ಕನಕಪುರ ಬಂದ್ ಯಶಸ್ವಿ

ಮಂಗಳವಾರ, ಜೂಲೈ 23, 2019
25 °C

ಕನಕಪುರ ಬಂದ್ ಯಶಸ್ವಿ

Published:
Updated:

ಕನಕಪುರ: ಶಾಸಕ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್‌ರವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳ ರಕ್ಷಣೆಗೆ ಮುಂದಾಗಿರುವ ಕ್ರಮವನ್ನು ಖಂಡಿಸಿ ಮಂಗಳವಾರ ತಾಲ್ಲೂಕು ಕಾಂಗ್ರೆಸ್ ಸಮಿತಿ ಕರೆ ನೀಡಿದ್ದ ಬಂದ್‌ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು, ಹೋಟೆಲ್ ಮತ್ತು ರಸ್ತೆಬದಿಯ ಅಂಗಡಿಗಳ ವಹಿವಾಟುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದ್ದರು.

ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಬೆರೆಳೆಣಿಕೆಯಷ್ಟು ಬಸ್ಸುಗಳಷ್ಟೇ ಸಂಚರಿಸುತ್ತಿದ್ದವು.ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇತ್ತು. ಕಾಂಗ್ರೆಸ್ ಕಾರ್ಯಕರ್ತರು ಬಿತ್ತಿ ಪತ್ರಗಳನ್ನು ಹಿಡಿದುಕೊಂಡು ಎಂ.ಜಿ.ರಸ್ತೆ, ಕೋಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವ ಜೆಡಿಎಸ್ ನಾಯಕರ ವಿರುದ್ದ ಘೋಷಣೆಗಳನ್ನು ಕೂಗಿ ಖಂಡಿಸಿದರು.ಜೆಡಿಎಸ್‌ನವರು ಶಾಂತಿಪ್ರಿಯ ತಾಲ್ಲೂಕು ಕನಕಪುರವನ್ನು ಕೆಲ ಕಿಡಿಗೇಡಿಗಳು ಬಿಹಾರ ಮಾಡಲು ಹೊರಟಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ. ಅದನ್ನು ತಡೆಗಟ್ಟಲು ಯಾವುದೆ ಹೋರಾಟಕ್ಕೂ ಸಿದ್ದವಿರುವುದಾಗಿ ಎಚ್ಚರಿಸಿದರು.

 ಬಂದ್‌ನ ನೇತೃತ್ವವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ ಮಾತನಾಡಿ, ಶಾಸಕ ಡಿ.ಕೆ.ಶಿವಕುಮಾರ್ ಕ್ಷೇತ್ರದ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.ಶಾಸಕರಿಗೆ ಬೆಂಬಲವಾಗಿ ಅವರ ಸಹೋದರ ಡಿ.ಕೆ.ಸುರೇಶ್ ದುಡಿಯುತ್ತಿದ್ದು, ಅವರನ್ನು ಜೆಡಿಎಸ್‌ನ ಬಾಲನರಸಿಂಹೇಗೌಡ ಸೇರಿದಂತೆ ಇತರ 5 ಮಂದಿ ಕೊಲೆ ಮಾಡಲು ಸುಪರಿ ನೀಡಿ ಸಂಚು ರೂಪಿಸಿದ್ದಾರೆಂದು ಆರೋಪಿಸಿದರು.ಪೊಲೀಸ್ ತನಿಖೆಯಿಂದ ಆರೋಪಿಗಳು ಪತ್ತೆಯಾಗಿದ್ದು, ಸದ್ಯ ಜೈಲಿನಲ್ಲಿ ಇರಬೇಕಾದ ಪ್ರಮುಖ ಆರೋಪಿ ಬಾಲನರಸಿಂಹ ಗೌಡನಿಗೆ ಹೃದಯದ ಖಾಯಿಲೆಯ ನೆಪವೊಡ್ಡಿ ಸುಳ್ಳು ವೈದ್ಯಕೀಯ ಪ್ರಮಾಣ ಪತ್ರನೀಡಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಆಶ್ರಯನೀಡಲಾಗಿದೆ. ರೋಗಿಗಳ ಜೀವ ರಕ್ಷಣೆ ಮಾಡುವ ಆಸ್ಪತ್ರೆ ಕೊಲೆಗಾರರ ತಲೆಕಾಯುವ ಸ್ಥಳವಾಗಿದ್ದು ಬಾಲನರಸಿಂಹ ಗೌಡರನ್ನು ಕೂಡಲೆ ಜೈಲಿಗೆ ಕಳುಹಿಸಬೇಕೆಂದು ಒತ್ತಾಯಿಸಿದರು. 

 

ಡಿ.ಕೆ.ಸುರೇಶ್ ಅವರ ಕೊಲೆ ಸಂಚು ಖಂಡಿಸಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹೋಬಳಿ ಕೇಂದ್ರಗಳಾದ ಸಾತನೂರು, ಕೋಡಿಹಳ್ಳಿ, ದೊಡ್ಡ ಆಲಹಳ್ಳಿ, ಮರಳವಾಡಿ ಮತ್ತು ಹಾರೋಹಳ್ಳಿಯಲ್ಲಿ ಬಂದ್ ಆಚರಿಸಲಾಯಿತು. ಇಂಥ ಘಟನೆಗಳು ಮರುಕಳಿಸದಂತೆ ತಡಯಬೇಕೆಂದು ಆಗ್ರಹಿಸಿದರು.ಪುರಸಭೆ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎನ್.ದಿಲೀಪ್, ಎಂ.ಡಿ.ವಿಜಯದೇವು, ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟೇಶ್‌ಯ್ಯ,  ಪುರಸಭೆ ಸದಸ್ಯ ಜಯರಾಮು, ತಾಲ್ಲೂಕು ಪಂಚಾಯಿತಿ ಸದಸ್ಯ ರವಿಕುಮಾರ್, ಪುರುಷೋತ್ತಮ್, ಮುಖಂಡರಾದ ಮುಕ್ಬುಲ್, ವೆಂಕಟೇಶಪ್ಪ, ಬಾಬು(ಯದುನಂದನ್), ಮಲ್ಲೇಶ್, ಕೆಂಪರಾಜು, ಸಿಲ್ಕ್‌ರವಿ, ಕೇಬಲ್ ಜಗದೀಶ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry