`ಕನಕರ ಕೀರ್ತನೆ ಸಮಾಜಮುಖಿ ಬದುಕಿಗೆ ಪ್ರೇರಕ'

6

`ಕನಕರ ಕೀರ್ತನೆ ಸಮಾಜಮುಖಿ ಬದುಕಿಗೆ ಪ್ರೇರಕ'

Published:
Updated:

ತುಮಕೂರು: ಸಮಾಜದ ಸ್ವಾಸ್ಥ್ಯ ಕಾಪಾಡುವಂಥ ಕೀರ್ತನೆ ರಚಿಸಿ, 16ನೇ ಶತಮಾನದಲ್ಲಿ ಕನಕದಾಸರು ಭಕ್ತಿ ಸಾರ ಹರಡಿದ್ದು ವಿಭಿನ್ನತೆಯಿಂದ ಕೂಡಿದೆ ಎಂದು ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್ ಇಲ್ಲಿ ಸೋಮವಾರ ಅಭಿಪ್ರಾಯಪಟ್ಟರು.ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಳಿದಾಸ ವಿದ್ಯಾವರ್ಧಕ ಸಂಘ ಹಾಗೂ ಜಿಲ್ಲಾ ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸರ 525ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಪಾಲಿಗೆ ಕನಕದಾಸರ ಕೀರ್ತನೆಗಳು ಪರಿಣಾಮಕಾರಿಯಾಗಿದ್ದವು. ಭಕ್ತಿಪಂಥಕ್ಕೆ ಮಾತ್ರ ಅವರ ಕೀರ್ತನೆಗಳು ವಿಂಗಡಣೆಯಾಗಿರಲಿಲ್ಲ. ಸಮಾಜದ ಯಾತನಮಯ ಬದುಕನ್ನು ವಿವರಿಸುವಷ್ಟರ ಮಟ್ಟಿಗೆ ಇದ್ದವು. ಜಾತಿ ಮತಗಳನ್ನು ಬಿಟ್ಟು ಮಾನವ ಕುಲದ ಒಳಿತಿಗಾಗಿ ನಮ್ಮ ನಡೆ ಎಂಬುದನ್ನು ಅವರ ಕೀರ್ತನೆಯ ಪ್ರತಿಯೊಂದು ಸಾಲು ವಿವರಿಸುತ್ತವೆ ಎಂದು ಸ್ಮರಿಸಿದರು.ಉಪನ್ಯಾಸಕ ಸುರೇಶ್ ನಾಗಲಮಡಕೆ ಉಪನ್ಯಾಸ ನೀಡಿ, ಸಮಕಾಲೀನ ಸಂದರ್ಭದಲ್ಲಿ ಅವರನ್ನು ಹೇಗೆ ಗ್ರಹಿಸಿಕೊಳ್ಳುತ್ತೇವೆ ಎಂಬುದು ಪ್ರಧಾನವಾಗುತ್ತದೆ. 12ನೇ ಶತಮಾನದಲ್ಲಿ ವಚನಕ್ರಾಂತಿ ಒಂದು ಭಾಗವಾದರೆ, 16ನೇ ಶತಮಾನದ ಕೀರ್ತನೆಗಳ ವೈಶಿಷ್ಟ್ಯ ಸಮಾಜಕ್ಕೆ ಪ್ರೇರಕ ಶಕ್ತಿಯಾಗಿತ್ತು ಎಂದು ಹೇಳಿದರು.ನಿಕೇತ್‌ರಾಜ್ ಉಪನ್ಯಾಸ ನೀಡಿದರು. ಡಾ.ಸಿ.ಗುರುಮೂರ್ತಿ, ಪ್ರೊ.ಎಚ್.ವಿ.ವೀರಭದ್ರಯ್ಯ, ಕದರಮ್ಮ, ಸಿ.ಪಿ.ವಿಶ್ವನಾಥ್, ಎನ್.ಟಿ.ಶಿವಣ್ಣ ಅವರಿಗೆ ಜಿಲ್ಲಾ ಕನಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ದೊಡ್ಡಪ್ಪ, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್.ರಂಗಸ್ವಾಮಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು, ಶಿವಮೂರ್ತಿ ಇತರರು ಉಪಸ್ಥಿತರಿದ್ದರು. ಮುದ್ದುಕುಮಾರ್ ಸ್ವಾಗತಿಸಿ, ಉಪನ್ಯಾಸಕ ಕೃಷ್ಣಪ್ಪ ನಿರೂಪಿಸಿದರು.ಗಮನ ಸೆಳೆದ ಕಲಾ ತಂಡ

ಆಸಕ್ತಿ ಕೆರಳಿಸುವ ಪಾವಗಡ ಶಾಲಾ ಮಕ್ಕಳ ಚಕ್ಕ ಭಜನೆ, ಮನಸೆಳೆಯುವ ಗೊರವರ ಕುಣಿತ, ದಾರಿಯಲ್ಲಿ ತತ್ವಪದ ಹೇಳಿ ಸಾಗುವ ಶೈಲಿ, ಡೊಳ್ಳು ಕುಣಿತದ ಆವೇಶ, ಎಲ್ಲರ ಕೇಂದ್ರೀಕರಿಸಿದ ವೀರಭದ್ರನ ನೃತ್ಯ ಮೆರವಣಿಗೆಗೆ ಮೆರುಗು ನೀಡುತ್ತಿತ್ತು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳು ಕನಕದಾಸರ ಕೀರ್ತನೆಗಳ ಭಿತ್ತಿಪತ್ರ ಹಿಡಿದು ಸಾಗಿದಂತೂ ವಚನ ಸಾರವನ್ನು ಬಿಂಬಿಸುತ್ತಿತ್ತು.ವ್ಯಾಸ ರಾಜರ ಆಸ್ಥಾನದಲ್ಲಿದ್ದ ಕನಕದಾಸರ ವ್ಯಕ್ತಿತ್ವವನ್ನು ಸಾರುವ ಸಂಯಮಶೀಲತೆ, ಕೀರ್ತನೆಗಳನ್ನು ಹೇಳುತ್ತಾ ಸಾಗುವ ಶೈಲಿ, ಕುದುರೆ ಮೇಲೆ ಕುಳಿತ ಘನಗಂಭೀರತೆಯ ಸಂಗೊಳ್ಳಿ ರಾಯಣ್ಣ ಸ್ತಬ್ಧ ಚಿತ್ರಗಳು ಜಯಂತಿಗೆ ಕಳೆ ಕಟ್ಟಿದ್ದವು. ಚರ್ಮ ವಾದ್ಯದ ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದ ಯುವಜನರ ಉತ್ಸಾಹದ ಮೇರೆ ಮೀರಿತ್ತು.ಕಾಳಿದಾಸ ಪ್ರೌಢಶಾಲೆ ಎನ್‌ಸಿಸಿ, ಎನ್‌ಎಸ್‌ಎಸ್ ವಿಭಾಗದ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಸಾಗಿದ್ದು ಮೆರವಣಿಗೆಗೆ ಶಿಸ್ತು ತಂದುಕೊಟ್ಟಿತ್ತು. ವರ್ಣ ರಂಜಿತ ವಸ್ತ್ರಗಳೊಂದಿಗೆ ಸೋಮನ ಕುಣಿತ ಮೆರವಣಿಗೆಯಲ್ಲಿ ಸಾಗಿ ಬಂತು. ಕನಕದಾಸರ ದೊಡ್ಡ ಭಾವಚಿತ್ರಕ್ಕೆ ಸಿಂಗರಿಸಿದ ಪುಷ್ಪಾಲಂಕಾರ ವಿಶೇಷವಾಗಿತ್ತು.ಹತ್ತಾರು ಕಲಾತಂಡ, ಕಾಳಿದಾಸ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಬೋಧಕವರ್ಗ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಜನರು ಮೆರವಣಿಗೆಯಲ್ಲಿ ಸಾಗಿದ್ದು ಗಮನ ಸೆಳೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಆರ್.ಕೆ.ರಾಜು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry