ಶನಿವಾರ, ಮೇ 8, 2021
25 °C

ಕನಕೂರಿನ ಉದ್ಯೋಗ ಖಾತ್ರಿ ಯಶೋಗಾಥೆ

ಇ.ಎಸ್.ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಕನಕೂರಿನ ಉದ್ಯೋಗ ಖಾತ್ರಿ ಯಶೋಗಾಥೆ

ಉದ್ಯೋಗ ಖಾತ್ರಿ ಯೋಜ­ನೆಯ ಯಶಸ್ಸಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆ­­ದಿರುವ ಗ್ರಾಮ ಪಂಚಾಯಿತಿ ಕನಕೂರು. ಧಾರವಾಡ ತಾಲ್ಲೂಕಿನ ವ್ಯಾಪ್ತಿ­ಯಲ್ಲಿರುವ ಈ ಗ್ರಾಮ ಪಂಚಾ­ಯಿತಿಯ ಯಶಸ್ಸಿನ ಹಿಂದೆ ಪಿಡಿಒ ಚಂದ್ರು ವಿ. ಪೂಜಾರ ಅವರ ಶ್ರಮವಿದೆ. ಹಾಗೆಯೇ ಗ್ರಾಮ ಪಂಚಾಯಿತಿ ಸದಸ್ಯರ ಒಳಿತಿಗೆ ಸಹಾಯ ಮಾಡುವ ಮನೋಭಾವವೂ ಇದೆ.

ಎಪ್ಪತ್ತರ ಆಸುಪಾಸಿನ ವಯೋವೃದ್ಧೆ­ಯೊ­ಬ್ಬರು ತಲೆ ಮೇಲೆ ಸೆರಗು ಹೊದ್ದು ಕನಕೂರಿನ ಗ್ರಾಮ ಪಂಚಾಯಿತಿ ಕಚೇರಿಯ ಮೆಟ್ಟಿಲು­ಗಳನ್ನು ಮೆಲ್ಲಗೆ ಹತ್ತುತ್ತಾ ಪಂಚಾಯಿತಿ ಅಭಿವೃದ್ಧಿ ಇಲಾಖೆ ಅಧಿಕಾರಿ ಕೊಠಡಿಯೊಳಗೆ ಬಂದು ಕೂತರು. ಅವರು ಗ್ರಾಮ­ ಪಂಚಾ­ಯಿತಿಯ ಯಾವುದೋ ಸವಲತ್ತುಗಳನ್ನು ಕೇಳಲು ಬಂದವರಂತೆ ಕಂಡರು. ‘ಬಾಳ ಚಲೋ ಅಪ್ಪ ಇದಾನ ಪಿಡಿಒ. ನನ್ನ ಮೂರು ಮಕ್ಕಳು ಉದ್ಯೋಗ ಖಾತ್ರಿ ಕೆಲಸಕ್ಕ ಹೋಕಾರ. ಕೆಲವೊಮ್ಮೆ ಕೆಲಸಕ್ಕೆ ಹೋಗ್ದೆ ಪಗಾರ ತಗೊಂಡಾರ’ ಎಂದು ಮುಗ್ದ ವೃದ್ಧೆ ಹೇಳುತ್ತಲೇ ಇದ್ದರು. ಆ ವೃದ್ಧೆ ಅದೇ ಗ್ರಾಮ ಪಂಚಾಯಿತಿಯ ಸದಸ್ಯೆ. ಅವರ ಹೆಸರು ಮರಿಯವ್ವ.ಮರಿಯವ್ವ ಅವರಂತೆಯೇ ಈ ಗ್ರಾಮದಲ್ಲಿ ಕೆಲವು ಹಿರಿಯ ಜೀವಗಳು ಸದಸ್ಯರಾಗಿದ್ದಾರೆ. ಎಲ್ಲ­ರಿಗೂ ಇಲ್ಲಿನ ಪಿಡಿಒ ಅಚ್ಚುಮೆಚ್ಚಿನ ಅಧಿ­ಕಾರಿ. ತಮ್ಮ ಸಮಸ್ಯೆ, ಊರಿನ ಸಮಸ್ಯೆ ಏನೇ ಇರಲಿ ಇವರು ಪಿಡಿಒ ಬಳಿಯೇ ಬಂದು ಹೇಳಿ­ಕೊಳ್ಳು­ತ್ತಾರೆ ಹಾಗೂ ಸಲಹೆ ಕೇಳುತ್ತಾರೆ. ಅವರೂ ಹಾಗೆಯೇ. ಅಷ್ಟೇ ತಾಳ್ಮೆಯಿಂದ ಅವ­ರಿಗೆ ಅರ್ಥವಾಗುವಂತೆ ತಿಳಿ ಹೇಳುತ್ತಾರೆ. 2010ರಲ್ಲಿ ಪಿಡಿಒ ಹುದ್ದೆಗೆ ಸೇರಿದ ಕೆಲವೇ ತಿಂಗಳುಗಳಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಅವರೇ ಚಂದ್ರು ವಿ.ಪೂಜಾರ.ಚಂದ್ರು ಅವರಿಗೆ ಸರ್ಕಾರಿ ಹುದ್ದೆ ಹೊಸತಲ್ಲ. 2002ರಿಂದ ಅವರು ಶಿವಮೊಗ್ಗ ಸಶಸ್ತ್ರ ಮೀಸಲು­ಪಡೆ, ನಕ್ಸಲ್‌ ನಿಗ್ರಹ ಪಡೆ, ಧಾರವಾಡ ನಾಗರಿಕ ಪೊಲೀಸ್‌ ಸೇರಿದಂತೆ ಕೆಲ ಕಾಲ ಬಿ.ಎಸ್‌.­ಯಡಿಯೂರಪ್ಪ (ಉಪ ಮುಖ್ಯಮಂತ್ರಿ ಆಗುವ ಮೊದಲು) ಅವರಿಗೆ ಗನ್‌ಮ್ಯಾನ್‌ ಆಗಿಯೂ ಸೇವೆ ಸಲ್ಲಿಸಿದವರು. ಹಳ್ಳಿಗಳ ಕುರಿತ ಅಪಾರ ಕಾಳಜಿ, ಹೊಸತೇನಾದರೂ ಮಾಡ­ಬೇಕೆಂಬ ಅವರ ಉತ್ಸಾಹದಿಂದಲೇ ಪಿಡಿಒ ಪರೀಕ್ಷೆ ಬರೆದು ಆಯ್ಕೆಯಾದವರು. ಆ ಮೂಲಕ ಪೊಲೀಸ್‌ನಿಂದ ಪಿಡಿಒ ಆಗಿ ಅವರು ಬದಲಾದರು.‘ನಾನು ಪೊಲೀಸ್‌ ಕೆಲಸಕ್ಕೆ ಸೇರಿದಾಗ ನನಗೆ 19 ವರ್ಷ. ಸಶಸ್ತ್ರ ಮೀಸಲು ಪಡೆಯಲ್ಲಿ ಮೊದಲ ಹುದ್ದೆ. ಅದರ ಜತೆಯಲ್ಲಿ ಆಗುಂಬೆ­ಯಲ್ಲಿ ಆರು ತಿಂಗಳು ನಕ್ಸಲ್‌ ನಿಗ್ರಹ ಪಡೆಗೂ ಕೆಲಸ ಮಾಡಿದ್ದೇನೆ. ನಂತರ ನಾಗರಿಕ ಪೊಲೀಸ್‌ಗೆ ಸೇರ­ಬೇಕೆಂದು ಮತ್ತೆ ಆಯ್ಕೆ ಬಯ­ಸಿದೆ. ಅದೃ­ಷ್ಟಕ್ಕೆ ಹುಬ್ಬಳ್ಳಿ-ಧಾರವಾಡ ಕಮಿಷ­ನ­ರೇಟ್‌­ನಲ್ಲೇ ಕೆಲಸ ಸಿಕ್ಕಿತು. ನಂತರ ರಾಜ್ಯ ಗುಪ್ತ­ವಾರ್ತೆ­ಯಲ್ಲೂ ಕೆಲಸ ಮಾಡಿದೆ. ಅಲ್ಲಿನ ಕೆಲ ಕಾಲ ಸೇವೆ ಸಲ್ಲಿಸಿದ ನಂತರ ಪಿಡಿಒ ಪರೀಕ್ಷೆ ಬರೆದು, ಮೊದಲ ತಂಡದಲ್ಲಿ ಆಯ್ಕೆಯಾದೆ. ಹೀಗಾಗಿ ಹೊಸ ಹುದ್ದೆ, ಹೊಸ ಹುರುಪು ಹಾಗೂ ಅನೇಕ ಕನಸು­ಗಳ ಜತೆಯಲ್ಲೇ ಕನಕೂರು ಗ್ರಾಮ ಪಂಚಾ­ಯಿತಿಯಲ್ಲಿ ಕೆಲಸ ಆರಂಭಿಸಿದೆ’ ಎಂದು ತಮ್ಮ ವೃತ್ತಿಯ ಕಥೆಯನ್ನು ಚಂದ್ರು ವಿವರಿಸಿದರು. ಕನ­ಕೂರು ಅವರ ಮೊದಲ ವೃತ್ತಿ ಸ್ಥಳ. ಇದರ ಜತೆಗೆ ಯಾದವಾಡ ಎಂಬ ಗ್ರಾಮಪಂಚಾಯಿತಿಯೂ ಹೆಚ್ಚು­ವರಿ­ಯಾಗಿ ಇವರ ಹೆಗಲಿಗೆ ಬಿತ್ತು. ಅದನ್ನೂ ಅಷ್ಟೇ ಅಚ್ಚು­ಕಟ್ಟಾಗಿ ಇವರು ನಿಭಾಯಿಸಿ­ದ್ದರು. ಅದಕ್ಕೆ ಪ್ರತಿ­ಯಾಗಿ ಇಡೀ ದೇಶದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿ­ಯಾದ ಕೆಲವೇ ಕೆಲವು ಗ್ರಾಮ ಪಂಚಾ­ಯಿತಿ­ಯಲ್ಲಿ ಯಾದವಾಡವೂ ಒಂದು ಸೇರಿತು.ಯಾದವಾಡದಲ್ಲಿ ಉದ್ಯೋಗ ಖಾತ್ರಿ ಕುರಿತ ಮಾಹಿತಿ ಸರಿಯಾಗಿಲ್ಲದ ಕಾರಣ ಜನರು ಮಂಗಳೂರು, ಗೋವಾದಂಥ ದೂರುದ ಊರು­ಗಳಿಗೆ ಕೂಲಿಗಾಗಿ ವಲಸೆ ಹೋಗುತ್ತಿದ್ದರು. ಕೆಲಸ ಇದ್ದಷ್ಟು ದಿನ ಕೂಲಿ ಮಾಡಿ ನಂತರ ಊರಿಗೆ ಮರ­ಳುತ್ತಿದ್ದರು. ಆದರೆ ಇರುವ ಸೌಲಭ್ಯವನ್ನು ಬಳ­ಸಿ­­ಕೊಳ್ಳಲು ಚಂದ್ರು ವಿ.ಪೂಜಾರ ಅವರು ಮನವಿ ಮಾಡಿಕೊಂಡರು. ಇನ್ನೂ ಪರಿಣಾಮ­ಕಾರಿ­­ಯಾಗಿ ಅವರಿಗೆ ಅರ್ಥವಾಗುವಂತೆ ಮಾಡಲು ಕಲಾ ಜಾಥಾ ನೆರವಿನಿಂದ ರೂಪಕ­ಗಳ ಮೂಲಕ ಅವರಿಗೆ ಸರ್ಕಾರ ನೀಡುತ್ತಿರುವ ನೂರು ದಿನಗಳ ಉದ್ಯೋಗ ಖಾತ್ರಿ, ಕೆಲಸ ನೀಡದಿದ್ದ ಪಕ್ಷದಲ್ಲಿ ನೀಡುವ ನಿರುದ್ಯೋಗ ಭತ್ಯೆ ಇತ್ಯಾದಿ ಕುರಿತು ಮಾಹಿತಿ ನೀಡಿದ್ದರು. ಅದು ಪರಿ­ಣಾಮ­ಕಾರಿಯಾಗಿ ಕೆಲಸ ಮಾಡಿತು.‘ರಾಷ್ಟ್ರ ಪ್ರಶಸ್ತಿಗಾಗಿ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳು ಅರ್ಜಿ ಹಾಕಲು ಅವಕಾ­ಶ­ವಿತ್ತು. ಆದರೆ ಗ್ರಾಮ ಪಂಚಾ­ಯಿತಿ­ಯಿಂದ ಆ ಪ್ರಶಸ್ತಿಗೆ ಅರ್ಜಿ ಹಾಕಿದವರು ಇಡೀ ರಾಜ್ಯ­ದಿಂದ 11 ಮಂದಿ. ಅದ­ರಲ್ಲಿ ಅಗತ್ಯ ದಾಖಲೆ ಪೂರೈ­ಸಿದ್ದು ಯಾದವಾಡ ಗ್ರಾಮ ಪಂಚಾಯಿತಿಯಿಂದ ನಾನು ಮಾತ್ರ. ಅದರಂತೆ ರಾಜ್ಯ ಸರ್ಕಾರ ಯಾದ­ವಾಡ ಗ್ರಾಮ ಪಂಚಾ­ಯಿತಿಯ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿ­ದರು. ಒಮ್ಮೆ ಉದ್ಯೋಗ ಖಾತ್ರಿಯ ಅನುಷ್ಠಾನ ಕುರಿತು ಸವಿ­ವರ­ವಾಗಿ ವಿವರಿಸಲು ಕರೆದಿದ್ದರು. ನಮ್ಮ ಗ್ರಾಮ ಪಂಚಾಯಿತಿ ಆಯ್ಕೆಯಾಗಿದ್ದು ಅದೃಷ್ಟವೇ ಸರಿ. ಪ್ರಧಾನಮಂತ್ರಿ ಅವರಿಂದ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ನಾನು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕೆಲಸ ಮಾಡಿದ­ವರು ಹೋಗಿದ್ದೆವು. ಅದೊಂದು ಸುವರ್ಣಾ­ವಕಾಶ. ಈ ಮೊದಲು ಇದೇ ಗ್ರಾಮ­ಪಂಚಾ­ಯಿತಿಗೆ ಜಿಲ್ಲಾ ಪ್ರಶಸ್ತಿಯೂ ಲಭಿಸಿತ್ತು’ ಎಂದು ರಾಷ್ಟ್ರಪ್ರಶಸ್ತಿ ಪಡೆದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು ಚಂದ್ರು.ದಾಖಲಾತಿ ನಿರ್ವಹಣೆ ಬಹುಮುಖ್ಯ: ಸರ್ಕಾರದ ಹೊಸ ಯೋಜನೆಗಳು ಜಾರಿಯಾದ ನಂತರ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಲು ಕನಿಷ್ಠ ಆರು ತಿಂಗಳು ಬೇಕು. ಯೋಜನೆ ಸರಿಯಾಗಿ ಅನುಷ್ಠಾನಗೊಳಿಸುವುದು ನಮ್ಮ ಜವಾಬ್ದಾರಿ ಎಂದು ಅರಿತ ಚಂದ್ರು ಅವರು ಅದರ ಜತೆಯಲ್ಲೇ ಅನುಷ್ಠಾನಗೊಂಡ ಕೆಲ­ಸದ ದಾಖಲಾತಿಯನ್ನೂ ಅಷ್ಟೇ ಅಚ್ಚು­ಕಟ್ಟಾಗಿ ನಿರ್ವಹಿಸಿದ್ದಾರೆ. ‘ಎಲ್ಲಾ ಪಿಡಿಒ­ಗಳು ತಮಗೆ ಬಂದ ಹಣ ಖರ್ಚು ಮಾಡುತ್ತಾರೆ. ಆದರೆ ದಾಖಲಾತಿ ನಿರ್ವಹಣೆ ಮಾಡುವುದಿಲ್ಲ. ಆದರೆ, ಯಾದವಾಡ ಹಾಗೂ ಕನಕೂರು ಗ್ರಾಮಪಂಚಾಯಿತಿಗೆ ಸಂಬಂಧಿಸಿದಂತೆ ಎಲ್ಲಾ ಬಗೆಯ ದಾಖಲಾತಿಗಳನ್ನು ಅಷ್ಟೇ ಕರಾರು­ವ­ಕ್ಕಾಗಿ ಕಾಪಾಡಿಕೊಂಡು ಬರಲಾಗುತ್ತಿದೆ. ಇದ­ಕ್ಕೆ ಚಂದ್ರ ಪೂಜಾರ ಅವರು ಒಂದು ಉದಾಹರಣೆ ಕೊಟ್ಟರು.ಅದು ಹೀಗಿದೆ:

‘ರೈತರ ಹೊಲಗಳಲ್ಲಿ ಸಾಗುವಾನಿ ಸಸಿಗಳನ್ನು ನೆಡಿಸಲು ಅವಕಾಶವಿದೆ. ಆದರೆ ಈ ವರ್ಷ ನೆಟ್ಟ ಸಸಿಗಳು ಮರು ವರ್ಷದಲ್ಲಿ ಮಾಯವಾಗಿ­ರು­ತ್ತವೆ. ಉಚಿತವಾಗಿ ಬಂದಿದ್ದರಿಂದ ಅದರ ಮೇಲೆ ಟ್ರಾಕ್ಟರ್‌ ಹೊಡೆಸಿ ನಾಶಪಡಿಸಿದ ಉದಾ­ಹರಣೆ­ಗಳೂ ಇವೆ. ಸಸಿ ನಾಶಪಡಿಸಿ ಸಸಿ ನೀಡಲೇ ಇಲ್ಲ ವಾದಿಸುವವರೂ ಇದ್ದಾರೆ. ಮುಂದೆ ಒಂದೆರಡು ವರ್ಷ­ಗಳ ಬಳಿಕ ಅದರ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ದಾಖಲೆ ಕೇಳಿದರೆ ಅಲ್ಲಿ ಗಿಡವೇ ಇರುವುದಿಲ್ಲ. ಗಿಡ ನೀಡದೇ ಹಣ ಪಡೆಯಲಾಗಿದೆ ಎಂದು ಪುಕಾರು ಏಳುತ್ತದೆ. ಅದ­ಕ್ಕಾಗಿಯೇ ಹಣ ₨20 ಚಾಪಾಕಾಗದದ ಮೇಲೆ ಬರೆಸಿಕೊಳ್ಳುತ್ತಿದ್ದೇನೆ. ಗಿಡ ನೆಟ್ಟ ನಂತರ ಆ ಸ್ಥಳದಲ್ಲಿ ಆ ಹೊಲದ ಮಾಲೀಕರೊಂದಿಗೆ ಚಿತ್ರ ತೆಗೆಸಿ, ಅದೇ ಸ್ಥಳದಲ್ಲಿ ಛಾಪಾಕಾಗದದ ಮೇಲೆ ಬರೆಸಿ, ಸಹಿ ಹಾಕಿಸಿಕೊಳ್ಳಲಾಗುತ್ತಿದೆ. ಈ ರೀತಿ ಇಲ್ಲಿ ನಡೆಯುವ ಕೆಲವೊಂದು

ಕೆಲಸಗಳಿಗೆ ಕರಾರುವಕ್ಕಾದ ದಾಖಲೆಗಳನ್ನು ಕಾಪಾಡ­ಲಾ­ಗಿದೆ’ಉದ್ಯೋಗಕ್ಕಾಗಿ ನೈರ್ಮಲ್ಯ!

1250 ಕುಟುಂಬವಿರುವ ಕನಕೂರಿಗೆ ಗ್ರಾಮ ಪಂಚಾಯಿತಿ ಬಂದಿದ್ದು 1993ರಲ್ಲಿ. ಅಂದಿನಿಂದ 2010ರವರೆಗೂ ಇಲ್ಲಿ ಇದ್ದದ್ದು ಬರಿ 250 ಶೌಚಾಲಯಗಳು ಮಾತ್ರ. ಆದರೆ ಅಲ್ಲಿಂದ ಈಚೆಗೆ ವಿದ್ಯುತ್‌ ವೇಗದಲ್ಲಿ ಶೌಚಾಲಯಗಳ ಸಂಖ್ಯೆ ಹೆಚ್ಚಾಯಿತು. ಅದಕ್ಕೆ ಚಂದ್ರು ಅವರ ಯೋಜನೆಯೇ ಕಾರಣ. ಗ್ರಾಮೀಣ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಕೇಳಲು ಬರುವವರಿಗೆ ನೀಡುವ ಮೊದಲ ಕೆಲಸ ತಮ್ಮ ಮನೆಯ ಪಾಯಿಖಾನೆಗೆ ಗುಂಡಿ ತೆಗೆಯುವುದು. ನಿರ್ಮಲ ಭಾರತ ಅಭಿಯಾನದ ಅಡಿಯಲ್ಲಿ ₨4700 ಹಣವನ್ನು ಮೂರು ಹಂತಗಳಲ್ಲಿ ಕಾಮಗಾರಿ ಪರಿಶೀಲಿಸಿ ನೀಡಲಾಗುತ್ತಿದೆ. ಹೀಗಾಗಿ ಈಗ ಈ ಗ್ರಾಮದಲ್ಲಿ 830 ಶೌಚಾಲಯಗಳಿವೆ. 2013-14ರಲ್ಲಿ ಒಂದೇ ವರ್ಷದಲ್ಲಿ 310 ಶೌಚಾಲಯಗಳು ಈ ಗ್ರಾಮದಲ್ಲಿ ನಿರ್ಮಾಣಗೊಂಡಿದ್ದು ಒಂದು ದಾಖಲೆಯೇ ಸರಿ. ಇಷ್ಟಕ್ಕೆ ಸುಮ್ಮನಾಗದ ಚಂದ್ರು ಅವರು ಗ್ರಾಮದ ಮಕ್ಕಳಿಂದ ಶೌಚಾಲಯ ನಿರ್ಮಿಸುವಂತೆ ಪ್ರಭಾತ್‌ಪೇರಿಯನ್ನು ಮಾಡಿಸಿದ್ದಾರೆ. ಜತೆಗೆ ಗ್ರಾಮಸ್ಥರಿಂದ ಶಪಥವನ್ನೂ ಮಾಡಿಸಿರುವುದು ಗ್ರಾಮ ನೈರ್ಮಲ್ಯಕ್ಕೆ ಅನುಕೂಲವಾಗಿದೆ. ಹಾಗೆಯೇ ಗ್ರಾಮ ಪಂಚಾಯಿತಿ ಜನಸಂಖ್ಯೆ 1250 ಕುಟುಂಬಗಳಿಗೆ. ಅದರಲ್ಲಿ ಕಡು ಬಡವರಿಗೆ 2010ರಿಂದ ಇಲ್ಲಿಯವರೆಗೆ 432 ಮನೆ ನೀಡಲಾಗಿದೆ.

ಗೋಡೆಯ ಮೇಲೆ ಕಾಮಗಾರಿ ವಿವರ: ‘ಉದ್ಯೋಗ ಖಾತ್ರಿ ಬಂದ ಮೇಲೆ ಒಂದು ಅಪ­ನಂಬಿಕೆ ಪ್ರತಿಯೊಬ್ಬರಲ್ಲೂ ಇದೆ. ಗ್ರಾಮ ಪಂಚಾ­ಯಿತಿಗೆ ಅಪಾರ ಹಣ ಬರುತ್ತದೆ. ಅದನ್ನು ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿ­ಕೊಂಡು ನುಂಗುತ್ತಾರೆ ಎಂದು ಅಂದು­ಕೊಳ್ಳು­ತ್ತಾರೆ. ಆದರೆ ಅದು ಅಸಾಧ್ಯದ ಮಾತು. ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗೆ ಕೈಗೊಳ್ಳುವ ಯಾವುದೇ ಕಾಮಗಾರಿಗೂ ದಾಖ­ಲಾತಿ, ಸ್ಥಳ ಪರಿಶೀಲನೆ ಹಾಗೂ ಸಂಬಂಧಪಟ್ಟ ಅಧಿ­ಕಾರಿ­­ಯಿಂದ ದೃಢೀಕರಣ ಪತ್ರ ಇಲ್ಲವೆಂದರೆ ಹಣ ಬಿಡು­ಗ­ಡೆ­ಯಾಗುವುದೇ ಇಲ್ಲ.

ಜತೆಗೆ ಆ ಹಣವೂ ಸಂಬಂಧ­ಪಟ್ಟವರ ಖಾತೆಗೆ ಹೋಗು­ತ್ತ­ದೆಯೇ ಹೊರತು ಅದು ದುರುಪ­ಯೋಗ­­ವಾ­ಗದು. ಇದಕ್ಕಾ­ಗಿಯೇ ಪ್ರತಿಯೊಂದರ ದಾಖ­ಲಾ­ತಿಗೆ ನಾನು ಮುಂದಾದೆ. ಜತೆಗೆ ಗ್ರಾಮ­ಪಂಚಾ­ಯಿತಿ­ಯಲ್ಲಿ ನಡೆದ ಕಾಮಗಾರಿಗಳ ಹಾಗೂ ಉದ್ಯೋಗ ಖಾತ್ರಿಯಲ್ಲಿ ಹಣ ನೀಡಿದ ಪ್ರತಿ­ಯೊಂದು ವಿವರಗಳೂ ಪ್ರತಿಯೊಬ್ಬರಿಗೂ ಲಭ್ಯವಾಗುವ ದೃಷ್ಟಿಯಿಂದ ಪಂಚಾಯಿತಿಯ ರಕ್ಷಣಾ ಗೋಡೆಯ ಮೇಲೆ ಪ್ರತಿಯೊಂದರ ವಿವರಗಳೂ ಇರವಂತೆ ಬರೆಸ­ಲಾಗಿದೆ.2017­ರವರೆಗೆ ಇಲ್ಲಿ ಕೈಗೊಳ್ಳುವ ಪ್ರತಿ­ಯೊಂದು ಕಾಮ­ಗಾರಿಗಳ ವಿವರ ಗ್ರಾಮಸ್ಥ­ರಿಗೆ ಲಭ್ಯ. ಅದಕ್ಕಾಗಿ ಅವರು ಪಿಡಿಒ­ಗಳನ್ನೋ ಅಥವಾ ಜನ­ಪ್ರತಿನಿಧಿಗಳನ್ನು ಕೇಳುವ ಅಗತ್ಯವಿಲ್ಲ. ಗ್ರಾಮದ ಪ್ರತಿಯೊಬ್ಬರೂ ಎಷ್ಟು ಹೊತ್ತಿಗೆ ಬೇಕಾ­ದರೂ ತಮ್ಮ ಖಾತೆಗೆ ಜಮೆ­ಯಾದ ವಿವರ­ಗಳನ್ನು ಈ ಗೋಡೆಯ ಮೇಲೆ ನೋಡಿ­ಕೊಳ್ಳ­ಬಹುದಾಗಿದೆ. ಇಂಥ ದಾಖಲೆ ಮೂಲಕ ಮೂಲಕ ಚಂದ್ರು ವಿ.­ಪೂಜಾರ ಅವರು ಪಾರದರ್ಶಕ ಆಡಳಿತ ನೀಡಲು ಮುಂದಾಗಿದ್ದಾರೆ. ಹೀಗಾಗಿಯೇ ಕನ­ಕೂರಿನ ಗ್ರಾಮಪಂಚಾಯಿತಿಯ ಗೋಡೆಗಳು ಕಪಾಟಿ­ನೊಳಗೆ ಭದ್ರವಾಗಿರುವ ದಾಖಲೆಗಳನ್ನು ಬಿಚ್ಚಿ­ಟ್ಟಂತೆ ಕಾಣುತ್ತಿದೆ.ಉದ್ಯೋಗ ಖಾತ್ರಿಗೂ ಬೇಕು ಬಯೋಮೆಟ್ರಿಕ್‌: ನಮೂನೆ 6ರಲ್ಲಿ ಉದ್ಯೋಗ ಬೇಕು ಎಂದು ಅರ್ಜಿ ಹಾಕಿದವರಿಗೆ ನಮೂನೆ 8ರಲ್ಲಿ ಉದ್ಯೋಗ ಬರುವಂತೆ ಸೂಚನೆ ನೀಡಲಾಗು­ತ್ತದೆ. ಅದರಂತೆ ಬರುವವರಲ್ಲಿ ಕೆಲವರು ಕೆಲಸಕ್ಕೆ ಹಾಜರಾಗದೆ ಹಣ ಪಡೆದ ಉದಾಹರಣೆಗಳೂ ಇವೆ. ಹೀಗಾಗಿ ಅದಕ್ಕಾಗಿ ಉದ್ಯೋಗ ಖಾತ್ರಿಗೆ ಬರುವವರಿಗೂ ಬಯೋಮೆಟ್ರಿಕ್‌ ಹಾಜರಾತಿ ಜಾರಿಗೆ ತರಬೇಕು ಎನ್ನುವುದು ಚಂದ್ರು ಅವರ ಯೋಜನೆ. ಆ ಮೂಲಕ ದುರುಪಯೋಗ­ವಾ­ಗುವ ಹಣವನ್ನು ತಡೆಗಟ್ಟಬಹುದು ಎಂಬುದು ಅವರ ಚಿಂತನೆ. ಇವರ ಈ ಮಾತು ಕೇಳಿದಾಗ ಮರಿ­ಯವ್ವ ಒಬ್ಬ ಪ್ರಾಮಾಣಿಕ ಗ್ರಾಮ­ಪಂಚಾ­ಯಿತಿ ಸದಸ್ಯೆಯಾಗಿ ತನ್ನ ಮಕ್ಕಳ ಮೇಲೆಯೇ ಮಾಡಿದ ಆರೋಪದ ಅರಿವಾಯಿತು.ಕೂಲಿಗೆ ಬರುವವರಿಗೆ ವಿಮೆ: ಇದೇ ಮರಿಯವ್ವನ ಮೂರು ಜನ ಮಕ್ಕಳಲ್ಲಿ ಒಬ್ಬ ಮಗ ಕಳೆದ ಆರು ತಿಂಗಳ ಹಿಂದೆ ಕೂಲಿ ಕೆಸಲದಲ್ಲಿದ್ದಾಗಲೇ ಮೃತ­ಪಟ್ಟಿದ್ದ. ಆಗ ಆತನ ಕುಟುಂಬಕ್ಕೆ ಇಲ್ಲಿನ ಕನ­ಕೂರು ಪಿಡಿಒ ಚಂದ್ರು ಅವರು ₨25 ಸಾವಿರದ ಚೆಕ್‌ ನೀಡಿದ್ದರು. ಆ ಹಣ ಬಂದಿದ್ದು ಗ್ರಾಮೀಣ ಉದ್ಯೋಗ ಖಾತ್ರಿ ಮೂಲಕ ಜನಶ್ರೀ ಎಂಬ ವಿಮಾ ಯೋಜನೆ­ಯಿಂ­ದಾಗಿ. ‘ಉದ್ಯೋಗ ಖಾತ್ರಿಗೆ ಬರುವ ಕೆಲಸ­ಗಾರರು ತಮ್ಮ ಕೈಯಿಂದ ₨100 ಹಾಗೂ ಸರ್ಕಾ­ರದ ವತಿಯಿಂದ ₨100 ನೀಡಿದರೆ ಒಂದು ವರ್ಷದ ಅವಧಿಗೆ ವಿಮಾ ಯೋಜನೆ ಲಭ್ಯ. ಕೆಲಸದ ವೇಳೆಯಲ್ಲಿ ಅಪಘಾತ ಅಥವಾ ಸಾವು ಸಂಭವಿಸಿದವರಿಗೆ ಇದು ನೆರವಾಗಲಿದೆ. ಅದ­­ರಂ­ತೆಯೇ ಈ ಗ್ರಾಮಪಂಚಾಯಿತಿ  ವ್ಯಾಪ್ತಿ­ಯಲ್ಲಿ ಈವರೆಗೂ ಇಬ್ಬರಿಗೆ ಈ ರೀತಿ ಆರ್ಥಿಕ ನೆರವು ಲಭಿಸಿದೆ. ಹಾಗೆಯೇ 9ರಿಂದ ಪಿಯುಸಿ ಓದುವ ವಿದ್ಯಾರ್ಥಿಗಳಿಗೂ ₨2400 ವಿದ್ಯಾರ್ಥಿ ವೇತ­ನವೂ ಈ ಯೋಜನೆ ಮೂಲಕ ಲಭ್ಯ. ಇದನ್ನು ಗ್ರಾಮಪಂಚಾಯಿತಿ ವತಿಯಿಂದ ಕಾರ್ಯ­­ಕ್ರಮ ಮಾಡಿ ಅವರಿಗೆ ಚೆಕ್‌ ಮೂಲಕ ವಿತರಿ­ಸಿದ ದಿನ ಮಕ್ಕಳ ಖುಷಿಯನ್ನು ನೋಡು­ವುದೇ ಒಂದು ಚೆಂದ’ ಎಂದಾಗ ಚಂದ್ರು ಅವರ ಮುಖವೂ ಅರಳಿತ್ತು.‘ಎನ್‌ಆರ್‌ಇಜಿ ಸಮರ್ಪಕವಾಗಿ ಜಾರಿಗೆ ತಂದಲ್ಲಿ ಗ್ರಾಮಗಳನ್ನು ಬಂಗಾರದಂತೆ ಮಾಡ­ಬಹುದು. ಅಷ್ಟು ಅತ್ಯುತ್ತಮ ಯೋಜನೆ ಹಾಳು­ಗೆಡ­ವ­ಲಾಗುತ್ತಿದೆ. ಜತೆಗೆ ಜನರು ತೆರಿಗೆ ನೀಡಲು ಮನಸ್ಸು ಮಾಡುವುದಿಲ್ಲ. ಅನುದಾನ ಕಡಿಮೆ. ತೆರಿಗೆ ಕಟ್ಟುವ ಮನೋಭಾವವೂ ಕಡಿಮೆ. ತೆರಿಗೆ ಜಾಥಾ ಮಾಡಿ 2.49ಲಕ್ಷ ಹಣ ಸಂಗ್ರಹಿಸ­ಲಾ­ಗಿದೆ. ಅಧಿಕಾರಿಯೊಬ್ಬರು ಮನಸ್ಸು ಮಾಡಿದಲ್ಲಿ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಇಲ್ಲಿ ಕೆಲಸ ಮಾಡುತ್ತಿದ್ದ ಆಗಿನ ಇಒ ರುದ್ರ­ಸ್ವಾಮಿ ಅವರೂ ಒಂದು ಉದಾಹರಣೆ. ಪಿಡಿಒಗೆ ಗ್ರಾಮಪಂಚಾಯಿತಿಯಲ್ಲಿ ಕೂರಲು ಸ್ಥಳವಿರ­ಲಿಲ್ಲ. ಆದರೆ ಜಿಲ್ಲೆಯ 37 ಗ್ರಾಮಪಂಚಾಯಿತಿ­ಯಲ್ಲಿ 35 ಗ್ರಾಮಪಂಚಾಯಿತಿಗಳಿಗೆ ರಾಜೀವ್‌­ಗಾಂಧಿ ಸೇವಾ ಕೇಂದ್ರ ಎಂಬ ನೂತನ ಕಟ್ಟಡಗಳ ಉದ್ಘಾಟನೆ ಏಕಕಾಲಕ್ಕೆ ಆಗಿ ದಾಖಲೆ ನಿರ್ಮಿಸಿದೆ’ ಎಂದು ಅವರು ವಿವರಿಸಿದರು.ಇಷ್ಟೆಲ್ಲಾ ಮಾಡಿದರೂ ಅತಿ ಹೆಚ್ಚು ಹಣ ಖರ್ಚು ಮಾಡಿರುವುದಕ್ಕೆ ವಿವರಣೆ ಕೇಳಿ ಚಂದ್ರು ಅವರಿಗೆ 124 ನೋಟಿಸ್‌ ನೀಡಲಾಗಿದೆ. ‘ಈ ಕುರಿತು ಮೇಲಿನ ಅಧಿಕಾರಿಗಳಿಗೆ ಎಲ್ಲಾ ದಾಖ­ಲಾತಿ ಹಾಗೂ ವಿವರಣೆಗಳನ್ನೂ ನೀಡಿ­ದ್ದೇನೆ. ನಾನು ನೀಡಿರುವ ವಿವರಣೆ ಹಾಗೂ ದಾಖಲೆ­ಗಳು ಅವರಿಗೆ ತೃಪ್ತಿ ನೀಡಲಿದೆ ಎನ್ನುವುದು ನನ್ನ ಆಶಯ. ಆದರೆ ನನ್ನ ಕೆಲಸ ನಿಲ್ಲದು. ಸರ್ಕಾರದ ಯೋಜನೆ­ಗಳು ಈ ಸಮಾಜ ಕಟ್ಟಕಡೆಯ ವ್ಯಕ್ತಿಗೆ ತಲು­ಪುವಂತೆ ಮಾಡುವ ನನ್ನ ಉದ್ದೇಶಕ್ಕೆ ಇವೆ­ಲ್ಲವೂ ಅಡ್ಡಿ ಬಾರದು’ ಎಂದೆನ್ನುತ್ತಾರೆ ಕನಕೂರು ಗ್ರಾ.­ಪಂ ಪಿಡಿಒ ಚಂದ್ರು ವಿ.ಪೂಜಾರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.