ಕನಕ ಶೋಷಿತರ ಸಾಂಸ್ಕೃತಿಕ ರಾಯಭಾರಿ

7

ಕನಕ ಶೋಷಿತರ ಸಾಂಸ್ಕೃತಿಕ ರಾಯಭಾರಿ

Published:
Updated:

ಹಾವೇರಿ: ‘ಶೋಷಿತ ವರ್ಗಕ್ಕೆ ಸಾಂಸ್ಕೃತಿಕ ನೆಲೆಗಟ್ಟನ್ನು ಒದಗಿಸಿದ ಕೀರ್ತಿ ದಾಸ ಶ್ರೇಷ್ಠ ಕನಕದಾಸರಿಗೆ ಸಲ್ಲುತ್ತದೆ. ಅದೇ ಕಾರಣಕ್ಕಾಗಿ ಅವರು ಶೋಷಿತ ವರ್ಗದ ರಾಯಭಾರಿಯಂತೆ ಗೋಚರಿಸುತ್ತಾರೆ. ಅವರ ಚಿಂತನೆಗಳಿಂದಲೇ ಶೋಷಿತ ವರ್ಗಗಳು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಿವೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್.ಇಂದುಮತಿ ಅಭಿಪ್ರಾಯಪಟ್ಟರು.ನಗರದ ಜಿ.ಎಚ್.ಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ದಾಸ ಶ್ರೇಷ್ಠ ಕನಕದಾಸರ ಸಾಹಿತ್ಯ ಕುರಿತ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.12ನೇ ಶತಮಾನದ ವಚನಕಾರರು ಹಾಗೂ 15ನೇ ಶತಮಾನದ ಕೀರ್ತನಕಾರರು ಸಮಾಜಮುಖಿಯಾಗಿ ಚಿಂತನೆ ಮಾಡದೇ ಹೋಗಿದ್ದರೆ, ಶೋಷಿತ ವರ್ಗದ ಜನತೆಗೆ ಶೋಷಣೆ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಶೋಷಿತ ವರ್ಗದ ಇಂದಿನ ಹೋರಾಟಕ್ಕೆ ಅವರ, ಶರಣರ ಹಾಗೂ ದಾಸರ ಚಿಂತನೆಗಳೇ ಪ್ರೇರಣೆ ಎಂದರು.ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಯುವ ಜನತೆಯಲ್ಲಿ ಆಸಕ್ತಿ ಹಾಗೂ ಅಧ್ಯಯನ ಕಡಿಮೆಯಾಗಿದೆ. ಶರಣರ ಹಾಗೂ ದಾಸರ ಸಾಹಿತ್ಯಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳು ಹೆಚ್ಚಾಗಿವೆ. ಅವುಗಳ ಅಧ್ಯಯನ ಮಾಡಿದಾಗ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.ಕನಕದಾಸರ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ಸರ್ಕಾರ ಅವರ ವಿಚಾರಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ಕಾಲೇಜಿನ ಪ್ರಾಚಾರ್ಯ ಬಿ.ಸಿ.ಬನ್ನೂರ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ಡಾ.ಹಿ.ಶಿ.ರಾಮಚಂದ್ರೇಗೌಡ, ಡಾ.ಕೆ.ವೈ.ನಾರಾಯಣಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ಜಿ.ಪಂ. ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಸಿ.ಮಲ್ಲಣ್ಣ, ಕವಿವಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಟಿ.ಎಂ. ಭಾಸ್ಕರ್ ಮತ್ತಿತರರು ಹಾಜರಿದ್ದರು.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ರೇವಣಪ್ಪ ಸ್ವಾಗತಿಸಿದರು. ಪ್ರೊ. ಎನ್.ಕೆಂಚವೀರಪ್ಪ ನಿರೂಪಿಸಿದರು. ಸಂಸ್ಕೃತಿ ಇಲಾಖೆ ನಿರ್ದೇಶಕ ಶಶಿಕಲಾ ಹುಡೇದ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry