ಕನಕಪುರ ಜನರಲ್ಲಿ ಸಂತಸದ ಅಲೆ

7

ಕನಕಪುರ ಜನರಲ್ಲಿ ಸಂತಸದ ಅಲೆ

Published:
Updated:

ರಾಮನಗರ: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು- ಸತ್ಯಮಂಗಲ ರೈಲ್ವೆ ಯೋಜನೆಯ ಮೊದಲ ಹಂತವನ್ನು ಕೈಗೆತ್ತಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಸಕ್ತಿ ತೋರಿರುವುದು ಜಿಲ್ಲೆಯ ಕನಕಪುರ ಭಾಗದ ಜನತೆಯಲ್ಲಿ ಹರ್ಷ ಮೂಡಿಸಿದೆ. ಈ ಸಂಬಂಧ ಹತ್ತಾರು ವರ್ಷಗಳಿಂದ ಹೋರಾಟ ಮಾಡಿದ್ದ ಈ ಭಾಗದ ಜನತೆಯಲ್ಲಿ ಸಂತಸ ಆವರಿಸಿದೆ.ಈ ಯೋಜನೆಯ ಮೊದಲ ಹಂತವಾಗಿ ಕೆಂಗೇರಿ-ಕನಕಪುರ-ಮಳವಳ್ಳಿ-ಚಾಮರಾಜನಗರದವರೆಗೆ ಯೋಜನೆಯನ್ನು ಕೈಗೆತ್ತಿಕೊಂಡು ತ್ವರಿತ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಗುರುವಾರ ಬೆಂಗಳೂರಿನಲ್ಲಿ ಪ್ರಕಟಿಸಿದ್ದು, ಕನಕಪುರ ಭಾಗದ ಜನತೆಯ ಮೊಗದಲ್ಲಿ ನಗು ಮೂಡಲು ಕಾರಣವಾಗಿದೆ.ಏನಿದು ಯೋಜನೆ ?: ಜಾಫರ್ ಷರೀಫ್ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಸುಮಾರು 260 ಕಿ.ಮೀ ಉದ್ದದ ಬೆಂಗಳೂರು- ಸತ್ಯಮಂಗಲ ರೈಲ್ವೆ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿತ್ತು.ಎಚ್.ಡಿ.ದೇವೇಗೌಡ ಅವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿದ್ದರು. ಅವರು ಆ ಸಂಬಂಧ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸರ್ವೇ ನಡೆಸಲೂ ಸೂಚಿಸಿದ್ದರು.ಆದರೆ ಚಾಮರಾಜನಗರದಿಂದ ಸತ್ಯಮಂಗಲಕ್ಕೆ ರೈಲ್ವೆ ಮಾರ್ಗದ ಸರ್ವೇ ಕಾರ್ಯ ಮುಂದುವರೆಸಲು ತಮಿಳುನಾಡಿನ ಅರಣ್ಯ ಮತ್ರು ಪರಿಸರ ಇಲಾಖೆ ಅನುಮತಿ ನೀಡಲಿಲ್ಲ. ಹಾಗಾಗಿ ಈ ಯೋಜನೆಗೆ ಸ್ಥಗಿತವಾಗುವ ಮಟ್ಟಕ್ಕೆ ಬಂದು ನಿಂತಿತ್ತು ಎಂದು ಕನಕಪುರದ ರೈಲು ಕ್ರಿಯಾ ಸಮಿತಿ ಅಧ್ಯಕ್ಷ ನಾಗರಾಜು `ಪ್ರಜಾವಾಣಿ~ಗೆ ತಿಳಿಸಿದರು.ಈ ಕಾರಣಗಳ ಆಧಾರದ ಮೇಲೆ ರೈಲ್ವೆ ಇಲಾಖೆಯ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಕ್ಕೆ ಈ ಯೋಜನೆಯನ್ನು ಕೈಬಿಡುವಂತೆ ಪತ್ರ ಬರೆದಿದ್ದರು. ಇದರಿಂದ ಈ ಭಾಗದಲ್ಲಿ ರೈಲು ಸಂಚಾರದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಜನತೆಯಲ್ಲಿ ನಿರಾಸೆ ಮೂಡಿತ್ತು. ಒಂದೂವರೆ ವರ್ಷದ ಹಿಂದೆ ಕನಕಪುರದಲ್ಲಿ ರೈಲು ಕ್ರಿಯಾ ಸಮಿತಿ ರಚಿಸಿಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಮನವಿ ಪತ್ರಗಳನ್ನು ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು ಎಂದು ಅವರು ಸ್ಮರಿಸುತ್ತಾರೆ.ಆಗ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಚಿವ ಮುನಿಯಪ್ಪ ಅವರು ನಮ್ಮ ಮನವಿ ಮತ್ತು ಬೇಡಿಕೆಗಳಿಗೆ ಸ್ಪಂದಿಸಿದರು. ಅದರ ಜೊತೆಗೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಯೋಜನೆ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಯೋಜನೆಗೆ ಅಗತ್ಯ ನೆರವು ನೀಡುವುದಾಗಿ ಹಿಂದಿನ ಸಿ.ಎಂ. ತಿಳಿಸಿದ್ದರು ಎಂದು ಅವರು ಹೇಳುತ್ತಾರೆ.ಬಜೆಟ್‌ನಲ್ಲಿ ಪ್ರಸ್ತಾಪ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಚಿವರುಗಳ ನೆರವಿನಿಂದ  2011-12ರ ಬಜೆಟ್‌ನಲ್ಲಿ ಈ ಯೋಜನೆ ಜಾರಿಗೊಳಿಸಲು ಪ್ರಸ್ತಾಪಿಸಲಾಯಿತು. ಅಲ್ಲದೆ ಈ ಯೋಜನೆಯನ್ನು 226 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುವುದಾಗಿ ರೈಲ್ವೆ ಬಜೆಟ್‌ನಲ್ಲಿ ಘೋಷಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು ಬಜೆಟ್‌ನಲ್ಲಿ ತಿಳಿಸಲಾಯಿತು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ವಿ.ಹೊನ್ನಗಿರಿಯಪ್ಪ ವಿವರಿಸುತ್ತಾರೆ.ಈ ಯೋಜನೆಯ ಅನುಷ್ಠಾನಕ್ಕೆ ರಾಜ್ಯದಲ್ಲಿ ಬೇಕಿರುವ ಭೂಮಿ ಹಾಗೂ ಶೇ 50ರಷ್ಟು ಹಣಕಾಸನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಆಗಿನ ಮುಖ್ಯಮಂತ್ರಿ ತಿಳಿಸಿದ್ದರು. ಇದೀಗ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಸಹ ಇದೇ ಮಾತುಗಳನ್ನು ಹೇಳಿ, ಯೋಜನೆ ಜಾರಿಗೊಳಿಸಲು ಇಚ್ಛಾಶಕ್ತಿ ಪ್ರದರ್ಶಿಸಿರುವುದು ಸಂತಸ ತಂದಿದೆ ಎಂದು ಅವರು ತಿಳಿಸುತ್ತಾರೆ.ಈ ವರ್ಷದ ಡಿಸೆಂಬರ್ ಒಳಗೆ ಈ ಯೋಜನೆಗಳಿಗೆ ಅಗತ್ಯವಿರುವಷ್ಟು ಭೂಮಿಯನ್ನು ಹಸ್ತಾಂತರ ಮಾಡಲಾಗುವುದು ಎಂದು ಸಿ.ಎಂ. ಸದಾನಂದಗೌಡ ಹೇಳಿರುವುದು ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿಗೆ ಕಾರಣವಾಗಲಿದೆ. ಇದರಿಂದ ಕನಕಪುರ ಭಾಗಕ್ಕೂ ರೈಲು ಬರುತ್ತದೆ ಎಂಬ ಕನಸು ನನಸಾಗುತ್ತದೆ ಎಂದು ಅವರು ಹೇಳುತ್ತಾರೆ.ಕನಕಪುರಕ್ಕೆ 55 ಕಿ.ಮೀ: ಬೆಂಗಳೂರಿನಿಂದ ಕನಕಪುರಕ್ಕೆ 55 ಕಿ.ಮೀ ಅಂತರ ಇದ್ದು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 42 ರೂಪಾಯಿ ಟಿಕೆಟ್ ದರವಾಗಿದೆ. ಈ ಭಾಗದಲ್ಲಿ ರೈಲು ಸಂಚಾರ ಆರಂಭವಾದರೆ ಪ್ರಯಾಣಿಕರು ಕೇವಲ 10 ರೂಪಾಯಿಗೆ ಕನಕಪುರ ಮತ್ತು ಬೆಂಗಳೂರು ನಡುವೆ ಸಂಚರಿಸಬಹುದು. ಇದರಿಂದ ಈ ಪ್ರದೇಶದ ಜನತೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುತ್ತಾರೆ ಅವರು.ಅಲ್ಲದೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಾರಣಕರ್ತರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ನಾಗರಾಜ್ ಮತ್ತು ಹೊನ್ನಗಿರಿಯಪ್ಪ ತಿಳಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry