆ ಮನೆ ಖಾಲಿಯಾಗಿದೆ ಎಂದು ತಾವು ಕಳೆದ ಹದಿನೈದು ವರ್ಷಗಳಿಂದ ಸಾವಿರದಷ್ಟು ಸಮಾಧಿಗಳನ್ನು ನಿರ್ಮಿಸುವುದರಲ್ಲಿ ಪಳಗಿದವರೆಂದು ತಿಳಿಸಿದರು.

 

ನನಗೆ ತತ್‌ಕ್ಷಣ ಶೇಕ್ಸ್‌ಫಿಯರ್‌ನ ಹ್ಯಾಮ್ಲೆಟ್ ನಾಟಕದಲ್ಲಿ ಒಫಿಲಿಯಾಳಿಗೆ ಸಮಾಧಿ ತೋಡುವ ಇಬ್ಬರೂ ಕಾರ್ಮಿಕರು ನಿರ್ಮಮಕಾರದಿಂದ ನಿರ್ಲಿಪ್ತ ನಿರ್ವಿಕಾರ ಸ್ವಭಾವದಿಂದ ಸಾವನ್ನು ವಿಶ್ಲೇಷಿಸುತ್ತಾ ಮಾತನಾಡುವುದು ನೆನಪಾಯಿತು. ನಾಟಕದಲ್ಲಿ ಯೋರಿಕ್ ಹಾಸ್ಯಗಾರನ ತಲೆಬುರುಡೆ ಸಿಕ್ಕಂತೆ ಇಲ್ಲಿ ಈಗ ನನ್ನ ಎದುರಿಗೆ ಇವರಿಗೂ ಒಂದು ತಲೆ ಬುರುಡೆ ಸಿಕ್ಕಿತು.ಅವರಲ್ಲೊಬ್ಬ ಅದಕ್ಕಂಟಿದ್ದ ಮಣ್ಣು ಒರೆಸಿ ತೀಡಿ ಶುಚಿಗೊಳಿಸಿ ಅದನ್ನು ನನ್ನೆದುರಿಗೆ ಹಿಡಿದು, “ಡಾಕ್ಟ್ರೆ ಇದು ಗಂಡಿಂದೋ ಹೆಣ್ಣಿಂದೋ” ಎಂದ. ಅನುಭವದಿಂದ ಪರೀಕ್ಷಿಸಿ ಅವರ ಕುತೂಹಲಕ್ಕೆ ಬೆರಗಾಗಿ, “ಆಕಸ್ಮಾತ್ ಹೆಣ್ಣಿನದಾದರೆ ಏನೀಗ?” ಎಂದು ಮರುಪ್ರಶ್ನಿಸಿದೆ. ಅದಕ್ಕಾತ ಗೆಳೆಯರನ್ನು ನೋಡುತ್ತ, “ಏನಿಲ್ಲ ಇವನ ಹೆಂಡತಿ ಸತ್ತುಹೋಗಿದ್ದಳು, ಇವನೇನಾದರೂ ಮದುವೆ ಮಾಡ್ಕೋಬಹುದಿತ್ತಾಂತ” ಎಂದು ನಕ್ಕ. ಜೊತೆಗೆ “ಸಾರ್ ನೀವು ಡಾಕ್ಟರ್ ಅಲ್ಲ! ನಿಮ್ಮ ಟೇಬಲ್ ಮೇಲೆ ಇಟ್ಕೋಳ್ರಿ ಚೆನ್ನಾಗಿರುತ್ತೆ” ಎಂದು ಸೇರಿಸಿದ.

 

ಬೀಚಿಯವರ ತಿಮ್ಮ ನೆನಪಾದ. ಒಂದು ಕ್ಷಣ ಬುರುಡೆ ಪ್ರಕರಣ, ಹಗರಣ. ಶಾಸಕನೊಬ್ಬ ನನಗೆ ಒಮ್ಮೆ ಬುರುಡೆ ವಯಸ್ಸಿನ ಬಗ್ಗೆ ಸುಳ್ಳು ಹೇಳಿಸಿ ಒತ್ತಡ ತಂದ ಕೇಸು. ಮಗಳು ಮೆಡಿಕಲ್ ಓದುವಾಗ ಸ್ಕೆಲಿಟನ್ ಕೊಳ್ಳುವಾಗ ನಡೆದ ಹಗರಣ. ಇತ್ತೀಚಿನ ಹೂಳಿದ ಶವದಿಂದ ಕೀಳಿಸಿ ತರಿಸಿಕೊಂಡು ತಂದಿದ್ದೆಂದು ಕೇಸು ದಾಖಲಾಗಿದ್ದು- ಏನೇನೂ ನೆನಪಾದವು. ಅಣ್ಣಿಗೇರಿ ಬುರುಡೆಗಳ ರಾಶಿ ಬಿಡಿಸಲಾರದ ಕಗ್ಗಂಟಾಗಿರುವುದು ನೆನಪಾಯಿತು.

 

ಜೀವ ಮೃತ್ಯುವಿನೆಡೆಗೆ ಸಾಗುವ; ಮೃತ್ಯು ಇತಿಹಾಸದೊಡನೆ ವರ್ತಮಾನಕ್ಕೆ ಬಂದು ಸಂಘರ್ಷಕ್ಕೆ ಎಡೆಮಾಡುವ ವಾಸ್ತವ, ಈ ತರ್ಕ ಮನಃಪಟಲದಲ್ಲಿ ಮೂಡುತ್ತಿದ್ದಾಗ ಮಹಡಿಯಿಂದ ಹೆಂಡತಿ ಕೂಗಿ ಕರೆದು ಎಚ್ಚರಿಸಿದಳು. ನಾನು ಒಂದು ಕ್ಷಣ ಅರೆಮೃತ್ಯು ಲೋಕದಿಂದ ಸಜೀವ ಜಗತ್ತಿನ ಲೋಕಕ್ಕೆ ಮರಳಿದಂತಾಯಿತು. ಮಣ್ಣಿಂದ ಹುಟ್ಟಿ ಮಣ್ಣಿಗೆ ಜಾರುವ ಅವಸ್ಥಾಂತರಗಳ ಜೀವ ಜಾಲ ಲೋಕದಿಂದ ತಟಕ್ಕನೆ ಕತ್ತರಿಸಿ ಹಾಕಿ ವಾಸ್ತವಕ್ಕೆ ಬಂದುಬಿಟ್ಟೆನೆ ಎಂದು ಖೇದವಾಗಿ ಮರಳಿ ಮೆಲ್ಲನೆ ಹೊರಟೆ.ಹಾಗೂ ಹೀಗೂ ಮೂರು ತಿಂಗಳು ಉರುಳಿ ಹೋದವು. ಮತ್ತೆ ಮೂರು ತಿಂಗಳು ಕಳೆದು ಹೋದವು. ಈ ಮಧ್ಯೆ ನನ್ನ ವೈದ್ಯ ಮಿತ್ರರು, ಸಾಹಿತ್ಯ ಮಿತ್ರರು, ಹಿಂದಿನ ಊರಿನ ಸೇವಾ ಸಂಬಂಧದ ಗೆಳೆಯರು ಬಂಧುಗಳು, ಈ ಬಂಗಲೆಗೆ ಬರತೊಡಗಿದರು. ಮೆಚ್ಚುಗೆ ಸಿಹಿ ಕಹಿ ಆಕ್ಷೇಪ ಎಲ್ಲಾ ಬಗೆಯ ಮಾತುಗಳನ್ನಾಡಿದರು. ಮಗಳು ಖಾಸಗಿ ನರ್ಸಿಂಗ್ ಹೋಂನಲ್ಲಿ ಡ್ಯೂಟಿ ಡಾಕ್ಟರ್ ಆಗಿ ಸೇರಿಕೊಂಡಿದ್ದಳು.ಹೆಂಡತಿ ಒಂಟಿಯಾಗಿದ್ದು ಭಯಗೊಂಡಾಳೆಂದು ಜೊತೆಗೆ ಅಡುಗೆ ಅಜ್ಜಿಯೊಬ್ಬಳು ಮನೆಗೆ ಬಂದಳು. ಮಗ ರೀಸರ್ಚ್ ಅಂದುಕೊಂಡು ಬೆಂಗಳೂರಿಗೆ ಹೋದ. ನನ್ನ ಹೆಂಡತಿಯ ಡೈವೋರ್ಸ್ ಬಾಂಬ್ ಈಗ ಠುಸ್ಸೆಂದಿದೆ. ಅವಳೇನೂ ಸುಖಾಸುಮ್ಮನೆ ಮರೆತಿಲ್ಲ. ಅನೇಕ ಪಾಠ ಕಲಿತಿದ್ದಾಳೆ.ಕಿಟಿಕಿಯ ಬಳಿ ನಿಂತು ಬರುವ ಹೋಗುವ ಜನ, ಹೆಣ ಹೊತ್ತು ತಂದವರ ಬಂಧುಗಳು- ದುಃಖ ದುಮ್ಮೋನಗಳು; ಯಾವ ಕೃತಕ ಕಪಟತನ ಇಲ್ಲದ ದುಗುಡ ಹೊತ್ತ ಮುಖಗಳು ನಿಜ ಜೀವನದ ಪ್ರಥಮ ಮೂಲಭೂತ ಪಠ್ಯಗಳಂತೆ ಕಾಣಿಸತೊಡಗಿವೆ. ಎಂತಹ ಅಪ್ಪಟ ತಾಜಾ ನೈಜ ಲೌಕಿಕಾನುಭವ ಅವಾಗಿದ್ದವೆಂದರೆ ಯಾವ ಟೀವಿ, ಸಿನಿಮಾ, ನಾಟಕ, ಸಾಹಿತ್ಯ ಮೀರಿದ ಸತ್ಯಗಳಾಗಿದ್ದವು.ಒಮ್ಮೆ ಮದುವೆಯಾಗಿ ಒಂದೇ ವರ್ಷಕ್ಕೆ ತೀರಿಕೊಂಡ ಗಂಡನ ಶವದ ಪಕ್ಕ ಹೆಂಡತಿಯನ್ನು ಕೂರಿಸಿ ಬಳೆ ಒಡೆಯುವ, ಕುಂಕುಮ ಅಳಿಸುವ ಶಾಸ್ತ್ರ ಮಾಡುವಾಗ ಪ್ರಗತಿಪರ ಗುಂಪೊಂದು ಅದೇ ಮಸಣದಲ್ಲಿ ಅದೇ ಗುಂಪಿನ ಒಳಗೆ ಹುಟ್ಟಿಕೊಂಡು ವಿರೋಧಿಸಿ ಆ ಮಹಿಳೆಯನ್ನು ರಕ್ಷಿಸಿ ಸುಮಂಗಲಿಯಾಗಿಯೇ ಮನೆಗೆ ನಡೆಸಿತು. ಮತ್ತೊಂದು ಸಲ ಮೃತನ ಇಬ್ಬರು ಮಕ್ಕಳಲ್ಲಿ ಯಾರಿಗೆ ಉತ್ತರದಾಯಿತ್ವ ನೀಡಬೇಕೆಂಬ ಆಚರಣೆ- ಮೃತನ ಪೇಟ ಅವರಿಗೆ ತೊಡಿಸುವುದು- ಜಗಳಕ್ಕಿಟ್ಟುಕೊಂಡಿದ್ದು ಬಡಿದಾಟದ ಹಂತಕ್ಕೇರಿತು.

 

ಗಂಡ ಬದುಕಿದ್ದಾಗ ಎಂದೂ ಮಾತಾಡಿರದ ಪತ್ನಿಯರು ಆಕ್ಷಣ ಮಾತನಾಡಿ ಹಿರಿ ಹೆಂಡತಿಯ ಮಗನಿಗೆ ಪೇಟ ತೊಡಿಸಿದರು. ಹೀಗೆ, ಇಂತಹವು ಸಾವಿನ ನಡುವೆ ಮನುಷ್ಯತ್ವ ಮೈದಾಳಿ ಅರಳುವುದು ಶಾಂತಿಗೆ ಅಚ್ಚರಿ ಮೂಡಿಸಿತು. ಮಕ್ಕಳ ಶವಗಳಿಗೆ ತಾಯಿ ತಂದೆಯರೇ ಮಣ್ಣು ಹಾಕುವ ದೃಶ್ಯಗಳು ಅಪಾರ ದುಃಖ ತರಿಸುತ್ತಿದ್ದವು.ಒಂದು ದೃಶ್ಯ ಪ್ರತಿನಿತ್ಯ ಘಟಿಸುತ್ತಿತ್ತು. ಶುಭ್ರ ಬಿಳಿ ಉಡುಪು ಧರಿಸಿದ ಎಂಬತ್ತರ ಆಸುಪಾಸಿನ ಓರ್ವ ವೃದ್ಧರು ನಿಧಾನವಾಗಿ ನಡೆದುಬಂದು ಸಮಾಧಿಯ ಮೇಲೆ ಹೂವುಗಳನ್ನು ಇಟ್ಟು ಕೈ ಮುಗಿದು ಅಲ್ಲೇ ಐದು ನಿಮಿಷ ಕುಳಿತು ನಿಧಾನಕ್ಕೆ ಹೋಗುತ್ತಿದ್ದರು. ಒಂದು ದಿನ ಇವರಿಗೆ ನಾನು ಎದುರಾದೆ, ಹೂ ಇಡುತ್ತಿರುವಾಗ. ಹೇಳಿದರು “ನನ್ನ ಹೆಂಡತಿ ಸಾರ್. ಅವಳು ನನ್ನನ್ನು ಒಂಟಿ ಮಾಡಿ ಒಂದು ವರ್ಷ ಆಯ್ತು.

 

ಇಬ್ಬರು ಹೆಣ್ಣು ಮಕ್ಕಳು ಡೆಲ್ಲಿ, ಬೊಂಬಾಯಿಯಲ್ಲಿದ್ದಾರೆ. ಒಬ್ಬ ಮಗ ಅಮೆರಿಕಾದಲ್ಲಿ. ಮತ್ತೊಬ್ಬ ಬೆಂಗಳೂರಿನಲ್ಲಿ. ಎಂಟು ಜನ ಮೊಮ್ಮಕ್ಕಳಿದ್ದಾರೆ. ಯಾರಿದ್ದರೇನು? ಎಷ್ಟು ಬಳಗ ಇದ್ದರೇನು? ನನ್ನ ಹೆಂಡತಿ ಇಲ್ಲಿ ಕಣ್ಮುಚ್ಚಿ ಮಲಗಿದ್ದಾಳೆ. ಹೂ ಕೊಟ್ಟು ಪ್ರತಿ ದಿನ ಮಾತನಾಡಿಸುತ್ತಿದ್ದೇನೆ. ಇನ್ನೂ ಉತ್ತರಿಸುತ್ತಿಲ್ಲ”. ನನ್ನ ಕಣ್ಣು ನನ್ನ ಪ್ರಜ್ಞೆ ಮೀರಿ ತುಂಬಿಕೊಳ್ಳತೊಡಗಿದವು. ಮಂಜಾದ ಕಣ್ಣು ಒರೆಸಿಕೊಂಡು ತಟಕ್ಕನೆ ತಿರುಗಿದೆ.

 

ಶಾಂತಿ ನಿಂತಿದ್ದಳು. ಅವಳ ಮುಖದಲ್ಲಿ ಮೂಡುತ್ತಿದ್ದ ಭಾವನೆಗಳನ್ನು ಹುಡುಕತೊಡಗಿದೆ. ಆರ್ದ್ರಗೊಳ್ಳಲು ಅಣಿಯಾಗುತ್ತಿದ್ದ ಕಣ್ಣುಗಳು ಇನ್ನೇನನ್ನು ಹೇಳಿಯಾವು?

ಮರುದಿನ ಸಂಜೆ ತುಂಬಾ ರೋಗಿಗಳನ್ನು ನೋಡಿ ಮೂರು ಸರ್ಜರಿ ನಡೆಸಿ ಸುಸ್ತಾಗಿ ಮನೆಗೆ ಬಂದು ಬಟ್ಟೆ ಕಳುಚುತ್ತಿದ್ದೆ. ಮಸಣದ ಕಾವಲುಗಾರ, ಗುಣಿ ತೆಗೆಯುವ ಕಾರ್ಮಿಕರು, ಮತ್ತಿಬ್ಬರು ಸೇರಿ ಒಬ್ಬ ವ್ಯಕ್ತಿಯ ಮೇಲೆ ಆಕ್ರಮಣ ಶೈಲಿಯಲ್ಲಿ ಕೂಗಾಡುತ್ತಿದ್ದರು.

 

ಆತನ ಕೈಯಲ್ಲಿ ಬಟ್ಟೆಯಲ್ಲಿ ಸುತ್ತಿದ ಸಪೂರ ಕೂಸಿನ ಶವದಷ್ಟು ಗಾತ್ರದ ಒಂದು ವಸ್ತು ಇತ್ತು. ಏನೆಂದು ತಿಳಿಯದು. ಇಷ್ಟು ದಿನ ಇಲ್ಲಿ ಕಾಣದಿದ್ದ ಅತ್ಯಂತ ಅಮಾನವೀಯ, ಮನುಷ್ಯತ್ವವೇ ಮರೆತಂತೆ ಕಾಣುವ ಈ ದೃಶ್ಯ ಕುತೂಹಲ ಹುಟ್ಟಿಸಿತು. ಮನೆಯಿಂದ ಹೊರ ಬಂದು ಸಮೀಪ ಹೋದೆ.ಓ! ಅದು, ಇವತ್ತು ಬೆಳಿಗ್ಗೆ ನಾನು ಗ್ಯಾಂಗ್ರೀನ್ ಆವರಿಸಿದ್ದ ಕಾಲನ್ನು ಕತ್ತರಿಸಿ ತೆಗೆದಾಗ ಆತನ ಬಂಧುವಾಗಿ ಓಡಾಡಿದ ಹಳ್ಳಿಯ ಶಿಕ್ಷಿತ ಯುವಕ. ರಕ್ತ ಬಸಿದು ಹೋದಂತಿದ್ದ ಅವನ ಮುಖ ಮುಸ್ಸಂಜೆಯ ಆ ಹೊತ್ತಿನಲ್ಲಿ ನನ್ನನ್ನು ನೋಡುತ್ತಲೇ ಅರಳಿತು. “ಸಾರ್‌ ನೀವೇ ಹೇಳಿ ಸಾರ್, ಬೆಳಿಗ್ಗೆ ನೀವೇ ಕತ್ತರಿಸಿದ ನನ್ನ ದೊಡ್ಡಪ್ಪನ ಕಾಲು ಇದು. ಇಲ್ಲಿ ಹೂಳಿಸಿಕೊಳ್ಳಲ್ಲ ಅಂತಾರೆ. ಪೂಜೆ ಸಂಸ್ಕಾರ ಆಗಲೇಬೇಕು ಅಂತಾರೆ. ಎಲ್ಲಾ ಸೇರಿ ಎರಡು ಸಾವಿರ ಕೇಳ್ತಿದ್ದಾರೆ, ನಾನೆಲ್ಲಿಂದ ಕೊಡಲಿ” ಎಂದು ಕಣ್ತುಂಬಿಕೊಂಡು ಆಪದ್ಬಾಂಧವ ಸಿಕ್ಕಷ್ಟು ಖುಷಿಯಲ್ಲಿ ನನ್ನ ಉತ್ತರ ಬಯಸಿದ.ಮಂಜುಗಡ್ಡೆಯನ್ನು ಸೀಳಲಾರದ ಶೀತಲ ಸಾವಿನ ಒಡಲಲ್ಲಿ ಕ್ರೌರ್ಯದ ಕಾವು ಹೇಗೆ ಆವರಿಸಿಕೊಳ್ಳತೊಡಗುವುದುದೆಂದು ಈಗ ಉತ್ತರ ಹುಡುಕುವ ಯತ್ನದಲ್ಲಿ ಗೊಂದಲಗೊಂಡೆ. ಅದು ಶವವಂತೂ ಅಲ್ಲ. ಕತ್ತರಿಸಿದ ಕಾಲು ದೊಡ್ಡಪ್ಪನದೆನ್ನುವ ಭಾವನಾತ್ಮಾಕ ಸಂಬಂಧ ಆತನದು. ಆ ತರುಣ ಬೆಳಿಗ್ಗೆಯೇ ಸರ್ಜರಿ ಮುಗಿದಾಗ ಒಂದು ಸಾವಿರ ರೂಪಾಯಿ ನನಗೆ ಕೊಟ್ಟು ಕೈ ಮುಗಿಯಲು ಬಂದ.ನಾನು ಮರಳಿ ಅವನ ಜೇಬಿಗಿಟ್ಟು- “ಇನ್ನೂ ಔಷಧಿಗೆ ಬಹಳ ದುಡ್ಡು ಬೇಕು ಇಟ್ಟುಕೋ” ಎಂದು ಬೆನ್ನು ಮುಟ್ಟಿದಾಗ ಅವನ ಕಣ್ಣುಗಳಲ್ಲಿ ಬೆಳಕು ಹರಿದಾಡಿತು. ಕಾಲು ಇಲ್ಲಿದೆ. ಜೀವ ಉಳಿದಿದೆ. ಈ ಗುಂಪು, ಗ್ಯಾಂಗ್ರೀನ್ ಆಗಿ ಪ್ರಾಣವನ್ನೇ ಆವರಿಸಬಹುದಾಗಿದ್ದ ಅಪಾಯವನ್ನು ಯೋಚಿಸದೆ ಕೊಳೆತ ಕಾಲಿಗೆ ನಿಯಮ ಆಚರಣೆಗಳ ಸರಪಳಿ ಸುತ್ತಿಸಿ ಅವನನ್ನು ಶೋಷಿಸಲು ಹೊಂಚಿರುವ ದೃಶ್ಯ ಅಸಹ್ಯ ಹುಟ್ಟಿಸಿತು.ಸಮಾಜದ ಒಂದು ಭಾಗ ಹೀಗೆ ಯಾವತ್ತೂ ತಮ್ಮ ತಮ್ಮ ಬದುಕು ಕಟ್ಟಿಕೊಳ್ಳಲು ಹೊಸ ವ್ರಣ ಕ್ರಿಮಿಗಳಾಗಿ ಜನ್ಮ ತಾಳಿ ಆವರಿಸುತ್ತಿರುತ್ತಾರೆ. ಇದ್ಯಾವ ನ್ಯಾಯ? ನಾನು ಹೀಗೆ ಯೋಚಿಸುತ್ತಾ ನಿಂತಾಗ ವಿದ್ಯಾವಂತ ಗ್ರಾಮೀಣ ಯುವಕ ಕೊಳೆತ ಕಾಲನ್ನು ತನ್ನೆರಡೂ ತೋಳುಗಳಿಂದ ಎತ್ತಿ ಹಿಡಿದು ನ್ಯಾಯಾಲಯದಲ್ಲಿ ಜಡ್ಜ್ ಎದುರು ದುಃಖ ತೋಡಿಕೊಳ್ಳುವಂತೆ ಹೇಳಿದ- “ನೋಡಿ ಸಾರ್. ಬೆಳಗಿನ ವಿಷಯ ನಿಮಗೆ ಗೊತ್ತಿದೆ.ನೀವು ಕತ್ತರಿಸಿದ ಈ ಕಾಲನ್ನು ನಿಮ್ಮ ಆಸ್ಪತ್ರೆ ಸೇವಕರು ಐನೂರು ರೂಪಾಯಿ ಕಸಿದುಕೊಂಡು ಸ್ಮಶಾನದಲ್ಲಿ ಒಯ್ದು ಹೂಳೆಂದು ತಳ್ಳಿಬಿಟ್ಟರು.  ಆಟೋದವನು ಎರಡು-ಮೂರು ಸ್ಮಶಾನಗಳನ್ನು ಸುತ್ತಾಡಿಸಿದ. ಅಲ್ಲೆಲ್ಲಾ ಸುಡಲು ಸೌದೆಗೆ ಮೂರು ಸಾವಿರ ಕೇಳಿದರು. ಆಮೇಲೆ ಅವನು ಮುನ್ನೂರು ರೂಪಾಯಿ ಇಸ್ಕೊಂಡು `ಇಲ್ಲಿ ಸುಡೋ ತಾಪತ್ರೆ ಇಲ್ಲ, ಹೂಳಬಹುದು ಅಂತ ಹೇಳಿ~ ಇಳಿಸಿಹೋದ. ಬೆಳಗಿನಿಂದ ಈ ಕಾಲು ಹೊತ್ಕೊಂಡು ಅಲೆಯುತ್ತಿದ್ದೇನೆ. ನೀವು ನನ್ನ ಪಾಲಿಗೆ ದೇವರಂತೆ ಬಂದಿದ್ದೀರಿ”.ಅವನ ದೊಡ್ಡಪ್ಪನ ಕತ್ತರಿಸಿದ ಕಾಲಿನಿಂದಾಗಿ ಹುಟ್ಟಿದ ಸಂಕಟದ ಆಳ ವಿಸ್ತಾರ, ಜೀವಂತ ಬದುಕಿರುವ ಅಟೆಂಡರ್, ಆಟೋದವ, ಕಾವಲುಗಾರ, ಹೊಟ್ಟೆಪಾಡಿನ ಪೂಜಾರಿ, ಕುಳಿತೋಡುವ ಕಾರ್ಮಿಕ- ಎಲ್ಲವೂ ಸೇರಿ ಗೊತ್ತಿಲ್ಲದೆ ನೇಯ್ದ ಬಲೆಯಲ್ಲಿ ಗೋಜಲಾಗಿಬಿಟ್ಟಿತು. ನಾನು ಅವನ ಪಾಲಿಗೆ ಆ ಕ್ಷಣದ ಸಂಕಟಕ್ಕೆ ದೇವರಂತೆ ಕಂಡಿದ್ದೇನೆ.

 

ಕೇವಲ ಮನುಷ್ಯನಾಗಿ ಬದುಕು ಕಲಿಯದ ವ್ಯಕ್ತಿ, ಗುಂಪು- ಎಲ್ಲರ ಬಗ್ಗೆ ಜಿಗುಪ್ಸೆ ಹುಟ್ಟಿತು. ಎರಡು ಸಾವಿರ ರೂಪಾಯಿಯನ್ನು ಆ ಗುಂಪಿಗೆ ಕೊಟ್ಟು, ಕೊಳೆತ ಕಾಲನ್ನು ಮಣ್ಣು ಮಾಡಿಸಿದೆ. ಅವನನ್ನು ಮನೆಗೆ ಕರೆತಂದು ಊಟ ಮಾಡಿಸಿದೆ. “ಹೋಗು ನಾನು ಕೇವಲ ಮನುಷ್ಯ” ಎಂದು ಕಳಿಸಿಕೊಟ್ಟೆ.ಈ ಪ್ರಕರಣದ ಅರ್ಧ ಘಟನಾವಳಿಗಳನ್ನು ಕಣ್ಣಲ್ಲಿ ನೋಡಿ ಮಿಕ್ಕ ಅರ್ಧ ನನ್ನಿಂದ ತಿಳಿದ ಶಾಂತಾ, “ಅಲ್ರೀ, ಕತ್ತರಿಸಿ ಹಾಕಿದ ಕೊಳೆತ ಕಾಲು ಬದ್ಕಿರೋರಿಗೆ ಆಧಾರ ಆಯಿತು, ಸರಿ. ಆಕಸ್ಮಾತ್ ಇಲ್ಲಿ ತಣ್ಣಗೆ ಮಲಗಿರೋ ಹೆಣಗಳಿಗೆ ಜೀವ ಬಂದ್ರೆ ಇದು ಭಾರಿ ಅನ್ಯಾಯ ಅಂತ ನಿಮಗೆ ಎರಡು ಸಾವಿರ ರೂಪಾಯಿ ವಾಪಾಸ್ ಕೊಡಿಸಿ ಬಿಡ್ತಿದ್ವು ಕಣ್ರೀ” ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕಳು.ಅವಳ ನಗು ನಿಲ್ಲುವ ಮೊದಲೇ ಪೋನು ರಿಂಗಣಿಸಿತು. ಧ್ವನಿ: “ಡಾಕ್ಟರ್ ಶಂಕರ್ ಸರ್ರ‌್‌, ಮ್ಯಾಡಮ್ಮೋರು ಬಹಳ ಹೆದ್ರಿಕೊಂಡಿದಾರೆ ಅಂದಿದ್ರಿ. ನಂಗೂ ಬ್ಯಾಸರಾಗಿತ್ತು. ಈಗ ನೋಡಿ. ಫಸ್ಟ್ ಕ್ಲಾಸ್ ಮನೆ ಹುಡುಕೀನ್ರಿ. ನಡೂ ಪ್ಯಾಟೀಲೈತ್ರಿ. ಹಂಗೇ ಗಿಜಿಗಿಜಿ ಅನ್ನೋ ಗೌಜನಾಗೈತ್ರಿ. ಅಡ್ವಾನ್ಸ್ ಒಂದೇ ಲಕ್ಷ. ಏನಂತೀರಿ ಹ್ಞಾ”.ಮೊಬೈಲ್ ಸ್ಪೀಕರ್ ಆನ್ ಮಾಡಿದ್ದೆ. ಶಾಂತಿ ನಗುತ್ತಲೇ ಕೂಗಿ ಹೇಳಿದಳು- ಆ ಧ್ವನಿಯಲ್ಲಿ ಸಾಕ್ರಟೀಸ್‌ನ ತತ್ವಜ್ಞಾನವು ಸೇರಿದೆಯೋ ಎನ್ನುವಂತೆ. “ಬ್ಯಾಡಪ್ಪಾ ಬ್ಯಾಡ. ನಿನ್ನ ಪ್ಯಾಟಿ ಹೆಣಗಳು ಬ್ಯಾಡ. ಸ್ಮಶಾನದ ಗೋರಿ ಒಳಗಿನ ಮನುಷ್ಯರೇ ವಾಸಿ. ನಾವು ಇಲ್ಲೇ ಇರ್ತ್ತೀವಿ”.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.