ಕದಾಂಪುರ: ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಮಂಗಳವಾರ, ಜೂಲೈ 16, 2019
24 °C
ಮುಖ್ಯ ಶಿಕ್ಷಕರ ವಿರುದ್ಧ ಅನುದಾನ ದುರ್ಬಳಕೆ ಆರೋಪ

ಕದಾಂಪುರ: ಶಾಲೆಗೆ ಬೀಗ ಹಾಕಿ ಪ್ರತಿಭಟನೆ

Published:
Updated:

ಬಾಗಲಕೋಟೆ: ಅನುದಾನ ದುರ್ಬಳಕೆ, ಅಧಿಕಾರ ದುರುಪಯೋಗ, ದುರಾಡಳಿತ ಮತ್ತು ಅಸಭ್ಯವಾಗಿ ವರ್ತಿಸುವ ತಾಲ್ಲೂಕು ಕದಾಂಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಎಂ.ಹಲಗಿಯವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.ಬೆಳೆಗ್ಗೆ ಶಾಲೆ ಆರಂಭವಾಗುವ ವೇಳೆಗೆ ಜಮಾವಣೆಗೊಂಡ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ಬೀಗ ಹಾಕಿ ಮುಖ್ಯ ಶಿಕ್ಷಕ ಹಲಗಿ ವಿರುದ್ಧ ಘೋಷಣೆಗಳನ್ನು ಹಾಕುತ್ತಾ ಮೂರ‌್ನಾಲ್ಕು ಗಂಟೆಗಳ ಕಾಲ ಬೀಗ ತೆಗೆಯದೇ ಪ್ರತಿಭಟನೆ ನಡೆಸಿದರು.ಶಾಲೆಗೆ ಬರುವ ಅನುದಾನ ಸೇರಿದಂತೆ ವಿದ್ಯಾರ್ಥಿಗಳ ಸ್ಕಾಲರ್ ಶಿಫ್ ಹಣ ಹಾಗೂ ಪ್ರವಾಸ ಭತ್ಯೆಯನ್ನು ಬಳಸಿಕೊಂಡಿರುವ ಹಲಗಿ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳು ಇಂತಹ ಶಿಕ್ಷಕರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಪಟ್ಟುಹಿಡಿದರು.ಮುಖ್ಯ ಶಿಕ್ಷಕ ಪಿ.ಎಂ.ಹಲಗಿ ಶಾಲೆಗೆ ಬಂದಿರುವ ಅನುದಾನ ಸೇರಿದಂತೆ ವಿದ್ಯಾರ್ಥಿಗಳಿಗೆ ಬಂದಿರುವ ಸ್ಕಾಲರ್ ಶಿಫ್ ಮತ್ತು ಪ್ರವಾಸ ಭತ್ಯೆ ನೀಡಿಲ್ಲ. ಆರ್‌ಎಂಎಸ್‌ಎ ಯೋಜನೆಯಡಿ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಪ್ರವಾಸಕ್ಕಾಗಿ ಬಿಡುಗಡೆಗೊಂಡ ಹಣವನ್ನು ದುರಪಯೋಗ ಮಾಡಿಕೊಂಡಿದ್ದಾನೆ ಎಂದು ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಆರೋಪಿಸಿದರು.ಹಳೆಯ ವಿದ್ಯಾರ್ಥಿಗಳು ಶಾಲೆಗೆ ಪ್ರಮಾಣ ಪತ್ರಗಳನ್ನು ಹಾಗೂ ದಾಖಲೆಗಳನ್ನು ಕೇಳಲು ಬಂದರೆ ಸತಾಯಿಸುವುದು ಹಾಗೂ ದುಡ್ಡು ಕೇಳುವುದು ಸಾಮಾನ್ಯವಾಗಿದೆ ಎಂದು ಹಳೆಯ ವಿದ್ಯಾರ್ಥಿಗಳು ಆರೋಪಿಸಿದರು.ಈಗಾಗಲೇ ಎರಡು ಭಾರಿ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದು ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.ಶಾಲೆಗೆ ಬೀಗ ಹಾಕಿದ ಸುದ್ದಿ ತಿಳಿಯುತ್ತಿದ್ದಂತೆ  ಶಿಕ್ಷಣ ಇಲಾಖೆ ಉಪನಿರ್ದೇಶಕ ಮಡಿವಾಳರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸಿದರು. ಎಲ್ಲ ದಾಖಲೆಗಳನ್ನು ಪರೀಶೀಲನೆ ನಡೆಸಿ ಈ ಬಗ್ಗೆ ಆಯುಕ್ತರಿಗೆ ವರದಿ ನೀಡಿ ಕ್ರಮ ಜರುಗಿಸಲಾಗುವುದು ಎಂದು ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.ನಾಲ್ಕು ದಿನಗಳಲ್ಲಿ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಿಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಎಸ್‌ಡಿಎಂಸಿ ಸದಸ್ಯ ಶ್ರೀಶೈಲ ಮೂರಬಂಡಿ, ಮಲ್ಲಪ್ಪ ದಾಳಿ, ಬಸಪ್ಪ ದಾಳಿ, ಸಿದ್ದಯ್ಯ ಹಿರೇಮಠ, ಗಂಗವ್ವ ವಾಲಿಕಾರ ಮತ್ತು ರಮೇಶ ಗಂಜಾಹಾಳ, ಶಿವಲಿಂಗಪ್ಪ ಕೆಂಚನ್ನವರ, ಶ್ರೀಶೈಲ ಕೆಂಚನ್ನವರ, ಬಸಪ್ಪ ಮಾದರ, ನಾಗಪ್ಪ ಹುದ್ದಾರ, ಪುಂಡಲೀಗ ವಡಗೇರಿ, ಮಲ್ಲಪ್ಪ ತೋಳಮಟ್ಟಿ, ಮುಕ್ಕಣ್ಣ ನರಿ ಸೇರಿದಂತೆ ಮತ್ತಿತರರು, ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry