ಬುಧವಾರ, ನವೆಂಬರ್ 20, 2019
27 °C

ಕನಕಗಿರಿ: `ನಗ' ಹೊತ್ತ ನಾಯಕರು!

Published:
Updated:

ಕನಕಗಿರಿ: ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿರುವ ಗರುಡೋತ್ಸವದ ಮೆರವಣಿಗೆ ಸೋಮವಾರ ನಸುಕಿನ ಜಾವ ಸಡಗರ, ಸಂಭ್ರಮದಿಂದ ನಡೆಯಿತು.

ಸಾವಿರಾರು ಸಂಖ್ಯೆಯ ಭಕ್ತರು ಸೇರಿದಂತೆ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ವಿವಿಧ ಪಕ್ಷದ ನಾಯಕರ ದಂಡು ಕನಕಾಚಲಪತಿ ದೇವಸ್ಥಾನ, ರಾಜಬೀದಿಯಲ್ಲಿ ಹರಿದು ಬಂತು.ಕನಕಾಚಲಪತಿ ಭಜನಾ ಸಂಘದ ಕಲಾವಿದರು ತಮ್ಮ ಕಲೆಯನ್ನು ವ್ಯಕ್ತಪಡಿಸಿ ಗಮನ ಸೆಳೆದರೆ ಭಾಜಾ ಭಜಂತ್ರಿ, ತಾಷ ಮೇಳ ಕಲ್ಯಾಣೋತ್ಸವಕ್ಕೆ ಮೆರಗು ತಂದವು.  ನಸುಕಿನ ಜಾವದಲ್ಲಿ ನಡೆದ ಕಲ್ಯಾಣೋತ್ಸವದ ಕಾರ್ಯಕ್ರಮದಲ್ಲಿ ಶಾಸಕ ಶಿವರಾಜ ತಂಗಡಗಿ, ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಮುಕುಂದರಾವ್ ಭವಾನಿಮಠ, ಕೆಜೆಪಿ ನಿಯೋಜಿತ ಅಭ್ಯರ್ಥಿ ಬಸವರಾಜ ಧಡೇಸೂಗರು, ಬಿಜೆಪಿಯಿಂದ ಟಿಕೆಟ್ ಬಯಸಿರುವ ಲಂಕೇಶ ಗುಳದಾಳ, ರಾಮಾನಾಯಕ್, ಲಕ್ಷ್ಮೀ ನಾರಾಯಣ, ಜೆಡಿಎಸ್‌ನ ಪರಶುರಾಮ ಆಗಮಿಸಿದ್ದರು. ಈ ನಾಯಕರು ಗರುಡ ಉತ್ಸವನ್ನು ಹೆಗಲ ಮೇಲೆ ಹೊತ್ತುಕೊಂಡು, ದೀವಟಗಿ ಹಿಡಿದು ಬರಿಗಾಲಿನಲ್ಲಿ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.ಜಿಪಂ ಸದಸ್ಯ ಗಂಗಣ್ಣ ಸಮಗಂಡಿ, ತಾಪಂ ಅಧ್ಯಕ್ಷ ಬಸವರಾಜ,  ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಲ್ಲಾ ಶೇಷಗಿರಿರಾವ್, ಅಧಿಕಾರಿಗಳಾದ ರವಿ  ಕಮಲಾಪುರ,   ಹುಲಿಹೈದರನ ಲಕ್ಷ್ಮೀ ಮಾನಪ್ಪ ನಾಯಕ ಸೇರಿ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಗರುಡ ವಾಹನ ದೇವಸ್ಥಾನಕ್ಕೆ ಆಗಮಿಸಿದಾಗ ದೇವಸ್ಥಾನ ಸಮಿತಿ ವತಿಯಿಂದ ಗರುಡನ ಬುತ್ತಿಪ್ರಸಾದ ನೀಡಲಾಯಿತು. ವಾಲ್ಮೀಕಿ ಗಜಾನನ ಸಮಿತಿ ಒಂದು ಕ್ವಿಂಟಲ್ ಲಾಡುಗಳನ್ನು ವಿತರಿಸಿದರು. ಸಾಯಿ ಬಾರ್‌ನ ಸಿಬ್ಬಂದಿ ಗರುಡ ವಾಹನಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿಸಿದ್ದರು.

ಪ್ರತಿಕ್ರಿಯಿಸಿ (+)