ಶುಕ್ರವಾರ, ಜೂನ್ 25, 2021
27 °C

ಕನಕಪುರ: ಪರವಾನಗಿ ಮುಗಿದರೂ ಗಣಿಗಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕನಕಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಲವು ಕಲ್ಲು ಗಣಿಗಳ (ಕ್ವಾರಿ) ಪರವಾನಗಿ ಅವಧಿ ಮುಗಿದಿದ್ದರೂ ಅವು ಅವ್ಯಾಹತವಾಗಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದು, ನಿಸರ್ಗ ಸಂಪತ್ತಿನ ಲೂಟಿಯನ್ನು ಎಗ್ಗಿಲ್ಲದೆ ಮುಂದುವರೆಸಿವೆ ಎಂಬ ಅಂಶ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮದ್ ಸನಾವುಲ್ಲಾ ಅವರ ನೇತೃತ್ವದ ಅಧಿಕಾರಿಗಳ ತಂಡದ ಗಮನಕ್ಕೆ ಬಂದಿದೆ.ತಾಲ್ಲೂಕಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಕ್ವಾರಿಗಳ ಪರಿಶೀಲನೆ ನಡೆಸಿದ ತಂಡ ಕೆಲ ಗಮನಾರ್ಹ ಅಂಶಗಳನ್ನು ದಾಖಲಿಸಿಕೊಂಡಿದೆ ಎಂದು ತಿಳಿದು ಬಂದಿದೆ.ನಿಡಗಲ್ಲು ಪ್ರದೇಶದಲ್ಲಿ ಮೂರು, ಅಚ್ಚಲು ಮತ್ತು ಪುರದೊಡ್ಡಿಯಲ್ಲಿ ತಲಾ ಒಂದೊಂದು ಕ್ವಾರಿಗಳು ಪರವಾನಗಿ ಅವಧಿ ಮುಕ್ತಾಯವಾಗಿದ್ದರೂ ಎಗ್ಗಿಲ್ಲದೆ ಕಲ್ಲು ಗಣಿಗಾರಿಕೆ ಮುಂದುವರೆಸಿವೆ. ಇದರಿಂದ ನಿಸರ್ಗಕ್ಕೆ ಮತ್ತು ಸರ್ಕಾರದ ಬೊಕ್ಕಸಕ್ಕೆ ನಿತ್ಯ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ ಎಂಬುದನ್ನು ತಂಡದ ಅಧಿಕಾರಿಗಳು ಗುರುತಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಈ ಭಾಗದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬುದು ಗೊತ್ತಿದ್ದರೂ ಜಿಲ್ಲೆಯ ಕೆಲ ಹಿರಿಯ ಅಧಿಕಾರಿಗಳು ಪರಿಶೀಲನಾ ತಂಡವನ್ನು ಆ ದಿಕ್ಕಿನಲ್ಲಿ ಕರೆದುಕೊಂಡು ಹೋಗಲು ಮನಸ್ಸು ಮಾಡಿರಲಿಲ್ಲ.ಪರಿಶೀಲನಾ ತಂಡ ಸಾಗಲು ಸಿದ್ಧಪಡಿಸಿದ್ದ ಪಥದಲ್ಲಿ  ಕೆಲವೊಂದು ಪ್ರಮುಖ ತಾಣಗಳನ್ನು ಕೈಬಿಡಲಾಗಿತ್ತು. ಮಾರ್ಗ ಮಧ್ಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಪೂರ್ವ ಯೋಜಿತ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗಗಳಲ್ಲಿ ಪರಿಶೀಲನಾ ತಂಡವನ್ನು ಕರೆದುಕೊಂಡು ಹೋದಾಗ ಪರವಾನಗಿ ಮುಗಿದಿದ್ದರೂ ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶಗಳು ಕಂಡು ಬಂದವು ಎಂದು ಗೊತ್ತಾಗಿದೆ.ಅಧಿಕಾರಿಗಳ ತಂಡದ ಈ ದಿಢೀರ್ ಆಗಮನದಿಂದ ವಿಚಲಿತರಾದ ಈ ಭಾಗದ ಕೆಲ ಕ್ವಾರಿ ಪ್ರತಿನಿಧಿಗಳು, ಪರವಾನಗಿಯ ಅವಧಿ ಮುಗಿದಿದ್ದು, ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದರು. ಆಗ ಪ್ರತಿಕ್ರಿಯಿಸಿದ ಅಧಿಕಾರಿಗಳು ಪರವಾನಗಿ ನವೀಕರಣ ದೊರೆಯುವುದಕ್ಕೂ ಮುನ್ನವೇ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವುದು ಅಪರಾಧವಲ್ಲವೇ ಎಂದು ಪ್ರಶ್ನಿಸಿದಾಗ ಕ್ವಾರಿ ಪ್ರತಿನಿಧಿಗಳು ಮಾತನಾಡದೆ ಸುಮ್ಮನಾದರು ಎಂದು ಮೂಲಗಳು ತಿಳಿಸಿವೆ.ಮುಂದಿನ ವಾರ ಪುನಃ ಪರಿಶೀಲನೆ:
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮದ್ ಸನಾವುಲ್ಲಾ ನೇತೃತ್ವದ ಅಧಿಕಾರಿಗಳ ತಂಡ ಸತತ ಮೂರು ದಿನ ಕನಕಪುರ ಭಾಗದ ಕಲ್ಲು ಗಣಿಗಾರಿಕೆ ಪ್ರದೇಶಗಳನ್ನು ಪರಿಶೀಲನೆ ನಡೆಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಜಿಲ್ಲಾಡಳಿತ ಯೋಜನೆ ರೂಪಿಸಿ, ಪರಿಶೀಲನಾ ಪಥದ ಮಾರ್ಗವನ್ನು ಅಂತಿಮಗೊಳಿಸಿತ್ತು. ಆದರೆ ಪರಿಶೀಲನೆಯನ್ನು ಬುಧವಾರ ಒಂದೇ ದಿನಕ್ಕೆ ಸೀಮಿತಗೊಳಿಸಿಕೊಂಡ ತಂಡ ಮುಂದಿನ ಪರಿಶೀಲನೆಯನ್ನು ಇದೇ 7 ರಂದು ನಡೆಸಲು ದಿನ ನಿಗದಿ ಮಾಡಿದೆ ಎಂದು ತಿಳಿದು ಬಂದಿದೆ.ತಾಲ್ಲೂಕಿನ ಕೊನೂರು, ಮರಲೇಬೇಕುಪ್ಪೆ, ನಲ್ಲಹಳ್ಳಿ, ಕೋಟೆಕೊಪ್ಪ, ಕೆಬ್ಬಹಳ್ಳಿ,  ಕೋಡಿಹಳ್ಳಿ, ಸಾಲುಬನ್ನಿ, ಹಣಕಡಬೂರು, ಹೊಸದುರ್ಗ, ಗಟ್ಟಿಗುಂದ, ಹೇರಂದ್ಯಾಪ್ಪನಹಳ್ಳಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ.

ಕಲ್ಲು ಗಣಿಗಾರಿಕಾ ಪ್ರದೇಶಗಳನ್ನು ಈ ಉನ್ನತಾಧಿಕಾರಿಗಳ ತಂಡ ಪರಿಶೀಲನೆ ನಡೆಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.