ಕನಕಪುರ ರಸ್ತೆಯಲ್ಲಿ ನಿತ್ಯ ನರಕ ದರ್ಶನ...!

7

ಕನಕಪುರ ರಸ್ತೆಯಲ್ಲಿ ನಿತ್ಯ ನರಕ ದರ್ಶನ...!

Published:
Updated:
ಕನಕಪುರ ರಸ್ತೆಯಲ್ಲಿ ನಿತ್ಯ ನರಕ ದರ್ಶನ...!

ಬೆಂಗಳೂರು: ದೂಳುಮಯ ರಸ್ತೆಗಳು, ಕಿಕ್ಕಿರಿದ ವಾಹನ ಸಂಚಾರ, ಎಲ್ಲೆಂದರಲ್ಲಿ ಬಿದ್ದಿರುವ ಮಾರುಕಟ್ಟೆಯ ತ್ಯಾಜ್ಯದ ರಾಶಿ. ಇವುಗಳ ನಡುವೆಯೇ ಆಮೆಗತಿಯಲ್ಲಿ ಸಾಗಿರುವ ಮೆಟ್ರೊ ಕಾಮಗಾರಿ....ಇವು ಕನಕಪುರ ರಸ್ತೆಯಲ್ಲಿ ಸಂಚರಿಸುವವರಿಗೆ ಕಾಣಸಿಗುವ ದೃಶ್ಯಗಳು. ಕೆ.ಆರ್.ಮಾರುಕಟ್ಟೆ, ಜೆ.ಪಿ.ನಗರ, ಮೈಸೂರು ರಸ್ತೆ ಹಾಗೂ ಕನಕಪುರಕ್ಕೆ ಸಂಪರ್ಕ ಕಲ್ಪಿಸುವ ಈ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಬಿದ್ದಿದ್ದು, ಸಂಪೂರ್ಣವಾಗಿ ಹದಗೆಟ್ಟಿದೆ. ಇಂಥ ರಸ್ತೆಯಲ್ಲಿ ನಿತ್ಯ ಮೂರು ಲಕ್ಷಕ್ಕೂ ಅಧಿಕ ವಾಹನಗಳು ಸರ್ಕಸ್ ಮಾಡುತ್ತ ಸಂಚರಿಸುತ್ತಿವೆ. ಇರುವ ಕಿರಿದಾದ ಜಾಗದಲ್ಲಿಯೇ ಅಸಂಖ್ಯಾತ ಪಾದಚಾರಿಗಳು ದೂಳು ನುಂಗಿಕೊಂಡೇ ಮುಂದೆ ಸಾಗುತ್ತಾರೆ.ಇನ್ನು ಈ ರಸ್ತೆಯಲ್ಲಿ ಅರ್ಧ ಮೈಲಿ ಪ್ರಯಾಣಿಸಬೇಕೆಂದರೂ ಕನಿಷ್ಠ ಒಂದು ಗಂಟೆ ವ್ಯಯ ಮಾಡಬೇಕಾಗುತ್ತದೆ. ಕಾಮಗಾರಿ ಆರಂಭಗೊಂಡು ಮೂರು ವರ್ಷಗಳೇ ಕಳೆದರೂ ವಾಹನ ದಟ್ಟಣೆ, ದೂಳಿನ ಸಮಸ್ಯೆ ಜಾಸ್ತಿ ಆಗುತ್ತಿದೆಯೇ ಹೊರತು ಕೆಲಸ ಮುಗಿಯುವ ಲಕ್ಷಣವಂತೂ ಕಾಣುತ್ತಿಲ್ಲ ಎಂಬುದು ಸ್ಥಳೀಯರ ಅಸಮಾಧಾನ.ಎಲ್ಲಿಂದ ಎಲ್ಲಿಯವರೆಗೆ ಕಾಮಗಾರಿ?: ರೀಚ್ 4ಎ ಹಂತದ ಮೆಟ್ರೊ ಕಾಮಗಾರಿ ಆರ್‌ವಿ ರಸ್ತೆಯಿಂದ ಅಂದರೆ ಸಂಗಮ ವೃತ್ತದಿಂದ ಪುಟ್ಟೇನಹಳ್ಳಿಯವರೆಗೆ (ಮೂರು ಕಿ.ಮೀ.) ಪ್ರಗತಿಯಲ್ಲಿದೆ. ಆದರೆ, ಕಾಮಗಾರಿಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಲಾಗಿರುವುದರಿಂದ ಪಾದಚಾರಿ ಮಾರ್ಗವೇ ಕಾಣುವುದಿಲ್ಲ. ಇದರೊಂದಿಗೆ ಪಾಲಿಕೆಯು ಸಹ ಒಳಚರಂಡಿ ಕಾಮಗಾರಿಯ ಸಲುವಾಗಿ ಅಲ್ಲಲ್ಲಿ ರಸ್ತೆಗಳನ್ನು ಅಗೆದಿರುವುದರಿಂದ ಒಂದೆಡೆ ಪಾದಚಾರಿಗಳಿಗೆ ಓಡಾಡಲು ಸ್ಥಳವಿಲ್ಲ, ಇನ್ನೊಂದೆಡೆ ಈ ರಸ್ತೆಯಲ್ಲಿ ವಾಹನಗಳು ಸಾಗಿದಂತೆ ದೂಳು ಮುಖಕ್ಕೆ ರಾಚುತ್ತದೆ.ಕಾಮಗಾರಿ ಒಂದೇ ಸಮಸ್ಯೆಯೇ?: ಮೇಲ್ನೋಟಕ್ಕೆ ಕಾಮಗಾರಿಯಿಂದಲೇ ಸಮಸ್ಯೆ ಉದ್ಭವಿಸಿದೆ ಅನಿಸಿದರೂ ಆಳವಾಗಿ ಗಮನಿಸಿದರೆ ಸಾರಕ್ಕಿ ಸಿಗ್ನಲ್‌ನಲ್ಲಿ ಇರುವ ಮಾರುಕಟ್ಟೆಯ ಅವ್ಯವಸ್ಥೆಯಿಂದಲೂ ಸಮಸ್ಯೆ ಇನ್ನಷ್ಟು ತೀವ್ರಗೊಂಡಿದೆ. ರಸ್ತೆ ಬದಿಯನ್ನೇ ಮಾರುಕಟ್ಟೆಯನ್ನಾಗಿ ಮಾಡಿಕೊಂಡಿರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ತರಕಾರಿ, ಹೂವು- ಹಣ್ಣು, ತೆಂಗಿನಕಾಯಿ ಮಾರಾಟಗಾರರು ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿದ್ದಾರೆ. ಮಾರುಕಟ್ಟೆಯ ಕಸವನ್ನು ಎಗ್ಗಿಲ್ಲದೇ ಮೆಟ್ರೊ ಕಾಮಗಾರಿಯ ತ್ಯಾಜ್ಯದ ಜತೆಯಲ್ಲಿಯೇ ಸೇರಿಸಿ ಸುರಿದಿರುವುದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ಎದುರಾಗಿದೆ.ಇದಲ್ಲದೇ ಈ ಭಾಗದಲ್ಲಿ ಬನಶಂಕರಿ ದೇವಾಲಯವಿದ್ದು, ಪ್ರತಿ ಮಂಗಳವಾರ ಹಾಗೂ ಶುಕ್ರವಾರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚು. ಈ ದಿನಗಳಲ್ಲಿ ವಿಪರೀತ ವಾಹನ ದಟ್ಟಣೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ನಿಧಾನಗತಿಯಲ್ಲಿ ಸಾಗುವ ಸಂಚಾರ ದಟ್ಟಣೆಯಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ವಿವಿಧ ವಲಯಕ್ಕೆ ಸೇರಿದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಮೂಲಸೌಕರ್ಯದಲ್ಲೂ ಹಿಂದುಳಿದಿದೆ!: ನಾಲ್ಕು ವರ್ಷಗಳ ಹಿಂದೆ ಕನಕಪುರ ರಸ್ತೆಯ ಅಜುಬಾಜಿನಲ್ಲಿರುವ ಸಾರಕ್ಕಿ, ಜರಗನಹಳ್ಳಿ, ಯಲಚೇನಹಳ್ಳಿ, ಕೋಣನಕುಂಟೆ ಕ್ರಾಸ್ ಸೇರಿದಂತೆ ಹಲವು ಸ್ಥಳಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ಆದರೂ ಮೂಲಸೌಕರ್ಯಗಳಾದ ರಸ್ತೆ ಹಾಗೂ ಒಳಚರಂಡಿಯ ವ್ಯವಸ್ಥೆ ಸಮರ್ಪಕವಾಗಿಲ್ಲದೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇನ್ನು ಬೇಸಿಗೆ ಬಂತೆಂದರೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುತ್ತದೆ. ಈ ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಸದ ಸಮಸ್ಯೆಗೆ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಪಾಲಿಕೆಯ ಸದಸ್ಯರು ಮಾತ್ರ ಮೌನ ವಹಿಸಿದ್ದಾರೆ ಎಂಬುದು ಸ್ಥಳೀಯರ ಆಕ್ರೋಶ.ತೊಂದರೆ ಇಲ್ಲ: `ಮೆಟ್ರೊ' ಕಾಮಗಾರಿಯಿಂದ ವಾಹನ ದಟ್ಟಣೆ ಹೆಚ್ಚಿರುವುದು ನಿಜ. ಉಳಿದಂತೆ ಯಾವುದೇ ತೊಂದರೆಯಾಗಿಲ್ಲ. ಚರಂಡಿ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ಕಸದ ಸಮಸ್ಯೆ, ನೀರಿನ ಅಭಾವಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಪಾಲಿಕೆ ಬದ್ಧವಾಗಿದೆ' ಎಂದು ಯಲಚೇನಹಳ್ಳಿ ವಾರ್ಡ್ ಸದಸ್ಯ ಒ.ಮಂಜುನಾಥ `ಪ್ರಜಾವಾಣಿ'ಗೆ ತಿಳಿಸಿದರು.

ಮೂಲಸೌಕರ್ಯಕ್ಕೆ ಒತ್ತು ಭರವಸೆ

`ಮೆಟ್ರೊ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ಮೂಲಸೌಕರ್ಯಗಳ ನಿರ್ವಹಣೆಯ ಜವಾಬ್ದಾರಿ ಬಿಎಂಆರ್‌ಸಿ ಮೇಲಿದೆ. ಇನ್ನು, ಈ ಭಾಗದಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವತ್ತ ಪಾಲಿಕೆಯು ಹೆಚ್ಚಿನ ಕ್ರಮ ಕೈಗೊಳ್ಳಲಿದೆ. ಕಾಮಗಾರಿ ಪೂರ್ಣಗೊಂಡ ನಂತರ ಈ ಭಾಗದ ಮೂಲಸೌಕರ್ಯದ ಸಮಸ್ಯೆಗಳಿಗೆ ಪರ್ಯಾಯ ಪರಿಹಾರವನ್ನು ಹುಡುಕುವತ್ತ ಸಂಬಂಧಪಟ್ಟ ಪಾಲಿಕೆ ಸದಸ್ಯರೊಂದಿಗೆ ಚರ್ಚೆ ನಡೆಸುತ್ತೇನೆ'

- ಡಿ.ವೆಂಕಟೇಶಮೂರ್ತಿ, ಮೇಯರ್

`ತಿಂಗಳಿಗೊಮ್ಮೆ ಆಸ್ಪತ್ರೆಗೆ'

`ಮೂರು ವರ್ಷಗಳಿಂದ ಈ ವೆುಟ್ರೊ ಕಾಮಗಾರಿ ನಡೆಯುತ್ತಲೇ ಇದೆ. ಈ ಭಾಗದಲ್ಲಿ ಯಾವಾಗ ಮೆಟ್ರೊ ಓಡುತ್ತದೋ ಗೊತ್ತಿಲ್ಲ. ಆದರೆ, ನಾವಂತೂ ದೂಳಿನಿಂದಾಗಿ ತಿಂಗಳಿಗೊಮ್ಮೆ ಆಸ್ಪತ್ರೆಗಂತೂ ಓಡಾಡುತ್ತಿದ್ದೇವೆ. ಇರುವ ಕಿರಿದಾದ ಜಾಗದಲ್ಲಿಯೇ ವಾಹನ ಮತ್ತು ಪಾದಚಾರಿಗಳು ಒಟ್ಟಿಗೆ ಸಂಚರಿಸುತ್ತಿದ್ದಾರೆ. ನಿತ್ಯ ಉಂಟಾಗುವ ಸಂಚಾರ ದಟ್ಟಣೆ ನೋಡಿ ನಗರವೇ ಸಾಕು ಎಂದು ರೋಸಿ ಹೋಗಿದ್ದೇವೆ'.

- ಶಾಂತಪ್ಪ, ಜರಗನಹಳ್ಳಿ ನಿವಾಸಿ

`ಪ್ರಯಾಣ ವಾಕರಿಕೆ'

`ನನ್ನ ಮೂಲ ಊರು ಕನಕಪುರ. ಈ ರಸ್ತೆಯ ಮೂಲಕವೇ ಅಲ್ಲಿಗೆ ಪ್ರಯಾಣ ಬೆಳೆಸಬೇಕಾಗುತ್ತದೆ. ಸದಾ ಸಂಚಾರ ದಟ್ಟಣೆಯಿರುವ ಈ ರಸ್ತೆಯಲ್ಲಿ ಪ್ರಯಾಣವೆಂದರೆ ವಾಕರಿಕೆ ಬರುವಂತಾಗುತ್ತದೆ. ಒಂದು ಕಿ.ಮೀ. ಕ್ರಮಿಸಲು ಕೆಲವೊಮ್ಮೆ ಒಂದು ಗಂಟೆಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿರುವ ಉದಾಹರಣೆಯಿದೆ. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಇಲ್ಲವಾದರೆ ಪರ್ಯಾಯ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಬೇಕು'.

    -ಹರೀಶ್, ಹನುಮಂತನಗರದ ನಿವಾಸಿ

`ವ್ಯಾಪಾರಕ್ಕೆ ತೊಂದರೆ'

`ತಳ್ಳುಗಾಡಿಯಲ್ಲಿ ಹಣ್ಣುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತೇನೆ. ಮೊದಲೆಲ್ಲ ವಹಿವಾಟು ಉತ್ತಮವಾಗಿತ್ತು. ಆದರೆ, ಈಗ ಕಾಮಗಾರಿಯಿಂದ ಉಂಟಾದ ದೂಳಿನಿಂದಾಗಿ ಹಣ್ಣುಗಳನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಇದರಿಂದ ತುಂಬಾ ತೊಂದರೆಯಾಗಿದೆ. ಅಂಗವಿಕಲಳಾಗಿದ್ದರಿಂದ ಬೇರೆ ಸ್ಥಳದಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ'.

- ಶಾರದಮ್ಮ , ಹಣ್ಣಿನ ವ್ಯಾಪಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry