ಕನಕಪ್ಪ, ಪ್ರಣಾಲಿಗೆ ಪ್ರಥಮ ಸ್ಥಾನ

ಬೆಳಗಾವಿ: ಚುಮು ಚುಮು ಚಳಿಯನ್ನೂ ಲೆಕ್ಕಸಿದೇ ‘ದೇಶಕ್ಕಾಗಿ ಓಡಲು’ ಅವರೆಲ್ಲ ಬೆಳಿಗ್ಗೆ ಎದ್ದು ಬಂದಿದ್ದರು. ಓಡುತ್ತಿದ್ದ ಸಾವಿರಾರು ಜನರ ಶೂ ಸದ್ದು ವಾಹನಗಳ ಶಬ್ದವನ್ನು ಕೆಲ ಹೊತ್ತು ಅಡಗಿಸಿತು. ರಸ್ತೆಯುದ್ದಕ್ಕೂ ದಣಿವರಿಯದೇ ಓಡುತ್ತಿದ್ದ ಜನರ ದೃಶ್ಯ ನೋಡುಗರಿಗೂ ಬೆವರಿಳಿಸುತ್ತಿತ್ತು!
ಕಂಟೋನ್ಮೆಂಟ್ ಮಂಡಳಿಯು ‘ಸ್ವಚ್ಛ ಭಾರತ ಅಭಿಯಾನ’ದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ‘ದೇಶಕ್ಕಾಗಿ ಓಡು’ ಮುಕ್ತ ಮಿನಿ ಮ್ಯಾರಥಾನ್ನಲ್ಲಿ ಮಕ್ಕಳು, ವೃದ್ಧರು ಎಂಬ ಭೇದಭಾವವಿಲ್ಲದೇ ಅತ್ಯುತ್ಸಾಹದಿಂದ ಓಡುವ ಮೂಲಕ ಗಮನ ಸೆಳೆದರು.
ನಗರದ ವಿವಿಧೆಡೆಯಿಂದ ಬೆಳಿಗ್ಗೆಯೇ ಕಂಟೋನ್ಮೆಂಟ್ ಮಂಡಳಿಯ ಬಳಿ ಜನಸಾಗರ ಬಂದು ಸೇರಿತ್ತು. ವಿವಿಧ ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳು,ಮ್ಯಾರಥಾನ್ನಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕಂಟೋನ್ಮೆಂಟ್ ಮಂಡಳಿ ಮೈದಾನದಿಂದ ಬೆಳಿಗ್ಗೆ 7.30ಕ್ಕೆ ಮ್ಯಾರಥಾನ್ ಆರಂಭಗೊಂಡಿತು. ಮ್ಯಾರಥಾನ್ಗೆ ಚಾಲನೆ ನೀಡುತ್ತಿದ್ದಂತೆ ಓಡುವವರಿಂದ ಇಡೀ ರಸ್ತೆ ತುಂಬಿ ಹೋಗಿತ್ತು. ಸಂಸದ ಸುರೇಶ ಅಂಗಡಿ, ಎಂಎಲ್ಐಆರ್ಸಿ ಕಮಾಂಡಂಟ್ ಪ್ರವೀಣ ಶಿಂಧೆ ಅವರೂ ಓಡುವ ಮೂಲಕ ಗಮನ ಸೆಳೆದರು.
14 ವರ್ಷದೊಳಗಿನ ಬಾಲಕ– ಬಾಲ ಕಿಯರಿಗೆ ಹಾಗೂ ಹಿರಿಯ ನಾಗರಿಕರಿಗೆ 1.50 ಕಿ.ಮೀ. ದೂರದ ಅಂತರವನ್ನು ನಿಗದಿಗೊಳಿಸಲಾಗಿತ್ತು.
ಕಂಟೋನ್ಮೆಂಟ್ ಮಂಡಳಿಯಿಂದ ಆರಂಭಗೊಂಡು ಅಂಬಾಭವಾನಿ ವೃತ್ತ, ಸೇಂಟ್ ಮೇರಿ ಪ್ರೌಢಶಾಲೆ, ಇಸ್ಲಾಮಿಯಾ ಪ್ರೌಢಶಾಲೆ, ಕಂಟೋನ್ಮೆಂಟ್ ಮಂಡಳಿ ಬಳಿ ಅಂತ್ಯಗೊಂಡಿತು.
5 ಕಿ.ಮೀ. ದೂರದ ಪುರುಷ– ಮಹಿಳೆಯರ ವಿಭಾಗದ ಸ್ಪರ್ಧಿಗಳು ಕಂಟೋನ್ಮೆಂಟ್ ಮಂಡಳಿಯಿಂದ ಓಟ ಆರಂಭಿಸಿ ಹೈಸ್ಟ್ರೀಟ್, ಸಂಚಯನಿ ವೃತ್ತ, ಸಂಭಾಜಿ ವೃತ್ತ, ಕಾಲೇಜು ರಸ್ತೆ, ಚನ್ನಮ್ಮ ವೃತ್ತ, ಕ್ಲಬ್ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಸೇಂಟ್ ಝೇವಿಯರ್ ಪ್ರೌಢಶಾಲೆ ಮೂಲಕ ಸಾಗಿ ಕಂಟೋನ್ಮೆಂಟ್ ಮಂಡಳಿಯಲ್ಲಿ ಕೊನೆಗೊಳಿಸಿದರು.
10 ಕಿ.ಮೀ ದೂರದ ಪುರುಷ– ಮಹಿಳಾ ವಿಭಾಗದ ಸ್ಪರ್ಧಿಗಳು ಕಂಟೋನ್ಮೆಂಟ್ ಮಂಡಳಿಯಿಂದ ಓಟ ಆರಂಭಿಸಿ ಹೈಸ್ಟ್ರೀಟ್, ಸಂಚಯನಿ ವೃತ್ತ, ಸಂಭಾಜಿ ವೃತ್ತ, ಕಾಲೇಜು ರಸ್ತೆ, ಕ್ಲಬ್ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಲಕ್ಷ್ಮಿ ಟೇಕಡಿ, ಕೋರೆ ವೃತ್ತ, ರಾಯಗಡ, ನಾನಾವಾಡಿ, ಕಾಂಗ್ರೆಸ್ ರಸ್ತೆ, ಗ್ಲೋಬ್ ಟಾಕೀಸ್ ಮೂಲಕ ಕಂಟೋನ್ಮೆಂಟ್ ಮಂಡಳಿಯಲ್ಲಿ ಕೊನೆಗೊಳಿಸಿದರು.
ಫಲಿತಾಂಶಗಳು:
ಪುರುಷರ ವಿಭಾಗ (10 ಕಿ.ಮೀ.): ಗದಗದ ಸರ್ಕಾರಿ ಕಾಲೇಜಿನ ಕನಕಪ್ಪ ಡೋಣಿ ಪ್ರಥಮ, ವಂಟಮೂರಿಯ ಅಶೋಕ ಕಾರ್ಲಗೋಟ–ದ್ವಿತೀಯ ಎಂಎಲ್ಐಆರ್ಸಿಯ ರಾಮಕೃಷ್ಣ ಸಾಳುಂಕೆ–ತೃತೀಯ ಸ್ಥಾನ ಪಡೆದರು.
ಮಹಿಳೆಯರ ವಿಭಾಗ: ಮುತಗಾದ ಪ್ರಣಾಲಿ ಜಾಧವ ಪ್ರಥಮ, ಬೆಳಗಾವಿಯ ಸುಜಾತಾ ಸುತಾರ ದ್ವಿತೀಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿವೇದಿತಾ ಸಾಂಬ್ರೇಕರ ತೃತೀಯ
5 ಕಿ.ಮೀ. ಪುರುಷರ ವಿಭಾಗ: ಮಹೇಶ ಚಿಕ್ಕಲಗುಡ ಪ್ರಥಮ, ಸಂದೀಪ ಯಾದವ–ದ್ವಿತೀಯ, ಸಂಜಯ ಜರೆಂಡೆ ತೃತೀಯ; ಮಹಿಳೆಯರ ವಿಭಾಗ: ರೋಹಿಣಿ ಪಾಟೀಲ ಪ್ರಥಮ, ಜ್ಯೋತಿ ಕಾಲೇಜಿನ ಕುಂತಿಕಾ ಪವಾರ ದ್ವಿತೀಯ, ಮಯೂರಿ ಪಿಂಗಟ್ ತೃತೀಯ 14 ವರ್ಷದೊಳಗಿನ ಬಾಲಕರ ವಿಭಾಗ (1.50 ಕಿ.ಮೀ): ಸೇಂಟ್ ಪಾಲ್ ಶಾಲೆಯ ತುಷಾರ ಬೆನಕೆ ಪ್ರಥಮ, ಮಿಲಿಟರಿ ಶಾಲೆಯ ರಾಧಾಕೃಷ್ಣ ಶೈಲೇಶ ಕುಮಾರ ದ್ವಿತೀಯ, ಮಿಲಿಟರಿ ಶಾಲೆಯ ಹರ್ಷಿತಾ ಕುಮಾರ ವರ್ಮಾ ತೃತೀಯ
ಬಾಲಕಿಯರ ವಿಭಾಗ: ಉಚಗಾಂವ ಶಾಲೆಯ ನಮೃತಾ ಹಾವಲೆ ಪ್ರಥಮ, ಕಡೋಲಿಯ ಪ್ರತಿಮಾ ಪ್ರಕಾಶ ಮಾಯಣ್ಣಾಚೆ ದ್ವಿತೀಯ, ಯಮಕನಮರಡಿಯ ಅಕ್ಷತಾ ಶಿವಾಜಿ ಸುಜಿ ತೃತೀಯ ಸ್ಥಾನ ಪಡೆದರು. ಹಿರಿಯ ನಾಗರಿಕರ ವಿಭಾಗ (1.50 ಕಿ.ಮೀ): ಚನ್ನಮ್ಮನಗರದ ಸುರೇಶ ದೇವರಮನಿ ಪ್ರಥಮ, ಹಿಂಡಲ ಗಾದ ದೊಂಡಿರಾಮ ಶಿಂಧೆ ದ್ವಿತೀಯ, ಹಿಂಡಲಗಾದ ಫಕಿರಾ ದೇವಗೇಕರ ಅವರು ತೃತೀಯ ಸ್ಥಾನ ಪಡೆದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.