ಕದಡಿದ ರಾಜಕೀಯ; ಬದಲಾಗದ ರಸ್ತೆ

7
ಹಾಸನ ಜಿಲ್ಲೆಯ ಹಿನ್ನೋಟ: ವರ್ಷ ಉರುಳಿತು: ಭರವಸೆಗಳು ಅಳಿದವು

ಕದಡಿದ ರಾಜಕೀಯ; ಬದಲಾಗದ ರಸ್ತೆ

Published:
Updated:
ಕದಡಿದ ರಾಜಕೀಯ; ಬದಲಾಗದ ರಸ್ತೆ

ಹಾಸನ: ಹಲವು ಅವಘಡಗಳ ಜೊತೆಗೆ ರಾಜಕೀಯವಾಗಿಯೂ ಭಾರಿ ಏರುಪೇರು ಕಂಡಿದ್ದ 2013ನೇ ವರ್ಷಕ್ಕೆ ತೆರೆಬಿದ್ದಿದೆ. ಜಿಲ್ಲೆಯಲ್ಲಿ ಅವಘಡಗಳ ಸರಮಾಲೆ ವರ್ಷದ ಆರಂಭದಿಂದ ಡಿಸೆಂಬರ್‌ ತಿಂಗಳವರೆಗೂ ನಡೆಯಿ ತಾದರೂ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕದಡಿದ್ದ ರಾಜಕೀಯದ ಕೊಳ ವರ್ಷಾಂತ್ಯದ ವೇಳೆಗೆ ನಿಚ್ಚಳವಾಗಿದೆ. ಬರುವ ಲೋಕಸಭಾ ಚುನಾವಣೆಯ ವೇಳೆಗೆ ಯಾವ್ಯಾವ ಬದಲಾವಣೆಯಾಗುವುದೋ ಕಾದು ನೋಡಬೇಕಾಗಿದೆ.ಒಂದೇ ವರ್ಷದಲ್ಲಿ ಅಗಾಧವಾದ ಬದಲಾವಣೆ ಆಗುವುದು ಅಪರೂಪ, ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಕೆಲವೊಮ್ಮೆ ದೀರ್ಘಕಾಲೀನ ಸಮಸ್ಯೆ ಗಳು ಪರಿಹಾರವಾಗುವುದು ಇದೆ. ಜಿಲ್ಲೆಯಲ್ಲಿ ಅಂಥ ಬಲಾವಣೆಯೂ ಈ ವರ್ಷ ಆಗಿಲ್ಲ. ಜಿಲ್ಲಾ ಕೇಂದ್ರ ಹಾಸನದ ರಸ್ತೆಗಳೂ ಸೇರಿದಂತೆ ಎಲ್ಲ ರಸ್ತೆಗಳೂ ಗಬ್ಬೆದ್ದಿವೆ, ಅಪೂರ್ಣ ರಿಂಗ್‌ ರಸ್ತೆ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ, ಆನೆಗಳ ಸಮಸ್ಯೆ ಬಗೆಹರಿದಿಲ್ಲ, ಬರದಿಂದ ನೊಂದವರು ಈಗಲೂ ನೀರಿಗಾಗಿ ಹಾಹಾಕಾರ ಇಡುತ್ತಿದ್ದಾರೆ, ಅತಿವೃಷ್ಟಿ ಯಿಂದ ನಷ್ಟ ಅನುಭವಿಸಿದವರ ಸ್ಥಿತಿಯೂ ಬದಲಾಗಿಲ್ಲ. ದುದ್ದ ರಸ್ತೆ ಕಳೆದ ವರ್ಷ ಯಾವ ಸ್ಥಿತಿಯಲ್ಲಿತ್ತೋ ಅದೇ ಸ್ಥಿತಿಯಲ್ಲಿ ಈಗಲೂ ಇದೆ... ಹೇಳುತ್ತ ಹೋದರೆ ಸಮಸ್ಯೆಗಳ ಮಾಲೆ ದೊಡ್ಡದಿದೆ. ಇವೆಲ್ಲದರ ಮಧ್ಯೆ ಕೆಲವು ಬೆಳ್ಳಿ ಗೆರೆಗಳೂ ಇವೆ. ಜಿಲ್ಲೆಯ ಯುವಕ ಗಿರೀಶ್‌ಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.ಬೆಂಗಳೂರು ಮಂಗಳೂರು ಹೆದ್ದಾರಿ ಕಾಮಗಾರಿ ಹಾಸನದವರೆಗೂ ಬಂದಾಯಿತು. ಇದರ ಜೊತೆಯಲ್ಲಿ ಅಘಾತಗಳ ಸಂಖ್ಯೆಯೂ ಹಚ್ಚಾಗಿದೆ. ಜಿಲ್ಲೆಯಲ್ಲಿ ಹಿಂದಿನ ಎರಡು ವರ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಪಘಾತದಲ್ಲಿ ಸತ್ತಿದ್ದಾರೆ. ಬೇಲೂರಿನಲ್ಲಿ ಕೆರೆಗೆ ಬಸ್‌ ಉರುಳಿ ಎಂಟು ಮಂದಿ ಪ್ರಾಣ ಬಿಟ್ಟಿದ್ದು 2013ರ ಹೃದಯವಿದ್ರಾವಕ ಘಟನೆಗಳಲ್ಲಿ ಒಂದು. ಇದಾದ ನಂತರ ಕೆಲವು ದಿನಗಳ ಕಾಲ ಸತತವಾಗಿ ಸಾರಿಗೆ ಸಂಸ್ಥೆಗ ಬಸ್‌ಗಳು ಅಪಘಾತಕ್ಕೆ ಈಡಾಗುತ್ತಲೇ ಹೋದವು.ಕಳೆದ ವರ್ಷ ಬರಗಾಲ ಜಿಲ್ಲೆಯನ್ನು ಕಂಗೆಡಿಸಿದ್ದರೆ ಈ ವರ್ಷ ಕೆಲವು ತಾಲ್ಲೂಕುಗಳನ್ನು ಬಿಟ್ಟರೆ ಉಳಿದೆಡೆ ಮಳೆಯಾಯಿತು. ಸಕಲೇಶಪುರದಲ್ಲಿ ಅತಿವೃಷ್ಟಿಯಿಂದ ಕೋಟ್ಯಂತರ ರೂಪಾಯಿ ಹಾನಿಯಾದರೆ ಅರಸೀಕೆ ರೆಯ ಜನರು ಬರದಿಂದ ಕಂಗೆಟ್ಟರು. ಈಗಲೂ ಅವರು ನೀರಿಗಾಗಿ ಪರಿತಪಿ ಸುತ್ತಿದ್ದಾರೆ. ಒಂದೆಡೆ ಬರದಿಂದ ಹೊಲ ಗದ್ದೆಗಳು ಒಣಗಿದ್ದರೆ, ಇನ್ನೊಂದೆಡೆ ಅತಿವೃಷ್ಟಿ.ಬರದಿಂದ ಬತ್ತಿಹೋಗಿದ್ದ ಹೇಮಾವತಿ ಜಲಾಶಯ ಕನಿಷ್ಠ ಮತ್ತು ಗರಿಷ್ಠ ಎರಡೂ ಮಟ್ಟಗಳನ್ನು ದಾಖಲಿ ಸಿತು. ಮೇ ತಿಂಗಳಲ್ಲಿ ಜಲಾಶಯ ಬಹುತೇಕ ಖಾಲಿಯಾಗಿತ್ತು. ಜುಲೈ ಕೊನೆಯ ವಾರದಲ್ಲಿ ಮತ್ತೆ ಮೈದುಂಬಿ ಕೊಂಡಿತು. ಸುಮಾರು ಒಂದು ದಶಕದ ದೀರ್ಘ ಅವಧಿಯ ಬಳಿಕ ಜಲಾಶಯದಿಂದ ಒಂದೇ ದಿನ 55 ಸಾವಿರ ಕ್ಯೂಸೆಕ್‌ ನೀರು ಬಿಡಲಾಯಿತು. ಸಾವಿರಾರು ಜನರು ಈ ಮೋಹಕ ದೃಶ್ಯವನ್ನು ಕಣ್ತುಂಬಿಕೊಂಡರು. ಆದರೆ ತುಂಬಿದ್ದ ಹೇಮಾವತಿ ಜಲಾಶಯಕ್ಕೆ ಬಾಗಿನ ಕೊಡದೆ ಸರ್ಕಾರ ಇನ್ನೊಂದು ಹೊಸ ಸಂಪ್ರದಾಯ ಆರಂಭಿಸಿತು.ಆಲೂಗೆಡ್ಡೆ ಬಿತ್ತನೆ ಬೀಜಕ್ಕೆ ಅಂಥ ಹೊಡೆದಾಟ ಈ ವರ್ಷ ಆಗಿಲ್ಲ, ಆದರೆ ಬೆಳೆ ಎಂದಿನಂತೆ ರೋಗಕ್ಕೆ ತುತ್ತಾ ಯಿತು, ಉಳಿದ ಬೆಳೆಗಳು ಅತಿವೃಷ್ಟಿ, ಅನಾವೃಷ್ಟಿಯಿಂದ ನಲುಗಿದವು. ಆದ್ದರಿಂದ ರೈತರ ಸ್ಥಿತಿಯಲ್ಲಿ ಬದಲಾ ವಣೆ ಆಗಿಲ್ಲ. ಹಿಂದಿನ ವರ್ಷದಂತೆ ರೈತರು ಪೂರ್ಣವಾಗಿ ಕೈಸುಟ್ಟು ಕೊಂಡಿಲ್ಲ ಎಂಬುದೂ ನಿಜ.ವರ್ಷಾಂತ್ಯದಲ್ಲಿ ಹಳೇಬೀಡು ಸಮೀಪದ ನಂಜಾಪುರದಲ್ಲಿ ಏಳು ಗುಡಿಸಲುಗಳು ಸುಟ್ಟು ಇನ್ನೊಂದು ದುರ್ಘಟನೆ ನಡೆಯಿತು. ಹಾಗೆ ನೋಡಿದರೆ 2013 ಜಿಲ್ಲೆಗೆ ಸಂತೋಷ ಕ್ಕಿಂತ ಹೆಚ್ಚು ದುಃಖವನ್ನೇ ನೀಡಿದೆ.ಚನ್ನರಾಯಪಟ್ಟಣ: ಪ್ರಮುಖ ಘಟನೆಗಳು

ಚನ್ನರಾಯಪಟ್ಟಣ: ನುಗ್ಗೇಹಳ್ಳಿ ಗ್ರಾಮದ ಕೆರೆಗೆ ನೀರು ಹರಿಸಲು ರೂ. 17.85 ಕೋಟಿ ವೆಚ್ಚದ  ಕಾಮಗಾರಿಗೆ ಚಾಲನೆ. ಆ ಭಾಗದ ಜನರ ಬಹುದಿನ ಬೇಡಿಕೆಗೆ ಸ್ಪಂದನೆ. ವಡ್ಡರಹಳ್ಳಿ ಜಾಕ್‌ವೆಲ್‌ ಬಳಿ  ಹೇಮಾವತಿ ಎಡದಂಡೆ ನಾಲೆಯಲ್ಲಿ ಬಿರುಕು; ಅಪಾರ ಪ್ರಮಾಣದ ನೀರು ಹೊಲ, ಗದ್ದೆಗಳಿಗೆ ಹರಿಯಿತು.ಗೊಲ್ಲರಹೊಸಹಳ್ಳಿ ಗ್ರಾಮದ ಸಾವಯವ ಕೃಷಿ ಕೈಗೊಂಡಿರುವ ಕೆ.ಜಿ. ಗಣೇಶ್‌ ತೋಟಕ್ಕೆ ಅಮೆರಿಕಾ ದೇಶದ ನ್ಯೂ ಚಾಪ್ಟರ್‌ ಸಂಸ್ಥೆಯ ಪದಾಧಿಕಾರಿಗಳು ಭೇಟಿ.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಅಪಘಾತ,  30 ಮಂದಿಗೆ ಗಾಯ. ಚನ್ನರಾಯಪಟ್ಟಣ ತಾಲ್ಲೂಕನ್ನು ಬರಪೀಡಿತಪ್ರದೇಶದ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಶಾಸಕ ಸಿ.ಎನ್‌.  ಬಾಲಕೃಷ್ಣ ಅವರಿಂದ ‘ಅಹೋರಾತ್ರಿ ಧರಣಿ’.ಕೇಂದ್ರದ ಬರ ಅಧ್ಯಯನ ತಂಡ ಪ್ರವಾಸ. ಚನ್ನರಾಯಪಟ್ಟಣ ತಾಲ್ಲೂಕು ‘ಬರಪೀಡಿತಪಟ್ಟಿ’ಗೆ ಸೇರ್ಪಡೆ. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭ. ‘ಮಕ್ಕಳ ಸಾಹಿತ್ಯ ಪರಿಷತ್ತು’ ತಾಲ್ಲೂಕು ಘಟಕ ಅಸ್ತಿತ್ವಕ್ಕೆ. ಹಿರಿಯ ಸಾಹಿತಿ ಡಾ.ಎಸ್‌.ಎಲ್‌.  ಭೈರಪ್ಪ ಅವರು  ತವರೂರು ಸಂತೇ ಶಿವರದಲ್ಲಿ ಏರ್ಪಡಿಸಿದ್ದ ‘ಗೌರಮ್ಮ ಸಂಸ್ಮರಣೋತ್ಸ ವ’ದಲ್ಲಿ ಭಾಗವಹಿಸಿ ಗ್ರಾಮ ದೊಂದಿಗಿನ ಒಡನಾಟ, ತಾಯಿ ಗೌರಮ್ಮ ಜೊತೆ ಹೊಂದಿದ್ದ ಭಾವನಾ ತ್ಮಕ ಸಂಬಂಧ ಸ್ಮರಿಸಿದರು. ರಾಜಕೀಯ ಕಾರಣದಿಂದ ಮಂದಗತಿಯಲ್ಲಿ ಸಾಗುತ್ತಿರುವ ಕಾಚೇನಹಳ್ಳಿ ಏತಾ ನೀರಾವರಿ ಯೋಜನೆ ಪ್ರಗತಿಗೆ ಆಗ್ರಹಿಸಿ ಚಳವಳಿ.ಬರದ ನಾಡಿಗೆ ನೀರು

ಅರಸೀಕೆರೆ: ತಾಲ್ಲೂಕಿನ ಜನರ ಹಲವು ದಶಕಗಳ ಒಂದು ಕನಸು 2013ರಲ್ಲಿ ನನಸಾಯಿತು. ಹೇಮಾ ವತಿ ಹಾಗೂ ಯಗಚಿ ನದಿಗಳಿಂದ ತಾಲ್ಲೂಕಿನ ಕೆಲವು ಕೆರೆಗಳನ್ನು ತುಂಬಿಸಲಾಯಿತು. ಜಾವಗಲ್‌ ಹಾಗೂ ಬಾಣಾವರ ಹೋಬಳಿಗಳ 77 ಹಳ್ಳಿಗಳ ಜನರಿಗೆ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡಿದ್ದೇ ದೊಡ್ಡ ಸಾಧನೆ.ಆಗಸ್ಟ್‌ 31ರಂದು ಕಣಕಟ್ಟೆ ಹೋಬಳಿಯ ಕಣಕಟ್ಟೆ ಕೆರೆಯ ಒಡಲಿಗೆ ಹೇಮಾವತಿ ನದಿ ನೀರು ಹರಿದರೆ ಅಕ್ಟೋಬರ್‌ 17 ರಂದು ಮಾಡಾಳು ಮತ್ತು ಹರಳಕಟ್ಟ ಕೆರೆಗಳ ಒಡಲಿಗೆ ನೀರು ಹರಿದುಬಂತು.ನೀಗದ ಬರ: ಕಡೆಗೂ 2013ರಲ್ಲಿ ಅರಸೀಕೆರೆ ಸಂಪೂರ್ಣ ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸಿದೆ. 2013ರ ಡಿಸೆಂಬರ್‌ನಲ್ಲಿ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಕಾಟಾ ಚಾರದ ಶಾಸ್ತ್ರ ಮುಗಿಸಿ ಹೋಗಿದೆ.ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ  ಸತತವಾಗಿ ಯಾರೂ ಎರಡುಬಾರಿ ಆಯ್ಕೆಯಾಗುವುದಿಲ್ಲ ಎಂಬುದು ಈವರೆಗಿನ ದಾಖಲೆಯಾಗಿತ್ತು. 2013 ಅದನ್ನು ಸುಳ್ಳಾಗಿಸಿತು. ಶಿವಲಿಂಗೇಗೌಡ ಅವರು ಎರಡನೇಬಾರಿ ಶಾಸಕರಾಗಿ ಆಯ್ಕೆಯಾದರು. 2012 ಡಿಸೆಂಬರ್‌ 31ರಂದು ಸ್ಥಳೀಯ ನ್ಯಾಯಾಲಯ ದಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಜೈಲು ಶಿಕ್ಷೆಗೆ ಒಳಗಾಗಿದ್ದ ಶಿವಲಿಂಗೇ ಗೌಡ ಅವರಿಗೆ ನಂತರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ದೋಷಾರೋಪದಿಂದ ಮುಕ್ತಿ ನೀಡಿತು.ದುರಂತಗಳು: ಪ್ರತಿ ವರ್ಷ ಒಂದಿಲ್ಲೊಂದು ದುರಂತ ದಾಖಲಿಸುವ ಅರಸೀಕೆರೆಯಲ್ಲಿ ಈ ಬಾರಿ ಅಂಥ ಘಟನೆ ಸಂಭವಿಸಿಲ್ಲ. ಆದರೂ ಫೆಬ್ರುವರಿ 15ರಂದು ತಾಲ್ಲೂಕಿನ ಕೆರೆ ಕೋಡಿಹಳ್ಳಿ ಗೇಟ್‌ ಬಳಿ ರಸ್ತೆ ಅಪಘಾತವೊಂದರಲ್ಲಿ ಒಂದೇ ಕುಟುಂಬದ ಐದು ಮಂದಿ ಸಾವಗೀಡಾದರು. ಜುಲೈ 27ರಂದು ರಾಮ ಸಾಗರದ  ಗೇಟ್‌ ಬಳಿ ಮೂವರು ಮತ್ತು ಬೆಂಡೇಕೆರ ಬಳಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ  ಅಪಘಾತ ಸಂಭವಿಸಿ ಒಂದು ಮಗು ಸೇರಿ ಐದು ಮಂದಿ  ಮೃತಪಟ್ಟರು.ಸಜ್ಜನರ ವಿದಾಯ; ಉತ್ತಮ ಮಳೆ

ಅರಕಲಗೂಡು: 2013ರಲ್ಲಿ ತಾಲ್ಲೂಕಿಗೆ  ಸಿಹಿಗಿಂತ ಕಹಿ ಸಿಕ್ಕಿದ್ದೇ ಹೆಚ್ಚು. ವರ್ಷದ ಅರಂಭದಲ್ಲೇ (ಜ.5) ತಾಲ್ಲೂಕಿನ ಅಭಿವೃದ್ದಿಗೆ ಗಣನೀಯ ಕೊಡುಗೆ ನೀಡಿದ ಸಜ್ಜನ ರಾಜಕಾರಣಿ ಎಂದೇ ಖ್ಯಾತರಾದ ಮಾಜಿ ಸಚಿವ ಕೆ.ಬಿ.ಮಲ್ಲಪ್ಪ ನಿಧನರಾದರು.ಕಳೆದ ಎರಡು ವರ್ಷಗಳಿಂದ ಬರದ ಬವಣೆಗೆ ತುತ್ತಾಗಿದ್ದ ತಾಲ್ಲೂಕಿನ ಜನ ಉತ್ತಮ ಮುಂಗಾರಿನಿಂದ ಸಂತಸ ಪಟ್ಟಿದ್ದರು. ಆದರೆ ಜೂನ್‍ ನಿಂದ ಆಗಸ್ಟ್‍ ತಿಂಗಳವರೆಗೆ ಸುರಿದ ಅತಿವೃಷ್ಟಿಯಿಂದ ರೈತರ ನಿರೀಕ್ಷೆಗಳು ಕಮರಿ ಹೋದವು. ಪ್ರಮುಖ ವಾಣಿಜ್ಯ ಬೆಳೆಗಳಾದ ಆಲೂಗೆಡ್ಡೆ, ತಂಬಾಕು, ಶುಂಠಿ, ಮುಸುಕಿನ ಜೋಳ ಮಳೆಯ ಹೊಡೆತಕ್ಕೆ ನೆಲಕಚ್ಚಿದವು. ಬರಗಾಲ ದಿಂದ ಬಳಲಿದ್ದ ರೈತರು ಅತಿವೃಷ್ಠಿ ಯಿಂದ ನಲುಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು. ಹಿಂಗಾರಿನಲ್ಲಿ ಮಳೆಯ ಕೊರತೆ ಮತ್ತೆ ನಿರಾಸೆಯನ್ನುಂಟು ಮಾಡಿತು.ತಾಲ್ಲೂಕಿನಲ್ಲಿ ಸುರಿದ ಭಾರಿ  ಮಳೆಗೆ ಹಾನಗಲ್‍ ಗ್ರಾಮದಲ್ಲಿ ಕೆರೆಕೋಡಿ ದಾಟುತ್ತಿದ್ದ ಯುವಕ ರಾಘವೇಂದ್ರ ಬೈಕ್‍ ಸಹಿತ ಕೊಚ್ಚಿ ಹೋದ ದಾರುಣ ಘಟನೆಯೂ ನಡೆಯಿತು. ಅರಕಲಗೂಡು ಪಟ್ಟಣ ಪಂಚಾಯತಿ ಚುನಾವಣೆಗಳು ನಡೆದು 9 ತಿಂಗಳು ಕಳೆದರೂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಮೀಸಲಾತಿ ಸಮಸ್ಯೆ ಬಗೆಹರಿಯದೆ ಸದಸ್ಯರು ಈ ವರ್ಷ ಅಧಿಕಾರ ವಿಲ್ಲದೆ  ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ.ತಾಲ್ಲೂಕಿನಲ್ಲಿ 25ವರ್ಷ ಹಿಂದೆ ಜೀತ ವಿಮುಕ್ತರಾದವರಿಗೆ ಈ ವರ್ಷ ಭೂಮಿ ಲಭಿಸಿತು. ಆದರೆ ರಾಗಿ ಮರೂರಿನಲ್ಲಿ ಜೀತದ ಇನ್ನೊಂದು ಪ್ರಕರಣ ನಡೆದು ರಾಜ್ಯದ ಗಮನ ಸೆಳೆಯಿತು.ಚಿರತೆ ಭಯ; ಅಪಘಾತಗಳ ಸರಣಿ

ಹೊಳೆನರಸೀಪುರ: ಹೊಸ ವರ್ಷದ ನಿರೀಕ್ಷೆಯಲ್ಲಿರುವ ತಾಲ್ಲೂಕಿನ ಜನರಿಗೆ, 2013ನೇ ವರ್ಷ ಅಂಥ ಸಂತೋಷವನ್ನಾಗಲಿ, ದುಃಖವನ್ನಾಗಲಿ ನೀಡಲಿಲ್ಲ. ರಾಜಕೀಯವನ್ನೇ ಹೊತ್ತು ಮಲಗಿರುವ ಈ ಕ್ಷೇತ್ರದಲ್ಲಿ ಜೆಡಿಎಸ್‌ನ  ಎಚ್‌.ಡಿ. ರೇವಣ್ಣ ಮತ್ತೆ ಶಾಸಕರಾ ಗಿದ್ದು ಪಕ್ಷದ ಕಾರ್ಯಕರ್ತರಿಗೆ ಸಂತೋಷ ತಂದಿದ್ದರೆ ಪಕ್ಷ ಆಡಳಿತಕ್ಕೆ ಬರಲಿಲ್ಲ ಎನ್ನುವ ದುಃಖ ಶಾಸಕರಿಗೆ.ಇಲ್ಲಿನ ಪುರಸಭೆಯಲ್ಲಿ ಜೆಡಿಎಸ್‌ ಏಳು ಸ್ಥಾನಗಳನ್ನು ಕಳೆದುಕೊಂಡಿತು.  ವರ್ಷದ ಪ್ರಾರಂಭದಲ್ಲಿ ಬರದ ಛಾಯೆ ಕಂಡರೂ ನಂತರ ಸುಧಾರಿಸಿತು. ನಿರೀಕ್ಷೆಯಷ್ಟು ಅಲ್ಲದಿದ್ದರೂ ಪರವಾಗಿಲ್ಲ ಎನವಷ್ಟು ಮಳೆಯಾಗಿ ರೈತರು ನಿಟ್ಟುಸಿರು ಬಿಟ್ಟರು.ತಾಲ್ಲೂಕಿನ ಹಳೇಕೋಟೆ ಹೋಬಳಿಯ ಗ್ರಾಮದಲ್ಲಿ ಚಿರತೆ ಮಹಿಳೆ ಒಬ್ಬರನ್ನು ತಿಂದುಹಾಕಿದ್ದು, ಇಲ್ಲಿನ ಅಂಬೇಡ್ಕರ್‌ ನಗರದಲ್ಲಿ ಅನಿಲ ಸಿಲೆಂಡರ್‌ ಸೋರಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮದುವೆ ನಿಶ್ಚಯವಾಗಿದ್ದ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ನೀರನಲ್ಲಿ ಮುಳುಗುತ್ತಿದ್ದ ಮಗನನ್ನು ಕಾಪಾಡಲು ಹೋಗಿ ತಂದೆ ಮಗ ಸಾವನ್ನಪ್ಪಿದ್ದು 2013 ರಲ್ಲಿ ನಡೆದ ದುರ್ಘಟನೆಗಳು.ಹೊಳೆನರಸೀಪುರದ ವಾಸವಾಂಬ ಕೋ ಆಪರೇಟಿವ್‌ ಬ್ಯಾಂಕ್‌ 2013 ರಲ್ಲಿ ಶತಮಾನೋತ್ಸವ ಆಚರಿಸಿ ಕೊಂಡಿತು. ಇಲ್ಲಿನ ಸಾರಿಗೆ ಬಸ್‌ ನಿಲ್ದಾಣ ನವೀಕರಣ, ಎಣ್ಣೆ ಹೊಳೆರಂಗ ನಾಥನ ಬೆಟ್ಟಕ್ಕೆ ರಸ್ತೆ  ತಟ್ಟೆಕೆರೆ ಗ್ರಾಮದಲ್ಲಿ ಆದರ್ಶ ಶಾಲೆ ಕಾಮಗಾರಿಗೆ ಚಾಲನೆ ಸಿಕ್ಕಿದೆ.ತಾಲ್ಲೂಕು ಕೇಂದ್ರದಲ್ಲಿ ಡಯಾಲಿಸಿಸ್‌ ಸೌಲಭ್ಯ ಆರಂಭಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಯಿತು.

ಎರಡು ಅತ್ಯಾಚಾರ, ಒಂದು ದರೋಡೆ ಪ್ರಕರಣ, ಹತ್ತಾರು ಅಪಘಾತ, ಕಳ್ಳತನ, ಹೊಡೆದಾಟದ ಪ್ರಕರಣಗಳು ಜನರಲ್ಲಿ ಆತಂಕ ಉಂಟುಮಾಡಿದವು. ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ನಿಯಂತ್ರಣಕ್ಕೆ ಬರಲಿಲ್ಲ.ನನಸಾಗದ ಯಗಚಿ ನೀರಿನ ಕನಸು

ಬೇಲೂರು: ಜು.13ರಂದು ಇಲ್ಲಿನ ಪ್ರಸಿದ್ಧ ವಿಷ್ಣುಸಮುದ್ರ ಕೆರೆಗೆ ಕೆಎಸ್‌ಆರ್‌ಟಿಸಿ ಬಸ್‌ ಉರುಳಿ ಸಂಭವಿಸಿದ ಘೋರ ದುರಂತ 2013ನೇ ಸಾಲಿನ ಪ್ರಮುಖ ಕಹಿ ಘಟನೆಗಳಲ್ಲಿ ಒಂದು. ಇದು ಬೇಲೂರಿನ ಇತಿಹಾಸದಲ್ಲಿ 2ನೇ ಅತಿದೊಡ್ಡ ದುರಂತ. 8 ಜನ ಅಮಾಯಕರನ್ನು ಬಲಿ ತೆಗೆದುಕೊಂಡ ಈ ಘಟನೆ ರಾಜ್ಯಾದ್ಯಂತ ಹೆಸರು ಮಾಡಿತಲ್ಲದೆ, ಬೇಲೂರಿನ ಜನರನ್ನು ತಲ್ಲಣಗೊಳಿಸಿತ್ತು.

ತಾಲ್ಲೂಕಿನ ಮತ್ತೊಂದು ಪ್ರಮುಖ ಘಟನೆ ಎಂದರೆ ಹಳೇಬೀಡು ಸಮೀಪದ ನಂಜಾಪುರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಏಳು ಮನೆಗಳು ಬೆಂಕಿಗೆ ಆಹುತಿಯಾದದು.ಇದರಿಂದಾಗಿ ಏಳು ಕುಟುಂಬಗಳು ನಿರಾಶ್ರಿತರಾದವು. ಡಿಸೆಂಬರ್‌ ತಿಂಗಳ 2ನೇ ವಾರದಲ್ಲಿ ಈ ಘಟನೆ ಸಂಭವಿಸಿತ್ತು.

ಡಿ.24ರಂದು ಬೇಲೂರು–ಹಾಸನ ರಸ್ತೆಯಲ್ಲಿ ಕಾರು ಮತ್ತು ಬಸ್‌ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೆಂಗಳೂರಿನ ಜೆಪಿ ನಗರದ ಮೂವರು ಸಾವನ್ನಪ್ಪಿದರು.ಡಿ.16ರಂದು  ಬೇಲೂರಿನಲ್ಲಿ ದತ್ತಮಾಲಾ ಅಭಿಯಾನದ ಅಂಗವಾಗಿ ಬೇಲೂರಿನಲ್ಲಿ ನಡೆದ ಶೋಭಾಯಾತ್ರೆ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಸಣ್ಣ ಕೋಮು ಸಂಘರ್ಷಕ್ಕೆ ಕಾರಣವಾಯಿತು.ವರ್ಷಾರಂಭದಲ್ಲಿ ಹಳೇಬೀಡಿನ ಪುಷ್ಪಗಿರಿ ಸಂಸ್ಥಾನದಲ್ಲಿ ನಡೆದ ಗುರು ಸಿದ್ದರಾಮೇಶ್ವರರ 840ನೇ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ಜರು ಗಿತು. ಮುಖ್ಯಮಂತ್ರಿ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಹಳೇಬೀಡು ಭಾಗದಲ್ಲಿ ಈ ವರ್ಷವೂ ಬರಗಾಲ ಸ್ಥಿತಿ ಮುಂದುವರೆದಿದೆ. ಆಗಸ್ಟ್‌ ತಿಂಗಳಲ್ಲಿ ಯಗಚಿ ಜಲಾಶಯ ಭರ್ತಿಯಾಗಿದೆ.

ಮಾರ್ಚ್ ತಿಂಗಳಿನಲ್ಲಿ ಪುರಸಭೆ ಚುನಾವಣೆ ನಡೆದರೂ ಸದಸ್ಯರಿಗೆ ಇನ್ನೂ ಅಧಿಕಾರ ಭಾಗ್ಯ ದೊರಕಿಲ್ಲ.ವಿಧಾನಸಭೆ ಚುನಾವಣೆ ನಡೆದು ಹಾಲಿ ಶಾಸಕ ವೈ.ಎನ್‌.ರುದ್ರೇಶ್‌ಗೌಡ ಮರು ಆಯ್ಕೆಯಾಗಿದ್ದು, ಈ ವರ್ಷದ ಪ್ರಮುಖ ಇನ್ನೊಂದು ಪ್ರಮುಖ ವಿಚಾರ. ಹಳೇಬೀಡು–ಮಾದಿಹಳ್ಳಿ ಹೋಬಳಿ ಜನರಿಗೆ ಯಗಚಿ ಜಲಾಶಯ ದಿಂದ ನೀರು ಲಭಿಸಬಹುದೆಂಬ ಕನಸು 2013ರಲ್ಲೂ ನನಸಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry