ಕನಕಪುರ ರಸ್ತೆ: ವಾಹನ ಸವಾರರಿಗೆ ಕ್ಷಣ ಕ್ಷಣ ದುಃಸ್ವಪ್ನ

7

ಕನಕಪುರ ರಸ್ತೆ: ವಾಹನ ಸವಾರರಿಗೆ ಕ್ಷಣ ಕ್ಷಣ ದುಃಸ್ವಪ್ನ

Published:
Updated:

ಬೆಂಗಳೂರು: ದೂಳು ತುಂಬಿದ ವಾತಾವರಣ, ಡಾಂಬರು ಕಾಣದ ಹಾದಿ, ರಸ್ತೆಯ ಮೇಲೆ ಮಲಗಿರುವ ದೊಡ್ಡ ಪೈಪ್‌ಗಳು, ಉಕ್ಕಿ ಹರಿಯುವ ಚರಂಡಿ, ಇಂಚಿಂಚು ಸರಿಯಲೂ ಏದುಸಿರು ಬಿಡುವ ವಾಹನಗಳು, ಮೈಮೇಲೆ ಬಿದ್ದೇ ಬಿಡುತ್ತವೆ ಎಂಬಂತಿರುವ ಬಿಎಂಆರ್‌ಸಿಎಲ್‌ನ ಕಬ್ಬಿಣದ ತಡೆಗೋಡೆಗಳು. ಬನಶಂಕರಿ ರಸ್ತೆಯಿಂದ ಕನಕಪುರ ಮಾರ್ಗವಾಗಿ ಹೊರಟ ಪ್ರಯಾಣಿಕರು, ಸ್ಥಳೀಯರು ಅನುಭವಿಸುವ ಸಂಕಷ್ಟಗಳು ಒಂದರೆಡಲ್ಲ.ರಾಜಧಾನಿಯಿಂದ ಕೊಳ್ಳೇಗಾಲ, ಕನಕಪುರ, ಸಾತನೂರಿಗೆ ಸಂಪರ್ಕ ಕಲ್ಪಿಸುವ ಹಾಗೂ ಸಂಗಮ, ಮೇಕೆದಾಟು, ಮುತ್ತತ್ತಿ, ತಲಕಾಡಿಗೆ ಪ್ರವಾಸಿಗರನ್ನು ಸ್ವಾಗತಿಸುವ ಕನಕಪುರ ರಸ್ತೆಯನ್ನು ಹೊರತುಪಡಿಸಿದರೆ ಪರ್ಯಾಯ ಮಾರ್ಗಗಳೇ ಇಲ್ಲ.ನೂರಾರು ಬಸ್‌ಗಳು, ಭಾರಿ ಗಾತ್ರದ ವಾಹನಗಳು ಇಲ್ಲಿ ನಿತ್ಯ ಓಡಾಡುತ್ತವೆ. ವಿದ್ಯಾರ್ಥಿಗಳು, ವೃತ್ತಿಪರರು, ವ್ಯಾಪಾರಿಗಳು ಸೇರಿದಂತೆ ರಾಜಧಾನಿಗೆ ನಿತ್ಯ ಪಯಣಿಸುವ ಅನೇಕರಿಗೆ ಇದು ಏಕೈಕ ‘ನರನಾಡಿ’. ಕಳೆದ ವರ್ಷ ಜೂನ್ ವೇಳೆಗೆ ಆರಂಭವಾದ ಸಂಗಮ್ ವೃತ್ತದಿಂದ ಕೋಣನಕುಂಟೆ ಕ್ರಾಸ್‌ವರೆಗಿನ 3.91 ಕಿ.ಮೀ. ಉದ್ದದ ರೀಚ್ 4 ಎ ಹೆಸರಿನ ಈ ಕಾಮಗಾರಿ 26 ತಿಂಗಳ ಅವಧಿಯೊಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಒಂದೆರಡು ಕಡೆ ಕಂಬಗಳು ಎದ್ದು ನಿಂತದ್ದು ಹೊರತುಪಡಿಸಿದರೆ ಕಳೆದ ಆರು ತಿಂಗಳಿನಿಂದ ಯಾವುದೇ ಪ್ರಗತಿ ಸಾಧಿಸಿಲ್ಲ.ಸಾರಕ್ಕಿ ಜಂಕ್ಷನ್‌ನಿಂದ ಜರಗನಹಳ್ಳಿ ವೃತ್ತದವರೆಗೆ ರಸ್ತೆ ತೀರಾ ಇಕ್ಕಟ್ಟಾಗಿದ್ದು ಮೆಟ್ರೊ ಕಾಮಗಾರಿ ಆರಂಭವಾದಾಗಿನಿಂದ ಸಾರಕ್ಕಿ, ಜೆ.ಪಿ.ನಗರ 6ನೇ ಹಂತ, ಕುಮಾರಸ್ವಾಮಿ ಲೇಔಟ್, ಹಾಗೂ ರಿಂಗ್‌ರಸ್ತೆಗೆ ತೆರಳುವ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಪೀಕ್ ಅವರ್‌ಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಂತೆ ಭಾಸವಾಗುತ್ತದೆ. ಈಗಾಗಲೇ ಮಂದಗತಿಯ ಕಾಮಗಾರಿಯಿಂದ ಕಂಗೆಟ್ಟಿರುವ ಪ್ರಯಾಣಿಕರಿಗೆ ಜಲಮಂಡಲಿ ಮತ್ತೊಂದು ‘ಶಾಕ್’ ನೀಡಿದೆ. ಬನಶಂಕರಿ ದೇವಸ್ಥಾನಕ್ಕೆ ಅನತಿ ದೂರದಲ್ಲಿ ಜಲಮಂಡಳಿ ಪೈಪ್ ಅಳವಡಿಸಲು ಕಳೆದ ಎರಡು ತಿಂಗಳನಿಂದ ಯತ್ನಿಸುತ್ತಿದೆ. ಇದರಿಂದಾಗಿ ರಸ್ತೆಯ ಉದ್ದಕ್ಕೂ ಕೆಸರು ತುಂಬಿದ್ದು ಪಾದಚಾರಿಗಳು ಓಡಾಡಲು ಕೂಡ ತಾಣವಿಲ್ಲ. ಕಾಮಗಾರಿ ಅಪೂರ್ಣವಾಗಿರುವುದರಿಂದ ಅಂಗಡಿ ಮುಂಗಟ್ಟುಗಳ ಎದುರು ಹಾಗೂ ರಸ್ತೆ ಮಧ್ಯೆಯೇ ಬೃಹತ್ ಗಾತ್ರದ ಪೈಪ್‌ಗಳು ಉಳಿದಿವೆ.ನಡೆದಾಡಲೂ ಸಾಧ್ಯವಿಲ್ಲ: ಹಾಗೆಂದು ಪಾದಚಾರಿಗಳು ಕೂಡ ಇಲ್ಲಿ ನೆಮ್ಮದಿಯಾಗಿ ಸಂಚರಿಸಲು ಸಾಧ್ಯವಿಲ್ಲ. ಎಲ್ಲೆಂದರೆ ಅಲ್ಲಿ ಚರಂಡಿಗಳು ಉಕ್ಕಿ ಹರಿದು ಮೂಗು ಮುಚ್ಚಿ ಓಡಾಡುವ ಸ್ಥಿತಿ ಇದೆ. ರಸ್ತೆ ದಾಟಲು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಸರಿಸಿದ್ದರೂ ಅವು ಅಷ್ಟು ಸುರಕ್ಷಿತವಾಗಿಲ್ಲ. ಪಾದಚಾರಿ ಮಾರ್ಗಗಳ ಮೇಲಿನ ಕಲ್ಲು ಹಾಸುಗಳು ಅಯೋಮಯವಾಗಿವೆ.ಅಪಘಾತದ ಭೀತಿ: ಬ್ಯಾರಿಕೇಡ್ ಅಡ್ಡವಾಗಿ ರುವುದರಿಂದ ವಾಹನ ಸವಾರರು ‘ಸರ್ಕಸ್’ ಮಾಡುವ ಸ್ಥಿತಿ ಇದೆ. ರಸ್ತೆ ದಾಟುವ ಜನರು ಕಾಣದೇ ವಾಹನಗಳು ಡಿಕ್ಕಿ ಹೊಡೆದಿವೆ. ರಸ್ತೆಯಲ್ಲಿ ಸಂಚರಿಸುವವರ ಮೇಲೆಯೇ ಬ್ಯಾರಿಕೇಡ್ ಉರುಳಿದ ಉದಾಹರಣೆಗಳಿವೆ. ಸಣ್ಣಪುಟ್ಟ ಕಾರಣಗಳಿಗೆ ಜಖಂ ಆಗುವ ವಾಹನಗಳ ಲೆಕ್ಕವೇ ಸಿಗದು. ಹಾಗೆ ಇಲ್ಲಿ ಅಪಘಾತ ಎಂಬುದು ಸಾಮಾನ್ಯ ಸಂಗತಿಯಾಗಿದೆ’ ಎನ್ನುತ್ತಾರೆ ಖಾಸಗಿ ಕಂಪೆನಿ ಉದ್ಯೋಗಿ ಕೀರ್ತನಾ.ಬಾಗಿಲು ಮುಚ್ಚಿದ ಅಂಗಡಿಗಳು: ರಸ್ತೆಯಲ್ಲಿ ಜನ ಸಂಚಾರ ವಿರಳವಾದಂತೆ ಅನೇಕ ವ್ಯಾಪಾರಿಗಳು ತಮ್ಮ ವ್ಯವಹಾರ ಸ್ಥಗಿತಗೊಳಿಸಿದ್ದಾರೆ. ಅನೇಕರು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿರುವ ಬಗ್ಗೆ ನೆರೆಹೊರೆಯವರು ನೊಂದು ನುಡಿದರು. ‘ಕೇವಲ ಇದು ವ್ಯವಹಾರಕ್ಕೆ ಸಂಬಂಧಿಸಿದ ವಿಚಾರವಲ್ಲ. ಒಂದು ಸ್ಥಳದ ಬಗ್ಗೆ ಭಾವನಾತ್ಮಕ ಸಂಬಂಧ ಗಳಿರುತ್ತವೆ. ಇದೆಲ್ಲಾ ಸರ್ಕಾರಕ್ಕೆ ಅರ್ಥವಾಗು ತ್ತದೆಯೇ’ ಎಂದು ಹೇಳುತ್ತಾರೆ ವ್ಯಾಪಾರಿ ಶ್ರೀಧರ್.ಯು ಟರ್ನ್ ಎಲ್ಲಿ?:  ಕನಕಪುರ ರಸ್ತೆಯಲ್ಲಿ ವಾಹನ ಗಳು ಯು ಟರ್ನ್ ತಗೆದುಕೊಳ್ಳಲು ಬನಶಂಕರಿ ದೇವಸ್ಥಾನ ಅಥವಾ ಜರಗನಹಳ್ಳಿ ಕ್ರಾಸ್‌ವರೆಗೆ ತೆರಳಬೇಕು. ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಶೀಘ್ರವಾಗಿ ಯು ಟರ್ನ್ ಪಡೆಯುವುದು ಕನಸಿನ ಮಾತಾಗಿದೆ. ಕೇವಲ ಯೂಟರ್ನ್‌ಗಾಗಿಯೇ ಅನೇಕ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುತ್ತವೆ.ಆದರೆ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳು ನೀಡುವ ಉತ್ತರವೇ ಬೇರೆ. ‘ವಿವಿಧ ಇಲಾಖೆಗಳು ಬಿಎಂಆರ್‌ಸಿಎಲ್‌ನ ಕಾರ್ಯವೈಖರಿಗಿಂತ ಭಿನ್ನವಾಗಿವೆ. ಮಂದಗತಿಯಲ್ಲಿ ಸಾಗುವ ಅವುಗಳ ಕಾಮಗಾರಿ ಯಿಂದಾಗಿ ಮೆಟ್ರೊ ಕೆಲಸ ನಿರೀಕ್ಷಿತ ಗುರಿ ಸಾಧಿಸಿಲ್ಲ’ ಎಂದು ಬಿಎಂಆರ್‌ಸಿಎಲ್‌ನ ಹೆಸರು ತಿಳಿಸಲು ಬಯಸದ ಅಧಿಕಾರಿಯೊಬ್ಬರು ಹೇಳಿದರು.ಇಷ್ಟಾದರೂ ಅನೇಕರು ಮೆಟ್ರೊ ಕಾಮಗಾರಿಯನ್ನು ಸ್ವಾಗತಿಸುತ್ತಾರೆ. ‘ಕಾಮಗಾರಿ ಒಳ್ಳೆಯದು ಆದರೆ ಜನರು ಅವುಗಳ ಬಗ್ಗೆ ಶಾಪ ಹಾಕಬಾರದು. ಬೇಗ ಬೇಗ ಕೆಲಸ ಮುಗಿದಷ್ಟೂ ಎಲ್ಲರಿಗೂ ಅನುಕೂಲವಾಗುತ್ತದೆ. ನೆಮ್ಮದಿಯಿಂದ ಸಂಚರಿಸುವುದು ಸಾಧ್ಯವಾಗುತ್ತದೆ’ ಎನ್ನುವುದು ವಾಹನ ಸವಾರ ರವಿ ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry