ಕದನ ಕುತೂಹಲಕ್ಕೆ ಇಂದು ನಾಂದಿ ಗೀತೆ

7

ಕದನ ಕುತೂಹಲಕ್ಕೆ ಇಂದು ನಾಂದಿ ಗೀತೆ

Published:
Updated:

ಢಾಕಾ: ಕ್ರಿಕೆಟ್ ಬಾನಂಗಳದಲ್ಲಿ ‘ಧ್ರುವತಾರೆ’ಯಂತೆ ಪ್ರಕಾಶಿಸುವ ವಿಶ್ವಕಪ್ ಟೂರ್ನಿ, ಇದೀಗ ಈ ಕ್ರೀಡೆಯ ‘ಶಕ್ತಿಕೇಂದ್ರ’ವಾದ ಭಾರತೀಯ ಉಪಖಂಡಕ್ಕೆ ಮೂರನೇ ಬಾರಿ ಆಗಮಿಸಿದ್ದು, ಗುರುವಾರದ ಅಭೂತಪೂರ್ವ ಉದ್ಘಾಟನಾ ಸಮಾರಂಭಕ್ಕೆ ಇಲ್ಲಿಯ ಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣ ಸಂಪೂರ್ಣ ಸಜ್ಜಾಗಿದೆ.

ಗುರುವಾರದಿಂದ ಒಂದೂವರೆ ತಿಂಗಳು ಭಾರತ ಉಪಖಂಡವೂ ಸೇರಿದಂತೆ ಕ್ರಿಕೆಟ್ ಆಡುವ ಎಲ್ಲ ರಾಷ್ಟ್ರಗಳಲ್ಲಿ ವಿಶ್ವಕಪ್ ಹೊಳಪಿನ ಮುಂದೆ ಎಲ್ಲ ಉತ್ಸವಗಳೂ ಮಂಕು ಹೊಡೆಯಲಿವೆ. ಕ್ರಿಕೆಟ್ ‘ಧರ್ಮ’ ಈ ದೇಶಗಳ ಎಲ್ಲ ಜನರನ್ನೂ ಆಳಲಿದೆ.  ಕೋಟಿ-ಕೋಟಿ ಟಿ.ವಿ.ಗಳಲ್ಲೂ ಕ್ರಿಕೆಟ್ ರಾಜ್ಯಭಾರ ನಡೆಸಲಿದೆ.ವಿಶ್ವ ಕ್ರಿಕೆಟ್ ಜಾತ್ರೆಯ ಆರಂಭೋತ್ಸವಕ್ಕಾಗಿ ಬಾಂಗ್ಲಾದೇಶದ ರಾಜಧಾನಿ ತುಂಬಾ ಸಡಗರ ಮನೆಮಾಡಿದೆ. ಅಭೂತಪೂರ್ವವಾದ ಭದ್ರತಾ ವ್ಯವಸ್ಥೆ ನಡುವೆ ಕ್ರಿಕೆಟ್ ಆಟ ಗರಿ ಬಿಚ್ಚಲಿದೆ. ಮೂರು ದೇಶಗಳ, 13 ಕೇಂದ್ರಗಳಲ್ಲಿ 43 ದಿನಗಳ ಕಾಲ ನಿರಂತರವಾಗಿ ನಡೆಯುವ ‘ಕದನ ಕುತೂಹಲ’ಕ್ಕೆ ನಾಂದಿ ಗೀತೆ ಮೊಳಗಲಿದೆ.

ಹಾಡು, ನೃತ್ಯ ಹಾಗೂ ಲೇಸರ್ ಶೋಗಳ ಮಿಶ್ರಣವಾದ 135 ನಿಮಿಷಗಳ ಸಾಂಸ್ಕೃತಿಕ ಕಾರ್ಯಕ್ರಮ ದೇಶೀ ಸಂಸ್ಕೃತಿಯನ್ನು ಮೊಗೆ-ಮೊಗೆದು ನೋಡುಗರ ಹೃದಯಕ್ಕೆ ತುಂಬಲಿದೆ. ಮತ್ತೊಂದು ಆತಿಥೇಯ ರಾಷ್ಟ್ರವಾದ ಶ್ರೀಲಂಕಾ ಭಾನುವಾರ ಕೊಲಂಬೊದಲ್ಲಿ ಕೆನಡಾವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ‘ಯಾತ್ರೆ’ಯನ್ನು ಆರಂಭಿಸಲಿದೆ. 1987ರಲ್ಲಿ ಭಾರತ ಮತ್ತು ಪಾಕಿಸ್ತಾನ ಒಟ್ಟಾಗಿ ವಿಶ್ವಕಪ್ ಸಂಘಟಿಸಿದ್ದವು. 1996ರಲ್ಲಿ ಈ ಎರಡೂ ದೇಶಗಳ ಜೊತೆ ಶ್ರೀಲಂಕಾ ಸಹ ಸೇರಿಕೊಂಡು ನಾಲ್ಕು ವರ್ಷಗಳ ಕ್ರಿಕೆಟ್ ಜಾತ್ರೆಗೆ ಆತಿಥ್ಯ ವಹಿಸಿತ್ತು. ಈ ಸಲ ಬಾಂಗ್ಲಾದೇಶವೂ ಹೆಗಲು ಕೊಟ್ಟಿದೆ. ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮುಳಗಿರುವ ಬಾಂಗ್ಲಾಕ್ಕೆ ಬೆಳ್ಳಿಹಬ್ಬ ಆಚರಿಸಿಕೊಳ್ಳಲು ಇದಕ್ಕಿಂತ ದೊಡ್ಡ ಅವಕಾಶ ಬೇರೊಂದು ಸಿಗಲಾರದು.‘ವಿಶ್ವಕಪ್ ಪ್ರಾಯೋಜಕರ ಹಿತಾಸಕ್ತಿಗೆ ಮಾರಕವಾಗುವಂತಹ ಯಾವುದೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬಾರದು’ ಎಂಬ ನಿರ್ಬಂಧವನ್ನು ಐಸಿಸಿ ಆಟಗಾರರ ಮೇಲೆ ವಿಧಿಸಿದೆ. ಈ ನಿರ್ಬಂಧ ವಿವಾದವನ್ನೂ ಹುಟ್ಟುಹಾಕಿದೆ. ಈ ವಿಷಯವಾಗಿ ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಶಶಾಂಕ ಮನೋಹರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿಗೆ ಮಾರುಕಟ್ಟೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಐಸಿಸಿ ಎಚ್ಚರಿಕೆ ನೀಡಿದೆ ಎಂಬ ವರದಿಗಳೂ ಇವೆ.ಇಂಗ್ಲೆಂಡ್‌ನಲ್ಲಿ 1975ರಲ್ಲಿ ನಡೆದ ಮೊದಲ ಟೂರ್ನಿಯಿಂದ ಇಲ್ಲಿಯವರೆಗೆ ವಿಶ್ವಕಪ್ ಸಾಕಷ್ಟು ಹಾದಿ ಸವೆಸಿದೆ. ಕ್ರಿಕೆಟ್ ಜನಕ ತಾನೇ ಆಗಿದ್ದರೂ ಇಂಗ್ಲೆಂಡ್ ಇದುವರೆಗೆ ಒಮ್ಮೆಯೂ ವಿಶ್ವಕಪ್ ಗೆದ್ದಿಲ್ಲ. ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ವಿಶ್ವ ಚಾಂಪಿಯನ್ ಆಗಿ ಮೆರೆದಿವೆ.ಆಸ್ಟ್ರೇಲಿಯಾ ನಾಲ್ಕು ಸಲ ವಿಶ್ವಕಪ್ ಗೆದ್ದು ಅತ್ಯಧಿಕ ಸಲ ಗೆಲುವಿನ ಸವಿ ಉಂಡ ತಂಡವಾಗಿ ಹೊರಹೊಮ್ಮಿದೆ. ಮೊದಲ ಎರಡು ಆವೃತ್ತಿಯಲ್ಲಿ ಈ ಟೂರ್ನಿಯ ರಾಜನಾಗಿದ್ದು ಕೆರೇಬಿಯನ್ ದೈತ್ಯರಾದ ವೆಸ್ಟ್ ಇಂಡೀಸ್ ಆಟಗಾರರು.ಭಾರತ ಪ್ರಶಸ್ತಿಗೆ ನೆಚ್ಚಿನ ತಂಡವಾಗಿದ್ದು, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ಮೇಲೂ ನಿರೀಕ್ಷೆಯ ಭಾರ ಬಿದ್ದಿದೆ.

ಇದುವರೆಗೆ ಒಮ್ಮೆಯೂ ಪ್ರಶಸ್ತಿ ಪಡೆಯದ ಇಂಗ್ಲೆಂಡ್ ಸಹ ‘ಸಾಮ್ರಾಟ’ನ ಸಿಂಹಾಸನಕ್ಕೆ ಪ್ರಬಲ ಆಕಾಂಕ್ಷಿಯಾಗಿದೆ. ಪ್ರಶಸ್ತಿ ಒಂದುವೇಳೆ ಉಪಖಂಡದ ಕೈತಪ್ಪಿದರೆ ಅದು ‘ಕ್ರಿಕೆಟ್ ಜನಕ’ನ ಪಾಲೇ ಆಗಲಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬರುತ್ತಿದೆ.ವಂಗುಬಂಧು ಕ್ರೀಡಾಂಗಣದಲ್ಲಿ ಗುರುವಾರ ಹರಿಯುವ ಸಾಂಸ್ಕೃತಿಕ ಹೊನಲು ಎಲ್ಲ ವಿವಾದದ ಅಲೆಗಳನ್ನೂ ಕೊಚ್ಚಿಕೊಂಡು ಹೋಗಲಿದ್ದು, ಕ್ರಿಕೆಟ್ ರಾಜ್ಯಭಾರಕ್ಕೆ ‘ಆಸ್ಥಾನ’ವನ್ನು ಸಜ್ಜುಗೊಳಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry